ಟೊಯೊಟಾ ಇನ್ನೋವಾ ಪ್ರತಿಸ್ಪರ್ಧಿ: ಚೀನಾ ಮಾಲೀಕತ್ವದ ಈ ಹೊಸ 7-ಸೀಟರ್ ಕಾರಿನ ಬುಕ್ಕಿಂಗ್ ನಾಳೆಯಿಂದ ಶುರು
ಚೀನಾ ಮೂಲದ ಬಿವೈಡಿ (BYD) ಜನಪ್ರಿಯ ವಾಹನ ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿದೆ. ಭಾರತದ ಮಾರುಕಟ್ಟೆಯಲ್ಲಿ ನವೀನ - ಶೈಲಿಯ ವಿನ್ಯಾಸ ಹಾಗೂ ಆಕರ್ಷಕ ವೈಶಿಷ್ಟ್ಯಗಳನ್ನು ಪಡೆದುಕೊಂಡಿರುವ ವಿವಿಧ ಕಾರುಗಳನ್ನು ಮಾರಾಟ ಮಾಡುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಕೂಡ ಇಷ್ಟಪಟ್ಟು ಖರೀದಿಸುತ್ತಿದ್ದಾರೆ. ಇದೀಗ, ಬಿವೈಡಿ ಕಂಪನಿಯು ಜನಪ್ರಿಯ ಎಂಪಿವಿ ಟೊಯೊಟಾ ಇನ್ನೋವಾಗೆ (Toyota Innova) ಪ್ರಬಲವಾದ ಸ್ಪರ್ಧೆಯೊಡ್ಡಲು ನೂತನ ಎಲೆಕ್ಟ್ರಿಕ್ ಫ್ಯಾಮಿಲಿ ಕಾರನ್ನು ಪರಿಚಯಿಸಲು ತಯಾರಿ ಮಾಡಿಕೊಳ್ಳುತ್ತಿದೆ. ಇಲ್ಲಿದೆ ಹೆಚ್ಚಿನ ಮಾಹಿತಿ.
ಬಿವೈಡಿ ಇಂಡಿಯಾ ಹೊಸ 'ಇಮ್ಯಾಕ್ಸ್ 7' ಎಲೆಕ್ಟ್ರಿಕ್ ಎಂಪಿವಿಯನ್ನು ಅಕ್ಟೋಬರ್ 8ರಂದು ಬಿಡುಗಡೆ ಮಾಡಲಿದೆ. ದೇಶೀಯ ಮಾರುಕಟ್ಟೆಯಲ್ಲಿ ನೂತನ ಕಾರನ್ನು ಕಂಪನಿಯು ತನ್ನದೇ ಇ6 (e6) ಫ್ಯಾಮಿಲಿ ಕಾರಿನ ಜಾಗಕ್ಕೆ ತರುತ್ತಿದೆ. ಈ ಇಮ್ಯಾಕ್ಸ್ 7 ಎಂಪಿವಿ ಬುಕ್ಕಿಂಗ್‌ಗೆ ನಾಳೆಯಿಂದ (ಸೆಪ್ಟೆಂಬರ್ 21) ಚಾಲನೆ ದೊರೆಯುತ್ತಿದೆ. ಆಸಕ್ತ ಗ್ರಾಹಕರು ಸಮೀಪದ ಡೀಲರ್‌ಶಿಪ್ ಅಥವಾ ಕಂಪನಿಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ, ರೂ.51,000 ಹಣವನ್ನು ಮುಂಗಡವಾಗಿ ಪಾವತಿಸುವ ಮೂಲಕ ಕಾಯ್ದಿರಿಸಬಹುದು.

ನೂತನ ಬಿವೈಡಿ ಇಮ್ಯಾಕ್ಸ್ 7 (BYD eMAX 7) ಎಂಪಿವಿ ಬುಕ್ಕಿಂಗ್ ಮಾಡುವ ಗ್ರಾಹಕರಿಗೆ ಹಲವು ಹಣಕಾಸಿನ ಪ್ರಯೋಜನಗಳನ್ನು ಕಂಪನಿ ಘೋಷಣೆ ಮಾಡಿದೆ. ಮೊದಲ 1,000 ಖರೀದಿದಾರರಿಗೆ ರೂ.51,000ವರೆಗೆ ರಿಯಾಯಿತಿ ಲಭ್ಯವಾಗಲಿದೆ. ಜೊತೆಗೆ 7 ಕೆಡಬ್ಲ್ಯೂ & 3 ಕೆಡಬ್ಲ್ಯೂ ಚಾರ್ಜರ್‌ಗಳನ್ನು ಒದಗಿಸಲಿದೆ. ಅಕ್ಟೋಬರ್ 8, 2024ರ ಮುಂಚಿತವಾಗಿ ಬುಕ್ಕಿಂಗ್ ಮಾಡಿದವರಿಗೆ ಈ ಕಾರನ್ನು ಮೇ 25, 2025ರೊಳಗೆ ವಿತರಣೆ ಮಾಡಲಾಗುತ್ತದೆ ಎಂದು ಬಿವೈಡಿ ಹೇಳಿದೆ.
ಮುಂಬರಲಿರುವ ಬಿವೈಡಿ ಇಮ್ಯಾಕ್ಸ್ 7 ಎಂಪಿವಿ ಹೊರಭಾಗದಲ್ಲಿ ಆಕರ್ಷಕವಾಗಿರುವ ವಿನ್ಯಾಸವನ್ನು ಪಡೆದಿರಲಿದೆ. ಅದು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಎಂ6 (M6) ಕಾರಿಗೆ ಬಹುತೇಕ ಹೋಲಿಕೆಯಾಗಲಿದೆ ಎಂದು ಹೇಳಲಾಗಿದೆ. ಈ ಇಮ್ಯಾಕ್ಸ್ 7 ಎಂಪಿವಿ ಉತ್ತಮವಾಗಿರುವ ಎಲ್ಇಡಿ ಹೆಡ್‌ಲ್ಯಾಂಪ್‌ಗಳು, ಮುಂಭಾಗ (ಫ್ರಂಟ್) ಮರುವಿನ್ಯಾಸಗೊಳಿಸಲಾದ ಬಂಪರ್, ಮೇಲ್ದರ್ಜೆಗೀರಿದ ಗ್ರಿಲ್, ಅಲಾಯ್ ವೀಲ್‌ಗಳು, ಹಿಂಭಾಗ (ರೇರ್) ಎಲ್ಇಡಿ ಲೈಟ್ ಬಾರ್‌ಗೆ ಕನೆಕ್ಟ್ ಆಗಿರುವ ಎಲ್ಇಡಿ ಟೈಲ್‌ಲೈಟ್‌ಗಳನ್ನು ಹೊಂದಿರುವ ನೀರಿಕ್ಷೆಯಿದೆ.

ಹೊಚ್ಚ ಹೊಸ ಬಿವೈಡಿ ಇಮ್ಯಾಕ್ಸ್ 7 ಫ್ಯಾಮಿಲಿ ಕಾರು ಒಳಭಾಗದಲ್ಲಿಯೂ ನವೀನವಾದ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಒಳಗೊಂಡಿರಲಿದೆ. 6/ 7 ಆಸನ ಆಯ್ಕೆ ವ್ಯವಸ್ಥೆಯಲ್ಲಿಯೂ ಖರೀದಿಗೆ ದೊರೆಯುವ ಸಾಧ್ಯತೆಯಿದೆ. ಈ ಕಾರು 71.8 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿಯನ್ನು ಪಡೆದಿರಲಿದ್ದು, ಸಂಪೂರ್ಣ ಚಾರ್ಜ್‌ನಲ್ಲಿ 530 ಕಿಲೋಮೀಟರ್‌ವರೆಗೆ ಕ್ರಮಿಸುತ್ತದೆ ಎಂದು ಹೇಳಲಾಗಿದೆ.
ಈ ಬಿವೈಡಿ ಇಮ್ಯಾಕ್ಸ್ 7 ಎಂಪಿವಿ 12.8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ವೈರ್‌ಲೆಸ್ ಫೋನ್ ಚಾರ್ಜರ್, 3-ಸ್ಪೋಕ್ ಸ್ಟೀರಿಂಗ್ ವೀಲ್ ಮತ್ತು ಪನೋರಮಿಕ್ ಸನ್‌ರೂಫ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿರುವ ನಿರೀಕ್ಷೆಯಿದೆ. ಸುರಕ್ಷತೆಯ ದೃಷ್ಟಿಯಿಂದ 6-ಏರ್‌ಬ್ಯಾಗ್‌ಗಳು, ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್), ಟಿಪಿಎಂಎಸ್ ( ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) 360-ಡಿಗ್ರಿ ಕ್ಯಾಮೆರಾ ಹಾಗೂ ಆಲ್-ವೀಲ್ ಡಿಸ್ಕ್ ಬ್ರೇಕ್‌ಗಳನ್ನು ಹೊಂದಿರಬಹುದು ಎನ್ನಲಾಗಿದೆ.
ನೂತನ ಬಿವೈಡಿ ಇಮ್ಯಾಕ್ಸ್ 7 ಎಂಪಿವಿ ರೂ.25 ಲಕ್ಷದಿಂದ ರೂ.33 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಪಡೆದಿರಬಹುದು ಎಂದು ಅಂದಾಜಿಸಲಾಗಿದೆ. ಈ ಕಾರಿಗೆ ಎಲೆಕ್ಟ್ರಿಕ್ ಎಂಪಿವಿ ವಿಭಾಗದಲ್ಲಿ ಸದ್ಯಕ್ಕೆ ಯಾವುದೇ ನೇರ ಪ್ರತಿಸ್ಪರ್ಧಿ ಇಲ್ಲ. ಆದಾಗ್ಯೂ ಇಂಧನ ಚಾಲಿತ ಟೊಯೊಟಾ ಇನ್ನೋವಾ ಹೈಕ್ರಾಸ್ ಮತ್ತು ಟೊಯೊಟಾ ಇನ್ನೋವಾ ಕ್ರಿಸ್ಟಾ ಕಾರುಗಳು ದೊಡ್ಡ ಎದುರಾಳಿಯಾಗಲಿವೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications