ಮುಂದಿನ ವರ್ಷವೇ ಭಾರತದಲ್ಲಿ ಹಾರುವ ಟ್ಯಾಕ್ಸಿಗಳು: ಸಾಕ್ಷಿ ಸಮೇತ ಆನಂದ್ ಮಹೀಂದ್ರಾ ಟ್ವೀಟ್!
ವಾಹನ ಲೋಕ ಯಾವ ವೇಗದಲ್ಲಿ ಮುಂದುರೆಯುತ್ತಿದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಈಗಾಗಲೇ ವಾಹನ ಕ್ಷೇತ್ರದಲ್ಲಿ ಹಲವಾರು ಕ್ರಾಂತಿಗಳು ಕಳೆದ ಕೆಲವು ವರ್ಷಗಳಿಂದ ನಡೆಯುತ್ತಿದ್ದು, ಸದ್ಯಕ್ಕೆ ಬೆಳವಣಿಗೆ ಅಥವಾ ಅಭಿವೃದ್ದಿ ಆಗುತ್ತಿರುವ ನಮ್ಮ ಮುಂದೆ ಇರುವ ಅತಿ ದೊಡ್ಡ ಬೆಳವಣಿಗೆ ಎಂದರೆ ಅದು ಹಾರುವ ಕಾರುಗಳು.
ಈಗಾಗಲೇ ಹಾರುವ ಕಾರುಗಳು, ಹಾರುವ ಟ್ಯಾಕ್ಸಿಗಳ ಕುರಿತಾದ ಹಲವಾರು ಸುದ್ದಿಗಳು ವರದಿಯಾಗಿರುವುದನ್ನು ನಾವು ಈಗಾಗಲೇ ನೋಡಿದ್ದೇವೆ. ಆದರೆ ಇದೀಗ ಹಾರುವ ಟ್ಯಾಕ್ಸಿಗಳ ಕುರಿತಾಗಿ ಭಾರತದ ಪ್ರಸಿದ್ದ ಕಾರು ನಿರ್ಮಾಣ ಕಂಪನಿ ಮಹೀಂದ್ರಾದ ಮುಖ್ಯಸ್ಥರಾದ ಆನಂದ್ ಮಹೀಂದ್ರಾ ಅವರು ಸಹ ಪ್ರತಿಕ್ರಿಯಿಸಿದ್ದು, ಇದು ಭಾರತೀಯ ಹಾರುವ ಟ್ಯಾಕ್ಸಿಗಳ ಅಭಿವೃದ್ದಿಗೆ ಅತಿ ದೊಡ್ಡ ಮೈಲುಗಲ್ಲಾಗುವ ಸಾಧ್ಯತೆಯಿದೆ.

ಹೌದು, ಆನಂದ್ ಮಹೀಂದ್ರಾ ಅವರ ಪ್ರಕಾರ ದೇಶದ ಮೊದಲ ಹಾರುವ ಟ್ಯಾಕ್ಸಿ (Flying Taxi) ಮುಂದಿನ ವರ್ಷವೇ ಹಾರಾಟವನ್ನು ನಡೆಸಲಿದೆ ಎಂದು ಟ್ವೀಟ್ ಮಾಡಿದ್ದು, ವಾಹನ ವಲಯದಲ್ಲಿ ಭಾರೀ ಸಂಚಲನವನ್ನು ಸೃಷ್ಟಿಸಿದೆ. ಇದಕ್ಕೆ ಕಾರಣವೇನೆಂದರೆ ಇಲ್ಲಿಯ ತನಕ ಭಾರತಕ್ಕೆ ಹಾರುವ ಟ್ಯಾಕ್ಸಿಗಳು ಬರಲು ಇನ್ನು ಎರಡು ಮೂರು ವರ್ಷಗಳ ಕಾಲ ಕಾಯಬೇಕು ಎಂಬ ಮಾತುಗಳು ಕೇಳಿ ಬರುತ್ತಿದ್ದವು. ಆದರೆ ಆನಂದ್ ಮಹೀಂದ್ರಾ ಅವರ ಈ ಮಾತು ಎಲ್ಲರ ಹುಬ್ಬೇರಿಸುವಂತೆ ಮಾಡಿದೆ.
ಆನಂದ್ ಮಹೀಂದ್ರಾ ಅವರ ಟ್ವೀಟ್‌ನಲ್ಲಿ, ದಿ ಇಪ್ಲೇನ್ ಎಂಬ ಕಂಪನಿಯು ಐಐಟಿ ಮದ್ರಾಸ್‌ನಲ್ಲಿ ಹಾರುವ ಟ್ಯಾಕ್ಸಿಗಳ ಅಭಿವೃದ್ದಿಯಲ್ಲಿ ತೊಡಗಿದ್ದು, ನಾನಂತೂ ಸಾಕಷ್ಟು ಥ್ರಿಲ್ ಆಗಿದ್ದೇನೆ ಎಂದು ಹೇಳಿದ್ದಾರೆ. ಭಾರತದಲ್ಲಿ ಸಾಕಷ್ಟು ಉತ್ತಮ ಸಂಶೋಧಕರು ಇದ್ದು, ಸದ್ಯದಲ್ಲೇ ಭಾರತದಲ್ಲಿ ವಾಹನ ಕ್ಷೇತ್ರ ಕ್ಷಿಪ್ರ ಗತಿಯಲ್ಲಿ ಬೆಳೆಯಲಿದೆ ಎಂದು ತಮ್ಮ ಅನಿಸಿಕೆ ಹಂಚಿಕೊಂಡಿದ್ದು, ಮುಂಬರುವ ಹಾರುವ ಟ್ಯಾಕ್ಸಿಗಳ ಕೆಲವು ಪೋಟೋಗಳನ್ನು ಸಹ ಶೇರ್ ಮಾಡಿದ್ದಾರೆ.
ಈ ಹಿಂದೆ ಚೀನಾ ಮೂಲದ ಕಂಪನಿಯು ಸಹ ಹಾರುವ ಕಾರುಗಳ ಪರೀಕ್ಷೆಯನ್ನು ನಡೆಸುತ್ತಿತ್ತು. ಅಭಿವೃದ್ಧಿಯಲ್ಲಿರುವ ಹಾರುವ ಕಾರು ಉತ್ಪನ್ನಗಳಲ್ಲಿ ಭೂ ವಿಮಾನವಾಹಕ ನೌಕೆ (Land aircraft carrier) ಮಾಡ್ಯುಲರ್ ಫ್ಲೈಯಿಂಗ್ ಕಾರ್ ಮತ್ತು ಎಕ್ಸ್ 2 ಎಂಬ ವಿಟಿಒಎಲ್ (ವರ್ಟಿಕಲ್ ಟೇಕ್-ಆಫ್ ಮತ್ತು ಲ್ಯಾಂಡಿಂಗ್) ವಿಮಾನ ಸೇರಿವೆ. ಕಾರು ಮತ್ತು ವಿಟಿಒಎಲ್ ಕಾರ್ಯಕ್ಷಮತೆ ಎರಡನ್ನೂ ಹೊಂದಿರುವ ಮೂರನೇ ಉತ್ಪನ್ನವನ್ನು ಸಹ ಅಭಿವೃದ್ಧಿಪಡಿಸುತ್ತಿದೆ.
ಎಕ್ಸ್‌ಪೆಂಗ್ ಏರೋಎಚ್‌ಟಿ ಅಭಿವೃದ್ಧಿಪಡಿಸುತ್ತಿರುವ ಲ್ಯಾಂಡ್ ಏರ್ ಕ್ರಾಫ್ಟ್ ಕ್ಯಾರಿಯರ್ ಮಾಡ್ಯುಲರ್ ಫ್ಲೈಯಿಂಗ್ ಕಾರು ಎರಡು ಭಾಗಗಳ ವಿನ್ಯಾಸವನ್ನು ಬಳಸುತ್ತದೆ. ದೊಡ್ಡ ವ್ಯಾನ್ ರೂಪದಲ್ಲಿ ಲ್ಯಾಂಡ್ ಮಾಡ್ಯೂಲ್ ಮತ್ತು ಕಡಿಮೆ ಎತ್ತರದ ವಿಮಾನಗಳಿಗೆ ಅನುಕೂಲವಾಗುವ ವಿಟಿಒಎಲ್ ಏರ್ ಮಾಡ್ಯೂಲ್ ಇದೆ. ಏರ್ ಮಾಡ್ಯೂಲ್ ಲ್ಯಾಂಡ್ ಮಾಡ್ಯೂಲ್ ಒಳಗೆ ಹೊಂದಿಕೊಳ್ಳುತ್ತದೆ.

ಎಕ್ಸ್ ಪೆಂಗ್ ಏರೋಎಚ್‌ಟಿ ಪ್ರಕಾರ, ಮಾಡ್ಯುಲರ್ ಫ್ಲೈಯಿಂಗ್ ಕಾರು ಪ್ರಸ್ತುತ ಸಾಮೂಹಿಕ ಉತ್ಪಾದನೆಗೆ ತಯಾರಿಯ ಹಂತದಲ್ಲಿದೆ. ಲ್ಯಾಂಡ್ ಮಾಡ್ಯೂಲ್ 4-5 ಪ್ರಯಾಣಿಕರಿಗೆ ಸ್ಥಳಾವಕಾಶ ಕಲ್ಪಿಸುತ್ತದೆ, ಇದು ಕುಟುಂಬದ ಅಗತ್ಯಗಳಿಗೆ ಸೂಕ್ತವಾಗಿರುತ್ತದೆ. ಇದು 6×6 ಆಲ್-ವೀಲ್ ಡ್ರೈವ್ ಮತ್ತು ರಿಯರ್ ವೀಲ್ ಸ್ಟೀರಿಂಗ್ ನೊಂದಿಗೆ ಗಮನಾರ್ಹ ಆಫ್-ರೋಡ್ ಸಾಮರ್ಥ್ಯವನ್ನು ಹೊಂದಿದೆ.
ಎಕ್ಸ್ ಪೆಂಗ್ 1 ಮಿಲಿಯನ್ ಯುವಾನ್ (ಅಂದಾಜು 1.15 ಕೋಟಿ ರೂ.) ಬೆಲೆಯನ್ನು ಹೊಂದಿದೆ. ಈ ಬೆಲೆಯಲ್ಲಿ, ಹಾರುವ ಕಾರು ನಿರ್ದಿಷ್ಟ ಪ್ರೇಕ್ಷಕರಿಗೆ ಮಾತ್ರ ಸಿಗಲಿದೆ. ಹಾರುವ ಕಾರುಗಳಿಗೆ ವಾಯುಪ್ರದೇಶದ ನಿಯಮಗಳು ಮತ್ತೊಂದು ಸವಾಲಾಗಬಹುದು. ಅಲ್ಲದೆ, ಹಾರುವ ಯಂತ್ರದೊಂದಿಗೆ ವ್ಯವಹರಿಸಲು ವಿಶೇಷ ಕೌಶಲ್ಯಗಳು ಬೇಕಾಗುತ್ತವೆ. ಸುಧಾರಿತ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದ್ದರೂ ಸಹ, ಹಾರುವ ಕಾರು ಮೊದಲ ಬಾರಿಗೆ ಬಳಕೆದಾರರಿಗೆ ಸವಾಲುಗಳನ್ನು ಒಡ್ಡಬಹುದು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








