Mahindra: 'ಎಕ್ಸ್‌ಯುವಿ 3ಎಕ್ಸ್ಒ'ಗೆ ಕ್ಯೂ ನಿಂತ ಗ್ರಾಹಕರು.. ದೊಡ್ಡ ದಾಖಲೆ, 7 ಲಕ್ಷ ಬೆಲೆ.. 20 Km ಮೈಲೇಜ್
ಭಾರತದ ವಿಶ್ವಾಸಾರ್ಹ ವಾಹನ ತಯಾರಕ ಸಂಸ್ಥೆಯಾಗಿ ಮಹೀಂದ್ರಾ (Mahindra) ಗುರುತಿಸಿಕೊಂಡಿದೆ. ಏಪ್ರಿಲ್ ಕೊನೆಯಲ್ಲಿ ಹೊಚ್ಚ ಹೊಸ ಎಕ್ಸ್‌ಯುವಿ 3ಎಕ್ಸ್ಒ (XUV 3XO) ಎಸ್‌ಯುವಿಯನ್ನು ದೇಶೀಯ ಮಾರುಕಟ್ಟೆಯಲ್ಲಿ ಅದ್ದೂರಿಯಾಗಿ ಬಿಡುಗಡೆಗೊಳಿಸಿತ್ತು. ಮೇ 26ರಿಂದ ಈ ಕಾರಿನ ವಿತರಣೆಗಳು ಕೂಡ ಶುರುವಾಗಿದ್ದವು. ಕಂಪನಿಯು ಒಂದೇ ದಿನ 1,500 ಯುನಿಟ್ ಎಸ್‌ಯುವಿಗಳನ್ನು ಡೆಲಿವರಿ ಮಾಡಿತ್ತು. ಅದಕ್ಕೂ ಮೊದಲು ಮೇ 15ರಂದು ಬುಕ್ಕಿಂಗ್ ಪ್ರಾರಂಭಿಸಿದ 1 ಗಂಟೆಯೊಳಗೆ ಈ ಕಾರನ್ನು ಬರೊಬ್ಬರಿ 50,000 ಗ್ರಾಹಕರು ಕಾಯ್ದಿರಿಸಿದ್ದರು.
ನೂತನ ಮಹೀಂದ್ರಾ ಎಕ್ಸ್‌ಯುವಿ 3ಎಕ್ಸ್ಒ ಎಸ್‌ಯುವಿ ಪಡೆಯುತ್ತಿರುವ ಬುಕ್ಕಿಂಗ್‌ನಲ್ಲಿ ಶೇಕಡ 70% ಪಾಲನ್ನು ಪೆಟ್ರೋಲ್ ರೂಪಾಂತರ (ವೇರಿಯೆಂಟ್)ಗಳೇ ಹೊಂದಿವೆ. ಸದ್ಯ ಕಂಪನಿಯು ವಿತರಣೆ ಆರಂಭಿಸಿದ ಮೊದಲ ತಿಂಗಳಲ್ಲಿ (ಮೇ, 2024) 10,000 ಯುನಿಟ್ ಕಾರುಗಳನ್ನು ಮಾರಾಟ ಮಾಡಿದೆ. ದೇಶೀಯವಾಗಿ ಖರೀದಿಗೆ ಲಭ್ಯವಿರುವ ಹೊಸ 'ಎಕ್ಸ್‌ಯುವಿ 3ಎಕ್ಸ್ಒ' ರೂ.7.49 ಲಕ್ಷದಿಂದ ರೂ.15.49 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಪಡೆದಿದೆ.

ಈ ಕಾರು ಎಂಎಕ್ಸ್1, ಎಂಎಕ್ಸ್2, ಎಂಎಕ್ಸ್2 ಪ್ರೊ, ಎಂಎಕ್ಸ್3, ಎಂಎಕ್ಸ್3 ಪ್ರೊ ಸೇರಿದಂತೆ ವಿವಿಧ ರೂಪಾಂತರಗಳ ಆಯ್ಕೆಯಲ್ಲಿಯೂ ಸಿಗುತ್ತದೆ. ಅತ್ಯಾಧುನಿಕ ವಿನ್ಯಾಸವನ್ನು ಹೊಂದಿದ್ದು, ಎಲ್ಇಡಿ ಹೆಡ್‌ಲೈಟ್‌ಗಳು, ಇಂಟಿಗ್ರೇಟೆಡ್ ಡೇಟೈಮ್ ರನ್ನಿಂಗ್ ಲೈಟ್‌ಗಳು (ಡಿಆರ್‌ಎಲ್ಎಸ್), ನವೀನ ಬಂಪರ್, ಅಲಾಯ್ ವೀಲ್‌ಗಳು ಮತ್ತು ಸಿ-ಆಕಾರಕ್ಕೆ ಹೋಲುವ ಟೈಲ್‌ಲ್ಯಾಂಪ್‌ಗಳನ್ನು ಪಡೆದಿದೆ.
ಹೊಸ ಮಹೀಂದ್ರಾ ಎಕ್ಸ್‌ಯುವಿ 3ಎಕ್ಸ್ಒ ಎಸ್‌ಯುವಿ ಮೂರು ಪವರ್‌ಟ್ರೇನ್‌ನೊಂದಿಗೆ ದೊರೆಯುತ್ತದೆ. ಇದರ 1.2-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ 110 ಪಿಎಸ್ ಗರಿಷ್ಠ ಪವರ್ (ಶಕ್ತಿ) ಮತ್ತು 200 ಎನ್ಎಂ ಪೀಕ್ ಟಾರ್ಕ್ ಹೊರಹಾಕುವ ಸಾಮರ್ಥ್ಯವನ್ನು ಹೊಂದಿದೆ. 1.2-ಲೀಟರ್ ಟಿಜಿಡಿಐ ಟರ್ಬೊ ಪೆಟ್ರೋಲ್ ಎಂಜಿನ್ 130 ಪಿಎಸ್ ಪವರ್ ಹಾಗೂ 250 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ.

ಮತ್ತೊಂದು 1.5-ಲೀಟರ್ ಡೀಸೆಲ್ ಎಂಜಿನ್ 117 ಪಿಎಸ್ ಪವರ್ (ಶಕ್ತಿ) ಮತ್ತು 300 ಎನ್ಎಂ ಪೀಕ್ ಟಾರ್ಕ್ ಹೊರಹಾಕುತ್ತದೆ. ರೂಪಾಂತರಗಳಿಗೆ ಅನುಗುಣವಾಗಿ 6-ಸ್ಪೀಡ್ ಮ್ಯಾನುವಲ್/ 6-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಪಡೆದಿದೆ. 17.96 ರಿಂದ 21.2 ಕೆಎಂಪಿಎಲ್ ವರೆಗೆ ಮೈಲೇಜ್ ಕೊಡುತ್ತದೆ. ಇದರಲ್ಲಿ 5 ಮಂದಿ ಆರಾಮದಾಯಕವಾಗಿ ಪ್ರಯಾಣಿಸಬಹುದು.
ನೂತನ ಕಾರು ಸಿಟ್ರಿನ್ ಯೆಲ್ಲೋ, ಡೀಪ್ ಫಾರೆಸ್ಟ್, ಡ್ಯೂನ್ ಬೀಜ್, ಎವರೆಸ್ಟ್ ವೈಟ್, ಗ್ಯಾಲಕ್ಸಿ ಗ್ರೇ, ನೆಬ್ಯುಲಾ ಬ್ಲೂ, ಸ್ಟೆಲ್ತ್ ಬ್ಲ್ಯಾಕ್, ಟ್ಯಾಂಗೋ ರೆಡ್ ಒಳಗೊಂಡಂತೆ ಹಲವು ಬಣ್ಣಗಳ ಆಯ್ಕೆಯಲ್ಲಿ ದೊರೆಯುತ್ತದೆ. ಇನ್ಫೋಟೈನ್‌ಮೆಂಟ್ ಸಿಸ್ಟಮ್ & ಇನ್ಸ್ಟ್ರುಮೆಂಟ್ ಕ್ಲಸ್ಟರ್‌ಗಾಗಿ 10.25-ಇಂಚಿನ ಡುಯಲ್ ಡಿಸ್ಪ್ಲೇಗಳು, ಕ್ರೂಸ್ ಕಂಟ್ರೋಲ್, ಡುಯಲ್ ಝೋನ್ ಎಸಿ, ವೈರ್‌ಲೆಸ್ ಫೋನ್ ಚಾರ್ಜರ್, ಪನೋರಮಿಕ್ ಸನ್‌ರೂಫ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಸುರಕ್ಷತೆಗೂ ಮಹೀಂದ್ರಾ ಎಕ್ಸ್‌ಯುವಿ 3ಎಕ್ಸ್ಒ ಎಸ್‌ಯುವಿ ಹೆಸರುವಾಸಿಯಾಗಿದೆ. 6 ಏರ್‌ಬ್ಯಾಗ್, TPMS (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), ADAS (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್), ESC (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), ರೇರ್ ವ್ಯೂ ಕ್ಯಾಮೆರಾ ಹಾಗೂ 360-ಡಿಗ್ರಿ ಕ್ಯಾಮೆರಾವನ್ನು ಹೊಂದಿದೆ. ಈ ಕಾರಿಗೆ ನಿಸ್ಸಾನ್ ಮ್ಯಾಗ್ನೈಟ್, ಹ್ಯುಂಡೈ ವೆನ್ಯೂ, ರೆನಾಲ್ಟ್ ಕಿಗರ್, ಟಾಟಾ ನೆಕ್ಸಾನ್, ಕಿಯಾ ಸೋನೆಟ್ ಮಾದರಿಗಳು ದೊಡ್ಡ ಎದುರಾಳಿಯಾಗಿವೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋ ಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications