Jimny: ಬಿಡುಗಡೆಯಾಗಿ 1 ತಿಂಗಳು.. ಮಾರುತಿ ಸುಜುಕಿ ಜಿಮ್ನಿ ಥಂಡರ್ ಎಡಿಷನ್ ಮಾರಾಟ ಸ್ಥಗಿತ
ಭಾರತದಲ್ಲಿ ಮಾರುತಿ ಸುಜುಕಿ ಜಿಮ್ನಿ (Maruti Suzuki Jimny) 5 - ಡೋರ್, ಜನಪ್ರಿಯ ಆಫ್-ರೋಡ್ ಎಸ್‌ಯುವಿಯಾಗಿದೆ. ಜಿಮ್ನಿ ಮಾರಾಟವನ್ನು ಮತ್ತಷ್ಟು ವೃದ್ಧಿಸಲು ಕಂಪನಿಯು ಡಿಸೆಂಬರ್ (2023) ತಿಂಗಳಲ್ಲಿ ಥಂಡರ್ ಎಡಿಷನ್ (Thunder Edition) ಅನ್ನು ಕಡಿಮೆ ಬೆಲೆಗೆ ಬಿಡುಗಡೆಗೊಳಿಸಿತ್ತು. ಆದರೀಗ ಅದನ್ನು ಸ್ಥಗಿತಗೊಳಿಸಿದೆ.
ಮಾರುತಿ ಸುಜುಕಿ ಜಿಮ್ನಿ ಥಂಡರ್ ಎಡಿಷನ್ ರೂ.10.74 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಲಾಂಚ್ ಮಾಡಲಾಗಿತ್ತು. ಜಿಮ್ನಿಯ ಇತರೆ ರೂಪಾಂತರಗಳಿಗೆ ಹೋಲಿಸಿದರೆ, ಇದರ ದರ ತುಂಬಾ ಕಡಿಮೆಯಿತ್ತು. ವಿನ್ಯಾಸದಲ್ಲೂ ಹಲವು ಬದಲಾವಣೆ ಹೊಂದಿತ್ತು. ಪ್ರಮುಖವಾಗಿ ಎಸ್‌ಯುವಿ ಡೋರ್ ಮೇಲೆ ಪರ್ವತದ ಛಾಯಾಚಿತ್ರವನ್ನು ಚಿತ್ರಿಸಲಾಗಿತ್ತು. ಸದ್ಯ, ಥಂಡರ್ ಎಡಿಷನ್ ಬಿಡುಗಡೆಯಾಗಿ ಕೇವಲ 1 ತಿಂಗಳಾಗಿದ್ದು, ಅಷ್ಟರದಲ್ಲಿ ಮಾರಾಟದಿಂದ ನಿಲ್ಲಿಸಲಾಗಿದೆ.

ಹೊಸ ಮಾರುತಿ ಸುಜುಕಿ ಜಿಮ್ನಿ ಥಂಡರ್ ಎಡಿಷನ್ ಎಸ್‌ಯುವಿ ಸ್ಥಗಿತಗೊಳಿಸಲು ಕಾರಣವೇನು ಎಂಬುದರ ಬಗ್ಗೆ ಸರಿಯಾದ ವಿವರಗಳು ಲಭಿಸಿಲ್ಲ. ಇತ್ತೀಚೆಗೆ, ಡಿಸೆಂಬರ್ ತಿಂಗಳ ಮಾರಾಟ ವರದಿ ಪ್ರಕಟವಾಗಿತ್ತು. ಜಿಮ್ನಿ 5 - ಡೋರ್ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗಿದ್ದವು. ಥಂಡರ್ ಎಡಿಷನ್ ಲಾಂಚ್ ಹಾಗೂ ದೇಶಾದ್ಯಂತ ಕಂಪನಿಯ ವಿವಿಧ ಡೀಲರ್‌ಶಿಪ್ ನೀಡಿದ್ದ ರಿಯಾಯಿತಿ ಹಿನ್ನೆಲೆ, ಒಟ್ಟು 4500 ಯುನಿಟ್ ಜಿಮ್ನಿ ಸೇಲ್ ಆಗಿದ್ದವು.
ದೇಶೀಯ ಮಾರುಕಟ್ಟೆಯಲ್ಲಿ ಖರೀದಿಗೆ ಸಿಗುವ ಮಾರುತಿ ಸುಜುಕಿ ಜಿಮ್ನಿ 5 - ಡೋರ್ ಎಸ್‌ಯುವಿ, ರೂ.12.74 ಲಕ್ಷದಿಂದ ರೂ.15.05 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಕೇವಲ ಜಿಟಾ (Zeta) ಮತ್ತು ಆಲ್ಫಾ (Alpha) ರೂಪಾಂತರ, ಸಿಜ್ಲಿಂಗ್ ರೆಡ್, ಗ್ರಾನೈಟ್ ಗ್ರೇ, ನೆಕ್ಸಾ ಬ್ಲೂ, ಬ್ಲೂಶ್ ಬ್ಲ್ಯಾಕ್ ಸೇರಿದಂತೆ 2-ಡುಯಲ್ ಟೋನ್, 5-ಮೊನೊಟೋನ್ ಬಣ್ಣಗಳ ಆಯ್ಕೆಯಲ್ಲಿ ಸಿಗುತ್ತದೆ.
ಈ ಎಸ್‌ಯುವಿಯಲ್ಲಿ 4 ಮಂದಿ ಆರಾಮದಾಯಕವಾಗಿ ಕುಳಿತುಕೊಂಡು ಪ್ರಯಾಣಿಸಬಹುದು. ವಿನ್ಯಾಸದ ಸಲುವಾಗಿ ಮುಂಭಾಗ ಫ್ಲಾಟ್ ಕ್ಲಾಮ್‌ಶೆಲ್ ಬಾನೆಟ್, ವಾಷರ್‌ಗಳೊಂದಿಗೆ ಎಲ್ಇಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್ ಅನ್ನು ಹೊಂದಿದೆ. ಸೈಡ್ (ಬದಿ) ಡಿಸೈನ್ ಕೂಡ ಅಚ್ಚುಕಟ್ಟಾಗಿದ್ದು, ಅಲಾಯ್ ವೀಲ್ಸ್, 195/80 ಅಳತೆಯ ಟೈಯರ್ಸ್ ಪಡೆದಿದೆ. ಹಿಂಭಾಗದ ವಿನ್ಯಾಸವು ಅತ್ಯಾಧುನಿಕವಾಗಿದೆ.
ಮಾರುತಿ ಸುಜುಕಿ ಜಿಮ್ನಿ, 1.5 - ಲೀಟರ್ ಕೆ-ಸೀರಿಯಸ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 104.8 Ps ಗರಿಷ್ಠ ಪವರ್ ಹಾಗೂ 134.2 Nm ಪೀಕ್ ಟಾರ್ಕ್ ಹೊರಹಾಗುವ ಸಾಮರ್ಥ್ಯವನ್ನು ಹೊಂದಿದೆ. ರೂಪಾಂತರಗಳಿಗೆ ಅನುಗುಣವಾಗಿ 5 ಸ್ವೀಡ್ ಮ್ಯಾನುವಲ್ ಅಥವಾ 4 ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ದೊರೆಯುತ್ತದೆ.
ಜಿಮ್ನಿ, 4WD (ಫೋರ್ ವೀಲ್ ಡ್ರೈವ್) ತಂತ್ರಜ್ಞಾನವನ್ನು ಹೊಂದಿದೆ. ಇದು ಆಫ್-ರೋಡ್ ಎಸ್‌ಯುವಿಯಾಗಿರುವುದರಿಂದ 16.39 km/l ರಿಂದ 16.94 km/l ಮೈಲೇಜ್ ನೀಡುತ್ತದೆ. ಈ ಮಾರುತಿ ಸುಜುಕಿ ಜಿಮ್ನಿ 3985 ಎಂಎಂ ಉದ್ದ, 1645 ಎಂಎಂ ಅಗಲ, 1720 ಎತ್ತರವಿದ್ದು, 2590 ಎಂಎಂ ಅಳತೆಯ ವೀಲ್ ಬೇಸ್ ಪಡೆದಿದೆ.
ಮಾರುತಿ ಸುಜುಕಿ ಜಿಮ್ನಿ ಬೆಲೆಗೆ ತಕ್ಕಂತೆ ಅತ್ಯಾಕರ್ಷಕ ವೈಶಿಷ್ಟ್ಯಗಳನ್ನು ಒಳಗೊಂಡಿದೆ. 9 - ಇಂಚಿನ ಸ್ಮಾರ್ಟ್‌ಪ್ಲೇ ಪ್ರೊ+ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್, ಕ್ರೂಸ್ ಕಂಟ್ರೋಲ್, ಕೀಲೆಸ್ ಎಂಟ್ರಿ ಅನ್ನು ಹೊಂದಿದೆ. ಜೊತೆಗೆ 208 ಲೀಟರ್ ಸಾಮರ್ಥ್ಯದ ಬೂಟ್ ಸ್ಪೇಸ್ ಅನ್ನು ಒಳಗೊಂಡಿದೆ.
ಈ ಎಸ್‌ಯುವಿ, 6 - ಏರ್‌ಬ್ಯಾಗ್ಸ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), EBD (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ಬ್ರೇಕ್ ಲಿಮಿಟೆಡ್ ಸ್ಲಿಪ್ ಡಿಫರೆನ್ಷಿಯಲ್, ಹಿಲ್ ಹೋಲ್ಡ್ ಕಂಟ್ರೋಲ್, ಹಿಲ್ ಡಿಸೆಂಟ್ ಕಂಟ್ರೋಲ್ ಸೇರಿದಂತೆ ವಿವಿಧ ಸುರಕ್ಷತಾ ವೈಶಿಷ್ಟ್ಯಗಳಿವೆ. ಜಿಮ್ನಿಗೆ ಮಹೀಂದ್ರಾ ಥಾರ್ ಮತ್ತು ಫೋರ್ಸ್ ಗೂರ್ಖಾ ಪ್ರಬಲ ಪ್ರತಿಸ್ಫರ್ಧಿಯಾಗಿವೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications