ಮಾರುತಿ ಕಾರುಗಳಿಗೆ ಏನ್ ಬೇಡಿಕೆ ಗುರು... ವರ್ಷಕ್ಕೆ 23.5 ಲಕ್ಷ ಕಾರುಗಳ ಉತ್ಪಾದನೆ, ಎಲ್ಲಿ ಗೊತ್ತಾ?
ಭಾರತೀಯ ಆಟೋ ಉದ್ಯಮದಲ್ಲಿ ತನ್ನ ವೈವಿಧ್ಯಮಯ ಕಾರುಗಳನ್ನು ಮಾರಾಟ ಮಾಡುತ್ತಾ ಮುನ್ನುಗ್ಗುತ್ತಿರುವ ಮಾರುತಿ ಸುಜುಕಿ, ಹೊಸ ಮೈಲಿಗಲ್ಲನ್ನು ಸಾಧಿಸಿದೆ. ಹರಿಯಾಣದ ಗುರುಗ್ರಾಮ್‌ನಲ್ಲಿರುವ ಕಂಪನಿಯ ಮನೇಸರ್ ಕಾರು ಉತ್ಪಾದನಾ ಘಟಕದಲ್ಲಿ 10 ಮಿಲಿಯನ್ ಕಾರುಗಳು (1 ಕೋಟಿ) ಮತ್ತು ಎಸ್‌ಯುವಿಗಳನ್ನು ಉತ್ಪಾದಿಸಿದೆ. ಅಕ್ಟೋಬರ್ 2006 ರಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದ ಈ ಸೌಲಭ್ಯವು, ಕೇವಲ 18 ವರ್ಷಗಳಲ್ಲಿ ಈ ಮೈಲಿಗಲ್ಲನ್ನು ತಲುಪಿದೆ. ಕಂಪನಿಯು ತನ್ನ ಪ್ರಮುಖ ಕಾರು ಮಾದರಿಗಳನ್ನು ಇಲ್ಲಿ ತಯಾರಿಸುತ್ತಿದ್ದು, ಅವುಗಳ ಕುರಿತ ಹೆಚ್ಚಿನ ಮಾಹಿತಿಯನ್ನು ಇಲ್ಲಿ ನೋಡೋಣ.
ಹರಿಯಾಣದ ಮನೇಸರ್‌ನಲ್ಲಿರುವ 600 ಎಕರೆ ಸೌಲಭ್ಯದಲ್ಲಿ ಜನಪ್ರಿಯ ಮಾರುತಿ ಸುಜುಕಿ XL 6, ಸಿಯಾಜ್, ಡಿಜೈರ್, ವ್ಯಾಗನ್ ಆರ್, ಬ್ರೆಝಾ, ಎರ್ಟಿಗಾ, ಸೆಲೆರಿಯೊ ಮತ್ತು ಎಸ್-ಪ್ರೆಸ್ಸೊವನ್ನು ಇಲ್ಲಿ ತಯಾರಿಸಲಾಗುತ್ತಿದೆ. ಇಲ್ಲಿನ ಕಾರುಗಳನ್ನು ದೇಶೀಯವಾಗಿ ಮಾರಾಟ ಮಾಡುವುದರ ಜೊತೆಗೆ ಅಂತರರಾಷ್ಟ್ರೀಯ ಮಾರುಕಟ್ಟೆಗಳಾದ ಆಫ್ರಿಕಾ, ಲ್ಯಾಟಿನ್ ಅಮೆರಿಕ, ಮಧ್ಯಪ್ರಾಚ್ಯ ಮತ್ತು ಕೆಲವು ಏಷ್ಯಾದ ದೇಶಗಳಿಗೆ ರಫ್ತು ಮಾಡಲಾಗುತ್ತದೆ.

ಮಾರುತಿ ಸುಜುಕಿ ಪ್ರಸ್ತುತ ದೇಶದಲ್ಲಿ ಅತಿ ಹೆಚ್ಚು ವಾಹನ ಉತ್ಪಾದಿಸುವ ಕಂಪನಿಯಾಗಿದ್ದು, ಏಪ್ರಿಲ್ 2024 ರ ಹೊತ್ತಿಗೆ, ಮಾರುತಿ ಸುಜುಕಿಯು ಒಟ್ಟಾರೆ ವರ್ಷಕ್ಕೆ 23.5 ಲಕ್ಷ ಯುನಿಟ್ ಕಾರುಗಳನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಕಂಪನಿ ಪ್ರಾರಂಭಿಸಿದಾಗಿನಿಂದ ಇಲ್ಲಿಯವರೆಗೆ ಬರೋಬ್ಬರಿ 31.1 ಮಿಲಿಯನ್ (3 ಕೋಟಿಗೂ ಹೆಚ್ಚು) ವಾಹನಗಳನ್ನು ಉತ್ಪಾದಿಸಿದೆ. ಇದು ಭಾರತದಲ್ಲಿ ಇನ್ಯಾವುದೇ ವಾಹನ ತಯಾರಕರಿಗಿಲ್ಲದ ಸಾಧನೆಯಾಗಿದೆ.
ಈ ಸಾಧನೆಯ ಬಗ್ಗೆ ಮಾತನಾಡಿದ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಹಿಸಾಶಿ ಟೇಕುಚಿ, "ನಮ್ಮ ಮನೇಸರ್ ಘಟಕದಲ್ಲಿ 1 ಕೋಟಿ ಸಂಚಿತ ಉತ್ಪಾದನಾ ಗಡಿಯನ್ನು ದಾಟಿರುವುದು ಭಾರತದ ಉತ್ಪಾದನಾ ಸಾಮರ್ಥ್ಯ ಮತ್ತು 'ಮೇಕ್ ಇನ್ ಇಂಡಿಯಾ' ದೊಡ್ಡ ರಾಷ್ಟ್ರೀಯ ಗುರಿಗೆ ನಮ್ಮ ಬದ್ಧತೆಗೆ ಸಾಕ್ಷಿಯಾಗಿದೆ" ಎಂದು ಹೇಳಿದ್ದಾರೆ.

ಶೀಘ್ರದಲ್ಲೇ ಹೊಸ ಡಿಜೈರ್: ಹೊಸ ಡಿಜೈರ್ ಮುಂದಿನ ತಿಂಗಳು ಬಿಡುಗಡೆಯಾಗಲಿದೆ. ಆದ್ರೆ ದಿನಾಂಕವನ್ನು ಇನ್ನೂ ಅಧಿಕೃತವಾಗಿ ಬಹಿರಂಗಪಡಿಸಿಲ್ಲ. ಕಾರ್ ದೇಖೋ ಪ್ರಕಾರ, ಹೊಸ ಡಿಜೈರ್ ರೂ.6.70 (ಎಕ್ಸ್ ಶೋರೂಂ) ಲಕ್ಷ ಆರಂಭಿಕ ಬೆಲೆಯಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಹೊಸ ಡಿಜೈರ್ ಸನ್‌ರೂಫ್ ಅನ್ನು ಸಹ ಪಡೆದಿದೆ. ಹೌದು, ಗ್ರಾಹಕರ ನಿರೀಕ್ಷೆಗಳಿಗೆ ಅನುಗುಣವಾಗಿ ಮಾರುತಿ ಹೊಸ ಡಿಜೈರ್‌ನೊಂದಿಗೆ ಸಿಂಗಲ್-ಪ್ಯಾನ್ ಸನ್ ರೂಫ್ ಅನ್ನು ಪರಿಚಯಿಸಲಿದೆ.
ಮೈಲೇಜ್ ವಿಷಯಕ್ಕೆ ಬಂದರೆ ಹೊಸ ಡಿಜೈರ್ ಎಂಜಿನ್ ಭಾರೀ ಸುಧಾರಣೆ ಕಂಡಿದೆ. ಹೊಸ ಸ್ವಿಫ್ಟ್ ಝಡ್-ಸೀರಿಸ್ ಎಂಜಿನ್ ಇದರಲ್ಲೂ ಕಾಣಬಹುದಾಗಿದ್ದು, ಪೆಟ್ರೋಲ್‌ನಲ್ಲಿ 25 ಕಿ.ಮೀ ಮೈಲೇಜ್ ಹಾಗೂ ಸಿಎನ್‌ಜಿನಲ್ಲಿ ಬರೋಬ್ಬರಿ 33 ಕಿ.ಮೀ ಮೈಲೇಜ್ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಹೊಸ ಡಿಜೈರ್ ಬಗ್ಗೆ ನಿಮ್ಮ ನಿರೀಕ್ಷೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ.

ಇನ್ನು ಹೊಸ 2024 ರ ಮಾರುತಿ ಸುಜುಕಿ ಡಿಜೈರ್ ಇಂಟೀರಿಯರ್ ವಿಷಯಕ್ಕೆ ಬಂದರೆ ಸ್ವಿಫ್ಟ್‌ಗೆ ಕೆಲವು ಹೋಲಿಕೆಗಳನ್ನು ಹೊಂದಬಹುದು. ಫೀಚರ್ಸ್ ವಿಷಯಕ್ಕೆ ಬಂದರೆ, 9 ಇಂಚಿನ ಫ್ರೀ-ಫ್ಲೋಟಿಂಗ್ ಇನ್ಫೋಟೈನ್ಮೆಂಟ್ ಸ್ಕ್ರೀನ್ ಮತ್ತು ಕ್ಲೈಮೆಟ್ ಕಂಟ್ರೋಲ್ ವ್ಯವಸ್ಥೆಯಂತಹ ಫೀಚರ್‌ಗಳನ್ನು ಹೊಂದಿರುತ್ತದೆ ಎಂದು ನಿರೀಕ್ಷಿಸಲಾಗಿದೆ.
ಎಂಜಿನ್ ವಿಷಯಕ್ಕೆ ಬಂದರೆ ಇದು 1.2-ಲೀಟರ್ 3 ಸಿಲಿಂಡರ್ ಝಡ್-ಸೀರಿಸ್ ಪೆಟ್ರೋಲ್ ಎಂಜಿನ್‌ನೊಂದಿಗೆ ಬರಲಿದೆ. ಈ ಎಂಜಿನ್ 82 ಬಿಹೆಚ್‌ಪಿ ಪವರ್ ಮತ್ತು 112 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಇದರ ಸಿಎನ್‌ಜಿ ವಿಷಯಕ್ಕೆ ಬಂದರೆ, 69.75 ಬಿಹೆಚ್ ಪವರ್ ಮತ್ತು 101 ಎನ್ಎಂ ಟಾರ್ಕ್ ಹೊಂದಿರಲಿದೆ. ಪೆಟ್ರೋಲ್ ಯುನಿಟ್ ಎಎಂಟಿ ಆಯ್ಕೆಯೊಂದಿಗೆ ಎಂಟಿ ಗೇರ್‌ಬಾಕ್ಸ್ ಹೊಂದಿರಲಿದೆ, ಆದರೆ ಸಿಎನ್‌ಜಿನಲ್ಲಿ ಎಂಟಿ ಮಾತ್ರ ನೀಡಲಾಗುತ್ತದೆ.


Click it and Unblock the Notifications