Maruti Suzuki: 1 ವರ್ಷದಲ್ಲಿಯೇ ಹೊಸ ದಾಖಲೆ.. 134,735 ಫ್ರಾಂಕ್ಸ್ ಕಾರುಗಳು ಮಾರಾಟ, ಬೆಲೆ ರೂ.7.51 ಲಕ್ಷ
ದೇಶದ ಅತಿದೊಡ್ಡ ವಾಹನ ತಯಾರಕ ಕಂಪನಿಯಾಗಿ ಮಾರುತಿ ಸುಜುಕಿ (Maruti Suzuki) ಖ್ಯಾತಿಗಳಿಸಿದೆ. ಕಂಪನಿಯ ಕಾರುಗಳು ಆಕರ್ಷಕ ವಿನ್ಯಾಸ ಮತ್ತು ವೈಶಿಷ್ಟ್ಯವನ್ನು ಹೊಂದಿರುವುದರಿಂದ ಹೆಚ್ಚಿನ ಮಂದಿ ಇಷ್ಟಪಟ್ಟು ಖರೀದಿಸುತ್ತಿದ್ದಾರೆ. ಸದ್ಯ ಜನಪ್ರಿಯ 'ಫ್ರಾಂಕ್ಸ್' ಎಸ್‌ಯುವಿ ಮಾರಾಟದಲ್ಲಿ ಹೊಸ ದಾಖಲೆಯನ್ನು ನಿರ್ಮಿಸಿದೆ.
ಮಾರುತಿ ಸುಜುಕಿಯು ನೆಕ್ಸಾ (Nexa) ಡೀಲರ್‌ಶಿಪ್ ಮುಖಾಂತರ ಮಾರುವ ಫ್ರಾಂಕ್ಸ್ ಕಾರು, ದೇಶೀಯ ಮಾರುಕಟ್ಟೆಯನ್ನು ಪ್ರವೇಶಿಸಿ ಬರೋಬ್ಬರಿ 1 ವರ್ಷ ಕಳೆದಿದೆ. 2023ರಲ್ಲಿ ದೆಹಲಿಯಲ್ಲಿ ನಡೆದ ಆಟೋ ಎಕ್ಸ್‌ಪೋದಲ್ಲಿ ಈ ಎಸ್‌ಯುವಿಯನ್ನು ಅನಾವರಣಗೊಳಿಸಲಾಗಿತ್ತು. ಆ ಬಳಿಕ, ಏಪ್ರಿಲ್ 24, 2023ರಂದು ಆದ್ದೂರಿಯಾಗಿ ಬಿಡುಗಡೆ ಮಾಡಲಾಗಿತ್ತು. ಮಾರ್ಚ್ 2024ರ ಅಂತ್ಯದವರೆಗೆ 134,735 ಯುನಿಟ್ ಫ್ರಾಂಕ್ಸ್ ಎಸ್‌ಯುವಿಗಳನ್ನು ಕಂಪನಿಯು ಮಾರಾಟ ಮಾಡಿದೆ.

ಈ ಹಿಂದೆ, ಜನವರಿ 2024ರಲ್ಲಿಯೇ ಮಾರುತಿ ಸುಜುಕಿಯು 1,00,000 ಯುನಿಟ್ ಫ್ರಾಂಕ್ಸ್ ಕಾರುಗಳನ್ನು ಮಾರಾಟಗೊಳಿಸಿ ಐತಿಹಾಸಿಕ ದಾಖಲೆಯನ್ನು ನಿರ್ಮಾಣ ಮಾಡಿತ್ತು. ಭಾರತದಲ್ಲಿ ಫ್ರಾಂಕ್ಸ್ ಎಸ್‌ಯುವಿಯನ್ನು ದೊಡ್ಡ ಸಂಖ್ಯೆಯಲ್ಲಿ ಗ್ರಾಹಕರು ಖರೀದಿಸಲು ಹಲವು ಕಾರಣಗಳಿವೆ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಣೆಯನ್ನು ಮಾಡುತ್ತಿದ್ದಾರೆ. ಪ್ರಮುಖವಾಗಿ ಕೈಗೆಟುಕುವ ಬೆಲೆ, ಅತ್ಯಾಧುನಿಕ ವಿನ್ಯಾಸ ಮತ್ತು ವೈಶಿಷ್ಟ್ಯವೆಂದು ಹಲವರ ಅಭಿಪ್ರಾಯವಾಗಿದೆ.
ಹೊಸ ಮಾರುತಿ ಸುಜುಕಿ ಫ್ರಾಂಕ್ಸ್ (Maruti Suzuki Fronx) ಎಸ್‌ಯುವಿ, ರೂ.7.51 ಲಕ್ಷದಿಂದ ರೂ.13.04 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ದೊರೆಯುತ್ತದೆ. ಸಿಗ್ಮಾ, ಡೆಲ್ಟಾ, ಡೆಲ್ಟಾ ಪ್ಲಸ್, ಜಿಟಾ ಸೇರಿದಂತೆ ವಿವಿಧ ರೂಪಾಂತರ ಹಾಗೂ ನೆಕ್ಸಾ ಬ್ಲೂ, ಅರ್ಥನ್ ಬ್ರೌನ್, ಆರ್ಕ್ಟಿಕ್ ವೈಟ್, ಒಪ್ಯುಲೆಂಟ್ ರೆಡ್ ಒಳಗೊಂಡಂತೆ ಆಕರ್ಷಕ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ.

ಈ ಫ್ರಾಂಕ್ಸ್ ಕಾರು, ಪೆಟ್ರೋಲ್ ಮತ್ತು ಸಿಎನ್‌ಜಿ ಪವರ್‌ಟ್ರೇನ್ ಹೊಂದಿದ್ದು, ರೂಪಾಂತರ (ವೇರಿಯೆಂಟ್)ಗಳಿಗೆ ಅನುಗುಣವಾಗಿ 5 - ಸ್ಪೀಡ್ ಮ್ಯಾನುವಲ್, 5 - ಸ್ಪೀಡ್ ಆಟೋಮೆಟಿಕ್ ಅಥವಾ 6 - ಸ್ಪೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಅನ್ನು ಪಡೆದಿದೆ. ಪೆಟ್ರೋಲ್ ಮಾದರಿಗಳು 20.1 ರಿಂದ 22.89 ಕೆಎಂಪಿಎಲ್, ಸಿಎನ್‌ಜಿ ಆವೃತ್ತಿಗಳು 28.51 ಕಿ.ಮೀ/ ಕೆಜಿ ಮೈಲೇಜ್ ನೀಡುತ್ತವೆ.
ಮಾರುತಿ ಸುಜುಕಿ ಫ್ರಾಂಕ್ಸ್ ವಿನ್ಯಾಸ (ಡಿಸೈನ್) ವಿಚಾರದಲ್ಲಿಯೂ ಅತ್ಯಾಧುನಿಕವಾಗಿದೆ. 5 ಮಂದಿ ಆರಾಮದಾಯಕವಾಗಿ ಪ್ರಯಾಣಿಸಬಹುದು. 9-ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್, ವೈರ್‌ಲೆಸ್ ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ, ಹೆಡ್ಸ್-ಅಪ್ ಡಿಸ್ಪ್ಲೇ, ಕ್ರೂಸ್ ಕಂಟ್ರೋಲ್, ಆಟೋ ಕ್ಲೇಮೇಟ್ ಕಂಟ್ರೋಲ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆದಿದೆ.
ಈ ಫ್ರಾಂಕ್ಸ್ ಎಸ್‌ಯುವಿ ಸಾಕಷ್ಟು ರಕ್ಷಣಾತ್ಮಕ ವೈಶಿಷ್ಟ್ಯಗಳನ್ನು ಹೊಂದಿದೆ. 6 - ಏರ್‌ಬ್ಯಾಗ್, EBD (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ESP (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ), ಹಿಲ್ ಹೋಲ್ಡ್ ಅಸಿಸ್ಟ್, 360 - ಡಿಗ್ರಿ ಕ್ಯಾಮೆರಾವನ್ನು ಹೊಂದಿದೆ. ಫ್ರಾಂಕ್ಸ್ ಕಾರಿಗೆ ಕಿಯಾ ಸೋನೆಟ್, ಹ್ಯುಂಡೈ ವೆನ್ಯೂ ದೊಡ್ಡ ಎದುರಾಳಿಯಾಗಿವೆ.
ಡ್ರೈವ್‌ಸ್ಪಾರ್ಕ್ ಕನ್ನಡ ತಂಡ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ಒದಗಿಸುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್ ಗಳನ್ನು ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications