Mercedes Benz: ಐಷಾರಾಮಿ ವೈಶಿಷ್ಟ್ಯದೊಂದಿಗೆ ಶ್ರೀಮಂತರ ಮರ್ಸಿಡಿಸ್ ಬೆಂಜ್ ಜಿಎಲ್‍ಎಸ್ ಫೇಸ್‌ಲಿಫ್ಟ್ ಬಿಡುಗಡೆ
ಜರ್ಮನಿ ಮೂಲದ 'ಮರ್ಸಿಡಿಸ್ ಬೆಂಜ್' ಕಂಪನಿ ಕಾರುಗಳು ಐಷಾರಾಮಿಗೆ ಹೆಸರುವಾಸಿಯಾಗಿದ್ದು, ಭಾರತದಲ್ಲಿಯೂ ಪ್ರತ್ಯೇಕ ಅಭಿಮಾನಿ ಬಳಗವನ್ನು ಹೊಂದಿವೆ. ಶ್ರೀಮಂತ ಉದ್ಯಮಿಗಳು, ಕ್ರಿಕೆಟಿಗರು, ಸಿನಿಮಾ ತಾರೆಯರು ಈ ಕಾರುಗಳನ್ನು ಇಷ್ಟಪಟ್ಟು ಖರೀದಿಸುತ್ತಾರೆ. ಸದ್ಯ, ದೇಶೀಯ ಮಾರುಕಟ್ಟೆಯಲ್ಲಿ ಮರ್ಸಿಡಿಸ್ ಬೆಂಜ್ ಜಿಎಲ್‍ಎಸ್ ಫೇಸ್‌ಲಿಫ್ಟ್ ಬಿಡುಗಡೆಗೊಂಡಿದೆ.
ಕಳೆದ ವರ್ಷ ಜಾಗತಿಕ ಮಾರುಕಟ್ಟೆಗೆ ಚೊಚ್ಚಲವಾಗಿ ಪ್ರವೇಶಿಸಿದ್ದ ಮರ್ಸಿಡಿಸ್ ಬೆಂಜ್ ಜಿಎಲ್‍ಎಸ್ ಫೇಸ್‌ಲಿಫ್ಟ್ (Mercedes-Benz GLS Facelift) ಎಸ್‌ಯುವಿ, ವರ್ಷಾರಂಭದಲ್ಲಿಯೇ ಭಾರತದಲ್ಲಿ ಲಾಂಚ್ ಆಗಿರುವುದು ಗ್ರಾಹಕರಿಗೆ ಖುಷಿ ನೀಡಿದೆ. ಈ ಕಾರು, ಜಿಎಲ್‍ಎಸ್ 450 (GLS 450) ಮತ್ತು ಜಿಎಲ್‍ಎಸ್ 450ಡಿ (GLS 450d) ರೂಪಾಂತರ ಆಯ್ಕೆಯಲ್ಲಿ ಸಿಗಲಿದ್ದು, ಕ್ರಮವಾಗಿ ರೂ.1.32 ಕೋಟಿ, ರೂ.1.37 ಕೋಟಿ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ.

ನೂತನ ಮರ್ಸಿಡಿಸ್ ಬೆಂಜ್ ಜಿಎಲ್‍ಎಸ್ ಫೇಸ್‌ಲಿಫ್ಟ್ ವಿನ್ಯಾಸದಲ್ಲಿ ಸಾಕಷ್ಟು ಬದಲಾವಣೆಯನ್ನು ಪಡೆದುಕೊಂಡಿದೆ. ಮುಂಭಾಗ ಗ್ರೀಲ್ ಅತ್ಯಾಧುನಿಕವಾಗಿದ್ದು, ಹಾರಿಜಾಂಟಲ್ ಕ್ರೋಮ್ ಸ್ಟ್ರಿಪ್, ನವೀನವಾದ ಡೇಟೈಮ್ ರನ್ನಿಂಗ್ ಲ್ಯಾಂಪ್ (DRL) ಹೊಂದಿದೆ. ಹಿಂಭಾಗದ ವಿನ್ಯಾಸ ಕೂಡ ಹೆಚ್ಚು ಆಕರ್ಷಣೀಯವಾಗಿದ್ದು, 21 - ಇಂಚಿನ ಅಲಾಯ್ ವೀಲ್ ಅನ್ನು ಪಡೆದಿದೆ.
ಈ ಹೊಸ ಕಾರು, ಹೈಟೆಕ್ ಸಿಲ್ವರ್, ಸೊಡಲೈಟ್ ಬ್ಲೂ, ಸೆಲೆನೈಟ್ ಗ್ರೇ ಸೇರಿದಂತೆ 5 ಆಕರ್ಷಕ ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ದೊರೆಯಲಿದ್ದು, ಒಳಭಾಗದಲ್ಲಿ ಹಲವು ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಸೀಟುಗಳು ಹೆಚ್ಚು ಆರಾಮದಾಯಕವಾಗಿದ್ದು, ಹೊಸದಾದ ಸ್ಟೀರಿಂಗ್ ವೀಲ್ ಹಾಗೂ MBUX ಸಿಸ್ಟಮ್ (ಮಲ್ಟಿಮೀಡಿಯಾ ಡಿಜಿಟಲ್ ಕಾಕ್‌ಪಿಟ್) ಅನ್ನು ಹೊಂದಿದೆ.

ಇದರೊಂದಿಗೆ ಮರ್ಸಿಡಿಸ್ ಬೆಂಜ್ ಜಿಎಲ್‍ಎಸ್ ಫೇಸ್‌ಲಿಫ್ಟ್ ಎಸ್‌ಯುವಿ, ನವೀನವಾದ 360 - ಡಿಗ್ರಿ ಕ್ಯಾಮೆರಾ, ಅಡ್ಜಸ್ಟ್ಏಬಲ್ ಏರ್ ಸಸ್ಪೆನ್ಷನ್, ADAS (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ಅನ್ನು ಒಳಗೊಂಡಿದೆ. ಜೊತೆಯಲ್ಲಿ ವೈರ್‌ಲೆಸ್ ಚಾರ್ಜಿಂಗ್, ಎರಡು 11.6 - ಇಂಚಿನ ಎಂಟರ್ಟೈನ್ಮೆಂಟ್ ಸ್ಕ್ರೀನ್, ಸನ್‌ಬ್ಲೈಂಡ್ಸ್ ಸೇರಿದಂತೆ ಹಲವು ಐಷಾರಾಮಿ ಫೀಚರ್ಸ್ ಪಡೆದಿದೆ.
ನೂತನ ಮರ್ಸಿಡಿಸ್ ಬೆಂಜ್ ಜಿಎಲ್‍ಎಸ್ ಫೇಸ್‌ಲಿಫ್ಟ್ (Mercedes-Benz GLS Facelift) ಎಸ್‌ಯುವಿ, 2 ಎಂಜಿನ್ ಆಯ್ಕೆಯನ್ನು ಒಳಗೊಂಡಿದೆ. 3.0 - ಲೀಟರ್ ಇನ್-ಲೈನ್ 6 ಸಿಲಿಂಡರ್ ಡೀಸೆಲ್ ಎಂಜಿನ್, 362 bhp ಗರಿಷ್ಠ ಪವರ್ ಹಾಗೂ 750 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಮತ್ತೊಂದು 3.0 - ಲೀಟರ್ ಇನ್-ಲೈನ್ 6 ಸಿಲಿಂಡರ್ ಪೆಟ್ರೋಲ್ ಎಂಜಿನ್, 375 bhp ಪವರ್, 500 Nm ಪೀಕ್ ಟಾರ್ಕ್ ಹೊರಹಾಕುತ್ತದೆ. ಇವೆರೆಡು ಎಂಜಿನ್ 48ವಿ ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನವನ್ನು ಪಡೆದಿದ್ದು, AWD (ಆಲ್ ವೀಲ್ ಡ್ರೈವ್) ಟೆಕ್ನಲಾಜಿಯನ್ನು ಒಳಗೊಂಡಿವೆ. ಜೊತೆಗೆ 8 ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯಲ್ಲೂ ಸಿಗುತ್ತವೆ.
ಹೊಸ ಮರ್ಸಿಡಿಸ್ ಬೆಂಜ್ ಜಿಎಲ್‍ಎಸ್ ಫೇಸ್‌ಲಿಫ್ಟ್ ಕಾರಿಗೆ ದೇಶೀಯ ಮಾರುಕಟ್ಟೆಯಲ್ಲಿ ಬಿಎಂಡಬ್ಲ್ಯೂ ಎಕ್ಸ್7 (BMW X7), ಆಡಿ ಕ್ಯೂ8 (Audi Q8), ರೇಂಜ್ ರೋವರ್ ಸ್ಪೋರ್ಟ್ (Range Rover Sport) ಪ್ರಬಲ ಎದುರಾಳಿಯಾಗಿವೆ. ಈ ಕಾರು, ದುಬಾರಿ ಬೆಲೆಯೊಂದಿಗೆ ಐಷಾರಾಮಿ ವೈಶಿಷ್ಟ್ಯಗಳನ್ನು ಪಡೆಯುವ ಮೂಲಕ ಬಿಡುಗಡೆಯಾಗಿದ್ದು, ಯಾವ ಸೆಲೆಬ್ರಿಟಿ ಖರೀದಿಸುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








