Mercedes: ಇಂದು ಬಿಡುಗಡೆಗೊಳ್ಳಲಿವೆ 2 ಐಷಾರಾಮಿ ಮರ್ಸಿಡಿಸ್ ಕಾರುಗಳು.. ಬೆಲೆ ಎಷ್ಟು, ವಿಶೇಷತೆಗಳೇನು?
ಜರ್ಮನಿ ಮೂಲದ ಮರ್ಸಿಡಿಸ್-ಬೆಂಜ್ (Mercedes-Benz) ಜನಪ್ರಿಯ ವಾಹನ ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿದ್ದು, ದುಬಾರಿ ಬೆಲೆಯ ಐಷಾರಾಮಿ ಕಾರು ತಯಾರಿಕೆಗೆ ಹೆಸರುವಾಸಿಯಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಇಂದು ಎಎಂಜಿ ಜಿಎಲ್‌ಸಿ 43 ಕೂಪೆ (AMG GLC 43 Coupe) ಹಾಗೂ ಸಿಎಲ್ಇ ಕ್ಯಾಬ್ರಿಯೊಲೆಟ್ (CLE Cabriolet) ಕಾರುಗಳನ್ನು ಬಿಡುಗಡೆ ಮಾಡಲಿದೆ. ಈ ಕಾರುಗಳು ಆಕರ್ಷಕ ವಿನ್ಯಾಸ ಮತ್ತು ವೈಶಿಷ್ಟ್ಯಗಳನ್ನು ಪಡೆದಿರುವ ನಿರೀಕ್ಷೆಯಿದ್ದು, ರೂ.1 ಕೋಟಿಗಿಂತ (ಎಕ್ಸ್ ಶೋರೂಂ) ಹೆಚ್ಚಿನ ಬೆಲೆಯನ್ನು ಹೊಂದಿರಲಿವೆ ಎಂದು ಅಂದಾಜಿಸಲಾಗಿದೆ.
ಮರ್ಸಿಡಿಸ್-ಎಎಂಜಿ ಜಿಎಲ್‌ಸಿ 43 ಕೂಪೆ (Mercedes-AMG GLC 43 Coupe): ಇದೊಂದು ಎಸ್‌ಯುವಿಯಾಗಿದ್ದು, ಎರಡು ವರ್ಷಗಳ ಹಿಂದೆ ಮಾರಾಟದಿಂದ ಸ್ಥಗಿತಗೊಳಿಸಲಾಗಿತ್ತು. ಸದ್ಯ ಒಂದಷ್ಟು ಬದಲಾವಣೆಗಳಿಗೆ ಒಳಪಟ್ಟು ಮಾರುಕಟ್ಟೆಗೆ ಬರುತ್ತಿದೆ. ಹಳೆಯ 3.0-ಲೀಟರ್ ವಿ6 ಎಂಜಿನ್ ಬದಲಿಗೆ 2.0-ಲೀಟರ್ ಟ್ವಿನ್-ಫೋರ್-ಸಿಲಿಂಡರ್ ಟರ್ಬೊ ಪೆಟ್ರೋಲ್ ಎಂಜಿನ್‌ನ್ನು ಪಡೆದಿರಲಿದ್ದು, 421 ಬಿಹೆಚ್‍ಪಿ ಗರಿಷ್ಠ ಶಕ್ತಿ (ಪವರ್) ಹಾಗೂ 500 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸಲಿದೆ. ಜೊತೆಗೆ 9-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಒಳಗೊಂಡಿರಬಹುದು.

ಈ ಮರ್ಸಿಡಿಸ್-ಎಎಂಜಿ ಜಿಎಲ್‌ಸಿ 43 ಕೂಪೆ ಎಸ್‌ಯುವಿ ಆಕರ್ಷಕವಾದ ವಿನ್ಯಾಸ (ಡಿಸೈನ್) ಹೊಂದಿರಲಿದ್ದು, ಮುಂಭಾಗ (ಫ್ರಂಟ್) ನವೀನ ಶೈಲಿಯ ಗ್ರಿಲ್ ಹಾಗೂ ಎಲ್ಇಡಿ ಹೆಡ್‌ಲ್ಯಾಂಪ್‌ಗಳನ್ನು ಪಡೆದಿರಲಿದೆ. ಹಿಂಭಾಗದ (ರೇರ್) ವಿನ್ಯಾಸವು ಹೆಚ್ಚು ಅತ್ಯಾಧುನಿಕವಾಗಿರಲಿದೆ. ನೂತನ ಕಾರಿನ ಬಹುತೇಕ ವೈಶಿಷ್ಟ್ಯಗಳು, ಕಳೆದ ವರ್ಷ ಬಿಡುಗಡೆಗೊಂಡಿದ್ದ 'ಜಿಎಲ್‌ಸಿ' ಕಾರಿಗೆ ಹೋಲಿಕೆಯಾಗುತ್ತವೆ.
ಈ ಕಾರು 11.9-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 12.3-ಇಂಚಿನ ಡಿಜಿಟಲ್ ಡ್ರೈವರ್‌ಸ್ ಡಿಸ್ಪ್ಲೇ, ಪನೋರಮಿಕ್ ಸನ್‌ರೂಫ್, ಡುಯಲ್-ಜೋನ್ ಎಸಿ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿರುವ ನಿರೀಕ್ಷೆಯಿದೆ. ಸುರಕ್ಷತೆಯ ದೃಷ್ಟಿಯಿಂದ 9 ಏರ್‌ಬ್ಯಾಗ್, ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್) ಮತ್ತು 360-ಡಿಗ್ರಿ ಕ್ಯಾಮೆರಾವನ್ನು ಹೊಂದಿರುವ ಸಾಧ್ಯತೆಯಿದ್ದು, 5 ಆಸನಗಳನ್ನು ಪಡೆದಿರಲಿದೆ.

ಮರ್ಸಿಡಿಸ್ ಸಿಎಲ್ಇ ಕ್ಯಾಬ್ರಿಯೊಲೆಟ್ (Mercedes CLE Cabriolet): ಈ ಕಾರನ್ನು ಸಿ-ಕ್ಲಾಸ್ ಕ್ಯಾಬ್ರಿಯೊಲೆಟ್ (C-Class Cabriolet) ಹಾಗೂ ಇ-ಕ್ಲಾಸ್ ಕ್ಯಾಬ್ರಿಯೊಲೆಟ್ (E-Class Cabriolet) ಜಾಗಕ್ಕೆ ತರಲಾಗುತ್ತಿದೆ. ಇದು ಸಿ-ಕ್ಲಾಸ್ ಕಾರಿಗಿಂತ ಉದ್ದವಾಗಿದ್ದು, 4 ಜನರು ಓಡಾಟ ನಡೆಸಬಹುದು. 2-ಡೋರ್ (ಬಾಗಿಲು) ಮತ್ತು ಸಾಫ್ಟ್-ಟಾಪ್‌ನ್ನು ಹೊಂದಿರಲಿದೆ ಎಂದು ತಿಳಿದುಬಂದಿದೆ.
ಈ ಕಾರು ವಿವಿಧ ಪವರ್‌ಟ್ರೇನ್ ಆಯ್ಕೆಯಲ್ಲಿ ಲಭ್ಯವಾಗಲಿದ್ದು, 2.0-ಲೀಟರ್ 4-ಸಿಲಿಂಡರ್ ಪೆಟ್ರೋಲ್ ಎಂಜಿನ್ ಒಳಗೊಂಡಿರುವ ನಿರೀಕ್ಷೆಯಿದ್ದು, 201 ಅಥವಾ 254 ಬಿಹೆಚ್‍ಪಿ ಗರಿಷ್ಠ ಶಕ್ತಿ (ಪವರ್) ಉತ್ಪಾದಿಸುವ ಸಾಮರ್ಥ್ಯವನ್ನು ಪಡೆದುಕೊಂಡಿರಬಹುದು. 9-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಹೊಂದಿರುವ ಸಾಧ್ಯತೆಯೂ ಹೆಚ್ಚಿದೆ.
ನೂತನ ಮರ್ಸಿಡಿಸ್ ಸಿಎಲ್ಇ ಕ್ಯಾಬ್ರಿಯೊಲೆಟ್ ಕಾರು ಸಹ 11.9-ಇಂಚಿನ ಇನ್ಫೋಟೈನ್‌ಮೆಂಟ್ ಸ್ಕ್ರೀನ್, 12.3-ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್‌ನಂತಹ ಹತ್ತಾರು ವೈಶಿಷ್ಟ್ಯಗಳನ್ನು ಒಳಗೊಂಡಿರುವ ನೀರಿಕ್ಷೆಯಿದೆ. ಸುರಕ್ಷತೆಗೂ ಹೆಚ್ಚಿನ ಆದ್ಯತೆ ಕೊಡಲಾಗಿದೆ ಎನ್ನಲಾಗಿದ್ದು, ಇನ್ನೂ ಕೆಲವೇ ಗಂಟೆಗಳಲ್ಲಿ ಹೊಸ ಕಾರುಗಳ ಕುರಿತಂತೆ ಸಂಪೂರ್ಣವಾದ ವಿವರಗಳು ಗೊತ್ತಾಗಲಿವೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








