Nissan: ಪ್ರತಿಸ್ಪರ್ಧಿಗಳಿಗೆ ನಡುಕ.. ಹೊಸ ನಿಸ್ಸಾನ್ ಮ್ಯಾಗ್ನೈಟ್ ಫೇಸ್‌ಲಿಫ್ಟ್ ಕಾರಿನ ಪರೀಕ್ಷೆ, ಬಿಡುಗಡೆ ಯಾವಾಗ?
ದೇಶೀಯ ಮಾರುಕಟ್ಟೆಯಲ್ಲಿ ಪ್ರಮುಖ ವಾಹನ ತಯಾರಕ ಸಂಸ್ಥೆ 'ನಿಸ್ಸಾನ್' ಮಾರಾಟಗೊಳಿಸುತ್ತಿರುವ 'ಮ್ಯಾಗ್ನೈಟ್' ಗೇಮ್ ಚೇಂಜರ್ ಎಸ್‌ಯುವಿಯಾಗಿ ಹೊರಹೊಮ್ಮಿದೆ. ಈ ಕಾರಿನ ನವೀಕರಿಸಿದ (ಫೇಸ್‌ಲಿಫ್ಟ್ - Facelift) ಆವೃತ್ತಿಯನ್ನು ಬಿಡುಗಡೆಗೊಳಿಸಲು ಕಂಪನಿಯು ಭರದಿಂದ ಸಿದ್ಧತೆಯನ್ನು ನಡೆಸುತ್ತಿದೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
ಇತ್ತೀಚೆಗೆ ನೂತನ ನಿಸ್ಸಾನ್ ಮ್ಯಾಗ್ನೈಟ್ ಫೇಸ್‌ಲಿಫ್ಟ್ (Nissan Magnite Facelift) ಎಸ್‌ಯುವಿಯು ಪ್ರಾಯೋಗಿಕ ಸಂಚಾರವನ್ನು ನಡೆಸುವಾಗ ಕಂಡುಬಂದಿದೆ. ಆನ್‌ಲೈನ್‌ನಲ್ಲಿ ಸೋರಿಕೆಯಾಗಿರುವ ಚಿತ್ರಗಳಲ್ಲಿ ಈ ಕಾರಿನ ವಿನ್ಯಾಸ (ಡಿಸೈನ್)ದಲ್ಲಿ ಒಂದಷ್ಟು ಬದಲಾವಣೆಯಾಗಿರುವುದನ್ನು ಗುರುತಿಸಬಹುದು. ಪ್ರಮುಖವಾಗಿ ನವೀನ ಶೈಲಿನ ಗ್ರಿಲ್, ಹೆಡ್‌ಲೈಟ್‌ಗಳು ಹಾಗೂ ಬಂಪರ್‌ಗಳನ್ನು ಪಡೆದಿದೆ. ಟೈಲ್‌ಲ್ಯಾಂಪ್‌ಗಳಲ್ಲಿಯೂ ಬದಲಾವಣೆಯನ್ನು ಹೊಂದಿರುವ ಸಾಧ್ಯತೆಯಿದ್ದು, ಅಲಾಯ್ ವೀಲ್‌ಗಳನ್ನು ಕೂಡ ಒಳಗೊಂಡಿರಬಹುದು ಎಂದು ಅಂದಾಜಿಸಲಾಗಿದೆ.

ಈ ಹೊಸ ಮ್ಯಾಗ್ನೈಟ್ ಫೇಸ್‌ಲಿಫ್ಟ್ ಮಾದರಿಯ ಒಳಭಾಗವು ಕೊಂಚ ಮಟ್ಟಿಗೆ ನವೀಕರಣಗೊಳ್ಳಲಿದೆ. ಆದಾಗ್ಯೂ, ಈಗಿರುವ ಕಾರಿನಂತೆಯೇ ವೈಶಿಷ್ಟ್ಯ (ಫೀಚರ್ಸ್)ಗಳನ್ನು ಪಡೆದಿರಲಿದೆ. ಜೊತೆಗೆ ಪವರ್‌ಟ್ರೇನ್ ಆಯ್ಕೆಯಲ್ಲಿಯೂ ಯಾವುದೇ ಬದಲಾವಣೆಗಳು ಇರುವುದಿಲ್ಲ ಎನ್ನಲಾಗಿದೆ. ನೂತನ ಕಾರು 2025ರಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದ್ದು, ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ಸಿಗಬಹುದು ಎಂದು ಹೇಳಲಾಗಿದೆ. ಕೆಲವೇ ದಿನಗಳಲ್ಲಿ ಈ ಎಸ್‌ಯುವಿಯ ಕುರಿತಂತೆ ವಾಹನ ತಯಾರಕರಿಂದ ಅಧಿಕೃತ ವಿವರಗಳು ಲಭ್ಯವಾಗಬಹುದು.
ಸದ್ಯ, ದೇಶೀಯವಾಗಿ ಖರೀದಿಗೆ ದೊರೆಯುವ ನಿಸ್ಸಾನ್ ಮ್ಯಾಗ್ನೈಟ್ (Nissan Magnite) ಎಸ್‌ಯುವಿಯು ರೂ.6 ಲಕ್ಷದಿಂದ ರೂ.11.27 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಎಕ್ಸ್ಇ, ಎಕ್ಸ್ಎಲ್ ಸೇರಿದಂತೆ ವಿವಿಧ ರೂಪಾಂತರ (ವೇರಿಯೆಂಟ್)ಗಳು ಮತ್ತು ಫ್ಲೇರ್ ಗಾರ್ನೆಟ್ ರೆಡ್, ಬ್ಲೇಡ್ ಸಿಲ್ವರ್ ಹಾಗೂ ಓನಿಕ್ಸ್ ಬ್ಲಾಕ್ ಒಳಗೊಂಡಂತೆ ಹಲವು ಅತ್ಯಾಕರ್ಷಕ ಬಣ್ಣಗಳೊಂದಿಗೂ ದೊರೆಯುತ್ತದೆ. ಇದರಲ್ಲಿ 5 ಮಂದಿ ಆರಾಮದಾಯಕವಾಗಿ ಓಡಾಟವನ್ನು ನಡೆಸಬಹುದು.

ನಿಸ್ಸಾನ್ ಮ್ಯಾಗ್ನೈಟ್ ಎರಡು ಪೆಟ್ರೋಲ್ ಪವರ್‌ಟ್ರೇನ್ ಆಯ್ಕೆಯಲ್ಲಿ ಗ್ರಾಹಕರಿಗೆ ಸಿಗುತ್ತದೆ. ಇದರ 1-ಲೀಟರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ 72 ಪಿಎಸ್ ಗರಿಷ್ಠ ಪವರ್ (ಶಕ್ತಿ) ಮತ್ತು 96 ಎನ್ಎಂ ಪೀಕ್ ಟಾರ್ಕ್ ಹೊರಹಾಕುವ ಸಾಮರ್ಥ್ಯವನ್ನು ಹೊಂದಿದೆ. ಮತ್ತೊಂದು 1-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ 100 ಪಿಎಸ್ ಪವರ್ ಹಾಗೂ 160 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ.
ಈ ಕಾರು ರೂಪಾಂತರಗಳಿಗೆ ಅನುಗುಣವಾಗಿ 5-ಸ್ಪೀಡ್ ಮ್ಯಾನುವಲ್, 5-ಸ್ಪೀಡ್ ಆಟೋಮೆಟಿಕ್/ ಸಿವಿಟಿ ಗೇರ್‌ಬಾಕ್ಸ್‌ನ್ನು ಪಡೆದಿದೆ. 2WD (ಟೂ ವೀಲ್ ಡ್ರೈವ್) ತಂತ್ರಜ್ಞಾನವನ್ನು ಹೊಂದಿದ್ದು, 17.4 ರಿಂದ 20 ಕೆಎಂಪಿಎಲ್ ವರೆಗೆ ಮೈಲೇಜ್ ಕೊಡುತ್ತದೆ. 7-ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ, ವೈರ್‌ಲೆಸ್ ಫೋನ್ ಚಾರ್ಜರ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ನಿಸ್ಸಾನ್ ಮ್ಯಾಗ್ನೈಟ್ ಎಸ್‌ಯುವಿಯು ಸುರಕ್ಷತೆಗೂ ಹೆಸರುವಾಸಿಯಾಗಿದ್ದು, ಡುಯಲ್ ಫ್ರಂಟ್ ಏರ್‌ಬ್ಯಾಗ್, TPMS (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), ESC (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), 360-ಡಿಗ್ರಿ ಕ್ಯಾಮೆರಾ, ಹಿಲ್-ಸ್ಟಾರ್ಟ್ ಅಸಿಸ್ಟ್ ಅನ್ನು ಹೊಂದಿದೆ. ಈ ಕಾರಿಗೆ ಕಿಯಾ ಸೋನೆಟ್, ಹ್ಯುಂಡೈ ವೆನ್ಯೂ, ಮಾರುತಿ ಸುಜುಕಿ ಬ್ರೆಝಾ, ಟಾಟಾ ನೆಕ್ಸಾನ್ ಮತ್ತು ರೆನಾಲ್ಟ್ ಕಿಗರ್ ಮಾದರಿಗಳು ಪ್ರಬಲ ಪ್ರತಿಸ್ಪರ್ಧಿಯಾಗಿವೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








