ನಿಮ್ಮ ಬಜೆಟ್ ಕೇವಲ 6 ಲಕ್ಷವೇ? ಚಿಂತೆ ಬೇಡ, ಈ ಕಾರುಗಳಲ್ಲಿ ಒಂದನ್ನು ಖರೀದಿಸಬಹದು: ಯಾವುದು ಬೆಸ್ಟ್?
ಹೊಸ 2024 ನಿಸ್ಸಾನ್ ಮ್ಯಾಗ್ನೈಟ್ ಮತ್ತು ರೆನಾಲ್ಟ್ ಕೈಗರ್ ಸದ್ಯ ಸಣ್ಣ ಎಸ್‌ಯುವಿ ವಿಭಾಗದಲ್ಲಿ ಕೈಗೆಟುವ ಬೆಲೆಯ ಬೆಸ್ಟ್ ಕಾರುಗಳಾಗಿವೆ. ಆದ್ರೆ ಈ ಎರಡರಲ್ಲಿ ಯಾವುದು ಬೆಸ್ಟ್ ಎಂದು ತಿಳಿಯಲು ಹಲವರಿಗೆ ಗೊಂದಲವಿರಬಹುದು. ಅಂಥವರಿಗಾಗಿಯೇ ಈ ಎರಡೂ ಕಾರುಗಳ ನಡುವಿನ ಬೆಲೆ, ವೈಶಿಷ್ಟ್ಯಗಳು, ವಿನ್ಯಾಸ ಮತ್ತು ಸುರಕ್ಷತೆಯನ್ನು ಹೋಲಿಸಿದ್ದೇವೆ. ಇದು ಬಹುತೇಕ ಒಂದೇ ರೀತಿಯ ಎರಡು ವಾಹನಗಳ ನಡುವಿನ ಆಸಕ್ತಿದಾಯಕ ಹೋಲಿಕೆಯಾಗಿದೆ. ಈ ಎರಡರ ನಡುವೆ ಆಯ್ಕೆ ಮಾಡುವುದು ನಿಜವಾಗಿಯೂ ಗೊಂದಲಮಯವಾಗಿರುತ್ತದೆ. ಆದ್ರೂ ಒಮ್ಮೆ ನೋಡಿಯೇ ಬಿಡೋಣ ಬನ್ನಿ.
ಬೆಲೆ: ಹೊಸ ರೆನಾಲ್ಟ್ ಕೈಗರ್ ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ. 6 ಲಕ್ಷದಿಂದ ರೂ. 11.23 ಲಕ್ಷಗಳಾಗಿದೆ. ಹಾಗೆಯೇ ಹೊಸ 2024ರ ನಿಸ್ಸಾನ್ ಮ್ಯಾಗ್ನೈಟ್ ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ. 5.99 ಲಕ್ಷದಿಂದ ರೂ. 11.50 ಲಕ್ಷಗಳಾಗಿದೆ. ಬೆಲೆ ವಿಷಯದಲ್ಲಿ ಎರಡೂ ಸಮಾನವಾಗಿರುವುದರಿಂದ ಉತ್ತಮವಾದುದನ್ನು ಆಯ್ಕೆ ಮಾಡುವುದು ತುಸು ಕಷ್ಟವಾಗುತ್ತದೆ.

ಎಂಜಿನ್ ಮತ್ತು ಮೈಲೇಜ್: ರೆನಾಲ್ಟ್ ಕೈಗರ್ 1.2-ಲೀಟರ್ 3-ಸಿಲಿಂಡರ್ ನ್ಯಾಚುರಲ್ಲಿ ಆಸ್ಪಿರೇಟೆಡ್ ಮತ್ತು ಟರ್ಬೊ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಹೊಂದಿದೆ. 5-ಸ್ಪೀಡ್ ಮ್ಯಾನುವಲ್ ಮತ್ತು ಎಎಂಟಿ ಅಥವಾ ಸಿವಿಟಿ ಆಟೋಮ್ಯಾಟಿಕ್ ಗೇರ್‌ಬ್ಆಕ್ಸ್ ಆಯ್ಕೆಯನ್ನು ಒಳಗೊಂಡಿದೆ. ಮ್ಯಾನುವಲ್‌ನಲ್ಲಿ 19.17 ಕಿ.ಮೀ, ಆಟೋಮ್ಯಾಟಿಕ್‌ನಲ್ಲಿ 19.03 ಕಿ.ಮೀ ಮತ್ತು ಸಿವಿಟಿನಲ್ಲಿ 18.24 ಕಿ.ಮೀ ಮೈಲೇಜ್ ನೀಡುತ್ತದೆ.
ಹೊಸ 2024ರ ನಿಸ್ಸಾನ್ ಮ್ಯಾಗ್ನೈಟ್ ವಿಚಾರಕ್ಕೆ ಬಂದರೆ 1.2-ಲೀಟರ್ 3-ಸಿಲಿಂಡರ್ ನ್ಯಾಚುರಲ್ಲಿ ಆಸ್ಪಿರೇಟೆಡ್ ಮತ್ತು ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಹೊಂದಿದೆ. 5-ಸ್ಪೀಡ್ ಮ್ಯಾನುವಲ್ ಮತ್ತು ಎಎಂಟಿ ಅಥವಾ ಸಿವಿಟಿ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಯನ್ನು ನೀಡಲಾಗಿದೆ. ಮ್ಯಾನುವಲ್‌ನಲ್ಲಿ 20 ಕಿ.ಮೀ ಮತ್ತು ಸಿವಿಟಿ ಆಟೋಮ್ಯಾಟಿಕ್‌ನಲ್ಲಿ 17.4 ಕಿ.ಮೀ ಮೈಲೇಜ್ ನೀಡುತ್ತದೆ.

ವೈಶಿಷ್ಟ್ಯಗಳು ಮತ್ತು ಸುರಕ್ಷತೆ: ರೆನಾಲ್ಟ್ ಕಿಗರ್ 7 ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್ ಮೆಂಟ್ ಡಿಸ್ಪ್ಲೇ, 3.5-ಇಂಚಿನ ಎಲ್ಇಡಿ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಡ್ರೈವ್ ಮೋಡ್‌ಗಳು, ಕ್ರೂಸ್ ಕಂಟ್ರೋಲ್, ವೈರ್‌ಲೆಸ್ ಚಾರ್ಜರ್, ವೈರ್‌ಲೆಸ್ ಆಪಲ್ ಕಾರ್ಪ್ಲೇ ಮತ್ತು ಆಂಡ್ರಾಯ್ಡ್ ಆಟೋ, 6-ಸ್ಪೀಕರ್ 3D ಸೌಂಡ್ ಸಿಸ್ಟಮ್, ರಿಯರ್ ವ್ಯೂ ಕ್ಯಾಮರಾ, ಎಲೆಕ್ಟ್ರಿಕಲ್ಲಿ ಅಡ್ಜಸ್ಟಬಲ್ ORVM ಗಳನ್ನು ನೀಡಲಾಗಿದೆ.
ಇವಿಷ್ಟೇ ಅಲ್ಲದೇ ಹಿಂಭಾಗದ ಎಸಿ ವೆಂಟ್‌ಗಳು, PM 2.5 ಏರ್ ಫಿಲ್ಟರ್, ಹಿಂಭಾಗದ ಡಿಫೋಗರ್, 4 ಏರ್ ಬ್ಯಾಗ್‌ಗಳು, ಬ್ರೇಕ್ ಅಸಿಸ್ಟ್ ನೊಂದಿಗೆ ಎಬಿಎಸ್ ಮತ್ತು ಇಬಿಡಿ, ಟ್ರಾಕ್ಷನ್ ಕಂಟ್ರೋಲ್ ಸಿಸ್ಟಮ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ, ಹಿಲ್ ಸ್ಟಾರ್ಟ್ ಅಸಿಸ್ಟ್, ISOFIX ಚೈಲ್ಡ್ ಸೀಟ್ ಮೌಂಟ್, ಸೀಟ್ ಬೆಲ್ಟ್ ರಿಮೈಂಡರ್ ನಂತಹ ಸೇಫ್ಟಿ ಫೀಚರ್ಸ್ ನೀಡಲಾಗಿದೆ.

ಹೊಸ 2024 ನಿಸ್ಸಾನ್ ಮ್ಯಾಗ್ನೈಟ್ ವಿಷಯಕ್ಕೆ ಬಂದರೆ, 7-ಇಂಚಿನ ಟಿಎಫ್‌ಟಿ ಡ್ರೈವರ್ ಡಿಸ್ಪ್ಲೇ, 8 ಇಂಚಿನ ಫ್ಲೋಟಿಂಗ್ ಟಚ್ ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಡಿಸ್ಪ್ಲೇ, ಸೆಂಟರ್ ಕನ್ಸೋಲ್ ಸೇರಿದಂತೆ ಲೆದರೆಟ್ ಒಳಾಂಗಣ, ನಾಲ್ಕು ಆಂಬಿಯೆಂಟ್ ಲೈಟಿಂಗ್ ಬಣ್ಣಗಳು, 336-ಲೀಟರ್ ಬೂಟ್ ಸ್ಪೇಸ್, ಕ್ಲಸ್ಟರ್ ಅಯೋನೈಜರ್ (PM2.5 ಏರ್ ಪ್ಯೂರಿಫೈಯರ್), ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇ ನೀಡಲಾಗಿದೆ.
ಇವಿಷ್ಟೇ ಅಲ್ಲದೇ, ವೈರ್‌ಲೆಸ್ ಫೋನ್ ಚಾರ್ಜರ್, ಹೊಸ ಐ-ಕೀ, 40ಕ್ಕೂ ಹೆಚ್ಚು ಸ್ಟ್ಯಾಂಡರ್ಡ್ ಸುರಕ್ಷತಾ ವೈಶಿಷ್ಟ್ಯಗಳು, 6-ಸ್ಪೀಕರ್ 3D ಸೌಂಡ್ ಸಿಸ್ಟಮ್, 6 ಏರ್ ಬ್ಯಾಗ್‌ಗಳು, 3 ಪಾಯಿಂಟ್ ಸೀಟ್ ಬೆಲ್ಟ್‌ಗಳು, ISOFIX ಚೈಲ್ಡ್ ಸೀಟ್ ಮೌಂಟ್‌ಗಳು, ಹೈಸ್ಪೀಡ್ ಅಲರ್ಟ್ ಸಿಸ್ಟಮ್, ತುರ್ತು ನಿಲುಗಡೆ ಸಿಗ್ನಲ್ (ESS) ನಂತಹ ಆಧುನಿಕ ಸುರಕ್ಷತಾ ವೈಶಿಷ್ಟ್ಯಗಳನ್ನು ಒಳಗೊಂಡಿದೆ.
ಈ ಎರಡು ಕಾರುಗಳ ಬೆಲೆಗಳು, ವೈಶಿಷ್ಟ್ಯಗಳು ಸೇರಿದಂತೆ ಪವರ್‌ಟ್ರೇನ್ ವಿಷಯದಲ್ಲಿ ತುಂಬಾ ಹೋಲುತ್ತವೆ. ಹಾಗಾಗಿ ನಿಸ್ಸಾನ್ ಮತ್ತು ರೆನಾಲ್ಟ್, ಇವುಗಳಲ್ಲಿ ಯಾವುದು ನಿಮ್ಮ ಮನೆಯ ಬಳಿ ಡೀಲರ್‌ಶಿಪ್ ಮತ್ತು ಸರ್ವಿಸ್ ಸೆಂಟರ್ ಇದೆ ಎಂಬುದನ್ನು ನೋಡುವುದು ಸಹ ನಿರ್ಣಾಯಕವಾಗುತ್ತದೆ. ಯಾವುದು ಹತ್ತಿರವಿದೆಯೋ ಆ ಶೋರೂಂಗೆ ಭೇಟಿ ನೀಡಿ ಕಾರ್ ಬುಕ್ ಮಾಡಿ.


Click it and Unblock the Notifications