17 ಲಕ್ಷದ ಕರ್ವ್ ಇವಿ ಗಿಫ್ಟ್: ಟಾಟಾದಿಂದ ಸಾಮಾನ್ಯ ರೈತ ಕುಟುಂಬದಿಂದ ಬಂದ ಒಲಂಪಿಕ್ಸ್ ಪದಕ ವಿಜೇತನಿಗೆ ಗೌರವ!
ಟಾಟಾ ಮೋಟಾರ್ಸ್ (Tata Motors), ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ವಿಜೇತ ರಾಷ್ಟ್ರೀಯ ಹಾಕಿ ತಂಡದ ಭಾಗವಾಗಿದ್ದ ಗೋಲ್‌ಕೀಪರ್ ಪಿಆರ್ ಶ್ರೀಜೇಶ್ ಅವರಿಗೆ ಕರ್ವ್ ಇವಿಯನ್ನು ಉಡುಗೊರೆಯಾಗಿ ನೀಡಿ ಗೌರವಿಸಿದೆ. ಇತ್ತೀಚೆಗೆ ಕೇರಳದ ಕೊಚ್ಚಿಯಲ್ಲಿ ಟಾಟಾದ ಹೊಸ ಎಲೆಕ್ಟ್ರಿಕ್ ಕಾರಿನ ಶೋರೂಂ ಉದ್ಘಾಟನೆ ಪ್ರಯುಕ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ, ನೂತನ ಕಾರನ್ನು ಶ್ರೀಜೇಶ್‌ಗೆ ಹಸ್ತಾಂತರಿಸಲಾಯಿತು. ಅವರು ತಮ್ಮ ಕುಟುಂಬದೊಂದಿಗೆ ಹೊಸ ಕಾರನ್ನು ವಿತರಣೆ ಪಡೆದರು. ಈ ಕುರಿತಂತೆ ಶ್ರೀಜೇಶ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿಯೂ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಟೋಕಿಯೊ ಹಾಗೂ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತ ಹಾಕಿ ತಂಡ ಪದಕ ಗೆಲ್ಲುವಲ್ಲಿ ಶ್ರೀಜೇಶ್ ನಿರ್ಣಾಯಕ ಪಾತ್ರ ವಹಿಸಿದ್ದರು. ಎದುರಾಳಿ ತಂಡಗಳ ಆಟಗಾರರಿಗೆ ಇವರ ಮುಂದೆ ಗೋಲ್ ಮಾಡುವುದು ಕಷ್ಟ ಸಾಧ್ಯವಾಗಿತ್ತು. ಕೇರಳದ ಕೊಚ್ಚಿ ಸಮೀಪದ ಕಿಝಕ್ಕಂಬಲಂ ಎಂಬ ಸಣ್ಣ ರೈತ ಕುಟುಂಬದಲ್ಲಿ ಜನಿಸಿದ ಶ್ರೀಜೇಶ್, ಮೊದಲಿಗೆ ವಾಲಿಬಾಲ್‌ನ್ನು ಆಡುತ್ತಿದ್ದರು. ನಂತರ, ಹಾಕಿಯತ್ತ ಆಸಕ್ತಿ ಬೆಳೆಸಿಕೊಂಡಿದ್ದರು.

ದೇಶದ ಹಾಕಿ ಇತಿಹಾಸದಲ್ಲಿ ಶ್ರೇಷ್ಠ ಗೋಲ್‌ಕೀಪರ್‌ಗಳಲ್ಲಿ ಒಬ್ಬರಾಗಿರುವ ಶ್ರೀಜೇಶ್ ರಾಷ್ಟ್ರೀಯ ಹಾಕಿ ತಂಡವನ್ನು ನಾಯಕರಾಗಿ ಮುನ್ನೆಡೆಸಿದ್ದು, ಭಾರತದ ಮಹಾಗೋಡೆ (Great wall of India) ಎಂದು ಕೂಡ ಖ್ಯಾತಿಗಳಿಸಿದ್ದಾರೆ. ಹಾಕಿ ಆಟದಿಂದ ನಿವೃತ್ತಿಯಾಗಿರುವ ಅವರು, ಸದ್ಯ ಕಿರಿಯ ಪುರುಷರ ಹಾಕಿ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಶ್ರೀಜೇಶ್ ಅವರಿಗೆ ಟಾಟಾ ಕರ್ವ್ ಇವಿಯ (Tata Curvv EV) ಯಾವ ರೂಪಾಂತರ (ವೇರಿಯೆಂಟ್) ಉಡುಗೊರೆಯಾಗಿ ಸಿಕ್ಕಿದೆ ಎಂಬುದರ ಕುರಿತಂತೆ ಹೆಚ್ಚಿನ ವಿವರಗಳಿಲ್ಲ. ಇತ್ತೀಚೆಗೆ ಬಿಡುಗಡೆಯಾಗಿರುವ ಕರ್ವ್ ಇವಿ ರೂ.17.49 ಲಕ್ಷದಿಂದ ರೂ.21.99 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಲಭ್ಯವಿದೆ. ಕ್ರಿಯೇಟಿವ್, ಅಕಾಂಪ್ಲಿಶ್ಡ್, ಅಕಾಂಪ್ಲಿಶ್ಡ್ ಪ್ಲಸ್ ಎಸ್ ಹಾಗೂ ಎಂಪವರ್ಡ್ ಪ್ಲಸ್ ಎ ಎಂಬ 5 ರೂಪಾಂತರಗಳನ್ನು ಹೊಂದಿದೆ.

ನೂತನ ಟಾಟಾ ಕರ್ವ್ ಇವಿ 2 ವಿಧದ ಬ್ಯಾಟರಿ ಪ್ಯಾಕ್ ಆಯ್ಕೆಯಲ್ಲಿ ಲಭ್ಯವಿದೆ. ಚಿಕ್ಕದಾದ 45 ಕೆಡಬ್ಲ್ಯೂಹೆಚ್ ಬ್ಯಾಟರಿಯನ್ನು ಹೊಂದಿರುವ ರೂಪಾಂತರಗಳು, ಸಂಪೂರ್ಣ ಚಾರ್ಜ್‌ನಲ್ಲಿ 430 ಕಿಲೋಮೀಟರ್ ರೇಂಜ್ (ಮೈಲೇಜ್) ನೀಡುತ್ತವೆ. ದೊಡ್ಡದಾದ 55 ಕೆಡಬ್ಲ್ಯೂಹೆಚ್ ಬ್ಯಾಟರಿ ಪ್ಯಾಕ್ ಪಡೆದಿರುವ ರೂಪಾಂತರಗಳು, ಭರ್ತಿ ಚಾರ್ಜ್‌ನಲ್ಲಿ 502 ಕಿಲೋಮೀಟರ್ ಓಡುತ್ತವೆ.
ಈ ಕಾರಿನಲ್ಲಿ 5 ಮಂದಿ ಆರಾಮದಾಯಕವಾಗಿ ಕುಳಿತುಕೊಂಡು ಪ್ರಯಾಣಿಸಬಹುದು. ವಾರಾಂತ್ಯ ಹಾಗೂ ರಜಾದಿನಗಳಲ್ಲಿ ದೂರದ ಊರುಗಳಿಗೆ ಹೋಗುವಾಗ ಹೆಚ್ಚಿನ ಲಗೇಜ್ ಸಾಗಿಸಲು ಸಾಧ್ಯವಾಗುವಂತೆ 500 ಲೀಟರ್ ಸಾಮರ್ಥ್ಯದ ಬೂಟ್ ಸ್ಪೇಸ್‌ನ್ನು ಹೊಂದಿದೆ. ಫ್ಲೇಮ್ ರೆಡ್, ಎಂಪವರ್ಡ್ ಆಕ್ಸೈಡ್, ಪ್ರಿಸ್ಟಿನ್ ವೈಟ್ ಮತ್ತು ಪ್ಯೂರ್ ಗ್ರೇ ಸೇರಿದಂತೆ ವಿವಿಧ ಬಣ್ಣಗಳೊಂದಿಗೂ ಲಭ್ಯವಿದೆ.
ಹೊಸ ಟಾಟಾ ಕರ್ವ್ ಇವಿ 12.3-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 10.25-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಏರ್ ಪ್ಯೂರಿಫೈಯರ್, ಪನೊರೊಮಿಕ್ ಸನ್‌ರೂಫ್ ಒಳಗೊಂಡಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆದಿದೆ. ಸುರಕ್ಷತೆಯ ದೃಷ್ಟಿಯಿಂದ 6 ಏರ್‌ಬ್ಯಾಗ್, ಲೆವೆಲ್-2 ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್) ಮತ್ತು 360-ಡಿಗ್ರಿ ಕ್ಯಾಮೆರಾವನ್ನು ಹೊಂದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications