Tata Nexon CNG: ಟಾಟಾ ನೆಕ್ಸಾನ್ ಸಿಎನ್‌ಜಿ ಕಾರು ಮತ್ತೆ ಕಾಣಿಸಿಕೊಂಡಿತು.. ಬಿಡುಗಡೆ ಯಾವಾಗ, ಮೈಲೇಜ್ ಎಷ್ಟು?
ಭಾರತದ ವಿಶ್ವಾಸಾರ್ಹ ವಾಹನ ತಯಾರಕ ಕಂಪನಿಯಾಗಿ ಟಾಟಾ ಮೋಟಾರ್ಸ್ (Tata Motors) ಗುರುತಿಸಿಕೊಂಡಿದೆ. ಕಂಪನಿಯು ಮಾರಾಟಗೊಳಿಸುವ ಜನಪ್ರಿಯ ನೆಕ್ಸಾನ್ ಎಸ್‌ಯುವಿಯನ್ನು ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಇಷ್ಟಪಟ್ಟು ಖರೀದಿಸುತ್ತಿದ್ದಾರೆ. ಸದ್ಯ, ಈ ಕಾರನ್ನು ಸಿಎನ್‌ಜಿ ರೂಪದಲ್ಲಿ ಬಿಡುಗಡೆಗೊಳಿಸಲು ಸಿದ್ಧತೆಗಳು ಕೂಡ ನಡೆಯುತ್ತಿವೆ.
ದೇಶೀಯ ಮಾರುಕಟ್ಟೆಯಲ್ಲಿ ಹೊಸ ಟಾಟಾ ನೆಕ್ಸಾನ್ (Tata Nexon) ಸಿಎನ್‌ಜಿ ಕಾಂಪ್ಯಾಕ್ಟ್ ಎಸ್‌ಯುವಿ, ಈ ವರ್ಷದ ಕೊನೆಯಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಇತ್ತೀಚೆಗೆ ಪ್ರಾಯೋಗಿಕ ಸಂಚಾರವನ್ನು ನಡೆಸುವಾಗ ನೂತನ ಕಾರು, ಇಂಧನ (ಫ್ಯುಯೆಲ್) ತುಂಬಿಸಲು ಪುಣೆ ಸಮೀಪದ ಸಿಎನ್‌ಜಿ ಸ್ಟೇಷನ್‌ನ ಸರದಿ ಸಾಲಿನಲ್ಲಿ ನಿಂತಿತ್ತು. ಆ ಫೋಟೋಗಳು ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿವೆ.

ಹೊಸ ಸಿಎನ್‌ಜಿ ಚಾಲಿತ ಟಾಟಾ ನೆಕ್ಸಾನ್ ಎಸ್‌ಯುವಿ 1.2-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಹೊಂದಿರಲಿದ್ದು,100 ಪಿಎಸ್ ಗರಿಷ್ಠ ಪವರ್ (ಶಕ್ತಿ) ಹಾಗೂ 150 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಒಳಗೊಂಡಿರಬಹುದು. ಜೊತೆಗೆ 6-ಸ್ಪೀಡ್ ಮ್ಯಾನುವಲ್/ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಖರೀದಿಗೆ ದೊರೆಯಬಹುದು ಎನ್ನಲಾಗಿದೆ.
ನೂತನ ಟಾಟಾ ನೆಕ್ಸಾನ್ ಸಿಎನ್‌ಜಿ ಕಾರು 26.99 ಕೆಎಂ/ಕೆಜಿ ಮೈಲೇಜ್ ನೀಡಬಹುದು ಎಂದು ಅಂದಾಜಿಸಲಾಗಿದ್ದು, ಬಹುತೇಕ ಇಂಧನ ಚಾಲಿತ ಮಾದರಿಯಂತೆಯೇ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಹೊಂದಿರಲಿದೆ ಎಂದು ಹೇಳಲಾಗಿದೆ. ಆದರೆ, ಕಂಪನಿ ಕಡೆಯಿಂದ ಈ ಕುರಿತು ಯಾವುದೇ ಅಧಿಕೃತ ವಿವರಗಳು ಲಭ್ಯವಾಗಿಲ್ಲ. ಮುಂಬರುವ ದಿನಗಳಲ್ಲಿ ಎಲ್ಲ ಕುತೂಹಲಗಳಿಗೂ ತೆರೆಬೀಳಲಿದೆ.

ಪ್ರಸ್ತುತ ದೇಶೀಯವಾಗಿ ಖರೀದಿಗೆ ಸಿಗುವ ಇಂಧನ ಚಾಲಿತ ಟಾಟಾ ನೆಕ್ಸಾನ್ ಎಸ್‌ಯುವಿ, ರೂ.8.15 ಲಕ್ಷದಿಂದ ರೂ.15.80 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಸ್ಮಾರ್ಟ್, ಫಿಯರ್‌ಲೆಸ್ ಪ್ಲಸ್, ಪ್ಯೂರ್ ಸೇರಿದಂತೆ ವಿವಿಧ ರೂಪಾಂತರ (ವೇರಿಯೆಂಟ್)ಗಳ ಆಯ್ಕೆಯಲ್ಲಿ ಕೂಡ ಲಭ್ಯವಿದೆ. ಈ ಕಾರಿನಲ್ಲಿ 5 ಮಂದಿ ಆರಾಮದಾಯಕವಾಗಿ ಕುಳಿತುಕೊಂಡು ತೆರಳಬಹುದು.
ಟಾಟಾ ನೆಕ್ಸಾನ್ ಕಾರು, 1.2-ಲೀಟರ್ ಟರ್ಬೊ ಪೆಟ್ರೋಲ್, 1.5-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ದೊರೆಯುತ್ತದೆ. ರೂಪಾಂತರಗಳ ಅನ್ವಯ 5-ಸ್ಪೀಡ್ ಮ್ಯಾನುವಲ್, 6-ಸ್ಪೀಡ್ ಮ್ಯಾನುವಲ್, 6-ಸ್ಪೀಡ್ ಆಟೋಮೆಟಿಕ್ ಮತ್ತು 7-ಸ್ಪೀಡ್ ಡುಯಲ್ ಕ್ಲಚ್ ಟ್ರಾಸ್ಮಿಷನ್ (ಡಿಸಿಟಿ) ಗೇರ್ ಬಾಕ್ಸ್ ಅನ್ನು ಪಡೆದಿದ್ದು, 17.01 ರಿಂದ 24.08 ಕೆಎಂಪಿಎಲ್ ಮೈಲೇಜ್ ನೀಡುತ್ತದೆ.
ಫ್ಲೇಮ್ ರೆಡ್, ಕ್ಯಾಲ್ಗರಿ ವೈಟ್, ಡೇಟೋನಾ ಗ್ರೇ ಒಳಗೊಂಡಂತೆ ಹಲವು ಬಣ್ಣಗಳೊಂದಿಗೆ ಸಿಗುವ ಈ ಕಾರು, 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 10.25-ಇಂಚಿನ ಫುಲ್ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಆಟೋ ಎಸಿ, ವೈರ್‌ಲೆಸ್ ಫೋನ್ ಚಾರ್ಜಿಂಗ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆದಿದೆ. ಸುರಕ್ಷತೆಗಾಗಿ 6 ಏರ್‌ಬ್ಯಾಗ್, ಹಿಲ್ ಅಸಿಸ್ಟ್, ESP (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ)ಯನ್ನು ಹೊಂದಿದೆ.
ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ರೂಪದಲ್ಲಿ ಸಹ ಸಿಗಲಿದ್ದು, ರೂ.14.74 ಲಕ್ಷದಿಂದ ರೂ.19.99 ಲಕ್ಷ ಎಕ್ಸ್ ಶೋರೂಂ ದರವನ್ನು ಪಡೆದಿದೆ. ಈ ಕಾರು 30 ಕೆಡಬ್ಲ್ಯೂಹೆಚ್ ಮತ್ತು 40.5 ಕೆಡಬ್ಲ್ಯೂಹೆಚ್ ಬ್ಯಾಟರಿ ಪ್ಯಾಕ್ ಆಯ್ಕೆಯಲ್ಲಿ ದೊರೆಯಲಿದ್ದು, 325 ರಿಂದ 465 ಕಿಲೋಮೀಟರ್ ರೇಂಜ್ (ಮೈಲೇಜ್) ಕೊಡುತ್ತದೆ. 12.3-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಒಳಗೊಂಡಂತೆ ಹತ್ತಾರು ವೈಶಿಷ್ಟ್ಯಗಳನ್ನು ತನ್ನದಾಗಿಸಿಕೊಂಡಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.
Source: Team BHP


Click it and Unblock the Notifications