ಕರ್ನಾಟಕದಲ್ಲಿ ಟೆಸ್ಲಾ: ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದೇನು?
ಕರ್ನಾಟಕದಲ್ಲಿ ಎರಡು ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದ ಜೆಡಿಎಸ್ ಮುಖಂಡ ಎಚ್.ಡಿ.ಕುಮಾರಸ್ವಾಮಿ ಅವರು, ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ಭಾಗವಾಗಿದ್ದಾರೆ. ಮಂಗಳವಾರ ಕೇಂದ್ರ ಉಕ್ಕು ಮತ್ತು ಭಾರೀ ಕೈಗಾರಿಕೆಗಳ (Steel and Heavy Industries) ಸಚಿವರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಈ ವೇಳೆ, ವರದಿಗಾರರು ಕರ್ನಾಟಕದಲ್ಲಿ ಉದ್ಯಮ ಸ್ಥಾಪಿಸಲು ಟೆಸ್ಲಾದಂತಹ ಕಂಪನಿಗಳನ್ನು ಆಕರ್ಷಿಸುವ ಸಾಧ್ಯತೆಯ ಬಗ್ಗೆ ಪ್ರಶ್ನಿಸಿದಾಗ, ಅಚ್ಚರಿಯ ರೀತಿಯಲ್ಲಿ ಉತ್ತರಿಸಿದ್ದಾರೆ.
'ಹೌದು, ಅದು ಇದೆ, ನಾವು ಪ್ರಯತ್ನಿಸುತ್ತೇವೆ' ಎಂದಿರುವ ಕುಮಾರಸ್ವಾಮಿ ಅವರು, 'ನನ್ನ ಕಾಳಜಿ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿಲ್ಲ, ಇಡೀ ದೇಶದ ಬೆಳವಣಿಗೆಗೆ ಸಂಬಂಧಿಸಿದೆ. ನಾವೆಲ್ಲ ಅದರಂತೆ ಕೆಲಸ ಮಾಡುತ್ತೇವೆ. ನಾನು ಸ್ವಾರ್ಥಿಯಲ್ಲ. ನಾವು ದೇಶದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇವೆ' ಎಂದು ಹೇಳಿದ್ದಾರೆ. ಕರ್ನಾಟಕದಲ್ಲಿ ಜೆಡಿಎಸ್, ಬಿಜೆಪಿ ಪಕ್ಷಗಳು ಮೈತ್ರಿ ಮಾಡಿಕೊಂಡು ಒಟ್ಟಿಗೆ ಲೋಕಸಭಾ ಚುನಾವಣೆಯನ್ನು ಎದುರಿಸಿದ್ದವು. 28 ಕ್ಷೇತ್ರಗಳ ಪೈಕಿ 19ರಲ್ಲಿ ಜಯಗಳಿಸಿದ್ದವು.

ಲೋಕಸಭಾ ಚುನಾವಣಾ ಫಲಿತಾಂಶಗಳು ಪ್ರಕಟವಾದ ಕೆಲವು ದಿನಗಳ ನಂತರ, ಟೆಸ್ಲಾ ಸಿಇಒ ಎಲೋನ್ ಮಸ್ಕ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಭಿನಂದಿಸಿದ್ದಾರೆ. ಭಾರತದಲ್ಲಿ ತಮ್ಮ ಕಂಪನಿಗಳು ಅತ್ಯುತ್ತಮವಾಗಿ ಕೆಲಸ ಮಾಡುವುದನ್ನು ಎದುರು ನೋಡುತ್ತಿರುವುದಾಗಿ ಹೇಳಿದ್ದಾರೆ. 'ಟೆಸ್ಲಾ' ವಿಶ್ವದ ಅತಿದೊಡ್ಡ ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿಯಾಗದ್ದು, ಭಾರತದಲ್ಲಿ ತನ್ನ ಮಾರುಕಟ್ಟೆಯನ್ನು ವಿಸ್ತರಿಸುವ ಗುರಿಯನ್ನು ಹೊಂದಿದೆ.
ಈ ವರ್ಷದ ಮಾರ್ಚ್‌ನಲ್ಲಿ ಕೇಂದ್ರ ಸರ್ಕಾರ ಹೊಸ ಎಲೆಕ್ಟ್ರಿಕ್ ವಾಹನ ನೀತಿ (New Electric Vehicle Policy)ಯನ್ನು ಘೋಷಿಸಿತು. ಈ ಮೂಲಕ ನಿರ್ದಿಷ್ಟ ಸಂಖ್ಯೆಯ ಎಲೆಕ್ಟ್ರಿಕ್ ವಾಹನಗಳ ಆಮದಿನ ಮೇಲೆ ಶೇಕಡ 85% ತೆರಿಗೆಗಳನ್ನು ಕಡಿತಗೊಳಿಸುತ್ತದೆ. ಇದು ಟೆಸ್ಲಾದಂತಹ ಪ್ರತಿಷ್ಠಿತ ಜಾಗತಿಕ ವಾಹನ ತಯಾರಿಕರಿಂದ ಹೂಡಿಕೆಯನ್ನು ಆಕರ್ಷಿಸಲು ಉತ್ತೇಜಕವಾಗಿದೆ.

ಕಳೆದ ವರ್ಷದ ಜೂನ್‌ನಲ್ಲಿಅಮೆರಿಕಕ್ಕೆ ತೆರಳಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, ಟೆಸ್ಲಾ ಮುಖ್ಯಸ್ಥ ಎಲಾನ್ ಮಸ್ಕ್ ಅವರನ್ನು ಭೇಟಿಯಾಗಿ, ಭಾರತದಲ್ಲಿ ಹೊಡಿಕೆ ಮಾಡುವ ಸಂಬಂಧ ಮಾತುಕತೆ ನಡೆಸಿದ್ದರು. ನವೆಂಬರ್‌ನಲ್ಲಿ ಅಮೆರಿಕದ ಕ್ಯಾಲಿಫೋರ್ನಿಯಾದ ಫ್ರೀಮಾಂಟ್‌ನಲ್ಲಿರುವ ಟೆಸ್ಲಾ ಕಂಪನಿಯ ಕಾರ್ಖಾನೆಗೆ ಕೇಂದ್ರ ಸಚಿವ ಪಿಯೂಷ್ ಗೋಯಲ್ ಭೇಟಿ ನೀಡಿದ್ದರು.
ಈಗಾಗಲೇ, ಕರ್ನಾಟಕವು ಒಳಗೊಂಡಂತೆ ವಿವಿಧ ರಾಜ್ಯಗಳು ಟೆಸ್ಲಾ ಕಂಪನಿಯನ್ನು ಆಕರ್ಷಿಸಲು ಪ್ರಯತ್ನಿಸುತ್ತಿವೆ. ಈ ಹಿಂದೆ ರಾಜ್ಯ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಅವರು, ಎಲಾನ್ ಮಸ್ಕ್ ಅವರನ್ನು ರಾಜ್ಯದಲ್ಲಿ ಹೂಡಿಕೆ ಮಾಡುವಂತೆ ಆಹ್ವಾನಿಸಿದ್ದರು. 'ಭಾರತದಲ್ಲಿ ಟೆಸ್ಲಾ ಕಂಪನಿ ಹೊಡಿಕೆ ಮಾಡಲು ಕರ್ನಾಟಕ ಅತ್ಯುತ್ತಮ ತಾಣವಾಗಿದೆ. ಟೆಸ್ಲಾ, ಸ್ಟಾರ್‌ಲಿಂಕ್ ಸೇರಿದಂತೆ ಎಲಾನ್ ಮಸ್ಕ್‌ರ ಇತರೆ ಉದ್ಯಮಗಳ ಸ್ಥಾಪನೆಗೆ ಎಲ್ಲ ರೀತಿಯ ಸಹಕಾರವನ್ನು ಕೊಡಲಾಗುತ್ತದೆ' ಎಂದು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದರು.
ಟೆಸ್ಲಾಗೆ ಕರ್ನಾಟಕ ಸೂಕ್ತವೇ?: ಸದ್ಯ ಬೆಂಗಳೂರು ಇವಿ (ಎಲೆಕ್ಟ್ರಿಕ್ ವಾಹನ) ಹಬ್ ಆಗಿದ್ದು, ದೇಶದ ಟಾಪ್ ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿಗಳಾದ ಓಲಾ ಎಲೆಕ್ಟ್ರಿಕ್, ಎಥರ್ ಎನರ್ಜಿ ಹಾಗೂ ಸಿಂಪಲ್ ಎನರ್ಜಿ ಇಲ್ಲಿಯೇ ಪ್ರಧಾನ ಕಚೇರಿಯನ್ನು ಹೊಂದಿವೆ. ಜೊತೆಗೆ ಅಲ್ಟ್ರಾವೈಲೆಟ್ ಕೂಡ ನಮ್ಮ ಬೆಂಗಳೂರಿನ ಕಂಪನಿಯೇ ಎಂಬುದು ಗಮನಾರ್ಹ ಅಂಶವಾಗಿದೆ. ಈ ಹಿನ್ನೆಲೆ, ಟೆಸ್ಲಾಗೆ ಕರ್ನಾಟಕ ಸೂಕ್ತವಾಗಬಹುದು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋ ಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications