Toyota: ಗಾಬರಿ ಹುಟ್ಟಿಸುವ ಸಂಖ್ಯೆಯಲ್ಲಿ ಟೊಯೊಟಾ ಇನ್ನೋವಾ ಹೈಕ್ರಾಸ್ ಮಾರಾಟ.. ಪ್ರತಿಸ್ಪರ್ಧಿಗೆ ನಡುಕ!
ಟೊಯೊಟಾ ಕಿರ್ಲೋಸ್ಕರ್ ಮೋಟಾರ್ (Toyota Kirloskar Motor), ಬಜೆಟ್ ಬೆಲೆಯಲ್ಲಿ ಆಕರ್ಷಕ ವೈಶಿಷ್ಟ್ಯಗಳನ್ನು ಹೊಂದಿರುವ ವಿವಿಧ ಕಾರುಗಳನ್ನು ಮಾರಾಟಗೊಳಿಸುವ ಮೂಲಕ ಭಾರಿ ಜನಪ್ರಿಯತೆ ಗಳಿಸಿದೆ. ಅದರಲ್ಲೂ ದೇಶೀಯ ಮಾರುಕಟ್ಟೆಯಲ್ಲಿ ಗ್ಲಾನ್ಜಾ, ಇನ್ನೋವಾ, ಅರ್ಬನ್ ಕ್ರೂಸರ್ ಹೈರೈಡರ್ ಮತ್ತು ಟೈಸರ್ ಸೇರಿದಂತೆ ಕಂಪನಿಯ ಹಲವು ಕಾರು ಉತ್ತಮ ಸಂಖ್ಯೆಯಲ್ಲಿ ಮಾರಾಟವಾಗುತ್ತಿದ್ದು, ಗ್ರಾಹಕರು ಕೂಡ ಮುಗಿಬಿದ್ದು ಖರೀದಿ ಮಾಡುತ್ತಿದ್ದಾರೆ. ಸದ್ಯ, ಟೊಯೊಟಾ ಕಂಪನಿಯು ಪ್ರಖ್ಯಾತ ಎಂಪಿವಿ 'ಇನ್ನೋವಾ ಹೈಕ್ರಾಸ್' ಮಾರಾಟದಲ್ಲಿ ಹೊಸ ಇತಿಹಾಸ ನಿರ್ಮಿಸಿದೆ.
ನೂತನ ಟೊಯೊಟಾ ಇನ್ನೋವಾ ಹೈಕ್ರಾಸ್ (Toyota Innova Hycross) ಎಂಪಿವಿಯನ್ನು 2022ರ ನವೆಂಬರ್‌ನಲ್ಲಿ ಬಿಡುಗಡೆಗೊಳಿಸಲಾಗಿತ್ತು. ಅಂದಿನಿಂದ ಇಂದಿನವರೆಗೆ ಹೆಚ್ಚಿನ ಸಂಖ್ಯೆಯ ಗ್ರಾಹಕರು ಈ ಕಾರನ್ನು ಖರೀದಿಸುತ್ತಿದ್ದಾರೆ. ಇನ್ನೋವಾ ಹೈಕ್ರಾಸ್ ಮಾರಾಟಕ್ಕೆ ಬಂದು ಎರಡು ವರ್ಷ ಕಳೆಯಲು ಕೆಲವು ದಿನಗಳು ಬಾಕಿಯಿದ್ದು, ಅದಕ್ಕೂ ಮೊದಲೇ 1 ಲಕ್ಷ ಯುನಿಟ್ ಕಾರುಗಳನ್ನು ಗ್ರಾಹಕರಿಗೆ ತಲುಪಿಸುವ ಮೂಲಕ ದೊಡ್ಡ ಮೈಲಿಗಲ್ಲೊಂದನ್ನು ಸಾಧಿಸಲಾಗಿದೆ.

ಇದೇ ವರ್ಷದ ಫೆಬ್ರವರಿಯಲ್ಲಿ 50,000 ಯುನಿಟ್ ಇನ್ನೋವಾ ಹೈಕ್ರಾಸ್ ಎಂಪಿವಿಗಳನ್ನು ಮಾರಾಟಗೊಳಿಸುವ ಹೊಸ ದಾಖಲೆಯೊಂದನ್ನು ನಿರ್ಮಿಸಲಾಗಿತ್ತು. ಈ ಕಾರಿಗೆ ಹೆಚ್ಚಿನ ಬೇಡಿಕೆ ಇರುವುದರಿಂದ ಸ್ವಲ್ಪ ಅಧಿಕ ಕಾಯುವಿಕೆ ಅವಧಿಯನ್ನು ಹೊಂದಿದೆ. ಇದರ ಪೆಟ್ರೋಲ್ ರೂಪಾಂತರಗಳು (ವೇರಿಯೆಂಟ್) 6 ತಿಂಗಳು ಹಾಗೂ ಹೈಬ್ರಿಡ್ ರೂಪಾಂತರಗಳು 8 ತಿಂಗಳ ವಿತರಣೆಯಾಗಲಿವೆ.
ವಿಶೇಷವಾಗಿ ದಸರಾ ಹಾಗೂ ದೀಪಾವಳಿ ಹಬ್ಬದ ಹಿನ್ನೆಲೆ, ಈ ಅಕ್ಟೋಬರ್‌ನಲ್ಲಿ ಇನ್ನೋವಾ ಎಂಪಿವಿಯ 'ಕ್ರಿಸ್ಟಾ' ಮತ್ತು 'ಹೈಕ್ರಾಸ್' ಮಾದರಿಗಳನ್ನು (ಮಾಡೆಲ್) ಒಟ್ಟಿಗೆ ಸೇರಿಸಿ 11,007 ಯುನಿಟ್ ಕಾರುಗಳನ್ನು ಮಾರಾಟ ಮಾಡಲಾಗಿದೆ. 2023ರ ಇದೇ ಅವಧಿಯಲ್ಲಿ ಮಾರಲ್ಪಟ್ಟ 8,183 ಯುನಿಟ್‌ಗಳಿಗೆ ಹೋಲಿಸಿದರೆ ವರ್ಷದಿಂದ ವರ್ಷಕ್ಕೆ ಶೇಕಡ 35% ಪ್ರಗತಿ ಸಾಧಿಸಲಾಗಿದೆ.

ಪ್ರಸ್ತುತ, ದೇಶೀಯ ಗ್ರಾಹಕರ ಖರೀದಿಗೆ ದೊರೆಯುವ ಟೊಯೊಟಾ ಇನ್ನೋವಾ ಹೈಕ್ರಾಸ್ ಎಂಪಿವಿ, ರೂ.19.77 ಲಕ್ಷದಿಂದ ರೂ.30.98 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಜಿಎಕ್ಸ್, ಜಿಎಕ್ಸ್ (ಒ), ವಿಎಕ್ಸ್, ವಿಎಕ್ಸ್ (ಒ), ಝಡ್ಎಕ್ಸ್ ಮತ್ತು ಝಡ್ಎಕ್ಸ್ (ಒ) ಎಂಬ ರೂಪಾಂತರಗಳನ್ನು ಪಡೆದಿದೆ. ಸೂಪರ್ ವೈಟ್, ಪ್ಲಾಟಿನಂ ವೈಟ್ ಪರ್ಲ್, ಸಿಲ್ವರ್ ಮೆಟಾಲಿಕ್ & ಆಟಿಟ್ಯೂಡ್ ಬ್ಲ್ಯಾಕ್ ಮೈಕಾ ಸೇರಿದಂತೆ ವಿವಿಧ ಬಣ್ಣಗಳ ಆಯ್ಕೆಯಲ್ಲಿಯೂ ಸಿಗುತ್ತದೆ.
ಈ ಎಂಪಿವಿ ಎರಡು ರೂಪದ ಪವರ್‌ಟ್ರೇನ್ ಆಯ್ಕೆಯನ್ನು ಹೊಂದಿದೆ. ಇದರ 2-ಲೀಟರ್ ಹೈಬ್ರಿಡ್ (ಪೆಟ್ರೋಲ್ + ಎಲೆಕ್ಟ್ರಿಕ್) ಎಂಜಿನ್ 186 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಉತ್ಪಾದಿಸುತ್ತದೆ. ಇ-ಸಿವಿಟಿ ಗೇರ್‌ಬಾಕ್ಸ್ ಆಯ್ಕೆಯನ್ನು ಹೊಂದಿದೆ. ಮತ್ತೊಂದು 2-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ 175 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 209 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುತ್ತದೆ. ಸಿವಿಟಿ ಗೇರ್‌ಬಾಕ್ಸ್‌ನ್ನು ಹೊಂದಿದೆ.

ನೂತನ ಟೊಯೊಟಾ ಇನ್ನೋವಾ ಹೈಕ್ರಾಸ್ ಎಂಪಿವಿ 16.13 ರಿಂದ 23.24 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ. 7/ 8 ಆಸನ ಆಯ್ಕೆ ವ್ಯವಸ್ಥೆಯನ್ನು ಹೊಂದಿದೆ. ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ (10.1-ಇಂಚು), ಡಿಜಿಟಲ್ ಡ್ರೈವರ್ಸ್ ಡಿಸ್‌ಪ್ಲೇ (7-ಇಂಚು), ಡುಯಲ್-ಝೋನ್ ಕ್ಲೇಮೇಟ್ ಕಂಟ್ರೋಲ್, ಪನೋರಮಿಕ್ ಸನ್‌ರೂಫ್, ವೈರ್‌ಲೆಸ್ ಫೋನ್ ಚಾರ್ಜಿಂಗ್ ಮತ್ತು ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ.
ಹೊಸ ಇನ್ನೋವಾ ಹೈಕ್ರಾಸ್ ಸುರಕ್ಷತೆಗೂ ಹೆಸರುವಾಸಿಯಾಗಿದೆ. ಪ್ರಯಾಣಿಕರ ರಕ್ಷಣೆಗಾಗಿ 6-ಏರ್‌ಬ್ಯಾಗ್‌ಗಳು, ವಿಎಸ್‌ಸಿ (ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್), ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್), ಫ್ರಂಟ್ - ರೇರ್ ಪಾರ್ಕಿಂಗ್ ಸೆನ್ಸರ್ಸ್ ಮತ್ತು 360-ಡಿಗ್ರಿ ಕ್ಯಾಮೆರಾವನ್ನು ಪಡೆದಿದೆ.
ಟೊಯೋಟಾ ಇನ್ನೋವಾ ಕ್ರಿಸ್ಟಾ (Toyota Innova Crysta) ಎಂಪಿವಿ ಕೂಡ ಖರೀದಿಗೆ ಲಭ್ಯವಿದೆ. ಇದು ರೂ.19.99 ಲಕ್ಷದಿಂದ ರೂ.26.55 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. 2.4-ಲೀಟರ್ ಡೀಸೆಲ್ ಎಂಜಿನ್ ಒಳಗೊಂಡಿದ್ದು, 150 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 343 (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 5-ಗೇರ್‌ಬಾಕ್ಸ್ ಆಯ್ಕೆಯನ್ನು ಹೊಂದಿದೆ. 7/ 8 ಆಸನಗಳನ್ನು (ಸೀಟ್) ಒಳಗೊಂಡಿದೆ.


Click it and Unblock the Notifications








