Tata: ಎದುರಾಳಿಗೆ ನಡುಕ.. ಟಾಟಾದಿಂದ ಬರಲಿವೆ 3 ಹೊಸ ಕಾರುಗಳು, ಯಾವುವು.. ವಿಶೇಷತೆಗಳೇನು?
ದೇಶದ ವಿಶ್ವಾಸಾರ್ಹ ವಾಹನ ತಯಾರಕ ಸಂಸ್ಥೆಯಾಗಿ ಟಾಟಾ ಮೋಟಾರ್ಸ್ ಹೆಸರುವಾಸಿಯಾಗಿದೆ. ಕಳೆದ ಕೆಲವು ವರ್ಷಗಳಿಂದ ನವೀನ ವಿನ್ಯಾಸ ಹಾಗೂ ಆಕರ್ಷಕ ವೈಶಿಷ್ಟ್ಯವನ್ನು ಪಡೆದಿರುವ ಕಾರುಗಳನ್ನು ಬಿಡುಗಡೆಗೊಳಿಸುತ್ತಿದ್ದು, ಗ್ರಾಹಕರು ಕೂಡ ಇಷ್ಟಪಟ್ಟು ಖರೀದಿಸುತ್ತಿದ್ದಾರೆ. ಕಂಪನಿಯು ಮುಂಬರುವ ತಿಂಗಳಲ್ಲಿ ಹಲವು ನೂತನ ಎಸ್‌ಯುವಿ ಮತ್ತು ಹ್ಯಾಚ್‌ಬ್ಯಾಕ್‌ಗಳನ್ನು ಪರಿಚಯಿಸಲು ತಯಾರಿಯನ್ನು ನಡೆಸುತ್ತಿದೆ.
ಮೊದಲಿಗೆ ಮುಂದಿನ ತಿಂಗಳು ಬಿಡುಗಡೆಗೆ ಸಿದ್ದಗೊಂಡಿರುವ ಟಾಟಾ ಆಲ್ಟ್ರೋಜ್ ರೇಸರ್ (Tata Altroz Racer) ಕಾರಿನ ಬಗ್ಗೆ ಮಾತನಾಡೋಣ. ಇದು ನೆಕ್ಸಾನ್ ಎಸ್‌ಯುವಿಯಂತೆ 1.2-ಲೀಟರ್, 3-ಸಿಲಿಂಡರ್ ಟರ್ಬೊ ಪೆಟ್ರೋಲ್ ಎಂಜಿನ್ ಪಡೆದಿರಲಿದ್ದು, 6-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆಯನ್ನು ಮಾತ್ರ ಹೊಂದಿರಲಿದೆ. ಜೊತೆಗೆ ರೂ.9.20 ಲಕ್ಷದಿಂದ ರೂ.10.10 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಸಿಗಲಿದೆ ಎಂದು ಅಂದಾಜಿಸಲಾಗಿದೆ.

ಈಗಾಗಲೇ ಆಲ್ಟ್ರೋಜ್ ರೇಸರ್ ಹ್ಯಾಚ್‌ಬ್ಯಾಕ್‌ನ ಬಾಹ್ಯ ನೋಟದ ಕುರಿತ ವಿವರಗಳು 2023ರ ಆಟೋ ಎಕ್ಸ್‌ಪೋ ಮತ್ತು ಈ ವರ್ಷ ನಡೆದ ಭಾರತ್ ಮೊಬಿಲಿಟಿ ಶೋನಲ್ಲಿ ಪ್ರದರ್ಶನಕ್ಕೆ ಇಡಲಾಗಿದ್ದ ಮಾದರಿಯಿಂದ ಬಹಿರಂಗಗೊಂಡಿದೆ. ಈ ಕಾರು ಡುಯಲ್ ಟೋನ್ ಪೇಂಟ್ ಸ್ಕೀಮ್ ಮತ್ತು ಅಲಾಯ್ ವೀಲ್‌ಗಳನ್ನು ಒಳಗೊಂಡಿದೆ. ಸದ್ಯಕ್ಕೆ ವೈಶಿಷ್ಟ್ಯ (ಫೀಚರ್ಸ್)ಗಳ ಕುರಿತು ಯಾವುದೇ ಅಧಿಕೃತ ವಿವರಗಳು ಲಭ್ಯವಾಗಿಲ್ಲ.
ಟಾಟಾದ ಮತ್ತೊಂದು ಬಹುನೀರಿಕ್ಷಿತ ಕರ್ವ್ (Curvv) ಕೂಪ್ ಎಸ್‌ಯುವಿಯು ಬಹುತೇಕ ಈ ವರ್ಷವೇ ದೇಶೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಬಹುದು. ಈಗಾಗಲೇ ಹಲವಾರು ಬಾರಿ ಪ್ರಾಯೋಗಿಕ ಸಂಚಾರವನ್ನು ನಡೆಸುವಾಗ ಕಂಡುಬಂದಿದೆ. ಇದು ಇಂಧನ ಹಾಗೂ ಎಲೆಕ್ಟ್ರಿಕ್ ಚಾಲಿತ ಪವರ್‌ಟ್ರೇನ್ ಆಯ್ಕೆಯಲ್ಲಿ ಸಿಗಲಿದ್ದು, 1.2-ಲೀಟರ್ ಟಿಜಿಡಿಐ ಪೆಟ್ರೋಲ್ ಹಾಗೂ 1.5-ಲೀಟರ್ ಟರ್ಬೊ ಡೀಸೆಲ್ ಎಂಜಿನ್ ಪಡೆದಿರಬಹುದು ಎಂದು ಹೇಳಲಾಗಿದೆ.

ಎಲೆಕ್ಟ್ರಿಕ್ ರೂಪದಲ್ಲಿ ಬರುವ ಕರ್ವ್ ಕಾರು ಶಕ್ತಿಯುತ ಬ್ಯಾಟರಿಯನ್ನು ಹೊಂದಿರಲಿದ್ದು, ಭರ್ತಿ ಚಾರ್ಜ್ ನಲ್ಲಿ 500 ಕಿ.ಮೀ ರೇಂಜ್ (ಮೈಲೇಜ್) ನೀಡಲಿದೆ ಎನ್ನಲಾಗಿದೆ. ಈ ಕಾರು 12.3-ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್, 10.25-ಇಂಚಿನ ಫುಲ್ ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿರಲಿದ್ದು, ಸುರಕ್ಷತೆಗಾಗಿ 6-ಏರ್‌ಬ್ಯಾಗ್, ADAS (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ಅನ್ನು ಒಳಗೊಂಡಿರುವ ಸಾಧ್ಯತೆಯಿದೆ.
ಕಡೆಯದಾಗಿ ಮುಂದಿನ ವರ್ಷ (2025) ಬಿಡುಗಡೆಯಾಗಲಿರುವ ಟಾಟಾ ಸಿಯೆರಾ (Tata Sierra) ಎಲೆಕ್ಟ್ರಿಕ್ ಕಾರಿನ ಬಗ್ಗೆ ಹೇಳುವುದಾದರೆ, ಇದನ್ನು 2023ರ ಆಟೋ ಎಕ್ಸ್‌ಪೋದಲ್ಲಿ ವೀಕ್ಷಣೆಗೆ ಇಡಲಾಗಿತ್ತು. ಆಕರ್ಷಕವಾದ ವಿನ್ಯಾಸ ಪಡೆದಿರುವ ಸಿಯೆರಾದಲ್ಲಿ 5 ಮಂದಿ ಆರಾಮದಾಯಕವಾಗಿ ಪ್ರಯಾಣಿಸಬಹುದು ಎನ್ನಲಾಗಿದೆ. 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಒಳಗೊಂಡಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿರುವ ನಿರೀಕ್ಷೆಯಿದೆ.

ನೂತನ ಸಿಯೆರಾ ಎಲೆಕ್ಟ್ರಿಕ್ ಕಾರು ದೊಡ್ಡದಾದ ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಪಡೆದಿರಲಿದ್ದು, ಸಂಪೂರ್ಣ ಚಾರ್ಜ್ ನಲ್ಲಿ 400 ಕಿ.ಮೀ ಕ್ರಮಿಸಲಿದೆ ಎಂದು ಅಂದಾಜಿಸಲಾಗಿದೆ. ಇದು ಗರಿಷ್ಠ ಸುರಕ್ಷತಾ ವೈಶಿಷ್ಟ್ಯಗಳನ್ನು ಒಳಗೊಂಡಿರಲಿದ್ದು, ಮಲ್ಟಿ ಏರ್‌ಬ್ಯಾಗ್‌ಗಳು, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಮತ್ತು ADAS (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ಅನ್ನು ಪಡೆದಿರಬಹುದು ಎಂದು ಹೇಳಲಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications