Volvo: ದುಬಾರಿ ಬೆಲೆಯ ವೋಲ್ವೋ ಸಿ40 ರೀಚಾರ್ಜ್ ಎಲೆಕ್ಟ್ರಿಕ್ ಕಾರು ಬೆಂಕಿಗೆ ಆಹುತಿ, ಕಂಪನಿಯಿಂದ ಅಧಿಕೃತ ಹೇಳಿಕೆ
ಛತ್ತೀಸ್‌ಗಢದ ಹೆದ್ದಾರಿಯೊಂದರಲ್ಲಿ ಇತ್ತೀಚೆಗೆ ಪ್ರಯಾಣಿಕರಿದ್ದ ವೋಲ್ವೋ ಸಿ40 ರೀಚಾರ್ಜ್ ಎಲೆಕ್ಟ್ರಿಕ್ ಎಸ್‌ಯುವಿ (Volvo C40 Recharge electric SUV) ಅಗ್ನಿಗೆ ಆಹುತಿಯಾಗಿತ್ತು. ಅದೃಷ್ಟವಶಾತ್ ಬೆಂಕಿಯ ಕೆನ್ನಾಲಿಗೆ ಕಾರನ್ನು ಸಂಪೂರ್ಣವಾಗಿ ಆವರಿಸುವ ಮುನ್ನ ಮಾಲೀಕ ಹಾಗೂ ಸಹ ಪ್ರಯಾಣಿಕರು ಯಾವುದೇ ಗಾಯಗಳಿಲ್ಲದೆ ಅಪಾಯದಿಂದ ಪಾರಾಗಿದ್ದರು.
ಎಸ್‌ಯುವಿ ಹೊತ್ತಿ ಉರಿಯುತ್ತಿರುವ ದೃಶ್ಯವನ್ನು ಅದರ ಮಾಲೀಕ ಕ್ಯಾಮರಾದಲ್ಲಿ ಚಿತ್ರೀಕರಿಸಿದ್ದರು. ಸ್ವೀಡಿಷ್ ಆಟೋಮೊಬೈಲ್ ದೈತ್ಯ, ಭಾರತದಲ್ಲಿ ಮಾರಾಟಗೊಳಿಸುವ ಅತ್ಯಾಧುನಿಕ ಎಲೆಕ್ಟ್ರಿಕ್ ಕಾರುಗಳಲ್ಲಿ 'ವೋಲ್ವೋ ಸಿ40 ರೀಚಾರ್ಜ್' ಕೂಡ ಒಂದಾಗಿದ್ದು, ರೂ.62.95 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ದೊರೆಯುತ್ತದೆ. ಈ ಘಟನೆಯು ಎಲೆಕ್ಟ್ರಿಕ್ ವಾಹನಗಳ ಸುರಕ್ಷತೆ ಹಾಗೂ ವಿಶ್ವಾಸಾರ್ಹತೆ ಸಂಬಂಧ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಈ ಕುರಿತು ವೋಲ್ವೋ ಕಾರ್ ಇಂಡಿಯಾ (Volvo Car India), ಅಧಿಕೃತ ಹೇಳಿಕೆಯನ್ನು ಪ್ರಕಟಿಸಿದೆ. 'ಚಾಲನೆ ವೇಳೆ ಸಿ40 ರೀಚಾರ್ಜ್ ಎಲೆಕ್ಟ್ರಿಕ್ ಎಸ್‌ಯುವಿ ಅಗ್ನಿ ದುರಂತಕ್ಕೆ ಒಳಗಾಗಿದೆ ಎಂದು ಶನಿವಾರ ಗೊತ್ತಾಯಿತು. ಅತ್ಯಾಧುನಿಕ ಸುರಕ್ಷತಾ ವೈಶಿಷ್ಟ್ಯಗಳು ಕಾರನ್ನು ರಸ್ತೆ ಪಕ್ಕಕ್ಕೆ ತೆಗೆದುಕೊಂಡು ಹೋಗಿ, ಅದರಿಂದ ಹೊರಬರುವಂತೆ ಚಾಲಕನಿಗೆ ಎಚ್ಚರಿಸಿತು' ಎಂದು ತಿಳಿಸಿದೆ.
'ಕಾರಿನ ಮಾಲೀಕ ಸೇರಿದಂತೆ ಇತರೆ ಪ್ರಯಾಣಿಕರು ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ. ಅಗತ್ಯವಿರುವ ಸುರಕ್ಷತಾ ಕ್ರಮಗಳ ಬಗ್ಗೆ ಮಾರ್ಗದರ್ಶನ ನೀಡಲು ಗ್ರಾಹಕ ಸೇವಾ ಸಹಾಯವಾಣಿ ಕೂಡ ಆನ್‌ಲೈನ್ ನಲ್ಲಿ ಕಾರ್ಯಪ್ರವೃತ್ತವಾಗಿದೆ. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಕಾರಣವನ್ನು ತಿಳಿಯಲು ಸಂಬಂಧಪಟ್ಟ ತಾಂತ್ರಿಕ ತಜ್ಞರು ಪರಿಶೀಲಿಸುತ್ತಿದ್ದಾರೆ. ಕಂಪನಿಯು ಗ್ರಾಹಕರೊಂದಿಗೆ ಸಂಪರ್ಕದಲ್ಲಿದ್ದು, ಬೆಂಬಲವನ್ನು ಮುಂದುವರಿಸಲಾಗುತ್ತದೆ' ಎಂದು ವೋಲ್ವೋ ಪ್ರಕಟಣೆ ಹೊರಡಿಸಿದೆ.

ವೋಲ್ವೋ ಸಿ40 ರೀಚಾರ್ಜ್ ಎಲೆಕ್ಟ್ರಿಕ್ ಎಸ್‌ಯುವಿ (Volvo C40 Recharge electric SUV) ಸುರಕ್ಷತೆಯ ವಿಚಾರದಲ್ಲಿ ಅತ್ಯುತ್ತಮವಾಗಿದೆ. 7 ಏರ್‌ಬ್ಯಾಗ್, ಹಿಲ್ ಹೋಲ್ಡ್, ಡಿಸೆಂಟ್ ಕಂಟ್ರೋಲ್, 360 - ಡಿಗ್ರಿ ಕ್ಯಾಮೆರಾ, ADAS (ಸುಧಾರಿತ ಚಾಲಕ-ಸಹಾಯ ವ್ಯವಸ್ಥೆ - ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಒಳಗೊಂಡಿದೆ.
ಈ ಕಾರಿನಲ್ಲಿ 78 ಕೆಡಬ್ಲ್ಯೂಎಚ್ ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಬಳಕೆ ಮಾಡಲಾಗಿದೆ. ಇದರಲ್ಲಿರುವ ಡುಯಲ್ ಎಲೆಕ್ಟ್ರಿಕ್ ಮೋಟಾರ್ 408 ಪಿಎಸ್ ಗರಿಷ್ಠ ಪವರ್, 660 ಏನ್ಎಂ ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದ್ದು, ಭರ್ತಿ ಚಾರ್ಜ್ ನಲ್ಲಿ 530 ಕಿ.ಮೀ ಕ್ರಮಿಸುತ್ತದೆ. ಕೇವಲ 4.7 ಸೆಕೆಂಡುಗಳಲ್ಲಿ 0 - 100 ಕೆಎಂಪಿಎಚ್ ವೇಗವನ್ನು ಪಡೆಯಲಿದೆ.
ವೋಲ್ವೋ ಸಿ40 ರೀಚಾರ್ಜ್ ಎಲೆಕ್ಟ್ರಿಕ್ ಎಸ್‌ಯುವಿ ಬ್ಯಾಟರಿ ಪ್ಯಾಕ್ 11 ಕೆಡಬ್ಲ್ಯೂ ಎಸಿ ಚಾರ್ಜರ್ ಬಳಕೆಯಲ್ಲಿ 0 -100% ಚಾರ್ಜ್ ಆಗಲು 8 ಗಂಟೆ ತೆಗೆದುಕೊಳ್ಳುತ್ತದೆ. ಅದೇ 150 ಕೆಡಬ್ಲ್ಯೂ ಡಿಸಿ ಚಾರ್ಜರ್ ಆಯ್ಕೆಯಲ್ಲಿ ಕೇವಲ 30 ನಿಮಿಷದಲ್ಲಿ 10 - 80% ಚಾರ್ಜ್ ಆಗುತ್ತದೆ. 9-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 12-ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ, ಡುಯಲ್ ಜೋನ್ ಕ್ಲೇಮೇಟ್ ಕಂಟ್ರೋಲ್, ಸನ್‌ರೂಫ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆದಿದೆ.
ಎಲೆಕ್ಟ್ರಿಕ್ ಕಾರು ಅಥವಾ ದ್ವಿಚಕ್ರ ವಾಹನಗಳು ಇದೇ ಕಾರಣಕ್ಕೆ ಬೆಂಕಿಗೆ ಆಹುತಿಯಾಗುತ್ತವೆ ಎಂದು ಹೇಳಲು ಆಗುವುದಿಲ್ಲ. ಬಹುತೇಕ ಎಲೆಕ್ಟ್ರಿಕ್ ವಾಹನಗಳಲ್ಲಿ ಲಿಥಿಯಂ ಐಯಾನ್ ಬ್ಯಾಟರಿ ಪ್ಯಾಕ್ ಉಪಯೋಗ ಮಾಡಲಾಗುತ್ತದೆ. ಕೆಲವೊಮ್ಮೆ ಹೆಚ್ಚಿನ ಶಕ್ತಿ ಉತ್ಪಾದನೆಗೊಂಡಾಗ ಘರ್ಷಣೆ ಹೆಚ್ಚಾಗಿ ಬೆಂಕಿ ಹೊತ್ತಿಕೊಳ್ಳಬಹುದು. ತಯಾರಿಕೆ ದೋಷದಿಂದ ಸಹ ಇಂತಹ ಅವಘಡ ಸಂಭವಿಸಬಹುದು.
ಬ್ಯಾಟರಿ ಮ್ಯಾನೇಜ್ಮೆಂಟ್ ಸಿಸ್ಟಮ್ ಸರಿಯಾಗಿ ಕೆಲಸ ಮಾಡದಿದ್ದಾಗ ಅಗ್ನಿ ದುರಂತಗಳ ನಡೆಯಬಹುದು. ಬ್ಯಾಟರಿಯನ್ನು ಅತಿಯಾಗಿ ಚಾರ್ಜ್ ಮಾಡುವುದು ಅಥವಾ ವೇಗವಾಗಿ ಚಾರ್ಜ್ ಮಾಡಲು ಹೋದಾಗ ಅದು ಬಿಸಿಯಾಗಿ ಕಾರಿಗೆ ಬೆಂಕಿ ಹೊತ್ತಿಕೊಳ್ಳಬಹುದು. ಇನ್ನು, ಛತ್ತೀಸ್‌ಗಢದಲ್ಲಿ ನಡೆದ ಘಟನೆಗೆ ಬಗ್ಗೆ ಕೆಲವೇ ದಿನಗಳಲ್ಲಿ ಸತ್ಯಾಸತ್ಯತೆ ಹೊರಬರುವ ಸಾಧ್ಯತೆಯಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications