ಹೊಸ ಕಾರುಗಳಲ್ಲಿ ನೀಡುವ ADAS ತಂತ್ರಜ್ಞಾನ ಎಂದರೇನು? ಭಾರತೀಯ ರಸ್ತೆಗಳಿಗೆ ಸೂಕ್ತವೇ?
ADAS (ಸುಧಾರಿತ ಚಾಲಕ-ಸಹಾಯ ವ್ಯವಸ್ಥೆ) ಎಂಬ ತಂತ್ರಜ್ಞಾನವು ವಿಶ್ವದ ಮುಂದುವರಿದ ಬಹುತೇಕ ದೇಶಗಳಲ್ಲಿನ ವಾಹನ ತಯಾರಕರು ಬಳಸುತ್ತಿದ್ದಾರೆ. ತಮ್ಮ ಕಾರುಗಳಲ್ಲಿ ಈ ತಂತ್ರಜ್ಞಾನವನ್ನು ನೀಡುವ ಮೂಲಕ ಸಂಭವನೀಯ ಅಪಘಾತಗಳನ್ನು ತಪ್ಪಿಸುತ್ತಿದ್ದಾರೆ. ಈ ತಂತ್ರಜ್ಞಾನ ಭಾರತದಲ್ಲೂ ಜನಪ್ರಿಯತೆ ಪಡೆದಿದೆ. ದೇಶದ ಜನರು ಈಗ ಸುರಕ್ಷೆತೆಗೆ ಹೆಚ್ಚು ಆದ್ಯತೆ ನೀಡುತ್ತಿದ್ದು, ಏರ್‌ಬ್ಯಾಗ್ ಹಾಗೂ ADAS ವೈಶಿಷ್ಟ್ಯಗಳನ್ನು ಕೋರುತ್ತಿದ್ದಾರೆ. ಕಾರು ತಯಾರಕ ಕಂಪನಿಗಳು ಕೂಡ ಗ್ರಾಹಕರನ್ನು ಆಕರ್ಶಿಸಲು ಈ ವೈಶಿಷ್ಟ್ಯಕ್ಕೆ ಹೆಚ್ಚು ಆದ್ಯತೆ ನೀಡುತ್ತಿವೆ. ಹಾಗಾಗಿಯೇ ಈ ADAS (Advanced driver-assistance systems) ಭಾರತದಲ್ಲಿ ಹೆಚ್ಚು ಸದ್ದು ಮಾಡುತ್ತಿದೆ.
ADAS ಎಂದರೇನು?: ADAS ನೊಂದಿಗೆ ಕಾರುಗಳು ರಸ್ತೆಯ ಲೇನ್‌ಗಳನ್ನು ಬದಲಾಯಿಸಬಹುದು, ವೇಗವನ್ನು ನಿಯಂತ್ರಿಸಬಹುದು ಅಥವಾ ಹೆಚ್ಚಿಸಬಹುದು, ಕನಿಷ್ಠ ಮಾನವ ಹಸ್ತಕ್ಷೇಪದೊಂದಿಗೆ ಸಂಪೂರ್ಣವಾಗಿ ವಾಹನವನ್ನು ನಿಲ್ಲಿಸಬಹುದು. ಸಂಕ್ಷಿಪ್ತವಾಗಿ ಹೇಳುವುದಾದರೆ ಸುಧಾರಿತ ಚಾಲಕ ಸಹಾಯ ವ್ಯವಸ್ಥೆಯು ಅಪಘಾತಗಳನ್ನು ತಪ್ಪಿಸಲು ನಿಮಗೆ ಸಹಾಯ ಮಾಡುವ ಒಂದು ಸಾಧನವಾಗಿದೆ.

ಇನ್ನೂ ವಿವರವಾಗಿ ಹೇಳುವುದಾದ್ರೆ ADAS ಎಂಬುದು ಸೆನ್ಸಾರ್‌ಗಳು ಮತ್ತು ಕ್ಯಾಮೆರಾಗಳ ಮೂಲಕ ರಸ್ತೆಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಸುತ್ತಮುತ್ತಲಿನ ಸಂಕೇತಗಳ ಆಧಾರದ ಮೇಲೆ ಸ್ವಂತ ನಿರ್ಧಾರಗಳನ್ನು ತೆಗೆದುಕೊಂಡು ಚಾಲಕನ ಪ್ರಮೆಯವಿಲ್ಲದೆ ಕಾರನ್ನು ನಿಯಂತ್ರಿಸುತ್ತದೆ. ಇದು ಈಗಷ್ಟೆ ವಿಕಸನಗೊಳ್ಳುತ್ತಿರುವ ಮತ್ತು ಹೆಚ್ಚಿನ ಡೇಟಾವನ್ನು ಅವಲಂಬಿಸಿರುವ ತಂತ್ರಜ್ಞಾನವಾಗಿದೆ.
ಹೇಗೆ ಕೆಲಸ ಮಾಡುತ್ತದೆ?: ಕಾರಿನಲ್ಲಿ ಸರಿಯಾಗಿ ಹೊಂದಿಸಿರುವ ADAS ವೈಶಿಷ್ಟ್ಯವು ಅತ್ಯಂತ ವಿಶ್ವಾಸಾರ್ಹ ಭದ್ರತಾ ವೈಶಿಷ್ಟ್ಯವಾಗಿದೆ. ಸ್ವಯಂ - ತುರ್ತು ಬ್ರೇಕಿಂಗ್, ಲೇನ್ - ಕೀಪ್ ಅಸಿಸ್ಟ್, ಡಿಕ್ಕಿಯ ಹೊಡೆಯುವ ಮುನ್ನ ಎಚ್ಚರಿಕೆ, ಬ್ಲೈಂಡ್ - ಸ್ಪಾಟ್ ಮಾನಿಟರಿಂಗ್ ಮತ್ತು ಕ್ರಾಸ್ - ಟ್ರಾಫಿಕ್ ಎಚ್ಚರಿಕೆ ನೀಡುವುದು ಅಥವಾ ಸ್ವಂತ ನಿರ್ಣಯಗಳೊಂದಿಗೆ ಕಾರಿಗೆ ಆಗುವ ಅಪಾಯವನ್ನು ತಪ್ಪಿಸುತ್ತವೆ.

ಹೆದ್ದಾರಿಗಳಿಗೆ ಸೂಕ್ತ: ಹೆದ್ದಾರಿಗಳಲ್ಲಿ ಕಡಿಮೆ ವಾಹನಗಳು ಇರುವುದರ ಜೊತೆಗೆ ಅಡ್ಡದಿಡ್ಡಿ ಯಾರೂ ವಾಹನ ಓಡಿಸುವುದಿಲ್ಲ. ಅಲ್ಲದೇ ರಸ್ತೆ ಎಚ್ಚರಿಕೆ ಚಿಹ್ನೆಗಳು ಸರಿಯಾದ ಕ್ರಮದಲ್ಲಿ ಇರುವುದರಿಂದ ADAS ಹೆದ್ದಾರಿಗಳಲ್ಲಿ ಕಾರುಗಳನ್ನು ಉತ್ತಮವಾಗಿ ನಿಯಂತ್ರಿಸುತ್ತದೆ. ಹಾಗಾಗಿ ADAS ಪ್ರಮುಖ ಹೆದ್ದಾರಿಗಳು ಮತ್ತು ಎಕ್ಸ್‌ಪ್ರೆಸ್ ವೇಗಳಲ್ಲಿ ಉತ್ತಮ ವೈಶಿಷ್ಟ್ಯವಾಗಿ ಕೆಲಸ ಮಾಡುತ್ತದೆ.
ಲೋಕಲ್ ರಸ್ತೆಗಳಿಗೆ ಬೇಕೆ?: ADAS ತಂತ್ರಜ್ಞಾನ ಸಂಪೂರ್ಣ AI (ಕೃತಕ ಬುದ್ಧಿಮತೆ)ನಿಂದ ಚಾಲಿತವಾಗಿರುವ ಕಾರಣ ಅದರಲ್ಲಿ ಅಳವಡಿಸಿರುವ ತಂತ್ರಜ್ಞಾನಕ್ಕೆ ತಕ್ಕ ಹಾಗೆ ರಸ್ತೆ ಚಿಹ್ನೆಗಳ ನೋಡಿಕೊಂಡು ಕಾರನ್ನು ನಿಯಂತ್ರಿಸುತ್ತದೆ. ನಮ್ಮಲ್ಲಿ ಮುಖ್ಯ ರಸ್ತೆಗಳಿಗಿಂತ ಅಸಂಖ್ಯಾತ ಸಣ್ಣ ರಸ್ತೆಗಳಿವೆ, ನಿಯಮಗಳನ್ನು ಉಲ್ಲಂಘಿಸಿ ಅಡ್ಡದಿಡ್ಡಿ ವಾಹನಗಳನ್ನು ಓಡಿಸುವವರೆ ಹೆಚ್ಚು. ಹಾಗಾಗಿ ಈ ವ್ಯವಸ್ಥೆಯು ಭಾರತೀಯ ರಸ್ತೆಗಳಲ್ಲಿ ಹೆಚ್ಚು ಪ್ರಾಯೋಗಿಕವಾಗಿಲ್ಲ.

ಒಂದೇ ಸಿಂಗಲ್ ಲೇನ್‌ನಲ್ಲಿ ಕಾರನ್ನು ಇರಿಸಲು ADAS ಸಿಸ್ಟಮ್‌ಗೆ ತುಂಬಾ ಕಷ್ಟಕರವಾಗುತ್ತದೆ. ಸಾಮಾನ್ಯ ಭಾರತೀಯ ನಗರದ ರಸ್ತೆಗಳು ಈ ADAS ತಂತ್ರಜ್ಞಾನಕ್ಕೆ ಗೊಂದಲ ಸೃಷ್ಟಿಸುತ್ತವೆ. ಹಾಗಾಗಿ ಭಾರತದ ಹೆದ್ದಾರಿಗಳನ್ನು ಹೊರತುಪಡಿಸಿ ಸಿಟಿ ರೋಡ್‌ಗಳು ಇದಕ್ಕೆ ಸೂಕ್ತವಲ್ಲ ಎಂಬುದು ನಮ್ಮ ಅಭಿಪ್ರಾಯ. ಈ ವೈಶಿಷ್ಟ್ಯವನ್ನು ಒಳಗೊಂಡು ಬಂದ MG ಗ್ಲೋಸ್ಟರ್ ಪ್ರೀಮಿಯಂ SUV ದೇಶೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಮೊದಲ ಕಾರಾಗಿದೆ.
ಡ್ರೈವ್‌ಸ್ಪಾರ್ಕ್ ಅಭಿಪ್ರಾಯ: ನೀವು ADAS ಅನ್ನು ಹೊಂದಿರುವ ಕಾರಣಕ್ಕೆ ಮಾತ್ರ ಕಾರನ್ನು ಖರೀದಿಸಿದರೆ, ಅದಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಬೇಕಾಗಿಲ್ಲ. ನೀಡಿದರೂ ಸಂಪೂರ್ಣ ಅದರ ಮೇಲೆ ಅವಲಂಭಿತವಾಗುವುದು ತುಂಬಾ ಅಪಾಯಕಾರಿ ಎಂಬುದನ್ನು ನೆನಪಿಡಿ. ನಿಮ್ಮಲ್ಲಿ ಎಷ್ಟು ಮಂದಿ ಅಡಾಸ್ ತಂತ್ರಜ್ಞಾನವಿರುವ ಕಾರುಗಳನ್ನು ಹೊಂದಿದ್ದೀರಿ, ಅವುಗಳೊಂದಿಗೆ ನಿಮ್ಮ ಅನುಭವವನ್ನು ಕಮೆಂಟ್‌ನಲ್ಲಿ ಹಂಚಿಕೊಳ್ಳಿ. ನಿಮ್ಮ ಮಾಹಿತಿ ಇತರರಿಗೆ ಅನುಕೂಲವಾಗಬಹುದು.


Click it and Unblock the Notifications








