World Ev Day: ಪೆಟ್ರೋಲ್‌ಗೆ ಮಾಡಿ ಟಾಟಾ.. ದೇಶದಲ್ಲಿ ಸಿಗುವ ಜನಪ್ರಿಯ ಎಲೆಕ್ಟ್ರಿಕ್ ಕಾರುಗಳಿವು.. 6.99 ಲಕ್ಷ ಆರಂಭಿಕ ಬೆಲೆ!
ಸಾಮಾನ್ಯ ಜನರಲ್ಲಿ ವಿದ್ಯುತ್ ಚಾಲಿತ ವಾಹನ (ಎಲೆಕ್ಟ್ರಿಕ್ ವೆಹಿಕಲ್) ಬಳಕೆಯನ್ನು ಉತ್ತೇಜಿಸಲು ಪ್ರತಿವರ್ಷ ಸೆಪ್ಟೆಂಬರ್ 9ರಂದು ವಿಶ್ವ ಎಲೆಕ್ಟ್ರಿಕ್ ವಾಹನ ದಿನ (World Electric Vehicle Day) ಆಚರಿಸಲಾಗುತ್ತದೆ. ಈ ದಿನ ಎಲೆಕ್ಟ್ರಿಕ್ ವಾಹನಗಳ ಪ್ರಯೋಜನ ಹಾಗೂ ಅವುಗಳ ಬಳಕೆಯ ಅಗತ್ಯತೆ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ. ಇಂಗಾಲ ಹೊರಸೂಸುವ ವಾಹನಗಳು ನಮ್ಮ ಸುತ್ತಲಿನ ವಾತಾವರಣಕ್ಕೆ ವಿಪರೀತವಾಗಿ ಹಾನಿ ಉಂಟು ಮಾಡಬಲ್ಲವು. ಆದರೆ, ಎಲೆಕ್ಟ್ರಿಕ್ ವಾಹನಗಳು ಹೆಚ್ಚು ಪರಿಸರ ಸ್ನೇಹಿಯಾಗಿವೆ ಎಂಬುದು ಪ್ರತಿಯೊಬ್ಬರೂ ಗಮನಿಸಬೇಕಾದ ಅಂಶವಾಗಿದೆ. 2020ರಲ್ಲಿ ಮೊದಲ ಬಾರಿಗೆ ವಿಶ್ವ ಎಲೆಕ್ಟ್ರಿಕ್ ವಾಹನ ದಿನವನ್ನು ಏರ್ಪಡಿಸಲಾಗಿತ್ತು.
ವಿಶೇಷವಾಗಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು 2030ರ ವೇಳೆಗೆ ಒಟ್ಟು ವಾಹನ ಮಾರಾಟದಲ್ಲಿ ಶೇಕಡ 30% ಎಲೆಕ್ಟ್ರಿಕ್ ವಾಹನಗಳು ಇರಬೇಕೆಂದು ಬಯಸಿದೆ. ಆ ನಿಟ್ಟಿನಲ್ಲಿ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಆಟೋಮೊಬೈಲ್ ಡೀಲರ್ಸ್ ಅಸೋಸಿಯೇಷನ್ಸ್ ಫೆಡರೇಶನ್ ಪ್ರಕಾರ, 2024ರ ಹಣಕಾಸು ವರ್ಷದಲ್ಲಿ ಎಲೆಕ್ಟ್ರಿಕ್ ಪ್ರಯಾಣಿಕ ವಾಹನಗಳ ಮಾರಾಟ ಪ್ರಮಾಣ ವರ್ಷದಿಂದ ವರ್ಷಕ್ಕೆ (YoY) ಶೇಕಡ 91% (90,996 ಯುನಿಟ್) ಹೆಚ್ಚಳಗೊಂಡಿದೆ.

ಸದ್ಯ, ದೇಶೀಯವಾಗಿ ವಿವಿಧ ಕೈಗೆಟುಕುವ ಬೆಲೆಯ ಎಲೆಕ್ಟ್ರಿಕ್ ಕಾರುಗಳು ಖರೀದಿಗೆ ಲಭ್ಯವಿವೆ. ಅವುಗಳಲ್ಲಿ ಟಾಟಾ ಟಿಯಾಗೊ ಇವಿ (Tata Tiago EV) ಎಂಜಿ ಕಾಮೆಟ್ ಇವಿ (MG Comet EV), ಸಿಟ್ರನ್ ಇಸಿ3 (Citroen eC3), ಟಾಟಾ ಪಂಚ್ ಇವಿ (Tata Punch EV) ಹಾಗೂ ಟಾಟಾ ನೆಕ್ಸಾನ್ ಇವಿಗಳು (Tata Nexon EV) ಪ್ರಮುಖವಾಗಿವೆ.
ಮೊದಲಿಗೆ ಟಾಟಾ ಟಿಯಾಗೊ ಇವಿ (Tata Tiago EV) ಬಗ್ಗೆ ಮಾತನಾಡೋಣ. ಈ ಕಾರು ರೂ.7.99 ಲಕ್ಷದಿಂದ ರೂ.11.89 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಸಿಗುತ್ತದೆ. 19.2 ಕೆಡಬ್ಲ್ಯೂಹೆಚ್ ಹಾಗೂ 24 ಕೆಡಬ್ಲ್ಯೂಹೆಚ್ ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಹೊಂದಿದ್ದು, ಕ್ರಮವಾಗಿ 221 ರಿಂದ 225 ಕಿಲೋಮೀಟರ್ ರೇಂಜ್ (ಮೈಲೇಜ್) ನೀಡುತ್ತದೆ. 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಎಂಜಿ ಕಾಮೆಟ್ ಇವಿ (MG Comet EV) ಕೂಡ ಜನಪ್ರಿಯ ಎಲೆಕ್ಟ್ರಿಕ್ ಕಾರಾಗಿದೆ. ಇದು ರೂ.6.99 ಲಕ್ಷದಿಂದ ರೂ.9.53 ಲಕ್ಷ (ಎಕ್ಸ್ ಶೋರೂಂ) ದರವನ್ನು ಹೊಂದಿದೆ. 17.3 ಕೆಡಬ್ಲ್ಯೂಹೆಚ್ ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಪಡೆದಿದ್ದು, ಸಂಪೂರ್ಣ ಚಾರ್ಜ್‌ನಲ್ಲಿ 230 ಕಿಲೋಮೀಟರ್ ಓಡುತ್ತದೆ. 10.25-ಇಂಚಿನ ಡುಯಲ್ ಸ್ಕ್ರೀನ್ ಮತ್ತು ಕೀಲೆಸ್ ಎಂಟ್ರಿಯಂತಹ ಹಲವು ವೈಶಿಷ್ಟ್ಯಗಳನ್ನು ಪಡೆದಿದೆ.
ಸಿಟ್ರನ್ ಇಸಿ3 (Citroen eC3) ಬಗ್ಗೆ ಹೇಳುವುದಾದರೆ, ಇದು ರೂ.11.61 ಲಕ್ಷದಿಂದ ರೂ.13.41 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಗ್ರಾಹಕರಿಗೆ ಲಭ್ಯವಿದೆ. 29.2 ಕೆಡಬ್ಲ್ಯೂಹೆಚ್ (kWh) ಬ್ಯಾಟರಿಯನ್ನು ಹೊಂದಿದ್ದು, ಭರ್ತಿ ಚಾರ್ಜ್‌ನಲ್ಲಿ 320 ಕಿಲೋಮೀಟರ್ ಓಡುತ್ತದೆ. 10.2-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಒಳಗೊಂಡಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ.

ಟಾಟಾ ಪಂಚ್ ಇವಿ (Tata Punch EV) ಸಹ ಕೈಗೆಟುಕುವ ಬೆಲೆಯ ಎಲೆಕ್ಟ್ರಿಕ್ ಎಸ್‌ಯುವಿಯಾಗಿದೆ. ಇದು ರೂ.10.99 ಲಕ್ಷದಿಂದ ರೂ.15.49 ಲಕ್ಷ (ಎಕ್ಸ್ ಶೋರೂಂ) ದರದಲ್ಲಿ ಲಭ್ಯವಿದೆ. 25 ಹಾಗೂ 35 ಕೆಡಬ್ಲ್ಯೂಹೆಚ್ ಬ್ಯಾಟರಿಯನ್ನು ಹೊಂದಿದ್ದು, ಪೂರ್ತಿ ಚಾರ್ಜ್‌ನಲ್ಲಿ 265 ರಿಂದ 365 ಕಿಲೋಮೀಟರ್ ರೇಂಜ್ (ಮೈಲೇಜ್) ನೀಡುತ್ತದೆ. 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ.
ಟಾಟಾ ನೆಕ್ಸಾನ್ ಇವಿಗಳು (Tata Nexon EV) ಕುರಿತಂತೆ ಹೇಳುವುದಾದರೆ, ಈ ಕಾರು ರೂ.14.49 ಲಕ್ಷದಿಂದ ರೂ.19.49 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ದೊರೆಯುತ್ತದೆ. 30 ಹಾಗೂ 40.5 ಕೆಡಬ್ಲ್ಯೂಹೆಚ್ ಬ್ಯಾಟರಿಯನ್ನು ಪಡೆದಿದ್ದು, ಸಂಪೂರ್ಣ ಚಾರ್ಜ್‌ನಲ್ಲಿ 295 ರಿಂದ 390 ಕಿಲೋಮೀಟರ್ ಓಡುತ್ತದೆ. 10.25-ಇಂಚಿನ ಫುಲ್ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ ಒಳಗೊಂಡಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications