Maruti Suzuki: ಭರ್ಜರಿ ಯಶಸ್ಸು ಕಂಡ ವಿಕ್ಟೋರಿಸ್.. ಹೊಸ ರೂಪದಲ್ಲಿ ಈ ಜನಪ್ರಿಯ ಮಾರುತಿ ಕಾರು, ಸದ್ದಿಲ್ಲದೇ ಪರೀಕ್ಷೆ!
ಮಾರುತಿ ಸುಜುಕಿ ಬ್ರೆಝಾ (Maruti Suzuki Brezza), ಪ್ರಖ್ಯಾತ ಎಸ್‌ಯುವಿಯಾಗಿದೆ. ರೂ.8.26 ಲಕ್ಷದಿಂದ ರೂ.13 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ಪ್ರತಿ ತಿಂಗಳು ಉತ್ತಮ ಸಂಖ್ಯೆಯಲ್ಲಿಯೂ ಮಾರಾಟವಾಗುತ್ತಿದೆ. ಗ್ರಾಹಕರು ಸಹ ನಾ ಮುಂದು - ತಾ ಮುಂದು ಎಂಬಂತೆ ಖರೀದಿ ಮಾಡುತ್ತಿದ್ದಾರೆ. ಎಲ್ಲವು ಅಂದುಕೊಂಡಂತೆ ನಡೆದರೆ, 2026ರಲ್ಲಿ ಇದೇ 'ಬ್ರೆಝಾ' ಹೊಸ ರೂಪದಲ್ಲೂ ಮಾರಾಟಕ್ಕೆ ಬರಲಿದೆ. ಅದಕ್ಕಾಗಿ ಕಂಪನಿಯು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಬನ್ನಿ, ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.
ಸದ್ಯ, ಸಿಎನ್‌ಜಿ (CNG) ಚಾಲಿತ ಮಾಡೆಲ್ ಎನ್ನಲಾದ 'ಮಾರುತಿ ಸುಜುಕಿ ಬ್ರೆಝಾ' ಪ್ರಾಯೋಜಿಕ ಸಂಚಾರ ನಡೆಸುವಾಗ ಕಾಣಿಸಿಕೊಂಡಿದೆ. ಅದರ ಸ್ಪೈ ವಿಡಿಯೋ ಆನ್‌ಲೈನ್‌ನಲ್ಲಿಯೂ ಸೋರಿಕೆಯಾಗಿದೆ. ಈ ಕಾರಿನ ವಿನ್ಯಾಸದಲ್ಲಿ ಯಾವುದೇ ಬದಲಾವಣೆ ಇಲ್ಲದಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಕಳೆದ ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾದ 'ವಿಕ್ಟೋರಿಸ್'ನಂತೆ ಬ್ರೆಝಾ ಕೂಡ ಅಂಡರ್‌ಬಾಡಿ ಸಿಎನ್‌ಜಿ ಫ್ಯುಯೆಲ್ ಟ್ಯಾಂಕ್‍ನ್ನು ಒಳಗೊಂಡಿರಲಿದೆ ಎಂದು ಹೇಳಲಾಗಿದೆ.

ನೂತನ 'ಬ್ರೆಝಾ' ಎಸ್‌ಯುವಿಯನ್ನು ಸಂಪೂರ್ಣವಾಗಿ ಮರೆಮಾಚಲಾಗಿದೆ. ಆದರೂ ಹೊಸದಾದ ಬ್ಲ್ಯಾಕ್ ಅಲಾಯ್ ವೀಲ್‌ಗಳು, ಶಾರ್ಕ್-ಫಿನ್ ಆಂಟೆನಾ ಹಾಗೂ ಮರುವಿನ್ಯಾಸಗೊಳಿಸಲಾದ ಟೈಲ್ ಲೈಟ್‌ಗಳು ಸ್ಪಷ್ಟವಾಗಿ ಗುರುತಿಸಬಹುದಾಗಿದೆ. ವಿಶೇಷವಾಗಿ ಈ ಕಾರು, ಲೆವೆಲ್-2 ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ಸುರಕ್ಷತಾ ವೈಶಿಷ್ಟ್ಯವನ್ನು ಹೊಂದಿರುವ ನಿರೀಕ್ಷೆಯಿದೆ.
ಇದರ ಪವರ್‌ಟ್ರೇನ್‌ನಲ್ಲಿಯೂ ಯಾವುದೇ ಬದಲಾವಣೆಗಳಿರುವುದಿಲ್ಲ ಎನ್ನಲಾಗಿದೆ. ಈಗಿರುವ ಸಿಎನ್‌ಜಿ ಮಾಡೆಲ್‌ನಂತೆಯೇ ಬಲಿಷ್ಠವಾದ 1.5-ಲೀಟರ್ ಎಂಜಿನ್‌ನ್ನು ಹೊಂದಿರಲಿದೆ. ಅದು 88 ಬಿಹೆಚ್‌ಪಿ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 121 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸಬಲ್ಲದು. ಜೊತೆಗೆ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನ್ನು ಒಳಗೊಂಡಿರಲಿದ್ದು, 25.51 ಕಿ.ಮೀ ವರೆಗೆ ಮೈಲೇಜ್‌ನ್ನು ಕೊಡಲಿದೆ.

ಸ್ಟ್ಯಾಂಡರ್ಡ್ ಮಾರುತಿ ಸುಜುಕಿ ಬ್ರೆಝಾ (ಪೆಟ್ರೋಲ್) ವಿಶೇಷತೆಗಳೇನು:
ಈ ಕಾರು ಹೆಚ್ಚು ಅತ್ಯಾಧುನಿಕವಾದ ವಿನ್ಯಾಸವನ್ನು ಹೊಂದಿದೆ. ಸ್ಪ್ಲೆಂಡಿಡ್ ಸಿಲ್ವರ್, ಬ್ರೇವ್ ಖಾಕಿ, ಸಿಜ್ಲಿಂಗ್ ರೆಡ್, ಎಕ್ಸೂಬೆರಂಟ್ ಬ್ಲೂ, ಮ್ಯಾಗ್ಮಾ ಗ್ರೇ, ಪರ್ಲ್ ಆರ್ಕ್ಟಿಕ್ ವೈಟ್ ಮತ್ತು ಬ್ಲೂಯಿಶ್ ಬ್ಲ್ಯಾಕ್ ಎಂಬ ಬಣ್ಣಗಳ ಆಯ್ಕೆಯಲ್ಲಿಯೂ ಸಿಗುತ್ತದೆ. 200 ಮಿ.ಮೀ ಗ್ರೌಂಡ್ ಕ್ಲಿಯರೆನ್ಸ್ & 2,500 ಮಿ.ಮೀ ವೀಲ್‌ಬೇಸ್‌ನ್ನು ಒಳಗೊಂಡಿದೆ.
ನೂತನ ಪೆಟ್ರೋಲ್ ಚಾಲಿತ 'ಬ್ರೆಝಾ' 1.5-ಲೀಟರ್ ಮೈಲ್ಡ್ ಹೈಬ್ರಿಡ್ ಹಾಗೂ 1.5-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಎಂಜಿನ್‌ನ್ನು ಪಡೆದಿದೆ. 5-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ತನ್ನದಾಗಿಸಿಕೊಂಡಿದೆ. 17.80 ರಿಂದ 19.80 ಕಿ.ಮೀ ವರಗೆ ಮೈಲೇಜ್ ನೀಡುತ್ತದೆ. 180 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಹೊಂದಿದೆ.
ಇದು 5 ಆಸನ ಆಯ್ಕೆ ವ್ಯವಸ್ಥೆಯನ್ನು ಪಡೆದಿದೆ. ಪ್ರಯಾಣಿಕರು ಆರಾಮದಾಯಕವಾಗಿ ಕುಳಿತುಕೊಂಡು ಓಡಾಟ ನಡೆಸಬಹುದು. ಹೆಚ್ಚಿನ ಲಗೇಜ್ ತೆಗೆದುಕೊಂಡು ಹೋಗಲು ಸಾಧ್ಯವಾಗುವಂತೆ 328 ಲೀಟರ್‌ನಷ್ಟು ಬೂಟ್ ಸ್ಪೇಸ್‌ನ್ನು ಪಡೆದಿದೆ. 9 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಟೊಮೇಟಿಕ್ ಕ್ಲೇಮೇಟ್ ಕಂಟ್ರೋಲ್ ಹಾಗೂ ರೇರ್ ಎಸಿ ವೆಂಟ್‌ಗಳು ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಪ್ರಯಾಣಿಕರ ರಕ್ಷಣೆಗಾಗಿ 6-ಏರ್‌ಬ್ಯಾಗ್‌ಗಳು, ಇಎಸ್‌ಸಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್) ಮತ್ತು 360 ಡಿಗ್ರಿ ಕ್ಯಾಮೆರಾವನ್ನು ಪಡೆದಿದೆ.
ಮಾರುತಿ ಸುಜುಕಿ ವಿಕ್ಟೋರಿಸ್ (Maruti Suzuki Victoris) ಹೇಗಿದೆ:
ಈ ಎಸ್‌ಯುವಿಯು ರೂ.10.50 ಲಕ್ಷದಿಂದ ರೂ.19.99 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಒಳಗೊಂಡಿದೆ. ಈ ಅಕ್ಟೋಬರ್ ತಿಂಗಳೊಂದರಲ್ಲೇ 13,496 ಯುನಿಟ್‌ಗಳನ್ನು ಮಾರಾಟ ಮಾಡಲಾಗಿದೆ. 1.5-ಲೀಟರ್ ಮೈಲ್ಡ್ ಹೈಬ್ರಿಡ್ ಪೆಟ್ರೋಲ್, 1.5-ಲೀಟರ್ ಸ್ಟ್ರಾಂಗ್ ಹೈಬ್ರಿಡ್ (ಪೆಟ್ರೋಲ್+ಎಲೆಕ್ಟ್ರಿಕ್) ಮತ್ತು 1.5-ಲೀಟರ್ ಸಿಎನ್‌ಜಿ ಎಂಜಿನ್‌ನ್ನು ಪಡೆದಿದೆ. 21 ರಿಂದ 29 ಕಿ.ಮೀ ವರೆಗೆ ಮೈಲೇಜ್ ನೀಡುತ್ತದೆ. 5 ಆಸನಗಳನ್ನು ಪಡೆದಿದೆ. 10.1 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಪನೋರಮಿಕ್ ಸನ್‌ರೂಫ್, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು ಮತ್ತು 6-ಏರ್‌ಬ್ಯಾಗ್‌ಗಳನ್ನು ಹೊಂದಿದೆ.


Click it and Unblock the Notifications








