Maruti: ಕಳಪೆ ಎಂದವರಿಗೆ ಶಾಕ್ ಕೊಟ್ಟ ಮಾರುತಿ.. ಇವೇ ಕಂಪನಿಯ 4 ಸೇಫ್ಟಿ ಕಾರುಗಳು!
ಮೊನ್ನೆ ಮೊನ್ನೆವರೆಗೆ ಹಲವರು ಮಾರುತಿ ಕಾರುಗಳು ಕಳಪೆ ಎಂದು ಜರಿಯುತ್ತಿದ್ದರು. ಅಷ್ಟರಮಟ್ಟಿಗೆ ನಕಾರಾತ್ಮಕ ಅಭಿಪ್ರಾಯವನ್ನು ಬೆಳೆಸಿಕೊಂಡಿದ್ದರು. ಸದ್ಯ, ಕಂಪನಿಯ ಒಂದೊಂದೇ ಕಾರು ಮಾಡೆಲ್‌ಗಳು ಸುರಕ್ಷಿತ ವಾಹನಗಳ ಪಟ್ಟಿಗೆ ಸೇರ್ಪಡೆಯಾಗುತ್ತಿವೆ. ದೇಶದ ಕಾರುಗಳಿಗೆ ಸೇಫ್ಟಿ ಟೆಸ್ಟ್ ನಡೆಸುವ ಸಂಸ್ಥೆ 'ಭಾರತ್ ಎನ್‌ಸಿಎಪಿ' ಡಿಜೈರ್, ವಿಕ್ಟೋರಿಸ್, ಇನ್ವಿಕ್ಟೋ ಹಾಗೂ ಇ-ವಿಟಾರಾಗಳನ್ನು ಅತಿ ಸುರಕ್ಷಿತ ಪ್ರಯಾಣಿಕ ವಾಹನಗಳೆಂದು ತೀರ್ಮಾನಿದೆ. ಬನ್ನಿ, ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.
ಮಾರುತಿ ಸುಜುಕಿ ಡಿಜೈರ್ (Maruti Suzuki Dzire):
ಇದೊಂದು ಜನಪ್ರಿಯ ಸೆಡಾನ್ ಆಗಿದೆ. ಭಾರತ್ ಎನ್‌ಸಿಎಪಿಯು ಮಾಡಲ್ಪಟ್ಟ ಸುರಕ್ಷತಾ ಪರೀಕ್ಷೆಯಲ್ಲಿ 5-ಸ್ಟಾರ್ ಸೇಫ್ಟಿ ರೇಟಿಂಗ್‌ನ್ನು ಹೊಂದುವಲ್ಲಿ ಸಫಲವಾಗಿದೆ. ವಯಸ್ಕರ ರಕ್ಷಣೆ ವಿಭಾಗದಲ್ಲಿ 32ಕ್ಕೆ 29.46 ಅಂಕಗಳನ್ನು ಪಡೆದಿದ್ದು, ಮಕ್ಕಳ ರಕ್ಷಣೆ ವಿಭಾಗದಲ್ಲಿ 49ಕ್ಕೆ 41.57 ಅಂಕಗಳನ್ನು ಗಳಿಸಿದೆ.

ನೂತನ 'ಡಿಜೈರ್' ಗರಿಷ್ಠ ರಕ್ಷಣಾತ್ಮಕ ವೈಶಿಷ್ಟ್ಯಗಳನ್ನು ಹೊಂದಿದೆ. ಬಹುಮುಖ್ಯವಾಗಿ 6-ಏರ್‌ಬ್ಯಾಗ್‌ಗಳು, ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ಇಎಸ್‌ಸಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್) ಹಾಗೂ 360-ಡಿಗ್ರಿ ಕ್ಯಾಮೆರಾವನ್ನು ಪಡೆದಿದೆ. ರೂ.6.26 ಲಕ್ಷದಿಂದ ರೂ.9.31 ಲಕ್ಷ (ಎಕ್ಸ್-ಶೋರೂಂ) ಬೆಲೆಯಲ್ಲಿಯೂ ಗ್ರಾಹಕರ ಖರೀದಿಗೆ ದೊರೆಯುತ್ತದೆ.
ಮಾರುತಿ ಸುಜುಕಿ ವಿಕ್ಟೋರಿಸ್ (Maruti Suzuki Victoris):
ಈ ಎಸ್‌ಯುವಿಯು ಭಾರತ್ ಎನ್‌ಸಿಎಪಿಯಿಂದ 5-ಸ್ಟಾರ್ ಸೇಫ್ಟಿ ರೇಟಿಂಗ್‌ನ್ನು ಪಡೆಯುವಲ್ಲಿ ಯಶಸ್ವಿಯಾಗಿದೆ. ವಯಸ್ಕರ ರಕ್ಷಣೆ ವಿಭಾಗದಲ್ಲಿ 32ಕ್ಕೆ 31.66 ಅಂಕಗಳನ್ನು ಗಳಿಸಿದೆ. ಅದೇ ರೀತಿಯಲ್ಲಿ ಮಕ್ಕಳ ರಕ್ಷಣೆ ವಿಭಾಗದಲ್ಲಿ 49ಕ್ಕೆ 43 ಅಂಕಗಳನ್ನು ಪಡೆದಿದೆ.

ಹೊಸ 'ಮಾರುತಿ ವಿಕ್ಟೋರಿಸ್' ಪ್ರಯಾಣಿಕರಿಗೆ ಗರಿಷ್ಠ ರಕ್ಷಣೆ ಒದಗಿಸುತ್ತದೆ. ಅದಕ್ಕಾಗಿ 6-ಏರ್‌ಬ್ಯಾಗ್‌ಗಳು, ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ಲೆವೆಲ್-2 ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ಮತ್ತು 360-ಡಿಗ್ರಿ ಕ್ಯಾಮೆರಾವನ್ನು ಒಳಗೊಂಡಿದೆ. ರೂ.10.50 ಲಕ್ಷದಿಂದ ರೂ.19.99 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ.
ಮಾರುತಿ ಸುಜುಕಿ ಇನ್ವಿಕ್ಟೋ (Maruti Suzuki Invicto):
ಇದು ಪ್ರಖ್ಯಾತ ಎಂಪಿವಿಯಾಗಿದೆ. ಭಾರತ್ ಎನ್‌ಸಿಎಪಿ ನಡೆದ ಸುರಕ್ಷತಾ ಪರೀಕ್ಷೆಯ ವಯಸ್ಕರ ರಕ್ಷಣೆ ವಿಭಾಗದಲ್ಲಿ 32ಕ್ಕೆ 30.43 ಅಂಕಗಳನ್ನು ಪಡೆದಿದೆ. ಮಕ್ಕಳ ರಕ್ಷಣೆ ವಿಭಾಗದಲ್ಲಿ 49ಕ್ಕೆ 45 ಅಂಕಗಳನ್ನು ಹೊಂದಿದೆ. ಈ ಮೂಲಕ 5-ಸ್ಟಾರ್ ಸೇಫ್ಟಿ ರೇಟಿಂಗ್‌ನ್ನು ತನ್ನದಾಗಿಸಿಕೊಂಡಿದೆ.

ನೂತನ 'ಇನ್ವಿಕ್ಟೋ' ಸುರಕ್ಷತೆಗೂ ಹೆಸರುವಾಸಿಯಾಗಿದೆ. ಪ್ರಯಾಣಿಕರ ರಕ್ಷಣೆಗಾಗಿ 6-ಏರ್‌ಬ್ಯಾಗ್‌ಗಳು, ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ಇಎಸ್‌ಸಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ), ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ಹಾಗೂ 360 ಡಿಗ್ರಿ ಕ್ಯಾಮೆರಾಗಳನ್ನು ಪಡೆದಿದೆ. ರೂ.24.97 ಲಕ್ಷದಿಂದ ರೂ.28.61 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಒಳಗೊಂಡಿದೆ.
ಮಾರುತಿ ಸುಜುಕಿ ಇ-ವಿಟಾರಾ (Maruti Suzuki e Vitara):
ಈ ಎಲೆಕ್ಟ್ರಿಕ್ ಎಸ್‌ಯುವಿಯು ಭಾರತ್ ಎನ್‌ಸಿಎಪಿಯಿಂದ 5-ಸ್ಟಾರ್ ಸೇಫ್ಟಿ ರೇಟಿಂಗ್‌ನ್ನು ಹೊಂದುವಲ್ಲಿ ಸಫಲವಾಗಿದೆ. ವಯಸ್ಕರ ರಕ್ಷಣೆ ವಿಭಾಗದಲ್ಲಿ 32ಕ್ಕೆ 31.49 ಅಂಕಗಳನ್ನು ಗಳಿಸದೆ. ಮಕ್ಕಳ ರಕ್ಷಣೆ ವಿಭಾಗದಲ್ಲಿ 49ಕ್ಕೆ 43 ಅಂಕಗಳನ್ನು ಪಡೆದಿದೆ.

ಹೊಸ 'ಇ-ವಿಟಾರಾ' ಪ್ರಯಾಣಿಕರಿಗೆ ಹೆಚ್ಚಿನ ರಕ್ಷಣೆಯನ್ನು ಒದಗಿಸಬಲ್ಲದು. ಸುರಕ್ಷತೆಯ ದೃಷ್ಟಿಯಿಂದ 7-ಏರ್‌ಬ್ಯಾಗ್‌ಗಳು, ಲೆವೆಲ್-2 ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್), ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಮತ್ತು 360-ಡಿಗ್ರಿ ಕ್ಯಾಮೆರಾವನ್ನು ಒಳಗೊಂಡಿದೆ. ರೂ.17 ಲಕ್ಷದಿಂದ ರೂ.22.50 ಲಕ್ಷ (ಎಕ್ಸ್-ಶೋರೂಂ) ದರದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.


Click it and Unblock the Notifications








