BYD: ಚೀನಾ ಕಂಪನಿ ಕಾರುಗಳಿಗೆ ಭಾರತೀಯರು ಫಿದಾ! ಮುಗಿಬಿದ್ದು ಖರೀದಿ, 10,000 ಯುನಿಟ್ ವಿತರಣೆ!
ಚೀನಾ ದೇಶಕ್ಕೆ ಸೇರಿರುವ ಬಿವೈಡಿ (BYD) ಪ್ರಮುಖ ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿ ಎಂದೇ ಹೆಸರುವಾಸಿಯಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ವಿವಿಧ ಕಾರುಗಳನ್ನು ಯಶಸ್ವಿಯಾಗಿಯೂ ಮಾರಾಟ ಮಾಡುತ್ತಿದೆ. ಇವುಗಳು ತುಂಬಾ ಚೆನ್ನಾಗಿರುವ ವಿನ್ಯಾಸ & ಹತ್ತಾರು ವೈಶಿಷ್ಟ್ಯಗಳನ್ನು ಪಡೆದುಕೊಂಡಿವೆ. ಹೀಗಾಗಿ, ಗ್ರಾಹಕರು ಕೂಡ ನಾ ಮುಂದು - ತಾ ಮುಂದು ಎಂಬಂತೆ ಖರೀದಿಗೆ ಮಾಡುತ್ತಿದ್ದಾರೆ. ಸದ್ಯ, ಇದೇ 'ಬಿವೈಡಿ' ಕಂಪನಿ ಪ್ರಮುಖ ಮೈಲಿಗಲ್ಲೊಂದನ್ನು ಸಾಧಿಸಿದೆ. ಬನ್ನಿ, ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.
ಭಾರತದಲ್ಲಿ 10,000 ಎಲೆಕ್ಟ್ರಿಕ್ ಕಾರುಗಳನ್ನು ಖರೀದಿದಾರರಿಗೆ ವಿತರಿಸುವುದರೊಂದಿಗೆ 'ಬಿವೈಡಿ'ಯು ಹೊಸ ಇತಿಹಾಸ ಬರೆದಿದೆ. 2021ರಲ್ಲಿ ಈ ಕಂಪನಿಯು ದೇಶೀಯ ವಾಹನ ಮಾರುಕಟ್ಟೆಗೆ ಲಗ್ಗೆ ಇಟ್ಟಿತ್ತು. ಮರುವರ್ಷ ಅಂದರೆ, 2022ರ ನವೆಂಬರ್ ತಿಂಗಳಲ್ಲಿ ಮೊದಲ ಕಾರಾಗಿ 'ಅಟೋ 3'ಯನ್ನು ಬಿಡುಗಡೆಗೊಳಿಸಿತ್ತು. ನಂತರದ ವರ್ಷಗಳಲ್ಲಿ ಸೀಲ್, ಸೀಲಿಯನ್ 7 ಹಾಗೂ ಇಮ್ಯಾಕ್ಸ್ 7 ಕಾರುಗಳನ್ನು ಮಾರಾಟಕ್ಕೆ ತಂದಿತ್ತು.

ಪ್ರಸ್ತುತ, ಬಿವೈಡಿ 5ನೇ ಅತಿದೊಡ್ಡ ಎಲೆಕ್ಟ್ರಿಕ್ ವಾಹನ (EV) ತಯಾರಕ ಕಂಪನಿಯಾಗಿ ಹೊರಹೊಮ್ಮಿದೆ. ಇದೇ ವರ್ಷದ ಜುಲೈನಲ್ಲಿ 458 ಯುನಿಟ್ ಕಾರುಗಳನ್ನು ಮಾರಾಟಗೊಳಿಸಿತ್ತು. ಇದರೊಂದಿಗೆ ಮಾರಾಟ ಪ್ರಮಾಣವು ಶೇಕಡ 29% ಪ್ರಗತಿಯಾಗಿತ್ತು. ಅದೇ ರೀತಿಯಲ್ಲಿ ಈ 2025ರ ಮೊದಲಾರ್ಧದಲ್ಲಿ ಒಟ್ಟು 2,449 ಯುನಿಟ್‌ಗಳನ್ನು ಮಾರಾಟ ಮಾಡಲಾಗಿದ್ದು, ವರ್ಷದಿಂದ ವರ್ಷಕ್ಕೆ ಶೇಕಡ 137% ಬೆಳವಣಿಗೆಯನ್ನು ದಾಖಲಿಸಲಾಗಿದೆ.
ಎಲ್ಲವು ಅಂದುಕೊಂಡಂತೆ ನಡೆದರೆ, ಈ ವರ್ಷಾಂತ್ಯದ ವೇಳೆಗೆ ಬಿವೈಡಿ ಕಂಪನಿಯು ಸರಿ ಸುಮಾರು 5,000 ಯುನಿಟ್ ಕಾರುಗಳನ್ನು ಮಾರಾಟ ಮಾಡಬಹುದು ಎಂದು ಅಂದಾಜಿಸಲಾಗಿದೆ. ಹಾಗೆಯೇ ದೇಶದ ಪ್ರಮುಖ ನಗರಗಳಲ್ಲಿ ಕಂಪನಿಯ 44 ಡೀಲರ್‌ಶಿಪ್‌ಗಳಿದ್ದು, ಗ್ರಾಹಕರಿಗೆ ಉತ್ತಮವಾದ ಸೇವೆಯನ್ನು ಒದಗಿಸುತ್ತಿವೆ.

ಬಿವೈಡಿ ಮಾರಾಟಗೊಳಿಸುವ ಕಾರುಗಳ ಕುರಿತ ಸಂಕ್ಷಿಪ್ತ ವಿವರ:
ಬಿವೈಡಿ ಇಮ್ಯಾಕ್ಸ್ (BYD eMAX 7): ಇದೊಂದು ಎಲೆಕ್ಟ್ರಿಕ್ ಎಂಪಿವಿಯಾಗಿದೆ. ರೂ.26.90 ಲಕ್ಷದಿಂದ ರೂ.29.90 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಒಳಗೊಂಡಿದೆ. ಅತ್ಯುತ್ತಮವಾದ ವಿನ್ಯಾಸವನ್ನು ಹೊಂದಿದೆ. ಕಾಸ್ಮಾಸ್ ಬ್ಲೂ, ಕ್ರಿಸ್ಟಲ್ ವೈಟ್ ಹಾಗೂ ಹಾರ್ಬರ್ ಗ್ರೇ ಎಂಬ ಬಣ್ಣಗಳ ಆಯ್ಕೆಯಲ್ಲಿಯೂ ಸಿಗುತ್ತದೆ. 6/ 7 ಆಸನಗಳನ್ನು ಒಳಗೊಂಡಿದ್ದು, ಪ್ರಯಾಣಿಕರು ಆರಾಮದಾಯಕವಾಗಿ ಕುಳಿತುಕೊಂಡು ಸಂಚಾರ ಮಾಡಬಹುದು.
ಈ ಇಮ್ಯಾಕ್ಸ್ ಎಂಪಿವಿ 55.4 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಹಾಗೂ 71.8 ಕಿಲೋವ್ಯಾಟ್ ಕೆಡಬ್ಲ್ಯೂಹೆಚ್ ಬ್ಯಾಟರಿ ಪ್ಯಾಕ್‌ನ್ನು ಪಡೆದಿದೆ. ಸಂಪೂರ್ಣ ಚಾರ್ಜ್‌ನಲ್ಲಿ 420 ರಿಂದ 530 ಕಿಲೋಮೀಟರ್ ರೇಂಜ್ (ಮೈಲೇಜ್) ನೀಡುತ್ತದೆ. 12.8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು, ಆಟೋ ಎಸಿ, ವೈರ್‌ಲೆಸ್ ಫೋನ್ ಚಾರ್ಜರ್ ಹಾಗೂ 6-ಏರ್‌ಬ್ಯಾಗ್‌ಗಳು ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ.
ಬಿವೈಡಿ ಅಟೋ 3 (BYD Atto 3): ಇದು ರೂ.24.99 ಲಕ್ಷದಿಂದ ರೂ.33.99 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. 49.92 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಮತ್ತು 60.48 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್‌ನ್ನು ಒಳಗೊಂಡಿದೆ. ಭರ್ತಿ ಚಾರ್ಜ್‌ನಲ್ಲಿ 468 ರಿಂದ 521 ಕಿಲೋಮೀಟರ್ ಓಡುತ್ತದೆ. 5 ಆಸನಗಳನ್ನು ತನ್ನದಾಗಿಸಿಕೊಂಡಿದೆ.
ಬಿವೈಡಿ ಸೀಲ್ (BYD Seal): ಈ ಸೆಡಾನ್ ರೂ.41 ಲಕ್ಷದಿಂದ ರೂ.53.15 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. 61.44 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಮತ್ತು 82.56 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್‌ನ್ನು ಪಡೆದಿದೆ. ಪೂರ್ತಿ ಚಾರ್ಜ್‌ನಲ್ಲಿ 510 ರಿಂದ 650 ಕಿಲೋಮೀಟರ್ ಕ್ರಮಿಸುತ್ತದೆ. 5 ಆಸನಗಳನ್ನು ಒಳಗೊಂಡಿದೆ.
ಬಿವೈಡಿ ಸೀಲಿಯನ್ 7 (BYD Sealion 7): ಇದೊಂದು ಎಸ್‌ಯುವಿಯಾಗಿದೆ. ರೂ.48.90 ಲಕ್ಷದಿಂದ ರೂ.54.90 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. 82.56 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್‌ನ್ನು ಒಳಗೊಂಡಿದೆ. ಸಂಪೂರ್ಣ ಚಾರ್ಜ್‌ನಲ್ಲಿ 567 ಕಿಲೋಮೀಟರ್ ರೇಂಜ್ (ಮೈಲೇಜ್) ಕೊಡುತ್ತದೆ. 5 ಆಸನಗಳನ್ನು ಹೊಂದಿದೆ.


Click it and Unblock the Notifications








