ನಂ.1 ಕಾರು ಕಂಪನಿಗೆ ನಿದ್ದೆಗೆಡಿಸಿದೆ ಈ SUV: ಒಂದೇ ತಿಂಗಳಲ್ಲಿ 15,000 ಜನ ಮುಗಿಬಿದ್ದು ಖರೀದಿ!
ಮಾರಾಟದಲ್ಲಿ ಭಾರತದ ನಂ.1 ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿಯನ್ನು ಹಿಂದಿಕ್ಕಿ ಪ್ರಮುಖ ಬ್ರಾಂಡ್‌ನ ಎಸ್‌ಯುವಿಯೊಂದು ಮಾರಾಟದಲ್ಲಿ ದಾಖೆಲೆ ನಿರ್ಮಿಸಿದೆ. ಪ್ರತಿ ತಿಂಗಳ ಒಟ್ಟಾರೆ ಮಾರಾಟದಲ್ಲಿ ಮಾರುತಿ ಕಾರುಗಳು ಹೆಚ್ಚು ಮಾರಾಟ ಕಾಣುತ್ತವೆ. ಇತರ ಬ್ರಾಂಡ್‌ಗಳಿಗೆ ಹೋಲಿಸಿದರೆ, ಮಾರುತಿ ಕಾರುಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತವೆ. ಆದರೆ ಈ ಬಾರಿ ಹ್ಯುಂಡೈ ಕ್ರೆಟಾ ಎಸ್‌ಯುವಿ ಅತೀ ಹೆಚ್ಚು ಮಾರಾಟವಾದ (ಜೂನ್ 2025) ದೇಶದ ನಂ.1 ಕಾರಾಗಿ ಗುರ್ತಿಸಿಕೊಂಡಿದೆ. ನಂತರದ ಸ್ಥಾನದಲ್ಲಿ ಮಾರುತಿ ಸುಜುಕಿ ಡಿಜೈರ್ ಇದೆ.
ಜೂನ್ 2025 ರಲ್ಲಿ ಭಾರತದಲ್ಲಿ 15,786 ಯುನಿಟ್ ಹ್ಯುಂಡೈ ಕ್ರೆಟಾ ಎಸ್‌ಯುವಿಗಳು ಮಾರಾಟವಾಗಿವೆ. ಕ್ರೆಟಾ ಶ್ರೇಣಿಯು ಪೆಟ್ರೋಲ್, ಡೀಸೆಲ್ ಮತ್ತು ಎಲೆಕ್ಟ್ರಿಕ್ ವೇರಿಯೆಂಟ್‌ಗಳನ್ನು ಒಳಗೊಂಡಿದೆ. ಇದು ಮಲ್ಟಿ ಪವರ್‌ಟ್ರೇನ್ ವಿಭಾಗಗಳಲ್ಲಿ ಹುಂಡೈನ ಬಲವಾದ ಉಪಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ. ಹುಂಡೈ ಕ್ರೆಟಾ ಮಾತ್ರ ತಿಂಗಳಿನಿಂದ ತಿಂಗಳಿಗೆ ಬೆಳವಣಿಗೆಯನ್ನು ದಾಖಲಿಸಿದ ಏಕೈಕ ಹೆಚ್ಚು ಮಾರಾಟವಾದ ಕಾರಾಗಿದೆ (ಕ್ರೆಟಾ ಎಲೆಕ್ಟ್ರಿಕ್ ಮತ್ತು ಇಂಧನ ಚಾಲಿತ ಸೇರಿದಂತೆ).

ಮಾರಾಟದಲ್ಲಿ ಕ್ರೆಟಾ ನಂತರದ ಸ್ಥಾನದಲ್ಲಿರುವ ಮಾರುತಿ ಡಿಜೈರ್, ಬ್ರೆಝಾ ಮತ್ತು ಸ್ವಿಫ್ಟ್ ಸೇರಿದಂತೆ ಹೆಚ್ಚಿನ ಟಾಪ್ ಮಾಡಲ್‌ಗಳು ಮೇ ತಿಂಗಳಿಗೆ ಹೋಲಿಸಿದರೆ ಜೂನ್ ಮಾರಾಟದಲ್ಲಿ ಕುಸಿತ ಕಂಡಿವೆ. ಇದು ಮಾರುಕಟ್ಟೆಯಲ್ಲಿ ವ್ಯಾಪಕವಾದ ಮಂದಗತಿಯನ್ನು ಪ್ರತಿಬಿಂಬಿಸುತ್ತದೆ. ಈ ಮೂಲಕ ಮಾರಾಟದಲ್ಲಿ ಕ್ರೆಟಾ ತನ್ನ ವೇಗವನ್ನು ಮುಂದುವರಿಸಿದೆ.
ಕ್ರೆಟಾ, ನೆಕ್ಸಾನ್ ಮತ್ತು ಪಂಚ್‌ನಂತಹ ಎಸ್‌ಯುವಿಗಳು ಪ್ರಾಬಲ್ಯ ಸಾಧಿಸುವುದನ್ನು ಮುಂದುವರೆಸಿದ್ದು, ಯುಟಿಲಿಟಿ ವಾಹನಗಳಿಗೆ ಬಲವಾದ ಆದ್ಯತೆಯನ್ನು ಒತ್ತಿಹೇಳುತ್ತವೆ. ಮಾರುತಿ ಡಿಜೈರ್ ಹೆಚ್ಚು ಮಾರಾಟವಾಗುವ ಸೆಡಾನ್ ಆಗಿ ಬಲಿಷ್ಠವಾಗಿ ಉಳಿದಿದೆ. ಹಾಗೆಯೇ ಎರ್ಟಿಗಾ MPV ವಿಭಾಗದಲ್ಲಿ ಮುಂಚೂಣಿಯಲ್ಲಿದ್ದು, ಮಾರುತಿ ಸುಜುಕಿ ಕಂಪನಿಗೆ ಉತ್ತಮ ಲಾಭವನ್ನು ತಂದುಕೊಡುತ್ತಿದೆ.

ಮಾರುತಿ ಡಿಜೈರ್ ಜೂನ್‌ನಲ್ಲಿ 15,484 ಯುನಿಟ್ ಕಾರುಗಳು ಮಾರಾಟವಾಗಿವೆ. ಈ ಮಾರಾಟವು ಮೇ ತಿಂಗಳಲ್ಲಿ 18,084 ಯುನಿಟ್‌ಗಳಿತ್ತು. ಅಂದರೆ ತಿಂಗಳಿನಿಂದ ತಿಂಗಳಿಗೆ ಶೇ14.38 ರಷ್ಟು ಕುಸಿದಿದೆ. ಅದೇ ಕ್ರೆಟಾವನ್ನು ನೋಡುವುದಾದ್ರೆ ಜೂನ್ 2025 ರಲ್ಲಿ 15,786 ಯುನಿಟ್ ಕಾರುಗಳ ಮಾರಾಟ ಹಾಗೂ ಮೇ ತಿಂಗಳಲ್ಲಿ 14,860 ಯುನಿಟ್ ಕಾರುಗಳ ಮಾರಾಟದೊಂದಿಗೆ ಶೇ 6.23 ರಷ್ಟು ಹೆಚ್ಚಳವನ್ನು ಸಾಧಿಸಿದೆ.
ನಂತರದ ಸ್ಥಾನದಲ್ಲಿ (3ನೇ ಸ್ಥಾನ) ಮಾರುತಿ ಬ್ರೆಝಾ ಇದ್ದು, 14,507 ಯುನಿಟ್ ಕಾರುಗಳು ಮಾರಾಟವಾಗಿವೆ. ಮೇ ತಿಂಗಳಿಗೆ ಹೋಲಿಸಿದರೆ ಮಾರಾಟದಲ್ಲಿ ಶೇಕಡಾ 6.8 ರಷ್ಟು ಕುಸಿತವಾಗಿದೆ. 4ನೇ ಸ್ಥಾನದಲ್ಲಿ ಮಾರುತಿ ಎರ್ಟಿಗಾ ಇದ್ದು, 14,151 ಯುನಿಟ್ ಕಾರುಗಳು ಮಾರಾಟವಾಗಿದ್ದರೂ, ಮೇ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ 12.32 ರಷ್ಟು ಕುಸಿತ ಕಂಡಿದೆ.

5ನೇ ಸ್ಥಾನದಲ್ಲಿ ಮಾರುತಿ ಸ್ವಿಫ್ಟ್ ಇದ್ದು, 13,275 ಯುನಿಟ್ ಕಾರುಗಳು ಮಾರಾಟವಾಗಿವೆ, ಮಾರುತಿ ಸ್ವಿಫ್ಟ್ ನ ಮಾರಾಟವು ತಿಂಗಳಿಗೆ ಅಥವಾ ವರ್ಷದಿಂದ ವರ್ಷಕ್ಕೆ ಅಂಕಿಅಂಶಗಳನ್ನು ನೋಡಿದರೂ ಕಡಿಮೆಯಾಗಿದೆ. ಮೇ ತಿಂಗಳಿಗೆ ಹೋಲಿಸಿದರೆ ಶೇ6.08 ರಷ್ಟು ಕುಸಿತವಾಗಿದೆ. ಇದು ಪೆಟ್ರೋಲ್ ಮತ್ತು ಸಿಎನ್‌ಜಿ ಪವರ್ ಟ್ರೇನ್ ಆಯ್ಕೆಗಳೊಂದಿಗೆ ಬರುತ್ತದೆ.
ಇಲ್ಲಿ ನೋಡುವ ಟಾಪ್-5 ಅತ್ಯುತ್ತಮ ಮಾರಾಟವಾದ ಕಾರುಗಳಲ್ಲಿ ನಾಲ್ಕು ಮಾರುತಿ ಸುಜುಕಿ ಕಾರುಗಳು ಇರುವುದು ವಿಶೇಷ. ಆದರೆ ಟಾಪ್ ಸ್ಥಾನ ಮಾತ್ರ ಹ್ಯುಂಡೈ ಕ್ರೆಟಾ ಸಾಧಿಸಿರುವುದು ಮಾರುತಿ ಸುಜುಕಿಗೆ ಹಿನ್ನಡೆಯಾಗಿದೆ. ಸದ್ಯ ಜುಲೈ ತಿಂಗಳ ಮಾರಾಟದಲ್ಲಿ ಇದನ್ನು ಕೆಳಗಿಳಿಸಿ ಅಗ್ರ ಸ್ಥಾನವನ್ನು ದಕ್ಕಿಸಿಕೊಳ್ಳಲಿದೆಯೇ ಕಾದುನೋಡಬೇಕಿದೆ.


Click it and Unblock the Notifications