Mahindra: ಹೊಸ ಮಹೀಂದ್ರಾ ಕಾರಿನ ಮುಂದೆ ಮರಿಯಂತೆ ಕಂಡ ದೈತ್ಯ ಫಾರ್ಚೂನರ್!
ಮಹೀಂದ್ರಾ (Mahindra) ಕಂಪನಿಯು ಇತ್ತೀಚೆಗೆ ತನ್ನ ಎಲೆಕ್ಟ್ರಿಕ್ ಕಾರುಗಳ ಭವಿಷ್ಯ ಹೇಗಿರಲಿದೆ ಎಂಬುದನ್ನು ತೋರಿಸಿ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ. ಕಂಪನಿಯು ಭಾರತದಲ್ಲಿ ತನ್ನ ಮೊದಲ ಬೆಸ್ಪೋಕ್ ಇಂಗ್ಲೋ ಪ್ಲಾಟ್ ಫಾರ್ಮ್‌ನಲ್ಲಿ ನಿರ್ಮಾಣಗೊಂಡ ಬಿಇ 6 ಅನ್ನು ಹೊರತಂದಿದೆ. ಪ್ರಪಂಚದಾದ್ಯಂತ ಮಾರಾಟ ಮಾಡಲು ಈ ಕಾರನ್ನು ವಿನ್ಯಾಸಗೊಳಿಸಲಾಗಿದ್ದು, ಇತ್ತೀಚೆಗೆ ರಸ್ತೆಯಲ್ಲಿ ದೈತ್ಯ ಫಾರ್ಚೂನರ್ ಪಕ್ಕದಲ್ಲಿ ಹಾದುಹೋಗುವ ವಿಡಿಯೋ ವೈರಲ್ ಆಗಿದೆ. ಈ ಮಹೀಂದ್ರಾ ಬಿಇ 6 ಇವಿ (Mahindra BE 6) ಕಾರು ತನ್ನ ರಸ್ತೆ ಉಪಸ್ಥಿತಿ (Road presence)ಯೊಂದಿಗೆ ಎಲ್ಲರ ಗಮನ ಸೆಳೆದಿದೆ.
ಎಲ್ಲರಿಗೂ ತಿಳಿದಿರುವಂತೆ ಫಾರ್ಚೂನರ್ ದೇಶದ ಅತ್ಯಂತ ಯಶಸ್ವಿ 7 ಸೀಟ್ ಆಫ್-ರೋಡಿಂಗ್ ಎಸ್‌ಯುವಿಯಾಗಿದೆ. ಸದ್ಯ ಈ ಫಾರ್ಚೂನರ್‌ಗೆ ಭಾರತದಲ್ಲಿ ಯೋಗ್ಯವಾದ ಪ್ರತಿಸ್ಪರ್ಧಿ ಇಲ್ಲ. 2021 ರವರೆಗೆ ಫೋರ್ಡ್ ಎಂಡೀವರ್ ಇದಕ್ಕೆ ಗಂಭೀರ ಸ್ಪರ್ಧೆಯನ್ನು ನೀಡಿತಾದರೂ, ಇಂದು ಇಲ್ಲ. ಹಾಗಾಗಿ ಸದ್ಯ ಫಾರ್ಚೂನರ್ ತನ್ನ ವರ್ಗದಲ್ಲಿ ಪ್ರಮುಖ ಎಸ್‌ಯುವಿಯಾಗಿ ಮುಂದುವರಿಯುತ್ತಿದೆ.

ಮತ್ತೊಂದೆಡೆ ಮಹೀಂದ್ರಾದ ಹೊಸ ಬಿಇ 6 ಕಂಪನಿಯ ಎಲೆಕ್ಟ್ರಿಕ್ ವಾಹನಗಳ ಭವಿಷ್ಯವನ್ನು ಪ್ರತಿನಿಧಿಸುತ್ತದೆ. ಇದು ಬೆಸ್ಪೋಕ್ ಇಂಗ್ಲೋ ಪ್ಲಾಟ್ ಫಾರ್ಮ್ ಅನ್ನು ಆಧರಿಸಿರುವ ಮಹೀಂದ್ರಾದ ಮೊದಲ ಫ್ಯೂಚರಿಸ್ಟಿಕ್ ಎಲೆಕ್ಟ್ರಿಕ್ ಎಸ್‌ಯುವಿಯಾಗಿದೆ. ಇದು ಮುಂಬರುವ ವರ್ಷಗಳಲ್ಲಿ ವಿಶ್ವದ ಬಹುತೇಕ ದೇಶಗಳಲ್ಲಿ ಮಾರಾಟ ಕಾಣಲಿದೆ. ಎದುರಾಳಿಯೇ ಇಲ್ಲದ ದೈತ್ಯ ಫಾರ್ಚೂನರ್‌ಗೆ ಮಹೀಂದ್ರಾ ಬಿಇ 6ನ ರಸ್ತೆ ಉಪಸ್ಥಿತಿಯು ಹಲವರ ಮೆಚ್ಚುಗೆಯನ್ನು ಗಳಿಸಿದೆ.
ಈ ಕುರಿತ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಮಹೀಂದ್ರಾ ಬಿಇ 6 ಮತ್ತು ಟೊಯೊಟಾ ಫಾರ್ಚೂನರ್ ಕಾರುಗಳನ್ನು ಪರಸ್ಪರ ಓಡಿಸುತ್ತಿರುವ ವೀಡಿಯೊವನ್ನು ರೆಕಾರ್ಡ್ ಮಾಡಲಾಗಿದೆ. ಈ ಎರಡು ಕಾರುಗಳ ರಸ್ತೆ ಉಪಸ್ಥಿತಿಯು ಹೇಗೆ ಭಿನ್ನವಾಗಿದೆ ಎಂಬುದು ಕುತೂಹಲಕಾರಿಯಾಗಿತ್ತು. ಬಿಇ 6 ಗೆ ಹೋಲಿಸಿದರೆ ಫಾರ್ಚೂನರ್ ಸ್ವಲ್ಪ ಕಿರಿದಾಗಿ ಕಾಣುತ್ತಿತ್ತು, ಫಾರ್ಚೂನರ್ ಉದ್ದ ಮತ್ತು ಎತ್ತರವಾಗಿದ್ದರೆ, ಬಿಇ 6 ಅಗಲವಾಗಿತ್ತು.

ಫಾರ್ಚೂನರ್ ವಿಶೇಷತೆಗಳು: ಟೊಯೊಟಾ ಫಾರ್ಚೂನರ್ ಎಸ್‌ಯುವಿಯ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.33.78 ಲಕ್ಷದಿಂದ ರೂ.51.94 ಲಕ್ಷಗಳಾಗಿದೆ. ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿದ್ದು, 2.7 ಲೀಟರಿನ ಪೆಟ್ರೋಲ್ ಎಂಜಿನ್ 164 ಬಿಹೆಚ್ ಪವರ್ ಹಾಗೂ 245 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ.
ಇನ್ನು ಫಾರ್ಚೂನರ್‌ನ 2.8 ಲೀಟರಿನ ಟರ್ಬೊ ಎಂಜಿನ್ 201 ಬಿಹೆಚ್ ಪವರ್ ಹಾಗೂ 420 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 5-ಸ್ಪೀಡ್ ಮ್ಯಾನುವಲ್, 6-ಸ್ಪೀಡ್ ಮ್ಯಾನುವಲ್ ಅಥವಾ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ನೀಡಲಾಗುತ್ತದೆ. ಮೀಸಲಾದ 4×4 ಸಾಮರ್ಥ್ಯಗಳು ಹೆಚ್ಚಿನ ಡೀಸೆಲ್ ರೂಪಾಂತರಗಳಿಗೆ ಮಾತ್ರ ಸೀಮಿತವಾಗಿವೆ.
ಮಹೀಂದ್ರಾ ಬಿಇ 6 ವಿಶೇಷತೆಗಳು: ಮಹೀಂದ್ರಾ ಬಿಇ 6 ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.18.90 ಲಕ್ಷದಿಂದ ರೂ.26.90 ಲಕ್ಷಗಳಾಗಿದೆ. 59 ಕಿಲೋವ್ಯಾಟ್ ಮತ್ತು 79 ಕಿಲೋವ್ಯಾಟ್ ಎಂಬ ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳೊಂದಿಗೆ ಬರುತ್ತದೆ. ಇವು ಕ್ರಮವಾಗಿ ಒಮ್ಮೆ ಚಾರ್ಜ್ ಮಾಡಿದರೆ 535 ಕಿ.ಮೀ ಮತ್ತು 682 ಕಿ.ಮೀ ರೇಂಜ್ ನೀಡುತ್ತವೆ.
ಇದರ ಎಲೆಕ್ಟ್ರಿಕ್ ಮೋಟಾರ್ 288 ಬಿಹೆಚ್ ಪವರ್ ಹಾಗೂ 380 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಕೇವಲ 6.7 ಸೆಕೆಂಡುಗಳಲ್ಲಿ 100 ಕಿ.ಮೀ ವೇಗ ತಲುಪುವ ಸಾಮರ್ಥ್ಯವನ್ನು ಹೊಂದಿದೆ. 175 ಕಿಲೋವ್ಯಾಟ್ ಡಿಸಿ ಫಾಸ್ಟ್ ಚಾರ್ಜರ್ನೊಂದಿಗೆ, ದೊಡ್ಡ ಬ್ಯಾಟರಿ ಪ್ಯಾಕ್ ಕೇವಲ 20 ನಿಮಿಷಗಳಲ್ಲಿ 80% ವರೆಗೆ ಚಾರ್ಜ್ ಆಗುತ್ತದೆ. ಮೂರು ಡ್ರೈವ್ ಮೋಡ್‌ಗಳನ್ನು ಹೊಂದಿದೆ.


Click it and Unblock the Notifications