34 Km ಮೈಲೇಜ್.. 5-ಸೀಟರ್, ಬೆಲೆಯೂ ಕಮ್ಮಿ.. ಆದ್ರೂ ಈ ಮಾರುತಿ ಕಾರು ಖರೀದಿಸಲು ಗ್ರಾಹಕರ ಹಿಂದೇಟು.. ಯಾಕೆ?
ಮಾರುತಿ ಸುಜುಕಿ ಸೆಲೆರಿಯೊ (Maruti Suzuki Celerio) ಪ್ರಮುಖ ಹ್ಯಾಚ್‌ಬ್ಯಾಕ್ ಆಗಿದೆ. ಇದು ತುಂಬಾ ಅಚ್ಚುಕಟ್ಟಾದ ವಿನ್ಯಾಸ ಹೊಂದಿದ್ದು, ಹತ್ತಾರು ವೈಶಿಷ್ಟ್ಯಗಳನ್ನು ಪಡೆದಿದೆ. ಆದರೂ ಕಾರಿನ ಮಾರಾಟ ಸಂಖ್ಯೆ ದಿನದಿಂದ ದಿನಕ್ಕೆ ಕುಸಿತವಾಗಿದೆ. ಸೆಪ್ಟೆಂಬರ್ ತಿಂಗಳಲ್ಲೂ ಅದು ಮುಂದುವರಿದಿದೆ. ಒಟ್ಟು 1,033 ಯುನಿಟ್‌ಗಳನ್ನು ಮಾತ್ರ ಗ್ರಾಹಕರಿಗೆ ವಿತರಣೆ ಮಾಡಲಾಗಿದೆ. 2024ರ ಇದೇ ಅವಧಿಯಲ್ಲಿ 3,241 ಯುನಿಟ್‌ಗಳನ್ನು ಮಾರಾಟ ಮಾಡಲಾಗಿತ್ತು. ಈ ಅಂಕಿಅಂಶವನ್ನು ವಿಶ್ಲೇಷಣೆ ಮಾಡಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ -68% ಇಳಿಮುಖವಾಗಿದೆ.
ಹೊಸ 'ಮಾರುತಿ ಸೆಲೆರಿಯೊ' ಮಾರಾಟವು ಕುಂಠಿತವಾಗಲು ಹಲವು ಕಾರಣಗಳಿವೆ. ಹೆಚ್ಚು-ಕಮ್ಮಿ ಇದೇ ಹ್ಯಾಚ್‌ಬ್ಯಾಕ್ ದರಕ್ಕೆ ಬೇರೆ ಕಂಪನಿಗಳ ವಿವಿಧ ಹ್ಯಾಚ್‌ಬ್ಯಾಕ್, ಸೆಡಾನ್ ಹಾಗೂ ಎಸ್‌ಯುವಿಗಳು ಸಹ ಖರೀದಿಗೆ ಲಭ್ಯವಿವೆ. ಗ್ರಾಹಕರು ಅವುಗಳನ್ನು ಕೊಂಡುಕೊಳ್ಳಲು ಮುಖ ಮಾಡಿದ್ದಾರೆ. ಸೆ.22 ರಿಂದ ಜಿಎಸ್‌ಟಿ ಪರಿಷ್ಕರಿಸಲಾಗಿದೆ. 'ಸೆಲೆರಿಯೊ' ಬೆಲೆಯೂ ಇಳಿಕೆಯಾಗಿದೆ. ಆದರೆ, ಖರೀದಿದಾರರಿಗೆ ಈ ಬಗ್ಗೆ ಅರಿವಿನ ಕೊರತೆಯಿಂದ ಮಾರಾಟವು ಇಳಿಕೆಯಾಗಿದೆ ಎನ್ನಲಾಗಿದೆ.

'ಮಾರುತಿ ಸುಜುಕಿ ಸೆಲೆರಿಯೊ' ವಿಶೇಷತೆಗಳೇನು:
ಈ ಕಾರು ಕೈಗೆಟುಕುವ ಬೆಲೆಯಲ್ಲಿ ಸಿಗಲಿದೆ. ರೂ.4.70 ಲಕ್ಷದಿಂದ ರೂ.6.73 ಲಕ್ಷ (ಎಕ್ಸ್-ಶೋರೂಂ - ಬೆಂಗಳೂರು) ದರವನ್ನು ಪಡೆದಿದ್ದು, ಎಲ್ಲ ವರ್ಗದ ಗ್ರಾಹಕರು ಸುಲಭವಾಗಿ ಮನೆಗೆ ತರಬಹುದು. ಎಲ್ಎಕ್ಸ್ಐ, ವಿಎಕ್ಸ್ಐ, ಝಡ್ಎಕ್ಸ್ಐ ಹಾಗೂ ಝಡ್ಎಕ್ಸ್ಐ ಪ್ಲಸ್ ಎಂಬ ರೂಪಾಂತರಗಳ (ವೇರಿಯೆಂಟ್) ಆಯ್ಕೆಯಲ್ಲಿಯೂ ದೊರೆಯುತ್ತದೆ.
ಇದು ನೋಡುಗರ ಕಣ್ಣು ಕುಕ್ಕುವಂತಹ ಸರಳವಾದ ವಿನ್ಯಾಸವನ್ನು ಒಳಗೊಂಡಿದೆ. ಉತ್ತಮವಾದ ಎಲ್ಇಡಿ ಹೆಡ್‌ಲೈಟ್‌ಗಳು, ಎಲ್ಇಡಿ ಡಿಆರ್‌ಎಲ್‌ಗಳು, ಎಲ್ಇಡಿ ಟೈಲ್ ಲ್ಯಾಂಪ್‌ಗಳು ಮತ್ತು ಅಲಾಯ್ ವೀಲ್‌ಗಳು (15 ಇಂಚು) ಹೊಂದಿದೆ. ಆರ್ಕ್ಟಿಕ್ ವೈಟ್, ಸಿಲ್ಕಿ ಸಿಲ್ವರ್, ಗ್ಲಿಸ್ಟನಿಂಗ್ ಗ್ರೇ, ಸಾಲಿಡ್ ಫೈರ್ ರೆಡ್, ಸ್ಪೀಡಿ ಬ್ಲೂ, ಕೆಫೀನ್ ಬ್ರೌನ್ ಹಾಗೂ ಪರ್ಲ್ ಮಿಡ್‌ನೈಟ್ ಬ್ಲ್ಯಾಕ್ ಎಂಬ ಬಣ್ಣಗಳೊಂದಿಗೂ ಲಭ್ಯವಿದೆ.

ಹೊಸ 'ಮಾರುತಿ ಸೆಲೆರಿಯೊ' ಸಾಕಷ್ಟು ವಿಶಾಲವಾಗಿದೆ. 3,695 ಮಿ.ಮೀ ಉದ್ದ, 1,655 ಮಿ.ಮೀ ಅಗಲ ಹಾಗೂ 1,555 ಮಿ.ಮೀ ಎತ್ತರವಿದೆ. ಜೊತೆಗಿದು 170 ಮಿ.ಮೀ ಗ್ರೌಂಡ್ ಕ್ಲಿಯರೆನ್ಸ್ ಹಾಗೂ 2,435 ಮಿ.ಮೀ ವೀಲ್‌ಬೇಸ್‌ನ್ನು ಹೊಂದಿದೆ. ಸರಿ ಸುಮಾರು 122 ಕೆಜಿ ತೂಕವಿದೆ.
ಈ ಕಾರು 2 ಪವರ್‌ಟ್ರೇನ್‌ನ್ನು ಪಡೆದಿದೆ. ಇದರ 1-ಲೀಟರ್ ಪೆಟ್ರೋಲ್ ಎಂಜಿನ್, 68.5 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 91 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 5-ಸ್ಪೀಡ್ ಮ್ಯಾನುವಲ್ ಹಾಗೂ 5-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ. 24.97 ರಿಂದ 26 ಕಿ.ಮೀವರೆಗೆ ಮೈಲೇಜ್ ನೀಡುತ್ತದೆ.

ಮತ್ತೊಂದು 1-ಲೀಟರ್ ಪೆಟ್ರೋಲ್ + ಸಿಎನ್‌ಜಿ ಎಂಜಿನ್, 57 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 82 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುತ್ತದೆ. ಕೇವಲ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನ್ನು ಪಡೆದಿದೆ. 34.43 ಕಿ.ಮೀವರೆಗೆ ಮೈಲೇಜ್ ಕೊಡುತ್ತದೆ.
ಇದರ ಕ್ಯಾಬಿನ್ ವಿನ್ಯಾಸವು ಚೆನ್ನಾಗಿದೆ. 5 ಆಸನಗಳನ್ನು ಹೊಂದಿದೆ. ಪ್ರಯಾಣಿಕರು ಸುಲಭವಾಗಿ ಓಡಾಟ ನಡೆಸಬಹುದು. ಹೆಚ್ಚಿನ ಲಗೇಜ್ ಸಾಗಿಸಲು ಸಾಧ್ಯವಾಗುವಂತೆ 313 ಲೀಟರ್‌ನಷ್ಟು ಬೂಟ್ ಸ್ಪೇಸ್‌ನ್ನು ಪಡೆದಿದೆ. ಈ ಕಾರು 150 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಒಳಗೊಂಡಿದೆ. 15 ಸೆಕೆಂಡುಗಳಲ್ಲಿ 0 ರಿಂದ 100 ಕೆಎಂಪಿಹೆಚ್ ವೇಗವನ್ನು ಹೊಂದಲಿದೆ.
ನೂತನ 'ಸೆಲೆರಿಯೊ' ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ (7 ಇಂಚು), ರೇರ್ ಎಸಿ ವೆಂಟ್‌ಗಳು, ಐಡಲ್ ಎಂಜಿನ್ ಸ್ಟಾರ್ಟ್/ಸ್ಟಾಪ್ ಸಿಸ್ಟಮ್, ಎಲೆಕ್ಟ್ರಿಕ್ ಪವರ್ ಸ್ಟೀರಿಂಗ್, ಏರ್ ಕಂಡಿಷನರ್, ಸೆಂಟ್ರಲ್ ಲಾಕಿಂಗ್ ಮತ್ತು ಮ್ಯಾನುವಲ್ ಎಸಿ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಪ್ರಯಾಣಿಕರ ರಕ್ಷಣೆಗಾಗಿ 6 ಏರ್‌ಬ್ಯಾಗ್‌ಗಳು, ಇಎಸ್‌ಪಿ (ಎಲೆಕ್ಟ್ರಾನಿಕ್ - ಸ್ಟೆಬಿಲಿಟಿ ಪ್ರೋಗ್ರಾಂ), 3-ಪಾಯಿಂಟ್ ಸೀಟ್‌ಬೆಲ್ಟ್ & ರಿವರ್ಸ್ ಪಾರ್ಕಿಂಗ್ ಸೆನ್ಸರ್‌ಗಳನ್ನು ಪಡೆದಿದೆ.


Click it and Unblock the Notifications








