32.85 Km ಮೈಲೇಜ್.. 5-ಸೀಟರ್, 6 ಲಕ್ಷ.. ಈ ಮಾರುತಿ ಕಾರು ಭಾರೀ ಸಂಖ್ಯೆಯಲ್ಲಿ ಮಾರಾಟ.. ಫುಲ್ ಡಿಮ್ಯಾಂಡ್!
ಮಾರುತಿ ಸುಜುಕಿ ಸ್ವಿಫ್ಟ್ (Maruti Suzuki Swift) ಜನಪ್ರಿಯ ಹ್ಯಾಚ್‌ಬ್ಯಾಕ್ ಆಗಿದೆ. ಇದು ವಿಶ್ವಾಸಾರ್ಹತೆ ಹಾಗೂ ಉತ್ತಮ ಇಂಧನ ದಕ್ಷತೆಗೂ ಹೆಸರುವಾಸಿಯಾಗಿದೆ. ಈಚೆಗೆ ದೇಶೀಯ ಮಾರುಕಟ್ಟೆಯಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟಗೊಂಡ ಪ್ರಮುಖ 10 ಕಾರುಗಳ ಪಟ್ಟಿ ಪ್ರಕಟಗೊಂಡಿದೆ. ಅದರಲ್ಲಿ ಇದೇ ಸ್ವಿಫ್ಟ್ 5ನೇ ಸ್ಥಾನದಲ್ಲಿದ್ದು, ಬರೋಬ್ಬರಿ 13,275 ಯುನಿಟ್‌ಗಳನ್ನು ಮಾರಾಟ ಮಾಡಲಾಗಿದೆ. ಹಾಗೆಯೇ ಮೊದಲ ಸ್ಥಾನದಲ್ಲಿ ಹ್ಯುಂಡೈ ಕ್ರೆಟಾ (15,786 ಯುನಿಟ್), ಎರಡನೇ ಸ್ಥಾನದಲ್ಲಿ ಮಾರುತಿ ಸುಜುಕಿ ಡಿಜೈರ್ (15,484 ಯುನಿಟ್), ಮೂರನೇ ಸ್ಥಾನದಲ್ಲಿ ಮಾರುತಿ ಸುಜುಕಿ ಬ್ರೆಜಾ (14,507 ಯುನಿಟ್) ಹಾಗೂ ನಾಲ್ಕನೇ ಸ್ಥಾನದಲ್ಲಿ ಮಾರುತಿ ಸುಜುಕಿ ಎರ್ಟಿಗಾ (14,151 ಯುನಿಟ್) ಇದೆ.
ಈ ವರ್ಷದ ಮೊದಲ 5 ತಿಂಗಳಲ್ಲೂ ಮಾರುತಿ ಸುಜುಕಿ ಸ್ವಿಫ್ಟ್ ಹ್ಯಾಚ್‌ಬ್ಯಾಕ್ ದಾಖಲೆ ಸಂಖ್ಯೆಯಲ್ಲಿ ಮಾರಾಟಗೊಂಡಿದೆ. ಗ್ರಾಹಕರು ಕೂಡ ನಾಮುಂದು - ತಾಮುಂದು ಎಂಬಂತೆ ಖರೀದಿ ಮಾಡಿದ್ದಾರೆ. ಮೇನಲ್ಲಿ 14,135 ಯುನಿಟ್, ಏಪ್ರಿಲ್‌ನಲ್ಲಿ 14,592 ಯುನಿಟ್, ಮಾರ್ಚ್‌ನಲ್ಲಿ 17,746 ಯುನಿಟ್, ಫೆಬ್ರವರಿಯಲ್ಲಿ 16,269 ಯುನಿಟ್ ಹಾಗೂ ಜನವರಿಯಲ್ಲಿ 17,081 ಯುನಿಟ್‌ಗಳನ್ನು ಮಾರಾಟಗೊಳಿಸಲಾಗಿದೆ.

ಮಾರುತಿ ಸುಜುಕಿ ಸ್ವಿಫ್ಟ್ ವಿಶೇಷತೆಗಳೇನು:
ಇದೊಂದು ಹ್ಯಾಚ್‌ಬ್ಯಾಕ್ ಆಗಿದ್ದು, ಬಜೆಟ್ ಬೆಲೆಯಲ್ಲಿಯೂ ಗ್ರಾಹಕರ ಖರೀದಿ ಲಭ್ಯವಿದೆ. ಕನಿಷ್ಠ ರೂ.6.49 ಲಕ್ಷ ಹಾಗೂ ಗರಿಷ್ಠ ರೂ.9.64 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. ಎಲ್ಎಕ್ಸ್ಐ, ವಿಎಕ್ಸ್ಐ, ವಿಎಕ್ಸ್ಐ (ಒ), ಝಡ್ಎಕ್ಸ್ಐ ಮತ್ತು ಝಡ್ಎಕ್ಸ್ಐ ಪ್ಲಸ್ ಎಂಬ ರೂಪಾಂತರಗಳ (ವೇರಿಯೆಂಟ್) ಆಯ್ಕೆಯಲ್ಲಿಯೂ ದೊರೆಯುತ್ತದೆ.
ಈ ಕಾರು ಹೆಚ್ಚು ಅತ್ಯಾಧುನಿಕವಾದ ವಿನ್ಯಾಸವನ್ನು ಹೊಂದಿದೆ. ಎಲ್ಇಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳು, ಎಲ್ಇಡಿ ಡಿಆರ್‌ಎಲ್‌ಗಳು, ಎಲ್ಇಡಿ ಫಾಗ್ ಲೈಟ್‌ಗಳು, ಎಲ್ಇಡಿ ಟೈಲ್‌ಲೈಟ್‌ಗಳು ಮತ್ತು 15-ಇಂಚಿರುವ ಡೈಮಂಡ್ ಕಟ್ ಅಲಾಯ್ ವೀಲ್‌ಗಳನ್ನು ಒಳಗೊಂಡಿದೆ. ಸಿಜ್ಲಿಂಗ್ ರೆಡ್, ಪರ್ಲ್ ಆರ್ಕ್ಟಿಕ್ ವೈಟ್, ಮ್ಯಾಗ್ಮಾ ಗ್ರೇ ಮತ್ತು ನಾವೆಲ್ ಆರೆಂಜ್ ಸೇರಿದಂತೆ ವಿವಿಧ ಬಣ್ಣಗಳೊಂದಿಗೂ ಸಿಗುತ್ತದೆ.

ನೂತನ ಸ್ವಿಫ್ಟ್ ಹ್ಯಾಚ್‌ಬ್ಯಾಕ್ ಬಲಿಷ್ಠವಾದ ಪವರ್‌ಟ್ರೇನ್ ಆಯ್ಕೆಯನ್ನು ಒಳಗೊಂಡಿದೆ. 1.2-ಲೀ. ಪೆಟ್ರೋಲ್ & ಸಿಎನ್‌ಜಿ ಎಂಜಿನ್‌ನ್ನು ಹೊಂದಿದೆ. ರೂಪಾಂತರಗಳಿಗೆ ಅನುಗುಣವಾಗಿ 5-ಸ್ಪೀಡ್ ಮ್ಯಾನುವಲ್/ 5-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಪಡೆದಿದೆ. ಯಾವ ಬೈಕ್‌ಗೂ ಕಮ್ಮಿಯಿಲ್ಲದ ರೀತಿಯಲ್ಲಿ 24.80 ರಿಂದ 32.85 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ.
ಇದರಲ್ಲಿ 5 ಆಸನಗಳಿದ್ದು, ಪ್ರಯಾಣಿಕರು ಸುಲಭವಾಗಿ ಓಡಾಟ ನಡೆಸಬಹುದು. ಹೆಚ್ಚಿನ ಲಗೇಜ್ ಸಾಗಿಸಲು ಸಾಧ್ಯವಾಗುವಂತೆ 265 ಲೀಟರ್ ಸಾಮರ್ಥ್ಯದ ಬೂಟ್ ಸ್ಪೇಸ್‌ನ್ನು ಪಡೆದಿದೆ. 37 ಲೀಟರ್‌ನಷ್ಟು ಫ್ಯುಯೆಲ್ ಟ್ಯಾಂಕ್‌ನ್ನು ಹೊಂದಿದೆ. ಈ ಕಾರು 3860 ಎಂಎಂ ಉದ್ದ, 1735 ಎಂಎಂ ಅಗಲ ಹಾಗೂ 1520 ಎತ್ತರವು ಇದೆ.

ಹೊಸ ಸ್ವಿಫ್ಟ್ ಹ್ಯಾಚ್‌ಬ್ಯಾಕ್ ಕ್ಯಾಬಿನ್ ವಿನ್ಯಾಸವು ತುಂಬಾ ಅಚ್ಚುಕಟ್ಟಾಗಿದೆ. ಇದು 9-ಇಂಚಿರುವ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಸೆಮಿ-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, ಆಟೋ ಕ್ಲೇಮೇಟ್ ಕಂಟ್ರೋಲ್, ಯುಎಸ್‌ಬಿ ಟೈಪ್-ಸಿ ಪೋರ್ಟ್, ವೈರ್‌ಲೆಸ್ ಚಾರ್ಜರ್ ಮತ್ತು ಅರ್ಕಾಮಿಸ್ ಟ್ಯೂನ್ಡ್ ಸೌಂಡ್ ಸಿಸ್ಟಮ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ.
ಈ ಕಾರು ಗರಿಷ್ಠ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ. ಪ್ರಯಾಣಿಕರ ರಕ್ಷಣೆಗಾಗಿ 6 ಏರ್‌ಬ್ಯಾಗ್‌ಗಳು, ಎಬಿಎಸ್ (ಆಂಟಿ - ಲಾಕ್ ಬ್ರೇಕಿಂಗ್ ಸಿಸ್ಟಮ್), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ಟಿಸಿಎಸ್ (ಟ್ರಾಕ್ಷನ್ ಕಂಟ್ರೋಲ್ ಸಿಸ್ಟಮ್), ಸೀಟ್ ಬೆಲ್ಟ್ ರಿಮೈಂಡರ್ ಹಾಗೂ 3-ಪಾಯಿಂಟ್ ಸೀಟ್‌ಬೆಲ್ಟ್‌ಗಳನ್ನು ಪಡೆದಿದೆ.


Click it and Unblock the Notifications