Maruti: ಸದ್ದಿಲ್ಲದೇ ಹೊಸ ಮಾರುತಿ ವಿಕ್ಟೋರಿಸ್ ಕಾರು ಪರಿಚಯ, 5-ಸ್ಟಾರ್ ಸೇಫ್ಟಿ ರೇಟಿಂಗ್.. ನಿರೀಕ್ಷೆಗೂ ಮೀರಿದ ಫೀಚರ್ಸ್!
ಮಾರುತಿ ಸುಜುಕಿ ಇಂಡಿಯಾ (Maruti Suzuki India), ಬುಧವಾರ ವಿಕ್ಟೋರಿಸ್ (Victoris) ಹೆಸರಿನ ಹೊಚ್ಚ ಹೊಸ ಕಾಂಪ್ಯಾಕ್ಟ್ ಎಸ್‌ಯುವಿಯನ್ನು ಅನಾವರಣಗೊಳಿಸಿದೆ. ಈ ಕಾರನ್ನು ಅರೆನಾ ಡೀಲರ್‌ಶಿಪ್ ಮೂಲಕ ಮಾರಾಟಗೊಳಿಸಲು ಕಂಪನಿಯು ನಿರ್ಧರಿಸಿದೆ. ಇದು ತುಂಬಾ ಅಚ್ಚುಕಟ್ಟಾದ ವಿನ್ಯಾಸ ಹಾಗೂ ಹತ್ತಾರು ವೈಶಿಷ್ಟ್ಯಗಳನ್ನು ಪಡೆದಿದೆ. ದೇಶದ ವಾಹನಗಳಿಗೆ ಸುರಕ್ಷತಾ ಪರೀಕ್ಷೆ ನಡೆಸುವ ಸಂಸ್ಥೆ 'ಭಾರತ್ ಎನ್‌ಸಿಎಪಿ' ಸಹ ನೂತನ 'ವಿಕ್ಟೋರಿಸ್'ನ್ನು ಅತ್ಯಂತ ಸುರಕ್ಷಿತ ಕಾರೆಂದು ನಿರ್ಣಯಿಸಿದೆ.
ಹೊಸ ಮಾರುತಿ ಸುಜುಕಿ ವಿಕ್ಟೋರಿಸ್ (Maruti Suzuki Victoris) ಎಸ್‌ಯುವಿಯು ಎಲ್ಎಕ್ಸ್ಐ, ವಿಎಕ್ಸ್ಐ, ಜಡ್ಎಕ್ಸ್ಐ, ಜಡ್ಎಕ್ಸ್ಐ (ಒ), ಜಡ್ಎಕ್ಸ್ಐ ಪ್ಲಸ್ ಹಾಗೂ ಜಡ್ಎಕ್ಸ್ಐ (ಒ) ಪ್ಲಸ್ ಎಂಬ 6 ರೂಪಾಂತರಗಳ (ವೇರಿಯೆಂಟ್) ಆಯ್ಕೆಯನ್ನು ಹೊಂದಿದೆ. ಸದ್ಯಕ್ಕೆ ಈ ಕಾರಿನ ಬೆಲೆ ಕುರಿತಂತೆ ಯಾವುದೇ ವಿವರಗಳು ಲಭ್ಯವಾಗಿಲ್ಲ. ರೂ.12 ಲಕ್ಷ (ಎಕ್ಸ್-ಶೋರೂಂ) ದರದಲ್ಲಿ ಗ್ರಾಹಕರ ಖರೀದಿಗೆ ದೊರೆಯುವ ನಿರೀಕ್ಷೆಯಿದೆ.

ಇದು ಹೊರಭಾಗದಲ್ಲಿ ಹೆಚ್ಚು ಅತ್ಯಾಧುನಿಕವಾದ ವಿನ್ಯಾಸವನ್ನು ಹೊಂದಿದ್ದು, ನೋಡುಗರ ಕಣ್ಣು ಕುಕ್ಕುವಂತಿದೆ. ಉತ್ತಮವದ ಗ್ರಿಲ್ ಮತ್ತು ಬಂಪರ್‌ನ್ನು ಪಡೆದಿದೆ. ಶಾರ್ಪ್ ಎಲ್ಇಡಿ ಹೆಡ್‌ಲ್ಯಾಂಪ್‌ಗಳು, ಸ್ಲಿಮ್ ಪಿಕ್ಸೆಲ್-ಟೈಪ್ ಎಲ್ಇಡಿ ಡಿಆರ್‌ಎಲ್‌ಗಳು, ಸ್ಕ್ವೇರ್ಡ್-ಆಫ್ ವೀಲ್ ಆರ್ಚ್‌ಗಳು, ಶಾರ್ಕ್-ಫಿನ್ ಆಂಟೆನಾ, ಕನೆಕ್ಟ್ಡ್ ಎಲ್ಇಡಿ ಟೈಲ್‌ಲ್ಯಾಂಪ್‌ಗಳು ಹಾಗೂ 18-ಇಂಚಿರುವ ಡುಯಲ್ ಟೋನ್ ಅಲಾಯ್ ವೀಲ್‌ಗಳನ್ನು ಒಳಗೊಂಡಿದೆ.
ಈ ಕಾರು ವಿಶಾಲ ಗಾತ್ರದಲ್ಲಿದೆ. 4,360 ಎಂಎಂ ಉದ್ದ, 1,655 ಎಂಎಂ ಅಗಲ ಹಾಗೂ 1,795 ಎಂಎಂ ಎತ್ತರವು ಇದೆ. 2,600 ಎಂಎಂ ವೀಲ್‌ಬೇಸ್‌ನ್ನು ಒಳಗೊಂಡಿದೆ. ಆರ್ಕ್ಟಿಕ್ ವೈಟ್, ಸ್ಪ್ಲೆಂಡಿಡ್ ಸಿಲ್ವರ್, ಎಟರ್ನಲ್ ಬ್ಲೂ, ಸಿಜ್ಲಿಂಗ್ ರೆಡ್, ಬ್ಲೂಯಿಶ್ ಬ್ಲ್ಯಾಕ್, ಮ್ಯಾಗ್ಮಾ ಗ್ರೇ ಹಾಗೂ ಮಿಸ್ಟಿಕ್ ಗ್ರೀನ್ ಸೇರಿದಂತೆ ವಿವಿಧ ಬಣ್ಣಗಳೊಂದಿಗೂ ಲಭ್ಯವಿದೆ.

ಹೊಸ ಮಾರುತಿ ವಿಕ್ಟೋರಿಸ್ ಎಸ್‌ಯುವಿ 3 ಪವರ್‌ಟ್ರೇನ್‌ನ್ನು ಹೊಂದಿದೆ. ಇದರ 1.5-ಲೀಟರ್ ಮೈಲ್ಡ್ ಹೈಬ್ರಿಡ್ ಪೆಟ್ರೋಲ್ ಎಂಜಿನ್, 103 ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 137 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುತ್ತದೆ. 5-ಸ್ಪೀಡ್ ಮ್ಯಾನುವಲ್ ಹಾಗೂ 6-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಪಡೆದಿದೆ.
ಮತ್ತೊಂದು 1.5-ಲೀಟರ್ ಸ್ಟ್ರಾಂಗ್ ಹೈಬ್ರಿಡ್ (ಪೆಟ್ರೋಲ್ + ಎಲೆಕ್ಟ್ರಿಕ್) ಎಂಜಿನ್, 116 ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 141 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಒಳಗೊಂಡಿದೆ. ಇ-ಸಿವಿಟಿ ಗೇರ್‌ಬಾಕ್ಸ್‌ನ್ನು ಹೊಂದಿದೆ.

ಇನ್ನೊಂದು 1.5-ಲೀಟರ್ ಪೆಟ್ರೋಲ್/ಸಿಎನ್‌ಜಿ ಎಂಜಿನ್, 88.3 ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 121.5 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುತ್ತದೆ. 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ. ಈ ಕಾರು ರೂಪಾಂತರಗಳಿಗೆ ಅನುಗುಣವಾಗಿ 19.07 ರಿಂದ 28.65 ಕಿ.ಮೀ ವರೆಗೆ ಮೈಲೇಜ್ ನೀಡುತ್ತದೆ.
ನೂತನ ಮಾರುತಿ ಸುಜುಕಿ ವಿಕ್ಟೋರಿಸ್ ಕಾರಿನ ಕ್ಯಾಬಿನ್ ವಿನ್ಯಾಸವು ಚೆನ್ನಾಗಿದ್ದು, 5 ಆಸನಗಳನ್ನು ಒಳಗೊಂಡಿದೆ. 10.1-ಇಂಚಿನ ಸ್ಮಾರ್ಟ್‌ಪ್ಲೇ ಪ್ರೊ-ಎಕ್ಸ್ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, ಪನೋರಮಿಕ್ ಸನ್‌ರೂಫ್, 64-ಕಲರ್ ಆಂಬಿಯೆಂಟ್ ಲೈಟಿಂಗ್, ವೈರ್‌ಲೆಸ್ ಫೋನ್ ಚಾರ್ಜರ್, ಆಟೋ ಎಸಿ ಹಾಗೂ ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ.
ಹೊಸ ಮಾರುತಿ ವಿಕ್ಟೋರಿಸ್ ಎಸ್‌ಯುವಿ ಪ್ರಯಾಣಿಕರಿಗೆ ಗರಿಷ್ಠ ಮಟ್ಟದಲ್ಲಿ ರಕ್ಷಣೆ ಒದಗಿಸುತ್ತದೆ. ಅದಕ್ಕಾಗಿ ಭಾರತ್ ಎನ್‌ಸಿಎಪಿ ನಡೆಸಿದ ಸುರಕ್ಷತಾ ಪರೀಕ್ಷೆಯ ವಯಸ್ಕರ ರಕ್ಷಣೆ ವಿಭಾಗದಲ್ಲಿ (Adult Occupant Protection) 32ಕ್ಕೆ 31.66 ಅಂಕಗಳನ್ನು ಗಳಿಸಿದೆ. ಮಕ್ಕಳ ರಕ್ಷಣೆ ವಿಭಾಗದಲ್ಲಿ (Child Occupant Protection) 49ಕ್ಕೆ 43 ಅಂಕಗಳನ್ನು ಪಡೆದಿದೆ. ಈ ಮೂಲಕ 5-ಸ್ಟಾರ್ ಸೇಫ್ಟಿ ರೇಟಿಂಗ್‌ನ್ನು ಹೊಂದುವಲ್ಲಿ ಯಶಸ್ವಿಯಾಗಿದೆ.
ಈ ಕಾರು ಸುರಕ್ಷತೆಯ ದೃಷ್ಟಿಯಿಂದ 6 ಏರ್‌ಬ್ಯಾಗ್‌ಗಳು, ಇಎಸ್‌ಸಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), ಎಬಿಎಸ್ (ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ಲೆವೆಲ್ 2 ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್), ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), ರೇರ್ ಪಾರ್ಕಿಂಗ್ ಸೆನ್ಸರ್ಸ್ ಹಾಗೂ 360 ಡಿಗ್ರಿ ಕ್ಯಾಮೆರಾವನ್ನು ಪಡೆದಿದೆ.


Click it and Unblock the Notifications








