MG Comet: ಪುಟ್ಟ ಕಾರನ್ನು ಮುಗಿಬಿದ್ದು ಖರೀದಿಸುತ್ತಿದ್ದವರಿಗೆ ಶಾಕ್! 15,000 ರೂ.?
MG ಮೋಟಾರ್ ಇಂಡಿಯಾ ತನ್ನ ಕಾಮೆಟ್ ಇವಿ (MG Comet EV) ಬೆಲೆ ಏರಿಕೆಯನ್ನು ಘೋಷಿಸಿದ್ದು, ಇದು ಜುಲೈ 2025 ರಿಂದ ತಕ್ಷಣದಿಂದ ಜಾರಿಗೆ ಬರುತ್ತದೆ. ಬೆಲೆ ಏರಿಕೆಯು ಪ್ರತಿ ವೇರಿಯೆಂಟ್ ಮೇಲೆ ರೂ. 15,000 ವರೆಗೆ ಇರುತ್ತದೆ. ಹೊಸ ಬೆಲೆಗಳು ಈಗ ರೂ. 7.50 ಲಕ್ಷದಿಂದ (ಎಕ್ಸ್-ಶೋರೂಂ) ಪ್ರಾರಂಭವಾಗುತ್ತವೆ. ಟಾಪ್-ಎಂಡ್ ರೂಪಾಂತರದ ಬೆಲೆ ರೂ.10 ಲಕ್ಷದ ಹತ್ತಿರದಲ್ಲಿದೆ (ಎಕ್ಸ್-ಶೋರೂಂ). 2025 ರ ಆರಂಭದಲ್ಲಿ ಹಲವು ಬಾರಿ ಏರಿಕೆಯಾದ ನಂತರ ಇದು ಇತ್ತೀಚಿನ ಬೆಲೆ ಪರಿಷ್ಕರಣೆಯಾಗಿದೆ.
ಹೆಚ್ಚಳದ ಹೊರತಾಗಿಯೂ, ಕಾಮೆಟ್ EV ಭಾರತದ ಅತ್ಯಂತ ಕೈಗೆಟುಕುವ ಎಲೆಕ್ಟ್ರಿಕ್ ವಾಹನಗಳಲ್ಲಿ ಒಂದಾಗಿದೆ. ಈ ಕಾರನ್ನು ಎಕ್ಸಿಕ್ಯೂಟಿವ್, ಎಕ್ಸೈಟ್, ಎಕ್ಸ್ ಕ್ಲೂಸಿವ್ ಮತ್ತು ಬ್ಲ್ಯಾಕ್ ಸ್ಟಾರ್ಮ್ ಎಡಿಷನ್ ಎಂಬ ನಾಲ್ಕು ವೇರಿಯೆಂಟ್‌ಗಳಲ್ಲಿ ಮಾರಾಟ ಮಾಡಲಾಗುತ್ತದೆ. ಬೇಸ್ ವೇರಿಯೆಂಟ್ ಎಕ್ಸಿಕ್ಯೂಟಿವ್ ಈಗ 14,300 ರೂ.ಗಳಷ್ಟು ದುಬಾರಿಯಾಗಿದೆ. ಟಾಪ್-ಸ್ಪೆಕ್ ಬ್ಲ್ಯಾಕ್ ಸ್ಟಾರ್ಮ್ 13,700 ರೂ. ಹೆಚ್ಚಾಗಿದೆ.

ಉಳಿದ ಎರಡು ವೇರಿಯೆಂಟ್ ಗಳಾದ ಎಕ್ಸಿಟ್ ಮತ್ತು ಎಕ್ಸ್ ಕ್ಲೂಸಿವ್ ಬೆಲೆಗಳು ತಲಾ 15,000 ರೂ. ಗಳಷ್ಟು ಏರಿಕೆಯಾಗಿದೆ. ಈ ಹೆಚ್ಚಳವು ಕಾರಿನಲ್ಲಿ ಹೊಸ ಫೀಚರ್ಸ್ ಅಪ್‌ಡೇಟ್ ಮತ್ತು ಹೆಚ್ಚುತ್ತಿರುವ ಇನ್‌ಪುಟ್ ವೆಚ್ಚಗಳಿಂದಾಗಿ ಬೆಲೆ ಏರಿಕೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. 2025 ರ ಮಾದರಿಯು ಹಿಂಭಾಗದ ಪಾರ್ಕಿಂಗ್ ಕ್ಯಾಮೆರಾ, ಪವರ್ಡ್ ರಿಯರ್ ವ್ಯೂ ಮಿರರ್, ಪ್ರೀಮಿಯಂ ಲೆದರೆಟ್ ಸೀಟುಗಳು ಮತ್ತು ನಾಲ್ಕು-ಸ್ಪೀಕರ್ ಆಡಿಯೊ ಸಿಸ್ಟಮ್‌ನಂತಹ ನವೀಕರಣಗಳನ್ನು ಪಡೆದಿದೆ.
ಇತ್ತೀಚೆಗೆ ಬ್ಲಾಕ್‌ಸ್ಟಾರ್ಮ್ ಎಡಿಷನ್ ಬಿಡುಗಡೆ
ಕಂಪನಿಯು ಕಳೆದ ಫೆಬ್ರವರಿಯಲ್ಲಿ ಕಾಮೆಟ್ ಇವಿಯ 'ಬ್ಲಾಕ್‌ಸ್ಟಾರ್ಮ್ ಎಡಿಷನ್'ನ್ನು ಪರಿಚಯಿಸಿದೆ. ಇದು ಸಾಮಾನ್ಯ ಕಾಮೆಟ್ ಇವಿಗೆ ಹೋಲಿಕೆ ಮಾಡಿದರೆ, ಕೆಲವೊಂದು ಕಾಸ್ಮೆಟಿಕ್ ಬದಲಾವಣೆಗಳನ್ನು ಪಡೆದುಕೊಂಡಿದೆ. ರೆಡ್ ಅಕ್ಸೆಂಟ್‌ಗಳು & ಗ್ರಾಫಿಕ್ಸ್‌ನೊಂದಿಗೆ ಸ್ಟಾರಿ ಬ್ಲ್ಯಾಕ್ ಬಣ್ಣದಲ್ಲಿ ಇದನ್ನು ಡಿಸೈನ್ ಮಾಡಲಾಗಿದೆ. ಒಳಭಾಗದಲ್ಲೂ ಬ್ಲ್ಯಾಕ್ ಕಲರ್‌ನ್ನೇ ಹೈಲೈಟ್ ಮಾಡಲಾಗಿದೆ.

ಎಂಜಿ ಕಾಮೆಟ್ ಇವಿನಲ್ಲಿ 4 ಸೀಟುಗಳನ್ನು ನೀಡಲಾಗಿದ್ದು, 55ಕ್ಕೂ ಹೆಚ್ಚು ಕನೆಕ್ಟ್ಡ್ ಕಾರ್ ಟೆಕ್ ಹಾಗೂ ಕೀಲೆಸ್ ಎಂಟ್ರಿಯಂತಹ ವೈಶಿಷ್ಟ್ಯಗಳನ್ನು ಹೊಂದಿದೆ. ಇನ್ಫೋಟೈನ್‌ಮೆಂಟ್ ಸಿಸ್ಟಮ್ & ಇನ್ಸ್ಟ್ರುಮೆಂಟ್ ಕ್ಲಸ್ಟರ್‌ಗಾಗಿ ಡುಯಲ್ 10.25-ಇಂಚಿನ ಸ್ಕ್ರೀನ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇನಂತಹ ಸುಧಾರಿತ ಫೀಚರ್ಸ್ ಹೊಂದಿದೆ.
ಈ ಕಾರಿನ ಬ್ಯಾಟರಿಯು 3.3 ಕೆಡಬ್ಲ್ಯೂ ಚಾರ್ಜರ್‌ನ್ನು ಉಪಯೋಗಿಸಿದಾಗ ಶೇ100 ರಷ್ಟು ಚಾರ್ಜ್ ಆಗಲು ಬರೋಬ್ಬರಿ 7 ಗಂಟೆ ಬೇಕಾಗುತ್ತದೆ. ಪ್ರಯಾಣಿಕರ ಸುರಕ್ಷತೆಗಾಗಿ ಡುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ಇಎಸ್‌ಸಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ, ರೇರ್ ಪಾರ್ಕಿಂಗ್ ಸೆನ್ಸರ್ಸ್ ಹೋಲ್ಡ್ ಅಸಿಸ್ಟ್ ಹಾಗೂ ರೇರ್ ಡಿಸ್ಕ್ ಬ್ರೇಕ್‌ಗಳನ್ನು ಹೊಂದಿದೆ.

ಪರ್ಫಾಮೆನ್ಸ್ ವಿಷಯಕ್ಕೆ ಬಂದರೆ ಇದು 17.3 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ನ್ನು ಒಳಗೊಂಡಿದೆ. ಸಂಪೂರ್ಣ ಚಾರ್ಜ್‌ನಲ್ಲಿ 230 ಕಿ.ಮೀ ರೇಂಜ್ (ಮೈಲೇಜ್) ಕೊಡುತ್ತದೆ. ಇದರಲ್ಲಿ ಬಳಕೆ ಮಾಡಿರುವ ಎಲೆಕ್ಟ್ರಿಕ್ ಮೋಟಾರ್, 42 ಪಿಎಸ್ ಪವರ್ ಮತ್ತು 110 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ.
MG ಕಾಮೆಟ್ EV ದೈನಂದಿನ ನಗರ ಬಳಕೆಗೆ ಸೂಕ್ತವಾಗಿದ್ದು, ಕೈಗೆಟುಕುವಿಕೆ, ವೈಶಿಷ್ಟ್ಯಗಳು ಹಾಗೂ ಪರಿಸರ ಸ್ನೇಹಿ ಅಯ್ಕೆಯಾಗಿದೆ. ಇದರ ನಿಜವಾದ ರೇಂಜ್ 230 ಕಿ.ಮೀ ಗಿಂತ ಕಡಿಮೆಯಿದ್ದರೂ, ಹೆಚ್ಚಿನ ನಗರ ಪ್ರಯಾಣಗಳಿಗೆ ಇದು ಸಾಕೆಂದು ಹೇಳಬಹುದು. ಈ ಪುಟ್ಟ ಎಲೆಕ್ಟ್ರಿಕ್ ಕಾರಿನ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ.


Click it and Unblock the Notifications








