ಚೀನಾ ಕಾರುಗಳಿಗೆ ಭಾರತದಲ್ಲಿ ಫುಲ್ ಡಿಮ್ಯಾಂಡ್: ಜನ ಮುಗಿಬಿದ್ದು ಖರೀದಿ: ಏರುತ್ತಲೇ ಇದೆ ಬೇಡಿಕೆ!
ಭಾರತದಲ್ಲಿ ಚೀನಾ ಮೂಲದ ಪ್ರಮುಖ ಬ್ರಾಂಡ್‌ವೊಂದರ ಕಾರುಗಳು ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿವೆ. ಗ್ರಾಹಕರಿಂದ ಉತ್ತಮ ಬೇಡಿಕೆ ವ್ಯಕ್ತವಾಗುತ್ತಿದ್ದು, ವರ್ಷದಿಂದ ವರ್ಷಕ್ಕೆ ಭಾರೀ ಮಾರಾಟ ಕಾಣುತ್ತಿದೆ. ಪ್ರಮುಖವಾಗಿ ಬ್ರಾಂಡ್‌ನ ಎಲೆಕ್ಟ್ರಿಕ್ ಕಾರುಗಳು ಹೆಚ್ಚಾಗಿ ಮಾರಾಟ ಕಾಣುತ್ತಿವೆ. ಉತ್ತಮ ಡಿಸೈನ್, ಆಕರ್ಷಕ ಫೀಚರ್ಸ್, ಹೆಚ್ಚಿನ ರೇಂಜ್ ನೀಡುವ ಮೂಲಕ ಕಾರುಗಳು ಗ್ರಾಹಕರ ಫೇವರೆಟ್ ಆಯ್ಕೆಯಾಗುತ್ತಿವೆ. ಭಾರತದಲ್ಲಿ ಈ ಬ್ರಾಂಡ್‌ನ ಕಳೆದ ಆಗಸ್ಟ್ ತಿಂಗಳಲ್ಲಿ ಮಾರಾಟವಾದ ಕಾರುಗಳು ವಾರ್ಷಿಕವಾಗಿ ಶೇಕಡಾ 52 ರಷ್ಟು ಪ್ರಭಾವಶಾಲಿ ಮಾರಾಟ ಬೆಳವಣಿಗೆಯನ್ನು ತಂದು ಕೊಟ್ಟಿವೆ. ಅಷ್ಟಕ್ಕೂ ಈ ಬ್ರಾಂಡ್ ಯಾವುದು?
'ಎಂಜಿ ಮೋಟಾರ್' ಇದು ಚೀನಾ ಮೂಲದ ಬ್ರಾಂಡ್ ಆಗಿದ್ದು, ಭಾರತೀಯ ಬಹುರಾಷ್ಟ್ರೀಯ ಸಂಘಟಿತ ಕಂಪನಿ ಆಗಿರುವ ಜೆಎಸ್‌ಡಬ್ಲ್ಯೂ ಗ್ರೂಪ್ ಪಾಲುದಾರಿಕೆಯಲ್ಲಿ ಕೆಲಸ ಮಾಡುತ್ತಿದೆ. ಎರಡೂ ಬ್ರಾಂಡ್‌ಗಳು ಭಾರತದಲ್ಲಿ ತಮ್ಮ ಕಾರುಗಳನ್ನು ವಿಸ್ತರಿಸುತ್ತಿವೆ. ಗ್ರಾಹಕರ ಆದ್ಯತೆಗಳಿಗೆ ತಕ್ಕಂತೆ ಬಜೆಟ್ ಬೆಲೆಯಲ್ಲಿ ಬೆಸ್ಟ್ ಇವಿಗಳನ್ನು ಮಾರಾಟ ಮಾಡುತ್ತಿದ್ದು, ಕಳೆದ ಆಗಸ್ಟ್‌ನಲ್ಲಿ ದಾಖಲೆಯ ಕಾರುಗಳನ್ನು ಮಾರಾಟ ಮಾಡಿವೆ.

ಆಗಸ್ಟ್ 2025 ರಲ್ಲಿ JSW MG ಮೋಟಾರ್ ಇಂಡಿಯಾ ವರ್ಷದಿಂದ ವರ್ಷಕ್ಕೆ (YoY) ಶೇಕಡಾ 52 ರಷ್ಟು ಪ್ರಭಾವಶಾಲಿ ಮಾರಾಟ ಬೆಳವಣಿಗೆಯನ್ನು ಸಾಧಿಸಿದೆ. ಒಟ್ಟು 6,578 ಯುನಿಟ್ ಕಾರುಗಳು ಮಾರಾಟವಾಗಿವೆ ಎಂದು ಕಂಪನಿ ಹೇಳಿಕೊಂಡಿದೆ. ಇದು ಈ ವರ್ಷದಲ್ಲಿ ಅತ್ಯಧಿಕ ಮಾಸಿಕ ಮಾರಾಟ ಸಂಖ್ಯೆಯಾಗಿದೆ ಎಂದು ತಿಳಿದು ಬಂದಿದೆ.
ಆಗಸ್ಟ್ 2025 ರಲ್ಲಿ 6,578 ಯುನಿಟ್ ಕಾರುಗಳು ಮಾರಾಟವಾಗಿದ್ದರೆ, ಆಗಸ್ಟ್ 2024 ರಲ್ಲಿ 4,323 ಯುನಿಟ್ ಕಾರುಗಳು ಮಾರಾಟವಾಗಿವೆ. ಒಟ್ಟಾರೆ ವಾರ್ಷಿಕ ಮಾರಾಟ ಬೆಳವಣಿಗೆಯು ಶೇ52 ಕ್ಕೆ ಹೆಚ್ಚಳವಾಗಿದೆ. ಆಗಸ್ಟ್ 2024 ರಲ್ಲಿ ಮಾರಾಟವಾಗಿದ್ದಕ್ಕಿಂತ ಈ ಬಾರಿ 2,255 ಹೆಚ್ಚು ವಾಹನಗಳು ಮಾರಾಟವಾಗಿವೆ. ಈ ಮಾರಾಟದಲ್ಲಿ ಬಹುಪಾಲು ಎಲಕ್ಟ್ರಿಕ್ ಕಾರುಗಳು ಪಡೆದುಕೊಂಡಿರುವುದು ವಿಶೇಷ.

ಪ್ರಮುಖ MG ವಿಂಡ್ಸರ್ EV ಜುಲೈ 2025 ಕ್ಕಿಂತ ದಾಖಲೆಯ 5% ಮಾಸಿಕ ಬೆಳವಣಿಗೆಯನ್ನು ದಾಖಲಿಸಿದೆ. ಹಾಗೆಯೇ MG ಕಾಮೆಟ್ EV ಯಲ್ಲಿ ಗಮನಾರ್ಹ ಬೆಳವಣಿಗೆಯೊಂದಿಗೆ ಭಾರತದ ಅತ್ಯುತ್ತಮ ಮಾರಾಟವಾದ ಎಲೆಕ್ಟ್ರಿಕ್ ವಾಹನಗಳಲ್ಲಿ ಒಂದಾಗಿ ಸ್ಥಿರವಾಗಿ ಸ್ಥಾನ ಪಡೆದಿದೆ. ಇಂಧನ ಚಾಲಿತ ವಾಹನಗಳು ಎಲೆಕ್ಟ್ರಿಕ್ ವಾಹನಗಳಿಗಿಂತ ಕಡಿಮೆ ಮಾರಾಟವಾಗಿವೆ.
MG ಯ ಪೋರ್ಟ್‌ಫೋಲಿಯೊ ಎಂಟು ಮಾಡಲ್‌ಗಳನ್ನು ಒಳಗೊಂಡಿದೆ, ಅವುಗಳಲ್ಲಿ ಐದು ಇಂಧನ ಚಾಲಿತ ವಾಹನಗಳು ಹಾಗೂ ಉಳಿದವು ಇವಿಗಳಾಗಿವೆ. ಒಟ್ಟಾರೆ ಎಲೆಕ್ಟ್ರಿಕ್ ಮತ್ತು ಇಂಧನ ಚಾಲಿತ ವಾಹನಗಳೆರಡಕ್ಕೂ ಬಲವಾದ ಬೇಡಿಕೆಯಿಂದ ಮಾರಾಟದಲ್ಲಿ ಏರಿಕೆ ಕಂಡುಬಂದಿದೆ. ಕಂಪನಿಯು ಭಾರತದ ಹಬ್ಬದ ಸೀಸನ್ ಆರಂಭವಾದಾಗಿನಿಂದ ಪ್ರಯೋಜನ ಪಡೆಯುತ್ತಿದೆ.

ಭಾರತಕ್ಕೆ ಎಂಟ್ರಿ ಕೊಟ್ಟಾಗಿನಿಂದ MG ಮೋಟಾರ್ ವೇಗವಾಗಿ ತನ್ನ ಸಾಮ್ರಾಜ್ಯವನ್ನು ವಿಸ್ತರಿಸುತ್ತಿದೆ. ಸದ್ಯ ಎಂಜಿ ಮೋಟಾರ್ ಇಂಡಿಯಾದ ಡೀಲರ್‌ಶಿಪ್ ಜಾಲವು 270 ನಗರಗಳಲ್ಲಿ 543 ಕ್ಕೂ ಹೆಚ್ಚು ಔಟ್‌ಲೆಟ್‌ಗಳಿಗೆ ವಿಸ್ತರಿಸಿದೆ. ಪ್ರವೇಶ ಮತ್ತು ಮಾರಾಟದ ನಂತರದ ಸೇವೆ ಎರಡನ್ನೂ ಸುಧಾರಿಸಿದೆ ಎಂದು ಹೇಳಬಹುದು.
MG ಮೋಟಾರ್ ಬಗ್ಗೆ: ಇದು ಶಾಂಘೈ ಮೂಲದ ಚೀನಾದ ಸರ್ಕಾರಿ ಸ್ವಾಮ್ಯದ ಕಾರು ತಯಾರಕ SAIC ಮೋಟಾರ್ ಒಡೆತನದ ಆಟೋಮೋಟಿವ್ ಕಂಪನಿಯಾಗಿದೆ. ಇದು 1924 ರಲ್ಲಿ ಯುನೈಟೆಡ್ ಕಿಂಗ್‌ಡಮ್‌ನ ಆಕ್ಸ್‌ಫರ್ಡ್‌ನಲ್ಲಿ ಸ್ಥಾಪನೆಯಾದ ಬ್ರಿಟಿಷ್ MG ಬ್ರಾಂಡ್ ಆಗಿತ್ತು. ಆದರೆ ಚೀನಾದ SAIC ಮೋಟಾರ್ ಡಿಸೆಂಬರ್ 2007 ರಲ್ಲಿ ನಾನ್‌ಜಿಂಗ್ ಆಟೋಮೊಬೈಲ್ ಕಾರ್ಪೊರೇಷನ್ (NAC) ಎಂಜಿ ಮೋಟಾರ್ ಅನ್ನು ಸ್ವಾಧೀನಪಡಿಸಿಕೊಳ್ಳುವ ಮೂಲಕ ಅದರ ನಿಯಂತ್ರಣವನ್ನು ಪಡೆದುಕೊಂಡಿತು.
ಪ್ರಸ್ತುತ, MG SAIC ನ ಪ್ರಯಾಣಿಕ ವಾಹನ ಶಾಖೆಯೊಳಗೆ ಒಂದು ವಿಭಾಗವಾಗಿ ಕಾರ್ಯನಿರ್ವಹಿಸುತ್ತಿದೆ. ಇನ್ನು ಭಾರತದ ವಿಷಯಕ್ಕೆ ಬಂದರೆ ಎಂಜಿ 2019 ರಲ್ಲಿ ಲಗ್ಗೆಯಿಟ್ಟಿತು. 2023 ರಿಂದ ಇದು ಮುಂಬೈ ಮೂಲದ ಭಾರತೀಯ ಬಹುರಾಷ್ಟ್ರೀಯ ಸಂಘಟಿತ ಕಂಪನಿ ಆಗಿರುವ ಜೆಎಸ್‌ಡಬ್ಲ್ಯೂ ಗ್ರೂಪ್ ಜೊತೆಗೆ ಒಪ್ಪಂದ ಮಾಡಿಕೊಂಡಿದ್ದು, ಪಾಲುದಾರಿಕೆಯಡಿ ಕಾರುಗಳನ್ನು ಮಾರಾಟ ಮಾಡುತ್ತಿದೆ.


Click it and Unblock the Notifications








