Mahindra Thar: ಬಲಿಷ್ಠ ಮಹೀಂದ್ರಾ ಥಾರ್ 3-ಡೋರ್ ಫೇಸ್‌ಲಿಫ್ಟ್ ಬಿಡುಗಡೆ.. ಬೆಲೆಯೂ ಅಗ್ಗ, ವಿಶೇಷತೆಗಳೇನು?
ಭಾರತದ ಮಾರುಕಟ್ಟೆಯಲ್ಲಿಂದು 2025ರ ಹೊಚ್ಚ ಹೊಸ ಮಹೀಂದ್ರಾ ಥಾರ್ 3-ಡೋರ್ ಫೇಸ್‌ಲಿಫ್ಟ್ (Mahindra Thar 3-Door Facelift) ಕಾರು ಅದ್ದೂರಿಯಾಗಿ ಬಿಡುಗಡೆಗೊಂಡಿದೆ. ಇದೊಂದು ಆಫ್-ರೋಡ್ ಎಸ್‌ಯುವಿಯಾಗಿದೆ. ವಿನ್ಯಾಸ ಹಾಗೂ ವೈಶಿಷ್ಟ್ಯದಲ್ಲಿ ಸಾಕಷ್ಟು ಬದಲಾವಣೆಗಳನ್ನು ಪಡೆದುಕೊಂಡಿದ್ದು, ಹಲವು ನವೀಕರಣಗಳಿಗೂ ಸಾಕ್ಷಿಯಾಗಿದೆ. ಕೈಗೆಟುಕುವ ಬೆಲೆಯಲ್ಲಿಯೂ ಮಾರಾಟಕ್ಕೆ ಬಂದಿದೆ. ಬನ್ನಿ, ಈ ನೂತನ ಕಾರಿನ ದರವೆಷ್ಟು.. ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ.
ಹೊಸ ಮಹೀಂದ್ರಾ ಥಾರ್ 3-ಡೋರ್ ಫೇಸ್‌ಲಿಫ್ಟ್ ಎಸ್‌ಯುವಿ, ಕನಿಷ್ಠ ರೂ.9.99 ಲಕ್ಷ ಹಾಗೂ ಗರಿಷ್ಠ ರೂ.16.25 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಒಳಗೊಂಡಿದೆ. ಎಎಕ್ಸ್‌ಟಿ (AXT) ಹಾಗೂ ಎಲ್ಎಕ್ಸ್‌ಟಿ (LXT) ಎಂಬ ಎರಡು ಆಕರ್ಷಕವಾದ ರೂಪಾಂತರಗಳ (ವೇರಿಯೆಂಟ್) ಆಯ್ಕೆಯಲ್ಲಿಯೂ ಲಭ್ಯವಿದೆ.

ಇದು ತುಂಬಾ ಅಚ್ಚುಕಟ್ಟಾದ ವಿನ್ಯಾಸವನ್ನು ಹೊಂದಿದೆ. ಹೊಸದಾದ ಫ್ರಂಟ್ ಗ್ರಿಲ್, ಐಕಾನಿಕ್ ಡುಯಲ್ ಟೋನ್ ಬಂಪರ್, ಅತ್ಯುತ್ತಮವಾದ ಎಲ್ಇಡಿ ಹೆಡ್‌ಲ್ಯಾಂಪ್‌ಗಳು, ಎಲ್ಇಡಿ ಡಿಆರ್‌ಎಲ್‌ಗಳು ಹಾಗೂ 18 ಇಂಚಿನ ಅಲಾಯ್ ವೀಲ್‌ಗಳನ್ನು ಒಳಗೊಂಡಿದೆ. ಬ್ಯಾಟಲ್‌ಶಿಪ್ ಗ್ರೇ, ಟ್ಯಾಂಗೋ ರೆಡ್, ಡೀಪ್ ಫಾರೆಸ್ಟ್, ಗ್ಯಾಲಕ್ಸಿ ಗ್ರೇ, ಸ್ಟೀಲ್ತ್ ಬ್ಲ್ಯಾಕ್ ಹಾಗೂ ಎವರೆಸ್ಟ್ ವೈಟ್ ಎಂಬ ಬಣ್ಣಗಳ ಆಯ್ಕೆಯಲ್ಲಿಯೂ ಸಿಗುತ್ತದೆ.
ಈ ಕಾರಿನ ಪವರ್‌ಟ್ರೇನ್‌ನಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. ಹಳೆಯ 'ಥಾರ್'ನಂತೆಯೇ 1.5-ಲೀಟರ್ ಡೀಸೆಲ್, 2.2-ಲೀಟರ್ ಡೀಸೆಲ್ ಮತ್ತು 2.0-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್‌ನ್ನು ಒಳಗೊಂಡಿದೆ. ರೂಪಾಂತರಗಳಿಗೆ ಅನುಗುಣವಾಗಿ 6-ಸ್ಪೀಡ್ ಮ್ಯಾನುವಲ್ ಹಾಗೂ 6-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಪಡೆದಿದೆ. 15 ಕಿ.ಮೀ ವರೆಗೆ ಮೈಲೇಜ್ ನೀಡಬಲ್ಲದು. 57 ಲೀಟರ್ ಸಾಮರ್ಥ್ಯದ ಫ್ಯುಯೆಲ್ ಟ್ಯಾಂಕ್‍ನ್ನು ಹೊಂದಿದೆ.

ನೂತನ ಮಹೀಂದ್ರಾ ಥಾರ್ 3-ಡೋರ್ ಫೇಸ್‌ಲಿಫ್ಟ್ ಎಸ್‌ಯುವಿಯು 3,985 ಎಂಎಂ ಉದ್ದ, 1,820 ಎಂಎಂ ಅಗಲ ಮತ್ತು 1,855 ಎಂಎಂ ಎತ್ತರವಿದೆ. 226 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹಾಗೂ 2,450 ಎಂಎಂ ವೀಲ್‌ಬೇಸ್‌ನ್ನು ಒಳಗೊಂಡಿದೆ. 4 ಆಸನಗಳನ್ನು ಪಡೆದಿದ್ದು, ಪ್ರಯಾಣಿಕರು ಸುಲಭವಾಗಿ ಓಡಾಟ ನಡೆಸಬಹುದು.
ಇದರ ಕ್ಯಾಬಿನ್ ವಿನ್ಯಾಸವು ಉತ್ತಮವಾಗಿದೆ. ಬ್ಲ್ಯಾಕ್ ಥೀಮ್ ಡ್ಯಾಶ್‌ಬೋರ್ಡ್‌ನ್ನು ಹೊಂದಿದೆ. ವಿನೂತನವಾಗಿರುವ ಸ್ಟೀರಿಂಗ್ ವೀಲ್, ಹೆಚ್‌ಡಿ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ (26.03 ಸೆಂಮೀ), ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, 4 ಸ್ಪೀಕರ್‌ಗಳು + 2 ಟ್ವೀಟರ್‌ಗಳು, ಸ್ಲೈಡಿಂಗ್ ಆರ್ಮ್‌ರೆಸ್ಟ್, ರೇರ್ ವಾಶ್ & ವೈಪರ್, ರಿಮೋಟ್ ಕೀಲೆಸ್ ಎಂಟ್ರಿ, ರೇರ್ ಎಸಿ ವೆಂಟ್‌ಗಳು ಹಾಗೂ ರೇರ್ ಪಾರ್ಕಿಂಗ್ ಕ್ಯಾಮೆರಾ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಈ ಕಾರು ಸುರಕ್ಷತೆಗೂ ಹೆಸರುವಾಸಿಯಾಗಿದ್ದು, ಪ್ರಯಾಣಿಕರಿಗೆ ಗರಿಷ್ಠ ಮಟ್ಟದಲ್ಲಿ ರಕ್ಷಣೆ ಒದಗಿಸುತ್ತದೆ. ಅದಕ್ಕಾಗಿ ಡುಯಲ್ ಏರ್‌ಬ್ಯಾಗ್‌ಗಳು, ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ಇಎಸ್‌ಪಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ), ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), ಕ್ರೂಸ್ ಕಂಟ್ರೋಲ್, ಹಿಲ್ ಹೋಲ್ಡ್ & ಹಿಲ್ ಡಿಸೆಂಟ್ ಕಂಟ್ರೋಲ್‌ನ್ನು ಹೊಂದಿದೆ.
ಮಹೀಂದ್ರಾ ಥಾರ್ ರಾಕ್ಸ್ (Mahindra Thar Roxx) ಕೂಡ ಖರೀದಿ ಲಭ್ಯ:
ಇದು ರೂ. 12.25 ಲಕ್ಷದಿಂದ ರೂ.22.06 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. 2.0-ಲೀಟರ್ 4-ಸಿಲಿಂಡರ್ ಎಂಸ್ಟಾಲಿಯನ್ ಟರ್ಬೊ ಪೆಟ್ರೋಲ್ ಎಂಜಿನ್ ಹಾಗೂ 2-ಲೀಟರ್ 4-ಸಿಲಿಂಡರ್ ಎಂಹಾಕ್ ಡೀಸೆಲ್ ಎಂಜಿನ್‌ನ್ನು ಒಳಗೊಂಡಿದೆ. 12.4 ರಿಂದ 15.2 ಕಿ.ಮೀ ವರೆಗೆ ಮೈಲೇಜ್ ನೀಡುತ್ತದೆ.
ನೂತನ 'ಥಾರ್ ರಾಕ್ಸ್' 5-ಡೋರ್‌ನ್ನು ಹೊಂದಿದೆ. ಈ ಕಾರಿನಲ್ಲಿ 5 ಮಂದಿ ಆರಾಮದಾಯಕವಾಗಿ ಸಂಚಾರ ಮಾಡಬಹುದು. 10.25 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಸನ್‌ರೂಫ್ ಮತ್ತು ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಸುರಕ್ಷತೆಗಾಗಿ 6 ಏರ್‌ಬ್ಯಾಗ್, ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್) ಹಾಗೂ 4 ಡಿಸ್ಕ್ ಬ್ರೇಕ್‌ಗಳನ್ನು ಪಡೆದಿದೆ.


Click it and Unblock the Notifications








