Renault Duster: ರಗಡ್ ಲುಕ್‌ನಲ್ಲಿ ರೆನಾಲ್ಟ್ ಡಸ್ಟರ್ ರೀ-ಎಂಟ್ರಿ! ಬರೀ 1 ತಿಂಗಳು ಸುಮ್ಮನಿರಿ.. ಬೆಲೆ ಎಷ್ಟು, ಮೈಲೇಜ್ ಏನು?
ಹೊಸ ತಲೆಮಾರಿನ ರೆನಾಲ್ಟ್ ಡಸ್ಟರ್ (Renault Duster) ಎಸ್‌ಯುವಿ, ಬರುವಿಕೆಗೆ ದಿನಗಣನೆ ಶುರುವಾಗಿದೆ. ಗ್ರಾಹಕರು ಕೂಡ ಚಾತಕ ಪಕ್ಷಿಯಂತೆ ತುದಿಗಾಲಿನಲ್ಲಿ ನಿಂತುಕೊಂಡು ಕಾಯಿತ್ತಿದ್ದಾರೆ. 2012ರಲ್ಲಿ ಬಿಡುಗಡೆಗೊಂಡಿದ್ದ ಈ ಕಾರು, 2022ರವರೆಗೆ ದೇಶೀಯ ರಸ್ತೆಯಲ್ಲಿ ಅಬ್ಬರಿಸಿತ್ತು. ಆದರೆ, ಕಾರಣಾಂತರದಿಂದ ಮಾರಾಟವನ್ನು ಸ್ಥಗಿತಗೊಳಿಸಲಾಯಿತು. ಈಗ ಜನವರಿ 26ರ ಗಣರಾಜ್ಯೋತ್ಸವದಂದು ಪುನಃ ಪರಿಚಯಿಸಲಾಗುತ್ತದೆ. ಅದಕ್ಕಾಗಿ ಕಂಪನಿಯು ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ ಎಂದು ವರದಿಯಾಗಿದೆ.
ನೂತನ 'ಡಸ್ಟರ್' ಕಾರು ಸ್ಪರ್ಧಾತ್ಮಕ ಬೆಲೆಯಲ್ಲಿ ಗ್ರಾಹಕರ ಖರೀದಿಗೆ ದೊರೆಯುವ ನಿರೀಕ್ಷೆಯಿದೆ. ಕನಿಷ್ಠ ರೂ.12 ಲಕ್ಷ ಗರಿಷ್ಠ ರೂ.18 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿರಬಹುದು ಎಂದು ಅಂದಾಜಿಸಲಾಗಿದೆ. ಇದಕ್ಕೆ ಸಾಲು - ಸಾಲು ಎದುರಾಳಿಗಳು ಇರಲಿವೆ. ಹ್ಯುಂಡೈ ಕ್ರೆಟಾ, ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ, ಕಿಯಾ ಸೆಲ್ಟೋಸ್, ಟಾಟಾ ನೆಕ್ಸಾನ್, ಮಾರುತಿ ಸುಜುಕಿ ವಿಕ್ಟೋರಿಸ್, ಹೋಂಡಾ ಎಲಿವೇಟ್ ಹಾಗೂ ಮಾರುತಿ ಸುಜುಕಿ ಬ್ರೆಝಾಗಳು ಪ್ರಬಲವಾದ ಪ್ರತಿಸ್ಪರ್ಧಿಯಾಗಲಿವೆ.

ಇದು ಅತ್ಯಾಧುನಿಕವಾದ ವಿನ್ಯಾಸವನ್ನು ಹೊಂದಿರಲಿದೆ. ಈಗಾಗಲೇ ಪರೀಕ್ಷಾರ್ಥ ಸಂಚಾರ ನಡೆಸುವಾಗಲೂ ಕಾಣಿಸಿಕೊಂಡಿದೆ. ಈ ಎಸ್‌ಯುವಿಯು ತುಂಬಾ ಚೆನ್ನಾಗಿರುವ ಎಲ್ಇಡಿ ಹೆಡ್‌ಲೈಟ್‌ಗಳು, ಎಲ್ಇಡಿ ಡಿಆರ್‌ಎಲ್‌ಗಳು, ಸರ್ಕ್ಯುಲರ್ ಫಾಗ್ ಲೈಟ್‌ಗಳು, 'ವಿ' ಆಕಾರಕ್ಕೆ ಹೋಲಿಕೆಯಾಬಲ್ಲ ಟೈಲ್ ಲ್ಯಾಂಪ್‌ಗಳು, ಥೀಕ್ ವೀಲ್ ಆರ್ಚ್ ಕ್ಲಾಡಿಂಗ್, ಶಾರ್ಕ್ ಫಿನ್ ಆಂಟೆನಾ ಹಾಗೂ ರೂಫ್ ರೈಲ್‌ಗಳು ಒಳಗೊಂಡಿರಲಿದೆ ಎಂದು ಹೇಳಲಾಗಿದೆ. ಜೊತೆಗೆ ನಾನಾ ಬಗೆಯ ಬಣ್ಣಗಳೊಂದಿಗೂ ಸಿಗಬಹುದು.
ಹೊಸ 'ರೆನಾಲ್ಟ್ ಡಸ್ಟರ್' ಸಾಕಷ್ಟು ದೊಡ್ಡದಾಗಿಯೂ ಇರಲಿದೆ. 4,360 ಎಂಎಂ ಉದ್ದ, 1,822 ಎಂಎಂ ಅಗಲ ಹಾಗೂ 1695 ಎಂಎಂ ಎತ್ತರವಿರಲಿದೆ. ಹಾಗೆಯೇ 205 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಮತ್ತು 2,673 ಎಂಎಂ ವೀಲ್‌ಬೇಸ್‌ನ್ನು ಒಳಗೊಂಡಿರುವ ಸಾಧ್ಯತೆಯಿದೆ.
ಈ ಕಾರು ಬೆಲೆಗೆ ತಕ್ಕಂತೆ ಬಲಿಷ್ಠವಾದ ಪವರ್‌ಟ್ರೇನ್‌ನ್ನು ಪಡೆದಿರಲಿದೆ. 1.0-ಲೀಟರ್ ಪೆಟ್ರೋಲ್, 1.3-ಲೀಟರ್ ಟರ್ಬೊ ಪೆಟ್ರೋಲ್ ಮತ್ತು 1.5-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್‌ನ್ನು ಒಳಗೊಂಡಿರಬಹುದು ಎನ್ನಲಾಗಿದೆ. 5-ಸ್ಪೀಡ್ ಮ್ಯಾನುವಲ್/ ಆಟೋಮೆಟಿಕ್ ಮತ್ತು ಸಿವಿಟಿ ಗೇರ್‌ಬಾಕ್ಸ್‌ನ್ನು ಹೊಂದಿರಲಿದೆ. 24 ಕಿಲೋಮೀಟರ್‌ವರೆಗೆ ಮೈಲೇಜ್‌ನ್ನು ಕೊಡುವ ನಿರೀಕ್ಷೆಯಿದೆ.
ಇದರ ಕ್ಯಾಬಿನ್ ವಿನ್ಯಾಸವು ಹೆಚ್ಚು ಅತ್ಯಾಕರ್ಷಕವಾಗಿರಲಿದೆ. ರೂಪಾಂತರಗಳನ್ನು ಅವಲಂಭಿಸಿ, 5 ಅಥವಾ 7 ಆಸನ ಆಯ್ಕೆ ವ್ಯವಸ್ಥೆಯನ್ನು ಹೊಂದಿರಲಿದ್ದು, ಪ್ರಯಾಣಿಕರು ಸುಲಭವಾಗಿ ಓಡಾಟ ನಡೆಸಬಹುದು. ಹೆಚ್ಚಿನ ಲಗೇಜ್ ಕೊಂಡೊಯ್ಯಲು 472 ಲೀಟರ್‌ನಷ್ಟು ಬೂಟ್ ಸ್ಪೇಸ್‌ನ್ನು ಪಡೆದಿರಬಹುದು ಎಂದು ಹೇಳಲಾಗಿದೆ. 10 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡಿಜಿಟಲ್ ಇನ್ಸ್ಟ್ರುಮೆಂಟ್ ಸ್ಕ್ರೀನ್, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು ಹಾಗೂ ರೇರ್ - ಎಸಿ ವೆಂಟ್‌ನಂತಹ ವೈಶಿಷ್ಟ್ಯಗಳನ್ನು ಒಳಗೊಂಡಿರುವ ಸಾಧ್ಯತೆಯಿದೆ.
ನೂತನ 'ಡಸ್ಟರ್' ಎಸ್‌ಯುವಿ ಪ್ರಯಾಣಿಕರಿಗೆ ಗರಿಷ್ಠ ರಕ್ಷಣೆಯನ್ನು ಒದಗಿಸಬಲ್ಲದು. ಸುರಕ್ಷತೆಯ ಸಲುವಾಗಿ 6-ಏರ್‌ಬ್ಯಾಗ್‌ಗಳು, ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್), ಎಬಿಎಸ್ (ಆಂಟಿ - ಲಾಕ್ ಬ್ರೇಕಿಂಗ್ ಸಿಸ್ಟಮ್), ಇಎಸ್‍ಪಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ), ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), ರೇರ್ ಪಾರ್ಕಿಂಗ್ ಸೆನ್ಸರ್‌ಗಳು, 360 ಡಿಗ್ರಿ ಕ್ಯಾಮೆರಾ ಹಾಗೂ ಆಲ್ ವೀಲ್ ಡಿಸ್ಕ್ ಬ್ರೇಕ್‌ಗಳನ್ನು ಪಡೆದಿರಬಹುದು ಎಂದು ಹೇಳಲಾಗಿದೆ.
ಒಟ್ಟಾರೆಯಾಗಿ, ಹೊಸ ತಲೆಮಾರಿನ 'ರೆನಾಲ್ಟ್ ಡಸ್ಟರ್' ಕಾರು ಬಿಡುಗಡೆಯಾಗಲಿದೆ ಎಂಬ ವಿಚಾರವು ದೆಶೀಯ ಗ್ರಾಹಕರಿಗೆ ಹೆಚ್ಚಿನ ಖುಷಿ ನೀಡಿದೆ. ಇದು ಉತ್ತಮವಾದ ವಿನ್ಯಾಸವನ್ನು ಹೊಂದಿರಲಿದ್ದು, ಭರಪೂರ ವೈಶಿಷ್ಟ್ಯಗಳಿಗೂ ಸಾಕ್ಷಿಯಾಗಿರಲಿದೆ. ಈ ಕಾರು ಮಾರಾಟಕ್ಕೆ ಬಂದ ಮೇಲೆ ಖರೀದಿದಾರರಿಂದ ಯಾವ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗುತ್ತದೆ ಎಂಬುದನ್ನು ಕಾದುನೋಡಬೇಕಾಗಿದೆ.


Click it and Unblock the Notifications








