ಬೆಲೆಯೂ ಅಗ್ಗ.. 20 Km ಮೈಲೇಜ್, ಈ ಹೊಸ SUVಗೆ ಗುರುಬಲ.. ಜನ ಮುಗಿಬಿದ್ದು ಖರೀದಿ!
ಫ್ರಾನ್ಸ್ ಮೂಲದ 'ರೆನಾಲ್ಟ್' ಪ್ರಮುಖ ವಾಹನ ತಯಾರಕ ಕಂಪನಿಯಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ವಿವಿಧ ಕಾರುಗಳನ್ನು ಯಶಸ್ವಿಯಾಗಿ ಮಾರಾಟಗೊಳಿಸುತ್ತಿದೆ. ಆಗಸ್ಟ್‌ನಲ್ಲಿ ನವೀನ ರೂಪದ 'ಕೈಗರ್' ಎಸ್‌ಯುವಿಯನ್ನು ಬಿಡುಗಡೆಗೊಳಿಸಿತ್ತು. ಸದ್ಯ, ಈ ಕಾರಿಗೆ ಗುರುಬಲ ಬಂದಿದೆ. ಉತ್ತಮ ಸಂಖ್ಯೆಯಲ್ಲಿಯೂ ಮಾರಾಟವಾಗುತ್ತಿದೆ. ಅದಕ್ಕೆ ಸಾಕ್ಷಿ ಎಂಬಂತೆ ನವೆಂಬರ್‌ನಲ್ಲಿ ಒಟ್ಟು 1,151 ಯುನಿಟ್‌ಗಳನ್ನು ಗ್ರಾಹಕರಿಗೆ ವಿತರಣೆ ಮಾಡಲಾಗಿದೆ. 2024ರ ಇದೇ ಅವಧಿಯಲ್ಲಿ 779 ಯುನಿಟ್‌ಗಳನ್ನು ಮಾರಲಾಗಿತ್ತು. ಈ ಅಂಕಿ - ಅಂಶವನ್ನು ಲೆಕ್ಕ ಹಾಕಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ 47.75% ಬೆಳವಣಿಗೆಯಾಗಿದೆ.
ಇದೇ ನವೆಂಬರ್ ತಿಂಗಳಲ್ಲಿ 'ರೆನಾಲ್ಟ್ ಕೈಗರ್' ಮಾರಾಟವು ಹೆಚ್ಚಳಗೊಳ್ಳಲು ಹಲವು ಕಾರಣಗಳಿವೆ. ಬಹುಮುಖ್ಯವಾಗಿ, ಇದೊಂದು ಎಸ್‌ಯುವಿಯಾಗಿದೆ. ಆದರೂ ಕೈಗೆಟುಕುವ ಬೆಲೆಯಲ್ಲಿ ಗ್ರಾಹಕರ ಖರೀದಿಗೆ ಲಭ್ಯವಿದೆ. ಜೊತೆಗೆ ಅತ್ಯುತ್ತಮವಾದ ವೈಶಿಷ್ಟ್ಯಗಳನ್ನು ಪಡೆದಿದೆ. ಹೀಗಾಗಿ ಉತ್ತಮ ಸಂಖ್ಯೆಯಲ್ಲಿ ಮಾರಾಟವಾಗುತ್ತಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.

ಹೊಚ್ಚ ಹೊಸ ರೆನಾಲ್ಟ್ ಕೈಗರ್ (Renault Kiger) ಎಸ್‌ಯುವಿ, ರೂಪಾಂತರಗಳಿಗೆ ಅನುಗುಣವಾಗಿ ರೂ.5.76 ಲಕ್ಷದಿಂದ ರೂ.10.34 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. ತುಂಬಾ ಚೆನ್ನಾಗಿರುವ ವಿನ್ಯಾಸವನ್ನು ಒಳಗೊಂಡಿದೆ. ಎಲ್ಇಡಿ ಹೆಡ್‌ಲೈಟ್‌ಗಳು, ಎಲ್ಇಡಿ ಡಿಆರ್‌ಎಲ್‌ಗಳು, ಎಲ್ಇಡಿ ಟೈಲ್ ಲೈಟ್‌ಗಳು & ಅಲಾಯ್ ವೀಲ್‌ಗಳನ್ನು ಪಡೆದಿದೆ.
ಇದು ಹೆಚ್ಚು ವಿಶಾಲವಾಗಿದೆ. 3,991 ಎಂಎಂ ಉದ್ದ, 1,750 ಎಂಎಂ ಅಗಲ ಹಾಗೂ 1,605 ಎಂಎಂ ಎತ್ತರವಿದೆ. 205 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹಾಗೂ 2,500 ಎಂಎಂ ವೀಲ್‌ಬೇಸ್‌ನ್ನು ಹೊಂದಿದೆ. ರೇಡಿಯಂಟ್ ರೆಡ್, ಕ್ಯಾಸ್ಪಿಯನ್ ಬ್ಲೂ, ಐಸ್ ಕೂಲ್ ವೈಟ್, ಮೂನ್‌ಲೈಟ್ ಸಿಲ್ವರ್ ಹಾಗೂ ಪರ್ಲ್ ವೈಟ್ ಎಂಬ ಬಣ್ಣಗಳ ಆಯ್ಕೆಯಲ್ಲಿಯೂ ಸಿಗುತ್ತದೆ.

ನೂತನ 'ರೆನಾಲ್ಟ್ ಕೈಗರ್' 5 ಆಸನಗಳನ್ನು ಒಳಗೊಂಡಿದೆ. ಪ್ರಯಾಣಿಕರು ಆರಾಮದಾಯಕವಾಗಿ ಕುಳಿತುಕೊಂಡು ದೂರದ ಊರುಗಳಿಗೆ ಸಂಚರಿಸಬಹುದು. ವಾರಾಂತ್ಯ ಹಾಗೂ ರಜಾ ದಿನಗಳಲ್ಲಿ ಪ್ರವಾಸಕ್ಕೆ ಹೋಗುವಾಗ ಹೆಚ್ಚಿನ ಲಗೇಜ್ ಕೊಂಡೊಯ್ಯಲು 455 ಲೀಟರ್ ಸಾಮರ್ಥ್ಯದ ಬೂಟ್ ಸ್ಪೇಸ್‌ನ್ನು ಹೊಂದಿದೆ.
ಈ ಕಾರು ಸಾಕಷ್ಟು ಬಲಿಷ್ಠವಾದ ಪವರ್‌ಟ್ರೇನ್‌ನ್ನು ಪಡೆದಿದೆ. 1.0-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಹಾಗೂ 1.0-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಒಳಗೊಂಡಿದೆ. 5-ಸ್ಪೀಡ್ ಮ್ಯಾನುವಲ್, 5-ಸ್ಪೀಡ್ ಆಟೋಮೆಟಿಕ್ ಹಾಗೂ ಸಿವಿಟಿ ಗೇರ್‌ಬಾಕ್ಸ್‌ನ್ನು ತನ್ನದಾಗಿಸಿಕೊಂಡಿದೆ. 19 ರಿಂದ 20.38 ಕಿಲೋಮೀಟರ್‌ವರೆಗೆ ಮೈಲೇಜ್ ಕೊಡುತ್ತದೆ. 180 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಒಳಗೊಂಡಿದೆ. ಬರೀ 10.20 ಸೆಕೆಂಡುಗಳಲ್ಲಿ 0 ರಿಂದ 100 ಕೆಎಂಪಿಹೆಚ್ ವೇಗವನ್ನು ಹೊಂದಲಿದೆ.

ಇದರ ಕ್ಯಾಬಿನ್ ವಿನ್ಯಾಸವು ಅತ್ಯುತ್ತಮವಾಗಿದ್ದು, ನೋಡುಗರ ಕಣ್ಣು ಕುಕ್ಕುವಂತಿದೆ. 8 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, ಫುಲ್ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್, ವೈರ್‌ಲೆಸ್ ಫೋನ್ ಚಾರ್ಜರ್ ಹಾಗೂ ರೇರ್ ಎಸಿ ವೆಂಟ್‌ಗಳು ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆದಿದೆ.
ಹೊಸ 'ರೆನಾಲ್ಟ್ ಕೈಗರ್' ಸುರಕ್ಷತೆಗೂ ಹೆಸರುವಾಸಿಯಾಗಿದೆ. ಪ್ರಯಾಣಿಕರಿಗೆ ಗರಿಷ್ಠ ಮಟ್ಟದಲ್ಲಿ ರಕ್ಷಣೆಯನ್ನು ಒದಗಿಸಬಲ್ಲದು. ಅದಕ್ಕಾಗಿ 6 ಏರ್‌ಬ್ಯಾಗ್‌ಗಳು, ಇಎಸ್‌ಸಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), ರೇರ್ ಪಾರ್ಕಿಂಗ್ ಸೆನ್ಸರ್‌ಗಳು, ಟ್ರಾಕ್ಷನ್ ಕಂಟ್ರೋಲ್ ಹಾಗೂ 360 ಡಿಗ್ರಿ ಕ್ಯಾಮೆರಾವನ್ನು ಒಳಗೊಂಡಿದೆ. ಇದಕ್ಕೆ ಹಲವು ಎದುರಾಳಿಗಳಿವೆ. ನಿಸ್ಸಾನ್ ಮ್ಯಾಗ್ನೈಟ್, ಟಾಟಾ ಪಂಚ್, ಹ್ಯುಂಡೈ ವೆನ್ಯೂ ಮತ್ತು ಕಿಯಾ ಸೋನೆಟ್ ಕಾರುಗಳು ಪ್ರಬಲವಾದ ಪ್ರತಿಸ್ಪರ್ಧಿಯಾಗಿವೆ.


Click it and Unblock the Notifications








