ಕೊನೆಗೂ ಸುಜಕಿಯ ಮೊದಲ ಎಲೆಕ್ಟ್ರಿಕ್ ಕಾರು ಬಿಡುಗಡೆ: ಬೆಲೆಯೆಷ್ಟು, ವಿಶೇಷತೆಗಳೇನು?
ಸುಜುಕಿಯ ಮೊದಲ ಎಲೆಕ್ಟ್ರಿಕ್ ಕಾರು ಕೊನೆಗೆ ಬಿಡುಗಡೆಯಾಗಿದೆ. ಆದರೆ ಭಾರತದಲ್ಲಿ ಅಲ್ಲ, ಬದಲಿಗೆ ಈ ಕಾರನ್ನು ಮೊದಲು ಯುನೈಟೆಡ್ ಕಿಂಗ್‌ಡಂನಲ್ಲಿ ಬಿಡುಗಡೆ ಮಾಡಲಾಗಿದೆ. ಸುಜುಕಿ ಕಂಪನಿಯು 49 ಕಿಲೋವ್ಯಾಟ್ ಬ್ಯಾಟರಿ ಪ್ಯಾಕ್ ಹೊಂದಿರುವ ಎಂಟ್ರಿ ಲೆವೆಲ್ ವೇರಿಯೆಂಟ್‌ಗೆ 29,999 ಪೌಂಡ್ (ಸುಮಾರು 35 ಲಕ್ಷ ರೂ.) ಹಾಗೂ 61 ಕಿಲೋವ್ಯಾಟ್ ಬ್ಯಾಟರಿ ಪ್ಯಾಕ್ ಮತ್ತು ಆಲ್-ವ್ಹೀಲ್ ಡ್ರೈವ್ ಪವರ್ ಟ್ರೇನ್ ಹೊಂದಿರುವ ಅಲ್ಟ್ರಾ ಆಲ್ ಗ್ರಿಪ್ ಟಾಪ್-ಎಂಡ್ ವೇರಿಯೆಂಟ್‌ಗೆ £ 37,799 (ಸುಮಾರು 44 ಲಕ್ಷ ರೂ.) ಬೆಲೆಯಿದೆ.
ಇನ್ನೇನು ಭಾರತದಲ್ಲೂ ಈ ಕಾರನ್ನು ಬಿಡುಗಡೆ ಮಾಡಲು ಕಂಪನಿ ತಯಾರಿ ನಡೆಸುತ್ತಿದೆ. ಆದರೆ ಲಂಡನ್‌ನಲ್ಲಿ ಬಿಡುಗಡೆಯಾಗಿರುವ ಸುಜುಕಿ ಎಲೆಕ್ಟ್ರಿಕ್ ಕಾರಿನ ಬೆಲೆಯು ಸದ್ಯ ಭಾರತದ ಬೆಲೆಯ ಬಗ್ಗೆ ಊಹಾಪೋಹಗಳನ್ನು ಹುಟ್ಟುಹಾಕಿದೆ. ಈ ಹಿಂದೆ ಭಾರತದಲ್ಲಿ ಈ ಕಾರು ಬಿಡುಗಡೆಯಾದರೆ 20 ಲಕ್ಷದೊಳಗೆ ಬೆಲೆ ಇರಬಹುದು ಎಂದು ಗಟ್ಟಿಯಾಗಿ ನಂಬಲಾಗಿತ್ತು. ಆದರೆ ಈಗ ಸುಜುಕಿ ಇ-ವಿಟಾರಾ ಯುಕೆಯಲ್ಲಿ ಹೆಚ್ಚು ದುಬಾರಿಯಾಗಿರುವುದು ನಿರೀಕ್ಷೆಗಳನ್ನು ಹುಸಿಗೊಳಿಸುವಂತೆ ತೋರುತ್ತಿದೆ.

ಆದರೂ ಭಾರತೀಯ ಮಾರುಕಟ್ಟೆಯಲ್ಲಿ ಇದು ಕಡಿಮೆ ಬೆಲೆಗೆ ಸಿಗಲಿದೆ ಎಂದು ಹೇಳುತ್ತಾರೆ ತಜ್ಞರು. ಏಕೆ ಗೊತ್ತಾ? ಹೊಸ ಮುಂಬರಲಿರುವ ಮಾರುತಿ ಸುಜುಕಿ ಇ-ವಿಟಾರಾ ಭಾರತದ ಗುಜರಾತ್‌ನ ಬೆಚರಾಜಿ ಬಳಿಯ ಹನ್ಸಲ್ ಪುರದ ಸುಜುಕಿ ಮೋಟಾರ್ ಗುಜರಾತ್ ಘಟಕದಲ್ಲಿ ತಯಾರಿಸಲಾಗುವುದು. ಈ ಸ್ಥಾವರದಿಂದಲೇ ಈ ಕಾರನ್ನು ವಿವಿಧ ದೇಶಗಳಿಗೆ ರಫ್ತು ಮಾಡಲಾಗುವುದು.
ಪ್ರಸ್ತುತ ಯುಕೆಗೂ ಸಹ ಎಲ್ಲಾ ಕಾರುಗಳನ್ನು ಭಾರತದ ಹನ್ಸಲ್ ಪುರದ ಸುಜುಕಿ ಮೋಟಾರ್ ಘಟಕದಿಂದಲೇ ರಫ್ತು ಮಾಡಲಾಗುತ್ತಿದೆ. ಸ್ಥಳೀಯವಾಗಿ ಈ ಕಾರು ನಿರ್ಮಾಣವಾಗುವುದರಿಂದ ಕಾರಿನ ಬೆಲೆಯು ಯುಕೆ ಮಾರುಕಟ್ಟೆಗಿಂತ ಭಾರತದಲ್ಲಿ ಕಡಿಮೆ ಇರಲಿದೆ. ಭಾರತದಲ್ಲಿ ಈ ಎಲೆಕ್ಟ್ರಿಕ್ ವಾಹನವು 2025 ರ ಅಂತ್ಯದ ವೇಳೆಗೆ ಬಿಡುಗಡೆಯಾಗುವ ಸಾಧ್ಯತೆಯಿದೆ.

ಯುಕೆ-ಸ್ಪೆಕ್ ಇ-ವಿಟಾರಾ ವಿಶೇಷತೆಗಳು: ಯುಕೆನಲ್ಲಿ ಮೋಷನ್ ಮತ್ತು ಅಲ್ಟ್ರಾ ಎಂಬ ಎರಡು ಟ್ರಿಮ್‌ಗಳಲ್ಲಿ ಬಿಡುಗಡೆಯಾಗಿರುವ ಈ ಕಾರು, ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳನ್ನು ಹೊಂದಿದೆ. ಒಂದು 49 ಕಿಲೋವ್ಯಾಟ್ ಬ್ಯಾಟರಿ ಬೇಸ್ ಮೋಷನ್ ಟ್ರಿಮ್ ನಲ್ಲಿ ಮಾತ್ರ ಲಭ್ಯವಿದ್ದು, ಇದನ್ನು ಒಮ್ಮೆ ಚಾರ್ಜ್ ಮಾಡಿದರೆ ಬರೋಬ್ಬರಿ 346 ಕಿ.ಮೀ ವರೆಗೆ ಓಡಿಸಬಹುದು.
ದೊಡ್ಡ 61 ಕಿಲೋವ್ಯಾಟ್ ಬ್ಯಾಟರಿ, ಸಿಂಗಲ್-ಮೋಟರ್, ಟೂ-ವ್ಹೀಲ್-ಡ್ರೈವ್ ಆವೃತ್ತಿಯನ್ನು ಒಮ್ಮೆ ಚಾರ್ಜ್ ಮಾಡಿದರೆ 428 ಕಿ.ಮೀ ರೇಂಜ್ ನೀಡುತ್ತದೆ. ಹಾಗೇಯೇ ಡ್ಯುಯಲ್-ಮೋಟರ್, ಆಲ್-ವೀಲ್-ಡ್ರೈವ್ (ಎಡಬ್ಲ್ಯುಡಿ) ಸೆಟಪ್ ಹೊಂದಿರುವ ಕಾರು ಒಮ್ಮೆ ಚಾರ್ಜ್ ಮಾಡಿದರೆ 412 ಕಿ.ಮೀ ರೇಂಜ್ ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

ಮೋಟಾರ್ ಪವರ್ ಬಗ್ಗೆ ಹೇಳುವುದಾದರೆ, 49 ಕಿಲೋವ್ಯಾಟ್ ಮೋಟಾರ್‌ನೊಂದಿಗೆ 142 ಬಿಹೆಚ್ ಪವರ್ ಹಾಗೂ 192.5 ಎನ್‌ಎಂ ಟಾರ್ಕ್ ಉತ್ಪಾದಿಸಿದರೆ, ಮತ್ತೊಂದು 61 ಕಿಲೋವ್ಯಾಟ್ ಮೋಟಾರ್ ಮಾದರಿಯು 172 ಬಿಹೆಚ್ ಪವರ್ ಉತ್ಪಾದಿಸುತ್ತದೆ. ಡ್ಯುಯಲ್ ಮೋಟರ್ ಎಡಬ್ಲ್ಯುಡಿ ಮಾದರಿಯು 178 ಬಿಹೆಚ್ ಪವರ್ ಮತ್ತು 300 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.
ಭಾರತದಲ್ಲಿ?: ಭಾರತೀಯ ಸ್ಪೆಕ್ ಇ-ವಿಟಾರಾ 61 ಕಿಲೋವ್ಯಾಟ್ ಬ್ಯಾಟರಿ ಪ್ಯಾಕ್ ದೃಢಪಟ್ಟಿದೆ. ಆಕರ್ಷಣೆಯನ್ನು ಹೆಚ್ಚಿಸಲು 49 ಕಿಲೋವ್ಯಾಟ್ ಆಯ್ಕೆಯನ್ನು ಸಹ ಪರಿಚಯಿಸಬಹುದು. ಮಾರುತಿ ಸುಜುಕಿ ಇ-ವಿಟಾರ ಭಾರತದಲ್ಲಿ ಬಿಡುಗಡೆಯಾದ ನಂತರ ಹ್ಯುಂಡೈ ಕ್ರೆಟಾ ಇವಿ, ಎಂಜಿ ಝಡ್‌ಎಸ್ ಇವಿ, ಟಾಟಾ ಹ್ಯಾರಿಯರ್ ಇವಿ, ಮಹೀಂದ್ರಾ ಬಿಇ.6 ಮತ್ತು ಬಿವೈಡಿ ಅಟ್ಟೋ 3 ಕಾರುಗಳಿಗೆ ಪೈಪೋಟಿ ನೀಡಲಿದೆ.


Click it and Unblock the Notifications








