Tata: ಬಹುನಿರೀಕ್ಷಿತ ಟಾಟಾ ಕರ್ವ್ ಡಾರ್ಕ್ ಎಡಿಷನ್ ಕಾರು ಬಿಡುಗಡೆ.. ಬೆಲೆ ಎಷ್ಟು, ವಿಶೇಷತೆಗಳೇನು?
ಟಾಟಾ ಕರ್ವ್ (Tata Curvv) ಪ್ರಖ್ಯಾತ ಕೂಪೆ ಎಸ್‌ಯುವಿಯಾಗಿದೆ. ಇದು ಗ್ರಾಹಕರ ಮೆಚ್ಚಿನ ಕಾರಾಗಿ ಹೊರಹೊಮ್ಮಿದ್ದು, ಕಳೆದ ತಿಂಗಳು (ಮಾರ್ಚ್ - 2025) ಬರೋಬ್ಬರಿ 3,785 ಯುನಿಟ್ ಕರ್ವ್ ಎಸ್‌ಯುವಿಗಳನ್ನು ಮಾರಾಟಗೊಳಿಸಲಾಗಿದೆ. ಸದ್ಯ, ಈ ಕಾರಿನ 'ಡಾರ್ಕ್ ಎಡಿಷನ್'ನ್ನು ಅದ್ದೂರಿಯಾಗಿ ಬಿಡುಗಡೆಗೊಳಿಸಲಾಗಿದೆ. ನೂತನ ಎಸ್‌ಯುವಿ ಇಂಧನ (ಪೆಟ್ರೋಲ್/ಡೀಸೆಲ್) ಹಾಗೂ ಎಲೆಕ್ಟ್ರಿಕ್ ಚಾಲಿತ ಪವರ್‌ಟ್ರೇನ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ. ಬನ್ನಿ.. ಈ ಕಾರಿನ ಬೆಲೆ ಹಾಗೂ ವಿಶೇಷತೆಗಳ ಕುರಿತಂತೆ ಸಂಪೂರ್ಣವಾದ ಮಾಹಿತಿಗಳನ್ನು ತಿಳಿಯೋಣ.
ಟಾಟಾ ಕರ್ವ್ ಡಾರ್ಕ್ ಎಡಿಷನ್ (Tata Curvv Dark Edition) ಕಾರಿನ ಇಂಧನ ಚಾಲಿತ ಮಾಡೆಲ್, ರೂ.16.49 ಲಕ್ಷದಿಂದ ರೂ.19.52 ಲಕ್ಷ ಬೆಲೆಯನ್ನು ಹೊಂದಿದ್ದು, ಸಾಮಾನ್ಯ ಕರ್ವ್ ಎಸ್‌ಯುವಿಯ ಅಕಂಪ್ಲಿಶ್ಡ್ ರೂಪಾಂತರವನ್ನು (ವೇರಿಯೆಂಟ್) ಆಧರಿಸಿದೆ. ಅದೇ ರೀತಿಯಲ್ಲಿ ಎಲೆಕ್ಟ್ರಿಕ್ ಚಾಲಿತ ಮಾಡೆಲ್, ರೂ.22.24 ಲಕ್ಷ ದರವನ್ನು (ಎಕ್ಸ್-ಶೋರೂಂ) ಪಡೆದಿದ್ದು, ಎಂಪವರ್ಡ್ ರೂಪಾಂತರದ ತದ್ರೂಪಿನಂತೆಯೇ ಇದೆ.

ನೂತನ ಟಾಟಾ ಕರ್ವ್ ಡಾರ್ಕ್ ಎಡಿಷನ್ ಎಸ್‌ಯುವಿಯ ವಿನ್ಯಾಸದಲ್ಲಿ ಯಾವುದೇ ಪ್ರಮುಖ ಬದಲಾವಣಿಗಳನ್ನು ಮಾಡಲಾಗಿಲ್ಲ. ಅದರ ಹೊರತಾಗಿ ಈ ಕಾರು, ಸಂಪೂರ್ಣವಾಗಿ ಕಪ್ಪು (ಬ್ಲ್ಯಾಕ್) ಬಣ್ಣದ ಆಯ್ಕೆಯನ್ನು ಪಡೆದಿದೆ. ಮುಂಭಾಗದ (ಫ್ರಂಟ್) ಫೆಂಡರ್‌ಗಳಲ್ಲಿ 'ಡಾರ್ಕ್' ಬ್ಯಾಡ್ಜ್‌ಗಳನ್ನು ಒಳಗೊಂಡಿದೆ. ವಿಶೇಷವೆಂಬಂತೆ ಒಳಭಾಗವು ಸಹ ಕಪ್ಪು ಬಣ್ಣದ ಥೀಮ್‌ನ್ನೇ ಆಧರಿಸಿದೆ.
ಪ್ರಸ್ತುತ ಗ್ರಾಹಕರ ಖರೀದಿಗೆ ಲಭ್ಯವಿರುವ ಇಂಧನ ಚಾಲಿತ ಟಾಟಾ ಕರ್ವ್ ಕಾರು, 3 ಪವರ್‌ಟ್ರೇನ್ ಆಯ್ಕೆಯನ್ನು ಹೊಂದಿದೆ. ಆದರೆ, 'ಡಾರ್ಕ್ ಎಡಿಷನ್'ನ್ನು 2 ಪವರ್‌ಟ್ರೇನ್‌ನೊಂದಿಗೆ ಮಾತ್ರ ಮಾರಾಟ ಮಾಡಲಾಗುತ್ತದೆ. ಇದರ 1.2-ಟಿಜಿಡಿಐ ಟರ್ಬೊ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಪಡೆದಿದೆ. 125 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 225 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುತ್ತದೆ. 6-ಸ್ಪೀಡ್ ಮ್ಯಾನುವಲ್/ 7-ಸ್ಪೀಡ್ ಡಿಸಿಟಿ (ಡುಯಲ್-ಕ್ಲಚ್ ಟ್ರಾಸ್ಮಿಷನ್) ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ.

ಮತ್ತೊಂದು 1.5-ಲೀಟರ್ ಡೀಸೆಲ್ ಎಂಜಿನ್‌ನ್ನು ಹೊಂದಿದೆ. 118 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 260 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಜೊತೆಗೆ 6-ಸ್ಪೀಡ್ ಮ್ಯಾನುವಲ್/ 7-ಸ್ಪೀಡ್ ಡಿಸಿಟಿ (ಡುಯಲ್-ಕ್ಲಚ್ ಟ್ರಾಸ್ಮಿಷನ್) ಗೇರ್‌ಬಾಕ್ಸ್ ಆಯ್ಕೆಯನ್ನು ಪಡೆದಿದೆ. ಈ ಕಾರು 17.88 ರಿಂದ 19.25 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ.
ಎಲೆಕ್ಟ್ರಿಕ್ ಚಾಲಿತ ಟಾಟಾ ಕರ್ವ್ ಡಾರ್ಕ್ ಎಡಿಷನ್, 55 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ನ್ನು ಒಳಗೊಂಡಿದೆ. ಸಂಪೂರ್ಣ ಚಾರ್ಜ್‌ನಲ್ಲಿ 502 ಕಿಲೋಮೀಟರ್ ರೇಂಜ್ ನೀಡುತ್ತದೆ. ಇದರಲ್ಲಿ ಬಳಕೆ ಮಾಡಿರುವ ಎಲೆಕ್ಟ್ರಿಕ್ ಮೋಟಾರ್, 167 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 215 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸುತ್ತದೆ.

ಟಾಟಾ ಕರ್ವ್ ಡಾರ್ಕ್ ಎಡಿಷನ್ ಎಸ್‌ಯುವಿಯು ಸಾಮಾನ್ಯ ಕರ್ವ್ ಕಾರಿನಂತೆಯೇ ಬಹುತೇಕ ಎಲ್ಲ ವೈಶಿಷ್ಟ್ಯಗಳನ್ನು ಹೊಂದಿದೆ. 12.3-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 10.25-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಏರ್ ಪ್ಯೂರಿಫೈಯರ್, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್, ವೈರ್‌ಲೆಸ್ ಫೋನ್ ಚಾರ್ಜರ್, 9-ಸ್ಪೀಕರ್ ಜೆಬಿಎಲ್-ಸೌಂಡ್ ಸಿಸ್ಟಮ್ ಮತ್ತು ಸನ್‌ರೂಫ್‌ನ್ನು ಒಳಗೊಂಡಿದೆ. ಇದರಲ್ಲಿಯೂ 5 ಆಸನಗಳಿದ್ದು, ಪ್ರಯಾಣಿಕರು ಸುಲಭವಾಗಿ ಓಡಾಟ ನಡೆಸಬಹುದು.
ಈ ಟಾಟಾ ಕರ್ವ್ ಡಾರ್ಕ್ ಎಡಿಷನ್ ಕಾರು ಪ್ರಯಾಣಿಕರ ರಕ್ಷಣೆಗಾಗಿ ಗರಿಷ್ಠ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ. ಬಹುಮುಖ್ಯವಾಗಿ 6 - ಏರ್‌ಬ್ಯಾಗ್, ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್), ಇಎಸ್‌ಸಿ (ಎಲೆಕ್ಟ್ರಾನಿಕ್ - ಸ್ಟೆಬಿಲಿಟಿ ಕಂಟ್ರೋಲ್), ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ಹಾಗೂ 360 ಡಿಗ್ರಿ ಕ್ಯಾಮೆರಾವನ್ನು ಒಳಗೊಂಡಿದೆ.


Click it and Unblock the Notifications