ರಸ್ತೆ ಮೇಲಿನ ಅಂಬಾರಿಯಂತಿದೆ.. ದೇಶದ ಮೊದಲ Tesla Model Y ಎಸ್‌ಯುವಿ ಕುರಿತ ಪ್ರಮುಖಾಂಶಗಳಿವು, ಯಾರು ಹೇಳಲ್ಲ!
ವಿಶ್ವದ ಶ್ರೀಮಂತ ವ್ಯಕ್ತಿ ಎಲಾನ್ ಮಸ್ಕ್ (Elon Musk) ಒಡೆತನದ ಟೆಸ್ಲಾ (Tesla), ಭಾರತದ ಕಾರು ಮಾರುಕಟ್ಟೆಗೆ ಅದ್ದೂರಿಯಾಗಿ ಪಾದಾರ್ಪಣೆ ಮಾಡಿದೆ. ಇಂದು ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿರುವ ಮೇಕರ್ ಮ್ಯಾಕ್ಸಿಟಿ ಮಾಲ್‌ನಲ್ಲಿ, ದೇಶದ ಮೊಟ್ಟ ಮೊದಲ ಕಾರು ಶೋರೂಂನ್ನು ತೆರೆದಿದೆ. ಪ್ರಪ್ರಥಮ ಕಾರಾಗಿ ಮಾಡೆಲ್ ವೈ (Model Y) ಎಲೆಕ್ಟ್ರಿಕ್ ಎಸ್‌ಯುವಿಯನ್ನು ಮಾರಾಟಕ್ಕೆ ತಂದಿದೆ. ನಾವಿಲ್ಲಿ ಈ ಕಾರಿನ ಬೆಲೆ ಹಾಗೂ ವಿಶೇಷತೆಗಳ ಕುರಿತಂತೆ ಪ್ರಮುಖಾಂಶಗಳು ಏನೆಂಬುದನ್ನು ತಿಳಿಸಿಕೊಟ್ಟಿದ್ದೇವೆ.
ಬೆಲೆ & ರೂಪಾಂತರಗಳು (Price & Variants):
ನೂತನ ಟೆಸ್ಲಾ ಮಾಡೆಲ್ ವೈ (Tesla Model Y) ಎಲೆಕ್ಟ್ರಿಕ್ ಎಸ್‌ಯುವಿ, ಎರಡು ರೂಪಾಂತರಗಳ (ವೇರಿಯೆಂಟ್) ಆಯ್ಕೆಯಲ್ಲಿ ಮಾರಾಟಕ್ಕೆ ಬಂದಿದೆ. ಸ್ಟ್ಯಾಂಡರ್ಡ್ ಆರ್‌ಡಬ್ಲ್ಯೂಡಿ (ರೇರ್ ವೀಲ್ ಡ್ರೈವ್) ರೂಪಾಂತರ, ರೂ.59.89 ಲಕ್ಷ ಹಾಗೂ ಲಾಂಗ್-ರೇಂಜ್ ಆರ್‌ಡಬ್ಲ್ಯೂಡಿ (ರೇರ್ ವೀಲ್ ಡ್ರೈವ್) ರೂಪಾಂತರ, ರೂ.67.89 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. ಸದ್ಯ ಬುಕ್ಕಿಂಗ್ ಶುರುವಾಗಿದ್ದು, ಇದೇ ವರ್ಷದ 3ನೇ ತ್ರೈಮಾಸಿಕದಲ್ಲಿ ವಿತರಣೆಗಳು ಆರಂಭವಾಗಲಿವೆ.

ವಿನ್ಯಾಸ & ಬಣ್ಣಗಳು (Design & Colors):
ಈ ಕಾರು ನೋಡುಗರ ಕಣ್ಣು ಕುಕ್ಕುವಂತಹ ವಿನ್ಯಾಸವನ್ನು ಒಳಗೊಂಡಿದೆ. ಆಕರ್ಷಕವಾಗಿರುವ ಎಲ್ಇಡಿ ಹೆಡ್‌ಲೈಟ್‌ಗಳು, ಲೈಟ್ ಬಾರ್‌ನಿಂದ ಕನೆಕ್ಟ್ ಆಗಿರುವ ಎಲ್ಇಡಿ ಡಿಆರ್‌ಎಲ್‌ಗಳು, ಉತ್ತಮವಾಗಿರುವ ಟೈಲ್‌ಲ್ಯಾಂಪ್‌ಗಳು, ಫ್ಲಶ್ ಡೋರ್ ಹ್ಯಾಂಡಲ್‌ಗಳು ಹಾಗೂ 19-ಇಂಚಿನ ಅಲಾಯ್ ವೀಲ್‌ಗಳನ್ನು ಒಳಗೊಂಡಿದೆ. ಜೊತೆಗೆ ಪರ್ಲ್ ವೈಟ್, ಸ್ಟೆಲ್ತ್ ಗ್ರೇ, ಡೀಪ್ ಬ್ಲೂ ಮೆಟಾಲಿಕ್, ಅಲ್ಟ್ರಾ ರೆಡ್, ಕ್ವಿಕ್‌ಸಿಲ್ವರ್ ಹಾಗೂ ಡೈಮಂಡ್ ಬ್ಲ್ಯಾಕ್ ಎಂಬ ಬಣ್ಣಗಳೊಂದಿಗೂ ದೊರೆಯುತ್ತದೆ. ಇದರ ಕ್ಯಾಬಿನ್ ವಿನ್ಯಾಸವು ಅಷ್ಟೇ ಅಚ್ಚುಕಟ್ಟಾಗಿದೆ.
ಆಸನ ಆಯ್ಕೆ & ಬೂಟ್ ಸ್ಪೇಸ್ (Seating Capacity & Boot Space):
ಇದರಲ್ಲಿ ವಿಶಾಲವಾಗಿರುವ 5 ಆಸನಗಳಿದ್ದು, ಪ್ರಯಾಣಿಕರು ಆರಾಮದಾಯಕವಾಗಿ ಕುಳಿತುಕೊಂಡು ದೂರದ ಊರುಗಳಿಗೆ ಓಡಾಟ ನಡೆಸಬಹುದು. ವಾರಾಂತ್ಯ ಹಾಗೂ ರಜಾದಿನಗಳಲ್ಲಿ ಪ್ರವಾಸಕ್ಕೆ ಹೋಗುವ ಸಂದರ್ಭದಲ್ಲಿ ಹೆಚ್ಚಿನ ಲಗೇಜ್ ಸಾಗಿಸಲು ದೊಡ್ಡ ಗಾತ್ರದ 854 ಲೀಟರ್‌ನಷ್ಟು ಬೂಟ್ ಸ್ಪೇಸ್‌ನ್ನು ಒಳಗೊಂಡಿದೆ.

ಕಾರ್ಯಕ್ಷಮತೆ (Performance):
ಈ ಕಾರು ಹೆಚ್ಚು ಶಕ್ತಿಯುತವಾದ ಪವರ್‌ಟ್ರೇನ್ ಆಯ್ಕೆಯನ್ನು ಒಳಗೊಂಡಿದೆ. 60 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಮತ್ತು 75 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ನ್ನು ಪಡೆದಿದೆ. ಭರ್ತಿ ಚಾರ್ಜ್‌ನಲ್ಲಿ 500 ರಿಂದ 622 ಕಿಲೋಮೀಟರ್‌ವರೆಗೂ ರೇಂಜ್ (ಮೈಲೇಜ್) ಕೊಡುತ್ತದೆ. 200 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಒಳಗೊಂಡಿದೆ. 6.9 ಸೆಕೆಂಡುಗಳಲ್ಲಿ 0 ರಿಂದ 100 ಕೆಎಂಪಿಹೆಚ್ ವೇಗವನ್ನು ಪಡೆಯಲಿದೆ.
ಸುತ್ತಳತೆ (Dimensions):
ಮಾಡೆಲ್ ವೈ ಕಾರು 4,797 ಎಂಎಂ ಉದ್ದ, 1,982 ಎಂಎಂ ಅಗಲ ಮತ್ತು 1,624 ಎಂಎಂ ಎತ್ತರವು ಇದೆ. ಜೊತೆಗೆ 167 ಎಂಎಂ ಗ್ರೌಂಡ್ ಕ್ಲಿಯರೆನ್ಸ್ 2,890 ವೀಲ್‌ಬೇಸ್ ಆಯ್ಕೆಯನ್ನು ಒಳಗೊಂಡಿದೆ.

ವೈಶಿಷ್ಟ್ಯಗಳು (Features):
ಹೊಸ ಟೆಸ್ಲಾ ಮಾಡೆಲ್ ವೈ ಎಲೆಕ್ಟ್ರಿಕ್ ಎಸ್‌ಯುವಿ, ಹತ್ತಾರು ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಹೊಂದಿದೆ. 15.4-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಆಟೋ ಪೈಲಟ್, ಓವರ್-ದಿ-ಏರ್ ಅಪ್ಡೇಟ್, ವೆಂಟಿಲೇಟೆಡ್ & ಹೀಟೆಡ್ ಫ್ರಂಟ್ ಸೀಟ್‌ಗಳು, 9-ಸ್ಪೀಕರ್ ಸೌಂಡ್ ಸಿಸ್ಟಮ್, ಆಂಬಿಯೆಂಟ್ ಲೈಟಿಂಗ್, ಏರ್ ಪ್ಯೂರಿಫೈಯರ್, ವೈರ್‌ಲೆಸ್ ಫೋನ್ ಚಾರ್ಜರ್ ಹಾಗೂ ಕನೆಕ್ಟ್ಡ್ ಕಾರ್ ಟೆಕ್‌ನ್ನು ಒಳಗೊಂಡಿದೆ.
ಸುರಕ್ಷತಾ ವೈಶಿಷ್ಟ್ಯಗಳು (Safety Features):
ನೂತನ ಟೆಸ್ಲಾ ಮಾಡೆಲ್ ವೈ ಎಲೆಕ್ಟ್ರಿಕ್ ಕಾರು ಸುರಕ್ಷತೆಗೂ ಹೆಸರುವಾಸಿಯಾಗಿದ್ದು, ಪ್ರಯಾಣಿಕರಿಗೆ ಗರಿಷ್ಠ ಮಟ್ಟದಲ್ಲಿ ರಕ್ಷಣೆ ಒದಗಿಸುತ್ತದೆ. ಮಲ್ಟಿಪಲ್ ಏರ್‌ಬ್ಯಾಗ್‌ಗಳು, ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್), ಡ್ಯಾಶ್‌ಕ್ಯಾಮ್ ಹಾಗೂ 360 ಡಿಗ್ರಿ ಕ್ಯಾಮೆರಾದಂತಹ ಹತ್ತಾರು ರಕ್ಷಣಾತ್ಮಕ ವೈಶಿಷ್ಟ್ಯಗಳನ್ನು ಹೊಂದಿದೆ.


Click it and Unblock the Notifications








