Tesla: ಟೆಸ್ಲಾ ಹೊಸ ಕಾರು ಬಿಡುಗಡೆ: ಅಮೆರಿಕಾ, ಚೀನಾ, ಜರ್ಮನಿಯನ್ನು ಹಿಂದಿಕ್ಕಿದ ಭಾರತ!
ಟೆಸ್ಲಾ ಮಾಡೆಲ್ ವೈ ಅನ್ನು ಭಾರತದಲ್ಲಿ ಬಿಡುಗಡೆ ಮಾಡಲಾಗಿದ್ದು, ಎರಡು ವೇರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದೆ. ಮೂಲ ರಿಯರ್-ವೀಲ್ ಡ್ರೈವ್ (RWD) ವೇರಿಯೆಂಟ್ ಬೆಲೆ ರೂ. 59.89 ಲಕ್ಷ (ಎಕ್ಸ್-ಶೋರೂಂ) ದಿಂದ ಪ್ರಾರಂಭವಾಗುತ್ತದೆ. ಲಾಂಗ್ ರೇಂಜ್ RWD ವೇರಿಯೆಂಟ್ ಬೆಲೆ ರೂ. 67.89 ಲಕ್ಷ (ಎಕ್ಸ್-ಶೋರೂಂ) ಇದೆ. ಬುಕಿಂಗ್‌ಗಳು ತೆರೆದಿದ್ದು, ರೂ. 22,220 ಟೋಕನ್ ಮೊತ್ತದೊಂದಿಗೆ ಬುಕ್ ಮಾಡಿಕೊಳ್ಳಬಹುದು. ಆರಂಭಿಕ ಮಾಡಲ್‌ಗಳನ್ನು ಚೀನಾದಲ್ಲಿರುವ ಟೆಸ್ಲಾದ ಶಾಂಘೈ ಗಿಗಾಫ್ಯಾಕ್ಟರಿಯಿಂದ ಕಂಪ್ಲೀಟ್ ಬಿಲ್ಟ್ ಯೂನಿಟ್‌ಗಳಾಗಿ (CBUs) ಭಾರತಕ್ಕೆ ಆಮದು ಮಾಡಿಕೊಳ್ಳಲಾಗುತ್ತದೆ.
ಗ್ರಾಹಕರು RWD ವೇರಿಯೆಂಟ್‌ಗಾಗಿ 60 kWh ಅಥವಾ 75 kWh ಬ್ಯಾಟರಿ ಪ್ಯಾಕ್‌ಗಳ ನಡುವೆ ಆಯ್ಕೆ ಮಾಡಿಕೊಳ್ಳಬಹುದು. 60 kWh ಆವೃತ್ತಿಯು ಒಮ್ಮೆ ಚಾರ್ಜ್ ಮಾಡಿದರೆ ಸುಮಾರು 500 ಕಿ.ಮೀ WLTP ರೇಂಜ್ ನೀಡುತ್ತದೆ. ಲಾಂಗ್ ರೇಂಜ್ ವೇರಿಯೆಂಟ್ ಒಂದೇ ಚಾರ್ಜ್‌ನಲ್ಲಿ 622 ಕಿ.ಮೀ ಓಡಬಲ್ಲದು ಎಂದು ಕಂಪನಿ ತಿಳಿಸಿದೆ.

ಬೆಲೆಯಲ್ಲಿ ಅಮೆರಿಕಾ, ಚೀನಾವನ್ನು ಮೀರಿಸಿದ ಭಾರತ
ಭಾರತದ ಹೆಚ್ಚಿನ ಆಮದು ಸುಂಕಗಳು ಮತ್ತು ಲಾಜಿಸ್ಟಿಕ್ಸ್ ವೆಚ್ಚಗಳಿಂದಾಗಿ, ದೇಶದಲ್ಲಿ ಮಾಡೆಲ್ ವೈ'ನ ಆರಂಭಿಕ ಬೆಲೆ ಅಮೆರಿಕಾ, ಚೀನಾ ಹಾಗೂ ಜರ್ಮನಿಗಿಂತ ಗಮನಾರ್ಹವಾಗಿ ಹೆಚ್ಚಾಗಿದೆ. ಭಾರತದಲ್ಲಿ ಆನ್-ರೋಡ್ ಬೆಲೆಯು ಅಂದಾಜು 61.07 ಲಕ್ಷ ರೂ. ಹಾಗೂ ಲಾಂಗ್-ರೇಂಜ್ ಆವೃತ್ತಿಯು 69.15 ಲಕ್ಷ ಬೆಲೆಯಲ್ಲಿ ಸಿಗಬಹುದಾಗಿದೆ. ಬ್ರ್ಯಾಂಡ್‌ನ ಅಧಿಕೃತ ವೆಬ್‌ಸೈಟ್ ಪ್ರಕಾರ, ಶೇ 18 GST ಸೇರಿದಂತೆ 50,000 ರೂ."ಆಡಳಿತ ಮತ್ತು ಸೇವಾ ಶುಲ್ಕ" ಸೇರಿದೆ.
ಮಾಡೆಲ್ ವೈ ಕಾರಿನ ಆರಂಭಿಕ ಬೆಲೆ ಅಮೆರಿಕದಲ್ಲಿ $44,990 (ಸುಮಾರು ರೂ. 38.63 ಲಕ್ಷ), ಚೀನಾದಲ್ಲಿ 263,500 ಯುವಾನ್ (ಸುಮಾರು ರೂ. 31.57 ಲಕ್ಷ) ಮತ್ತು ಜರ್ಮನಿಯಲ್ಲಿ 45,970 ಯುರೋಗಳು (ಸುಮಾರು ರೂ. 46.09 ಲಕ್ಷ) ಇದೆ. ವಿದೇಶಗಳಲ್ಲಿ ಇಷ್ಟು ಕಡಿಮೆ ಬೆಲೆಗೆ ಲಭ್ಯವಿರುವ ಕಾರು ಭಾರತದಲ್ಲಿ ಹೆಚ್ಚಿನ ಆಮದು ಸುಂಕಗಳು ಮತ್ತು ಲಾಜಿಸ್ಟಿಕ್ಸ್ ವೆಚ್ಚಗಳಿಂದಾಗಿ ದುಬಾರಿಯಾಗಿದೆ.

ಮಾಡಲ್ ವೈ ವಿಶೇಷತೆಗಳು
ಭಾರತದಲ್ಲಿ ಟೆಸ್ಲಾ ಮಾಡೆಲ್ Y ಅನ್ನು ಎರಡು ವೇರಿಯೆಂಟ್‌ಗಳು, 7 ಬಣ್ಣದ ಆಯ್ಕೆಗಳು ಮತ್ತು 2 ಇಂಟೀರಿಯರ್ ಟ್ರಿಮ್‌ಗಳೊಂದಿಗೆ ನೀಡಲಾಗುವುದು. ಎರಡೂ ವೇರಿಯೆಂಟ್‌ಗಳು 15.4 - ಇಂಚಿನ ಇನ್ಫೋಟೈನ್‌ಮೆಂಟ್ ಡಿಸ್ಪ್ಲೇ (ಮುಂಭಾಗ), 8-ಇಂಚಿನ ಹಿಂಭಾಗದ ಡಿಸ್ಪ್ಲೆ, ಸೆಂಟ್ರಲ್ ಟಚ್‌ಸ್ಕ್ರೀನ್, ಪ್ರೀಮಿಯಂ ಸೌಂಡ್, ಪವರ್ಡ್ ಜೊತೆಗೆ ವೆಂಟಿಲೇಟೆಡ್ ಮುಂಭಾಗದ ಸೀಟುಗಳನ್ನು ಹೊಂದಿದೆ.
ಇವಿಷ್ಟೆ ಅಲ್ಲದೆ ಡ್ರೈವರ್ ಅಸಿಸ್ಟ್ ಸಿಸ್ಟಮ್ ಮತ್ತು ಓವರ್-ದಿ-ಏರ್ ನವೀಕರಣಗಳು ಸೇರಿದಂತೆ ಸುಧಾರಿತ ವೈಶಿಷ್ಟ್ಯಗಳೊಂದಿಗೆ ಸಜ್ಜುಗೊಂಡಿವೆ. ಹಾಗೆಯೇ ಸ್ಟೀರಿಂಗ್ ಕಾಲಮ್, ಡ್ಯುಯಲ್ - ಜೋನ್ ಕ್ಲೈಮೆಟ್ ಕಂಟ್ರೋಲ್, 19 - ಇಂಚಿನ ಕ್ರಾಸ್‌ಫ್ಲೋ ವೀಲ್‌ಗಳು, ಸ್ಟೇಬಲ್ ಗ್ಲಾಸ್ ರೂಫ್ ಮತ್ತು ಪವರ್ಡ್ ಹಿಂಭಾಗದ ಲಿಫ್ಟ್‌ಗೇಟ್‌ನೊಂದಿಗೆ ಬರುತ್ತದೆ.

ಟೆಸ್ಲಾ ಕಂಪನಿಯು ಮುಂಬೈ ಬಳಿಕ, ನವದೆಹಲಿಯಲ್ಲಿಯೂ ನೂತನ ಶೋರೂಂ ಅನ್ನು ತೆರೆಯಲು ಸಜ್ಜಾಗಿದೆ. ನಂತರ ಬೆಂಗಳೂರು, ಹೈದರಾಬಾದ್, ಕೋಲ್ಕತ್ತಾ ಹಾಗೂ ಚೆನ್ನೈ ಮಹಾನಗರಗಳಲ್ಲಿ ಶೋರೂಂನ್ನು ಆರಂಭ ಮಾಡಲಿದೆ ಎನ್ನಲಾಗಿದೆ. ಮಾಡೆಲ್ ವೈ ನಂತರ ಮಾಡೆಲ್ ಎಸ್, ಮಾಡೆಲ್ 3, ಮಾಡೆಲ್ ಎಕ್ಸ್ ಮತ್ತು ಸೈಬರ್‌ಟ್ರಕ್ ಒಳಗೊಂಡಂತೆ ಹತ್ತಾರು ಕಾರುಗಳನ್ನು ಭಾರತಕ್ಕೆ ತರುವ ನಿರೀಕ್ಷೆಯಿದೆ.
ಭಾರತದಲ್ಲಿ ಹಲವು ಅಡತಡೆಗಳ ನಂತರ ಕೊನೆಗೂ ಅಂತರಾಷ್ಟ್ರೀಯ ಎಲೆಕ್ಟ್ರಿಕ್ ಕಾರು ತಯಾರಕ ಕಂಪನಿಯಾದ 'ಟೆಸ್ಲಾ' (Tesla), ದೇಶಕ್ಕೆ ಲಗ್ಗೆಯಿಟ್ಟಿದೆ. ಈ ಶೋರೂಂ ಟೆಸ್ಲಾ ಕಂಪನಿಗೆ ಒಂದು ಪ್ರಮುಖ ಮೈಲಿಗಲ್ಲಾಗಿದೆ. ಆದರೆ ಈ ಕಾರು ನಿರೀಕ್ಷೆಗಳನ್ನು ಮೀರಿ ಹೆಚ್ಚಿನ ಬೆಲೆಯಲ್ಲಿ ಬಿಡುಗಡೆಯಾಗಿರುವುದು ಒಂದು ಹಿನ್ನಡೆಯಾಗಿದೆ. ಎಷ್ಟರ ಮಟ್ಟಿಗೆ ಟೆಸ್ಲಾ ಭಾರತದಲ್ಲಿ ಯಶಸ್ಸು ಕಾಣಲಿದೆ ಎಂಬುದನ್ನು ಕಾದುನೋಡಬೇಕಿದೆ.


Click it and Unblock the Notifications








