Tesla: ಎಲಾನ್ ಮಸ್ಕ್ ಮಾಲೀಕತ್ವದ ಈ ಜನಪ್ರಿಯ ಕಾರಿಗೆ 5-ಸ್ಟಾರ್ ಸೇಫ್ಟಿ ರೇಟಿಂಗ್ ಘೋಷಣೆ! ಬೆಲೆ ಎಷ್ಟು.. ವಿಶೇಷತೆಗಳೇನು?
ವಿಶ್ವದ ನಂಬರ್ 1 ಶ್ರೀಮಂತ ವ್ಯಕ್ತಿ ಎಲಾನ್ ಮಸ್ಕ್ (Elon Musk) ಮಾಲೀಕತ್ವದ ಟೆಸ್ಲಾ (Tesla) ಪ್ರಮುಖ ಕಾರು ತಯಾರಕ ಕಂಪನಿಯಾಗಿದೆ. ಭಾರತದ ಮಾರುಕಟ್ಟೆಯಲ್ಲಿ ಮಾಡೆಲ್ ವೈ (Model Y) ಎಲೆಕ್ಟ್ರಿಕ್ ಎಸ್‌ಯುವಿಯನ್ನು ಯಶಸ್ವಿಯಾಗಿ ಮಾರಾಟಗೊಳಿಸಲಾಗುತ್ತಿದೆ. ಇದೇ ಸೆಪ್ಟೆಂಬರ್ ತಿಂಗಳಲ್ಲಿ ವಿತರಣೆಯನ್ನು ಶುರು ಮಾಡಲಾಗಿತ್ತು. ಸದ್ಯ, ಯೂರೋಪ್‌ನಲ್ಲಿ ಮಾರಾಟವಾಗುವ ವಾಹನಗಳಿಗೆ ಸುರಕ್ಷತಾ ಪರೀಕ್ಷೆ ನಡೆಸುವ ಸಂಸ್ಥೆ ಯುರೋ ಎನ್‌ಸಿಎಪಿ (Euro NCAP), 'ಟೆಸ್ಲಾ ಮಾಡೆಲ್ ವೈ'ನ್ನು ಅತ್ಯಂತ ಸುರಕ್ಷಿತ ಕಾರೆಂದು ನಿರ್ಣಯಿಸಿದೆ.
ಈ ಕಾರನ್ನು ವಿವಿಧ ಪರೀಕ್ಷೆಗೆ ಒಳಪಡಿಸಲಾಗಿತ್ತು. ಅಲ್ಲಿ ವಯಸ್ಕರ ರಕ್ಷಣೆ ವಿಭಾಗದಲ್ಲಿ (Adult Occupant Protection) 40ಕ್ಕೆ 36.5 (ಶೇಕಡ 91%) ಅಂಕಗಳನ್ನು ಗಳಿಸಿದೆ. ಅದೇ ರೀತಿಯಲ್ಲಿ ಮಕ್ಕಳ ರಕ್ಷಣೆ ವಿಭಾಗದಲ್ಲಿ (Child Occupant Protection) 49ಕ್ಕೆ 46 (ಶೇಕಡ 93%) ಅಂಕಗಳನ್ನು ಪಡೆದಿದೆ. ಇದರೊಂದಿಗೆ 5-ಸ್ಟಾರ್ ಸೇಫ್ಟಿ ರೇಟಿಂಗ್‌ನ್ನು ಹೊಂದುವಲ್ಲಿ ಯಶಸ್ವಿಯಾಗಿದೆ.

ನೂತನ 'ಟೆಸ್ಲಾ ಮಾಡೆಲ್ ವೈ' ಎಲೆಕ್ಟ್ರಿಕ್ ಎಸ್‌ಯುವಿ, ಪ್ರಯಾಣಿಕರಿಗೆ ಗರಿಷ್ಠ ಮಟ್ಟದಲ್ಲಿ ರಕ್ಷಣೆ ಒದಗಿಸುತ್ತದೆ. ಸುರಕ್ಷತೆಯ ದೃಷ್ಟಿಯಿಂದ 7 ಏರ್‌ಬ್ಯಾಗ್‌ಗಳು, ಕ್ರೂಸ್ ಕಂಟ್ರೋಲ್, ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್), ಡ್ಯಾಶ್‌ಕ್ಯಾಮ್ ಹಾಗೂ 360 ಡಿಗ್ರಿ ಕ್ಯಾಮೆರಾವನ್ನು ಒಳಗೊಂಡಿದೆ.
ಟೆಸ್ಲಾ ಮಾಡೆಲ್ ವೈ (Tesla Model Y) ವಿಶೇಷತೆಗಳೇನು:
ದೇಶೀಯವಾಗಿ ಲಭ್ಯವಿರುವ ಈ ಕಾರು, ದುಬಾರಿ ಬೆಲೆಯನ್ನು ಹೊಂದಿದೆ. ಕನಿಷ್ಠ ರೂ.59.89 ಲಕ್ಷ ಹಾಗೂ ಗರಿಷ್ಠ ರೂ.73.89 ಲಕ್ಷ (ಎಕ್ಸ್-ಶೋರೂಂ - ನವದೆಹಲಿ) ದರವನ್ನು ಪಡೆದಿದೆ. ಆರ್‌ಡಬ್ಲ್ಯೂಡಿ (ರೇರ್ ವೀಲ್ ಡ್ರೈವ್) ಮತ್ತು ಲಾಂಗ್ ರೇಂಜ್ ಆರ್‌ಡಬ್ಲ್ಯೂಡಿ (ರೇರ್ ವೀಲ್ ಡ್ರೈವ್) ಎಂಬ ಎರಡು ರೂಪಾಂತರಗಳೊಂದಿಗೂ ಲಭ್ಯವಿದೆ.

ಇದು ಹೆಚ್ಚು ಅತ್ಯಾಧುನಿಕವಾದ ವಿನ್ಯಾಸವನ್ನು ಹೊಂದಿದೆ. ನೋಡುಗರ ಕಣ್ಣು ಕುಕ್ಕುವಂತಿದೆ. ಎಲ್ಇಡಿ ಹೆಡ್‌ಲೈಟ್‌ಗಳು, ಎಲ್ಇಡಿ ಡಿಆರ್‌ಎಲ್‌ಗಳು, ಟೈಲ್‌ಲ್ಯಾಂಪ್‌ಗಳು, ಫ್ಲಶ್-ಡೋರ್ ಹ್ಯಾಂಡಲ್‌ಗಳು ಮತ್ತು 19 ಇಂಚಿನ ಅಲಾಯ್ ವೀಲ್‌ಗಳನ್ನು ತನ್ನದಾಗಿಸಿಕೊಂಡಿದೆ. ಪರ್ಲ್ ವೈಟ್, ಡೀಪ್ ಬ್ಲೂ ಮೆಟಾಲಿಕ್ & ಅಲ್ಟ್ರಾ ರೆಡ್ ಒಳಗೊಂಡಂತೆ ಹಲವು ಬಣ್ಣಗಳೊಂದಿಗೂ ದೊರೆಯುತ್ತದೆ. 167 ಮಿ.ಮೀ ಗ್ರೌಂಡ್ ಕ್ಲಿಯರೆನ್ಸ್ ಹಾಗೂ 2,890 ವೀಲ್‌ಬೇಸ್‌ನ್ನು ಪಡೆದಿದೆ.
ನೂತನ 'ಮಾಡೆಲ್ ವೈ' ಕ್ಯಾಬಿನ್ ವಿನ್ಯಾಸವು ಉತ್ತಮವಾಗಿದೆ. 5 ಆಸನಗಳನ್ನು ಪಡೆದಿದ್ದು, ಪ್ರಯಾಣಿಕರು ಆರಾಮದಾಯಕವಾಗಿ ಕುಳಿತುಕೊಂಡು ಓಡಾಟ ನಡೆಸಬಹುದು. ವಾರಾಂತ್ಯ ಹಾಗೂ ರಜಾ ದಿನಗಳಲ್ಲಿ ದೂರದ ಊರುಗಳಿಗೆ ಪ್ರವಾಸಕ್ಕೆ ಹೋಗುವಾಗ ಹೆಚ್ಚಿನ ಲಗೇಜ್ ಸಾಗಿಸಲು ದೊಡ್ಡ ಗಾತ್ರದ 854 ಲೀ.ನಷ್ಟು ಬೂಟ್ ಸ್ಪೇಸ್‌ನ್ನು ಹೊಂದಿದೆ.
ಈ ಕಾರು ಹತ್ತಾರು ಆಕರ್ಷಕವಾದ ವೈಶಿಷ್ಟ್ಯಗಳಿಗೂ ಸಾಕ್ಷಿಯಾಗಿದೆ. ಬೃಹದಾಕಾರದ 15.4 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಆಟೋ ಪೈಲಟ್, ಓವರ್-ದಿ-ಏರ್ ಅಪ್ಡೇಟ್, ವೆಂಟಿಲೇಟೆಡ್-ಹೀಟೆಡ್ ಫ್ರಂಟ್ ಸೀಟ್‌ಗಳು, 9 ಸ್ಪೀಕರ್ ಸೌಂಡ್ ಸಿಸ್ಟಮ್, ಏರ್ ಪ್ಯೂರಿಫೈಯರ್, ಕನೆಕ್ಟ್ಡ್ ಕಾರ್ ಟೆಕ್ ಮತ್ತು ವೈರ್‌ಲೆಸ್ ಫೋನ್ ಚಾರ್ಜರ್‌ನ್ನು ಒಳಗೊಂಡಿದೆ.
ಇದು ಶಕ್ತಿಶಾಲಿಯಾದ ಪವರ್‌ಟ್ರೇನ್‌ನ್ನು ಹೊಂದಿದೆ. 60 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) & 75 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ನ್ನು ತನ್ನದಾಗಿಸಿಕೊಂಡಿದೆ. ಭರ್ತಿ ಚಾರ್ಜ್‌ನಲ್ಲಿ 500 ರಿಂದ 622 ಕಿ.ಮೀ ರೇಂಜ್ (ಮೈಲೇಜ್) ಕೊಡುತ್ತದೆ. 200 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಪಡೆದಿದೆ.
ಒಟ್ಟಾರೆಯಾಗಿ, ಹೊಸ 'ಟೆಸ್ಲಾ ಮಾಡೆಲ್ ವೈ' ಯುರೋ ಎನ್‌ಸಿಎಪಿ ಪರೀಕ್ಷೆಯಲ್ಲಿ 5-ಸ್ಟಾರ್ ಸೇಫ್ಟಿ ರೇಟಿಂಗ್‌ನ್ನು ಪಡೆದಿರುವುದು ಉತ್ತಮವಾದ ಬೆಳವಣಿಗೆಯಾಗಿದೆ. ಇದು ಮಾರಾಟ ಸಂಖ್ಯೆಯ ಹೆಚ್ಚಳಕ್ಕೂ ನೆರವಾಗಬಲ್ಲದು. ಮುಂಬರುವ ದಿನಗಳಲ್ಲಿ ಈ ಕಾರು, ಭಾರತ್ ಎನ್‌ಸಿಎಪಿ ಪರೀಕ್ಷೆಯಲ್ಲಿ ಯಾವ ರೇಟಿಂಗ್ ಪಡೆಯುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.


Click it and Unblock the Notifications








