Toyota: ಥಾರ್ & ಜಿಮ್ನಿಗೆ ಶಾಕ್.. ರಗಡ್ ಲುಕ್, ಹೊಸ ಟೊಯೊಟಾ SUV ಅನಾವರಣ.. ಬಿಡುಗಡೆಗೆ ಸಜ್ಜು!
ಟೊಯೊಟಾ ಮೋಟಾರ್ ಕಾರ್ಪೊರೇಷನ್ (Toyota Motor Corporation), ಟೋಕಿಯೋದಲ್ಲಿ ಏರ್ಪಡಿಸಿರುವ 2025ರ ಜಪಾನ್ ಮೊಬಿಲಿಟಿ ಶೋನಲ್ಲಿ ವಿವಿಧ ಕಾರುಗಳನ್ನು ಪ್ರದರ್ಶಿಸುತ್ತಿದೆ. ಬುಧವಾರ ಹೊಚ್ಚ ಹೊಸ 'ಎಫ್‌ಜೆ ಕ್ರೂಸರ್' ಹೆಸರಿನ ಎಸ್‌ಯುವಿಯನ್ನು ಅನಾವರಣಗೊಳಿಸಿದೆ. ಇದು ತುಂಬಾ ಅಚ್ಚುಕಟ್ಟಾದ ವಿನ್ಯಾಸ ಹೊಂದಿದ್ದು, ಹತ್ತಾರು ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ನೂತನ ಕಾರನ್ನು ವಾಹನ ಪ್ರಿಯರು ಕೂಡ ತೀವ್ರ ಕುತೂಹಲದಿಂದ ವೀಕ್ಷಣೆ ಮಾಡಿದ್ದಾರೆ.
ಹೊಸ ಟೊಯೊಟಾ ಎಫ್‌ಜೆ ಕ್ರೂಸರ್ (Toyota FJ Cruiser) ನೋಡಲು ಚೆನ್ನಾಗಿದ್ದು, ಎಲ್ಲರ ಕಣ್ಣು ಕುಕ್ಕುವಂತಿದೆ. ಇದು ಜಗದ್ವಿಖ್ಯಾತ 'ಟೊಯೊಟಾ ಲ್ಯಾಂಡ್ ಕ್ರೂಸರ್' ಮಾಡೆಲ್‌ಗಳ ತದ್ರೂಪದಂತಿದೆ. ಅವುಗಳಿಗೆ ಹೋಲಿಕೆ ಮಾಡಿದರೆ, ಸಣ್ಣ ಗಾತ್ರದಲ್ಲಿದೆ. ಹೀಗಾಗಿ 'ಬೇಬಿ ಲ್ಯಾಂಡ್ ಕ್ರೂಸರ್' ಎಂದೇ ಬಣ್ಣಿಸಲಾಗಿದೆ. ಜೊತೆಗಿದು ಆಫ್-ರೋಡ್ ಎಸ್‌ಯುವಿಯೂ ಆಗಿದೆ.

ಈ ಕಾರು ಸಿಗ್ನೇಚರ್ ಬಾಕ್ಸಿ ವಿನ್ಯಾಸವನ್ನು ಹೊಂದಿದೆ. ಟೊಯೊಟಾ ಬ್ಯಾಡ್ಜಿಂಗ್, ಉತ್ತಮವಾದ ಗ್ರಿಲ್, ಸ್ಪೋರ್ಟಿ ಬಂಪರ್, ಎಲ್‌ಇಡಿ ಹೆಡ್‌ಲೈಟ್‌ಗಳು, 'ಸಿ' ಆಕಾರಕ್ಕೆ ಹೋಲಿಕೆಯಾಗಬಲ್ಲ ಎಲ್‌ಇಡಿ ಡಿಆರ್‌ಎಲ್‌ಗಳು ಮತ್ತು ಇಂಟಿಗ್ರೇಟೆಡ್ ಫಾಗ್ ಲ್ಯಾಂಪ್‌ಗಳನ್ನು ಒಳಗೊಂಡಿದೆ. ಇದರೊಂದಿಗೆ ಅಲಾಯ್ ವೀಲ್‌ಗಳು, ಫ್ಲೇರ್ಡ್ ಫೆಂಡರ್‌ಗಳು, ರೂಫ್ ರೈಲ್‌ಗಳು, ಫ್ಲಾಟ್ ವಿಂಡ್‌ಸ್ಕ್ರೀನ್, ಎಲ್‌ಇಡಿ ಟೈಲ್‌ಲ್ಯಾಂಪ್‌ಗಳು ಹಾಗೂ ಟೈಲ್‌ಗೇಟ್ ಮೌಂಟೆಡ್ ಸ್ಪೇರ್ ವೀಲ್‌ನ್ನು ಪಡೆದಿದೆ.
ಇದು ಪುಟ್ಟ ಕಾರಾಗಿದ್ದರೂ ಹೆಚ್ಚು ವಿಶಾಲವಾಗಿದೆ. 4,575 ಮಿ.ಮೀ ಉದ್ದ, 1,855 ಮಿ.ಮೀ ಅಗಲ ಹಾಗೂ 1,960 ಮಿ.ಮೀ ಎತ್ತರವಿದೆ. 2,580 ಮಿ.ಮೀ ವೀಲ್‌ಬೇಸ್‌ನ್ನು ಒಳಗೊಂಡಿದೆ. 5 ಆಸನ ಆಯ್ಕೆ ವ್ಯವಸ್ಥೆಯನ್ನು ಹೊಂದಿದ್ದು, ಪ್ರಯಾಣಿಕರು ಆರಾಮದಾಯಕವಾಗಿ ಕುಳಿತುಕೊಂಡು ಓಡಾಟವನ್ನು ನಡೆಸಬಹುದು.

ಹೊಸ ಟೊಯೊಟಾ ಎಫ್‌ಜೆ ಕ್ರೂಸರ್ ಎಸ್‌ಯುವಿಯು ಶಕ್ತಿಯುತವಾದ ಪವರ್‌ಟ್ರೇನ್‌ನ್ನು ಪಡೆದಿದೆ. 2.7-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್‌ನ್ನು ಹೊಂದಿದೆ. 163 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 246 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಒಳಗೊಂಡಿದೆ. 6-ಸ್ಪೀಡ್ ಇಸಿಟಿ (ಎಲೆಕ್ಟ್ರಿಕಲಿ ಕಂಟ್ರೊಲ್ಡ್ ಟಾರ್ಕ್ ಕನ್ವರ್ಟರ್) ಗೇರ್‌ಬಾಕ್ಸ್‌ನ್ನು ಹೊಂದಿದೆ.
ಈ ಕಾರಿನ ಕ್ಯಾಬಿನ್ ವಿನ್ಯಾಸವು ಭರ್ಜರಿಯಾಗಿದೆ. ಅದಕ್ಕೆ ತಕ್ಕಂತೆ ಹತ್ತಾರು ಆಕರ್ಷಕ ವೈಶಿಷ್ಟ್ಯಗಳನ್ನು ಪಡೆದಿದೆ. ವಿಶೇಷವಾಗಿ ಇನ್ಫೋಟೈನ್‌ಮೆಂಟ್ & ಇನ್ಸ್ಟ್ರುಮೆಂಟ್ ಕ್ಲಸ್ಟರ್‌ಗಾಗಿ ಡುಯಲ್ ಸ್ಕ್ರೀನ್ ಸೆಟಪ್, 3-ಸ್ಪೋಕ್ ಸ್ಟೀರಿಂಗ್ ವೀಲ್, ರೌಂಡ್ ಎಸಿ ವೆಂಟ್‌ಗಳು, ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್) ಹಾಗೂ ಮಲ್ಟಿಪಲ್ ಏರ್‌ಬ್ಯಾಗ್‌ಗಳನ್ನು ಒಳಗೊಂಡಿದೆ.

ಇದು ಜಪಾನ್‌ನಲ್ಲಿ 2026ರ ಮಧ್ಯಭಾಗದಲ್ಲಿ ಮಾರಾಟಕ್ಕೆ ಬರಲಿದೆ ಎಂದು ಟೊಯೊಟಾ ಖಚಿತಪಡಿಸಿದೆ. ಆದರೆ, ಭಾರತದಲ್ಲಿ ಬಿಡುಗಡೆಯಾಗುವ ಬಗ್ಗೆ ಯಾವುದೇ ಅಧಿಕೃತ ವಿವರಗಳು ಲಭ್ಯವಾಗಿಲ್ಲ. ಒಂದೊಮ್ಮೆ ದೇಶೀಯ ಮಾರುಕಟ್ಟೆಯಲ್ಲಿ ಪರಿಚಯಿಸಿದರೆ, ಸ್ಪರ್ಧಾತ್ಮಕ ಬೆಲೆಯಲ್ಲಿ ಖರೀದಿಗೆ ದೊರೆಯಬಹುದು ಎಂದು ಅಂದಾಜಿಸಲಾಗಿದೆ. ಇದಕ್ಕೆ ಆಫ್-ರೋಡ್ ಎಸ್‌ಯುವಿಗಳಾದ ಮಹೀಂದ್ರಾ ಥಾರ್ ರಾಕ್ಸ್ ಹಾಗೂ ಮಾರುತಿ ಸುಜುಕಿ ಜಿಮ್ನಿಗಳು ಪ್ರಬಲವಾದ ಪ್ರತಿಸ್ಪರ್ಧಿಯಾಗುವುದರಲ್ಲಿ ಎರಡು ಮಾತಿಲ್ಲ.
ಮಹೀಂದ್ರಾ ಥಾರ್ ರಾಕ್ಸ್ (Mahindra Thar Roxx):
ಈ ಎಸ್‌ಯುವಿ ರೂ.12.25 ಲಕ್ಷದಿಂದ 22.06 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. 2.0-ಲೀಟರ್, 4-ಸಿಲಿಂಡರ್, ಎಂಸ್ಟಾಲಿಯನ್ ಟರ್ಬೊ ಪೆಟ್ರೋಲ್ ಹಾಗೂ 2-ಲೀಟರ್, 4-ಸಿಲಿಂಡರ್, ಎಂಹಾಕ್ ಡೀಸೆಲ್ ಎಂಜಿನ್ ಆಯ್ಕೆಯನ್ನು ಒಳಗೊಂಡಿದೆ. 5 ಆಸನಗಳನ್ನು ಒಳಗೊಂಡಿದೆ. 10.25 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಹಾಗೂ 6 ಏರ್‌ಬ್ಯಾಗ್‌ನಂತಹ ವೈಶಿಷ್ಟ್ಯಗಳನ್ನು ಪಡೆದಿದೆ.
ಮಾರುತಿ ಸುಜುಕಿ ಜಿಮ್ನಿ (Maruti Suzuki Jimny):
ಇದು ರೂ.12.31 ಲಕ್ಷದಿಂದ ರೂ.14.45 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಒಳಗೊಂಡಿದೆ. 1.5-ಲೀಟರ್ ಪೆಟ್ರೋಲ್ ಎಂಜಿನ್‌ನ್ನು ಪಡೆದಿದೆ. 4 ಆಸನಗಳನ್ನು ಹೊಂದಿದೆ. 9 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್ ಮತ್ತು 6 ಏರ್‌ಬ್ಯಾಗ್‌ಗಳು ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ತನ್ನದಾಗಿಸಿಕೊಂಡಿದೆ.


Click it and Unblock the Notifications








