28 Km ಮೈಲೇಜ್.. 5-ಸೀಟರ್, ಜನಪ್ರಿಯ Toyota Taisor 6 ಏರ್‌ಬ್ಯಾಗ್‌ನೊಂದಿಗೆ ಬಿಡುಗಡೆ.. ಬೆಲೆ ಎಷ್ಟು?
ಟೊಯೊಟಾ ಅರ್ಬನ್ ಕ್ರೂಸರ್ ಟೈಸರ್ (Toyota Urban Cruiser Taisor) ವಿಶ್ವಾಸಾರ್ಹ ಎಸ್‌ಯುವಿ ಎಂದೇ ಹೆಸರುವಾಸಿಯಾಗಿದೆ. ಇದು ಮಾರುತಿ ಸುಜುಕಿ ಫ್ರಾಂಕ್ಸ್ (Maruti Suzuki Fronx) ಕಾರಿನ ರೀ-ಬ್ಯಾಡ್ಜ್ ಮಾಡೆಲ್ ಆಗಿದ್ದು, ಉತ್ತಮ ಸಂಖ್ಯೆಯಲ್ಲಿಯೂ ಮಾರಾಟವಾಗುತ್ತಿದೆ. ಗ್ರಾಹಕರು ಕೂಡ ನಾ ಮುಂದು - ತಾ ಮುಂದು ಎಂಬಂತೆ ಖರೀದಿ ಮಾಡುತ್ತಿದ್ದಾರೆ. ಸದ್ಯ ಪ್ರಯಾಣಿಕರ ರಕ್ಷಣೆಗಾಗಿ ಇದೇ 'ಟೈಸರ್' ಕಾರನ್ನು ನವೀಕರಿಸಿಯೂ ಬಿಡುಗಡೆಗೊಳಿಸಲಾಗಿದೆ. ಬನ್ನಿ, ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.
ಇನ್ಮುಂದೆ ಟೊಯೊಟಾ ಅರ್ಬನ್ ಕ್ರೂಸರ್ ಟೈಸರ್ ಎಸ್‌ಯುವಿಯ ಎಲ್ಲ ರೂಪಾಂತರಗಳು (ವೇರಿಯೆಂಟ್), ಸ್ಟ್ಯಾಂಡರ್ಡ್ ಆಗಿ 6 - ಏರ್‌ಬ್ಯಾಗ್‌ನೊಂದಿಗೆ ಖರೀದಿಗೆ ಲಭ್ಯವಾಗಲಿವೆ. ಈ ಕಾರು ಕನಿಷ್ಠ ರೂ.7.89 ಲಕ್ಷ ಮತ್ತು ಗರಿಷ್ಠ ರೂ.13.19 ಲಕ್ಷ (ಎಕ್ಸ್-ಶೋರೂಂ - ಬೆಂಗಳೂರು) ದರವನ್ನು ಪಡೆದಿದೆ.

ಈ ಮೊದಲು ಟರ್ಬೊ ಪೆಟ್ರೋಲ್ ಚಾಲಿತ ಜಿ ಮತ್ತು ವಿ ರೂಪಾಂತರಗಳು ಮಾತ್ರ 6 - ಏರ್‌ಬ್ಯಾಗ್ ಆಯ್ಕೆಯಲ್ಲಿ ಸಿಗುತ್ತಿದ್ದವು. ಉಳಿದ ಇ, ಎಸ್ ಹಾಗೂ ಎಸ್ ಪ್ಲಸ್ ರೂಪಾಂತರಗಳನ್ನು ಕೇವಲ 2 - ಏರ್‌ಬ್ಯಾಗ್‌ನೊಂದಿಗೆ ಮಾರಾಟ ಮಾಡಲಾಗುತ್ತಿತ್ತು.
ನೂತನ ಟೊಯೊಟಾ ಟೈಸರ್ ತುಂಬಾ ಅಚ್ಚುಕಟ್ಟಾದ ವಿನ್ಯಾಸವನ್ನು ಹೊಂದಿದೆ. ಎಲ್ಇಡಿ ಹೆಡ್‌ಲ್ಯಾಂಪ್‌ಗಳು, ಎಲ್ಇಡಿ ಡಿಆರ್‌ಎಲ್‌ಗಳು, ಎಲ್ಇಡಿ ಟೈಲ್ ಲ್ಯಾಂಪ್‌ಗಳು ಹಾಗೂ 16 ಇಂಚಿನ ಅಲಾಯ್ ವೀಲ್‌ಗಳನ್ನು ಪಡೆದಿದೆ. ಈ ಬಾರಿ ವಿಶೇಷವಾಗಿ ಇದೇ ಕಾರಿಗೆ ಬ್ಲ್ಯೂಯಿಸ್ ಬ್ಲ್ಯಾಕ್ (Bluish Black) ಎಂಬ ಹೊಸ ಬಣ್ಣವನ್ನು ಸಹ ಪರಿಚಯಿಸಲಾಗಿದೆ. ಇದರೊಂದಿಗೆ ಲ್ಯೂಸೆಂಟ್ ಆರೆಂಜ್, ಸ್ಪೋರ್ಟಿನ್ ರೆಡ್, ಕೆಫೆ ವೈಟ್ ಹಾಗೂ ಗೇಮಿಂಗ್ ಗ್ರೇ ಎಂಬ ಬಣ್ಣಗಳ ಆಯ್ಕೆಯಲ್ಲಿಯೂ ಸಿಗುತ್ತದೆ.

ಹೊಸ ಟೈಸರ್ ಎಸ್‌ಯುವಿಯು 5 ಆಸನಗಳನ್ನು ಒಳಗೊಂಡಿದೆ. ಪ್ರಯಾಣಿಕರು ಆರಾಮದಾಯಕವಾಗಿ ಸಂಚಾರ ಮಾಡಬಹುದು. ಹೆಚ್ಚಿನ ಲಗೇಜ್ ತೆಗೆದುಕೊಂಡು ಹೋಗಲು 308 ಲೀಟರ್‌ನಷ್ಟು ಬೂಟ್ ಸ್ಪೇಸ್‌ನ್ನು ಹೊಂದಿದೆ. 3995 ಎಂಎಂ ಉದ್ದ, 1765 ಎಂಎಂ ಅಗಲ ಮತ್ತು 1550 ಎಂಎಂ ಎತ್ತರ ಕೂಡ ಇದೆ. 190 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹಾಗೂ 2520 ಎಂಎಂ ವೀಲ್‌ಬೇಸ್‌ನ್ನು ಪಡೆದಿದೆ.
ಈ ಕಾರು ವಿವಿಧ ಪವರ್‌ಟ್ರೇನ್ ಆಯ್ಕೆಯಲ್ಲಿಯೂ ದೊರೆಯುತ್ತದೆ. ಇದರ 1.2-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್, 90 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 113 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 5-ಸ್ಪೀಡ್ ಮ್ಯಾನುವಲ್/ 5-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ತನ್ನದಾಗಿಸಿಕೊಂಡಿದೆ.

ಮತ್ತೊಂದು 1-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್, 100 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 148 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುವ ಸಾಮರ್ಥ್ಯವನ್ನು ಹೊಂದಿದೆ. 5-ಸ್ಪೀಡ್ ಮ್ಯಾನುವಲ್/ 6-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ.
ಇನ್ನೊಂದು 1.2-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್/ಸಿಎನ್‌ಜಿ ಎಂಜಿನ್, 77.5 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 98.5 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಕೇವಲ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನ್ನು ಹೊಂದಿದೆ. ಈ ಕಾರು 19.8 ರಿಂದ 28.5 ಕಿ.ಮೀ ವರೆಗೆ ಮೈಲೇಜ್ ಕೊಡುತ್ತದೆ.
ನೂತನ ಟೈಸರ್ ಕ್ಯಾಬಿನ್ ವಿನ್ಯಾಸವು ತುಂಬಾ ಚೆನ್ನಾಗಿದೆ. 9-ಇಂಚಿರುವ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್, ಸ್ಟೀರಿಂಗ್ - ಮೌಂಟೆಡ್ ಕಂಟ್ರೋಲ್‌ಗಳು, ವೈರ್‌ಲೆಸ್ ಫೋನ್ ಚಾರ್ಜಿಂಗ್, ಪ್ಯಾಡಲ್ ಶಿಫ್ಟರ್‌ಗಳು, ಕ್ರೂಸ್ ಕಂಟ್ರೋಲ್ ಹಾಗೂ ರೇರ್ ಎಸಿ ವೆಂಟ್‌ಗಳು ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆದಿದೆ.
ಇದು ಪ್ರಯಾಣಿಕರಿಗೆ ಗರಿಷ್ಠ ರಕ್ಷಣೆ ಒದಗಿಸುತ್ತದೆ. ಸುರಕ್ಷತೆಯ ದೃಷ್ಟಿಯಿಂದ 6-ಏರ್‌ಬ್ಯಾಗ್‌ಗಳು ಮಾತ್ರವಲ್ಲದೆ ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ಇಎಸ್‌ಪಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ), ಹಿಲ್ - ಹೋಲ್ಡ್ ಅಸಿಸ್ಟ್ ಹಾಗೂ 360 ಡಿಗ್ರಿ ಕ್ಯಾಮೆರಾವನ್ನು ಹೊಂದಿದೆ.


Click it and Unblock the Notifications