ಪ್ರತಿಷ್ಠಿತ ಪ್ರಶಸ್ತಿ ದಕ್ಕಿಸಿಕೊಂಡ TVS ಬೈಕ್: ಯಾರಿಗೂ ಗೊತ್ತಿಲ್ಲ... ಅತ್ಯುತ್ತಮ ಮೋಟಾರ್‌ಸೈಕಲ್ ಇದು
ಟಿವಿಎಸ್ ಮೋಟಾರ್ ಕಂಪನಿಯ ಹೊಸ ಅಡ್ವೆಂಚರ್ ರ‍್ಯಾಲಿ ಟೂರರ್ ಮೋಟಾರ್‌ಸೈಕಲ್ ಆಗಿರುವ ಟಿವಿಎಸ್ ಅಪಾಚೆ ಆರ್‌ಟಿಎಕ್ಸ್ (TVS Apache RTX), ಜೆಕೆ ಟೈರ್ ಪ್ರಸ್ತುತಪಡಿಸಿದ 2026 ರ ಇಂಡಿಯನ್ ಮೋಟಾರ್‌ಸೈಕಲ್ ಆಫ್ ದಿ ಇಯರ್ (IMOTY) ಪ್ರಶಸ್ತಿಯನ್ನು ಪಡೆದುಕೊಂಡಿದೆ. ಭಾರತದ ಅತ್ಯಂತ ಹಿರಿಯ ಆಟೋಮೋಟಿವ್ ಪತ್ರಕರ್ತರನ್ನು ಒಳಗೊಂಡ 27 ಸದಸ್ಯರ ವಿಶೇಷ ತೀರ್ಪುಗಾರರ ಸಮಿತಿಯಿಂದ ಮೌಲ್ಯಮಾಪನ ಮಾಡಲ್ಪಟ್ಟ ಟಿವಿಎಸ್ ಅಪಾಚೆ ಆರ್‌ಟಿಎಕ್ಸ್, ವೈವಿಧ್ಯಮಯ ವಿಭಾಗಗಳನ್ನು ಒಳಗೊಂಡ ಏಳು ಮೋಟಾರ್‌ಸೈಕಲ್‌ಗಳ ಹೆಚ್ಚು ಸ್ಪರ್ಧಾತ್ಮಕ ಕಿರುಪಟ್ಟಿಯಿಂದ ಉನ್ನತ ಪ್ರಶಸ್ತಿಯನ್ನು ಪಡೆದುಕೊಂಡಿದೆ ಎಂದು ಟಿವಿಎಸ್ ಹೇಳಿದೆ.
ಈ ಗೆಲುವಿನ ಕುರಿತು ಮಾತನಾಡಿದ ಟಿವಿಎಸ್ ಕಂಪನಿಯ ಮುಖ್ಯಸ್ಥ ವಿಮಲ್ ಸಂಬ್ಲಿ, "ಜೆಕೆ ಟೈರ್ ಇಂಡಿಯನ್ ಮೋಟಾರ್‌ಸೈಕಲ್ ಆಫ್ ದಿ ಇಯರ್ ಪ್ರಶಸ್ತಿ 2026 (IMOTY) ನಲ್ಲಿ ಗುರುತಿಸಲ್ಪಟ್ಟಿರುವುದು ನಮಗೆ ಹೆಮ್ಮೆಯಾಗಿದೆ. ಈ ಗೌರವವು 40 ವರ್ಷಗಳಿಗೂ ಹೆಚ್ಚು ರೇಸಿಂಗ್ ಶ್ರೇಷ್ಠತೆ ಮತ್ತು 35 ವರ್ಷಗಳ ರ್ಯಾಲಿ ಅನುಭವದಿಂದ ರೂಪುಗೊಂಡ ಪರ್ಫಾಮೆನ್ಸ್ ಪರಂಪರೆಯನ್ನು ಪ್ರತಿಬಿಂಬಿಸುತ್ತದೆ.

ಬಿಡುಗಡೆಯಾದಾಗಿನಿಂದ, ಟಿವಿಎಸ್ ಅಪಾಚೆ ಆರ್‌ಟಿಎಕ್ಸ್ ಗ್ರಾಹಕರಿಂದ ಅಪಾರ ಪ್ರೀತಿಯನ್ನು ಗಳಿಸಿದೆ, ಇದು ಭಾರತದಲ್ಲಿ ಪರ್ಫಾಮೆನ್ಸ್ - ರ್ಯಾಲಿ ಟೂರಿಂಗ್ ಮೋಟಾರ್‌ಸೈಕಲ್‌ಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಎತ್ತಿ ತೋರಿಸುತ್ತದೆ. ಹಾಗೆಯೇ ಭಾರತದಲ್ಲಿ ವಿನ್ಯಾಸಗೊಳಿಸಿ, ಎಂಜಿನಿಯರಿಂಗ್ ಮಾಡಿ ತಯಾರಿಸಲಾಗಿದೆ ಎಂದು ಜಗತ್ತಿಗೆ ತೋರಿಸುತ್ತದೆ. ವಿಶ್ವ ದರ್ಜೆಯ ಮೋಟಾರ್‌ಸೈಕಲ್‌ಗಳು ಭಾರತದಲ್ಲಿ ಹುಟ್ಟಿಕೊಂಡು ಜಾಗತಿಕವಾಗಿ ಸ್ಪರ್ಧಿಸಬಹುದು ಎಂಬ ನಮ್ಮ ನಂಬಿಕೆಯನ್ನು ಬಲಪಡಿಸುತ್ತದೆ'' ಎಂದರು.
ಟಿವಿಎಸ್ ಅಪಾಚೆ ಆರ್‌ಟಿಎಕ್ಸ್ ವಿಶೇಷತೆಗಳು
ಅಕ್ಟೋಬರ್ 2025 ರಲ್ಲಿ ಬಿಡುಗಡೆಯಾದ ಟಿವಿಎಸ್ ಅಪಾಚೆ ಆರ್‌ಟಿಎಕ್ಸ್, ಅಡ್ವೆಂಚರ್-ಆಧಾರಿತ ಸಾಮರ್ಥ್ಯವನ್ನು ಪರ್ಫಾಮೆನ್ಸ್ ಮತ್ತು ದೈನಂದಿನ ಬಳಕೆಯೊಂದಿಗೆ ಸಂಯೋಜಿಸುವ ಅಡ್ವೆಂಚರ್ ರ‍್ಯಾಲಿ-ಟೂರಿಂಗ್ ವಿಭಾಗಕ್ಕೆ ಟಿವಿಎಸ್ ಮೋಟಾರ್ ಕಂಪನಿಯ ಪ್ರವೇಶವನ್ನು ಗುರುತಿಸುತ್ತದೆ. ಇದರ ಬೆಲೆಯು ರೂ.1.99 ಲಕ್ಷದಿಂದ ರೂ.2.29 ಲಕ್ಷ (ಎಕ್ಸ್-ಶೋರೂಂ) ಇದೆ. ಬೇಸ್, ಟಾಪ್ & ಬಿಟಿಒ (ಬಿಲ್ಟ್ ಟು ಆರ್ಡರ್) ಎಂಬ ವೇರಿಯೆಂಟ್‌ಗಳಲ್ಲಿ ಸಿಗುತ್ತದೆ.
ಹೊಸ ಆರ್‌ಟಿ-ಎಕ್ಸ್ ಡಿ4 299.1 ಸಿಸಿ ಲಿಕ್ವಿಡ್ - ಕೂಲ್ಡ್ ಎಂಜಿನ್‌ನೊಂದಿಗೆ ನಿರ್ಮಿಸಲಾಗಿದೆ. ಈ ಎಂಜಿನ್ ಸುಮಾರು 36 ಪಿಎಸ್ ಪವರ್ ಮತ್ತು 28.5 ಎನ್‌ಎಂ ಟಾರ್ಕ್ ಉತ್ಪಾದಿಸುವ ಟಿವಿಎಸ್ ಅಪಾಚೆ ಆರ್‌ಟಿಎಕ್ಸ್ ಮಲ್ಟಿ ರೈಡಿಂಗ್ ಮೋಡ್‌ಗಳು, ಕ್ರೂಸ್ ಕಂಟ್ರೋಲ್, ಬೈ-ಡೈರೆಕ್ಷನಲ್ ಕ್ವಿಕ್‌ಶಿಫ್ಟರ್‌ನೊಂದಿಗೆ ಸ್ಲಿಪ್ಪರ್ ಕ್ಲಚ್, ವೈಶಿಷ್ಟ್ಯ - ಭರಿತ 5 - ಇಂಚಿನ ಟಿಎಫ್‌ಟಿ ಡಿಸ್ಪ್ಲೇ ಸೇರಿದಂತೆ ಸುಧಾರಿತ ರೈಡರ್ - ಕೇಂದ್ರಿತ ಎಲೆಕ್ಟ್ರಾನಿಕ್ಸ್ ಅನ್ನು ಒಳಗೊಂಡಿದೆ.
ಇದರ ಮಸ್ಕುಲರ್ ರ್ಯಾಲಿ-ಪ್ರೇರಿತ ವಿನ್ಯಾಸ, ಲಾಂಗ್-ರೈಡ್‌ನ ಸಸ್ಪೆನ್ಷನ್ ಮತ್ತು ದೃಢವಾದ ಚಾಸಿಸ್ ಮೂಲಕ ಹೆದ್ದಾರಿಗಳು ಮತ್ತು ಆಫ್-ರೋಡ್ ಎರಡರಲ್ಲೂ ಸಮಾನವಾಗಿ ಪರ್ಫಾಮೆನ್ಸ್ ನೀಡುತ್ತದೆ. ಈ ಬೈಕ್ ವಿನ್ಯಾಸದ ದೃಷ್ಟಿಯಿಂದ ಉತ್ತಮವಾದ ಡುಯಲ್ ಎಲ್ಇಡಿ ಹೆಡ್‌ಲ್ಯಾಂಪ್‌ಗಳು, ಎಲ್ಇಡಿ ಟರ್ನ್ ಇಂಡಿಕೇಟರ್‌ಗಳು, ಸ್ಪ್ಲಿಟ್ ಸೀಟ್, ಅಗಲವಾದ ಹ್ಯಾಂಡಲ್‌ಬಾರ್, ದೊಡ್ಡ ಗಾತ್ರದ ವಿಂಡ್‌ಸ್ಕ್ರೀನ್ ಟ್ಯಾಂಕ್ ಗಾರ್ಡ್ ಹಾಗೂ ನಕಲ್ ಗಾರ್ಡ್‌ಗಳನ್ನು ಪಡೆದಿದೆ.
ಈ ಬೈಕ್ 30 ರಿಂದ 35 ಕಿ.ಮೀ ವರೆಗೆ ಮೈಲೇಜ್ ಕೊಡುತ್ತದೆ ಎನ್ನಲಾಗಿದ್ದು, 12.5 ಲೀಟರ್ ಸಾಮರ್ಥ್ಯದ ಫ್ಯುಯೆಲ್ ಟ್ಯಾಂಕ್ ಹೊಂದಿದೆ. 155 ಕೆಎಂಪಿಹೆಚ್ ಟಾಪ್ ಸ್ಪೀಡ್ ತಲುಪಬಲ್ಲದು, 7.4 ಸೆಕೆಂಡುಗಳಲ್ಲಿ 0 ರಿಂದ 100 ಕೆಎಂಪಿಹೆಚ್ ವೇಗದ ಸಾಮರ್ಥ್ಯವನ್ನು ಹೊಂದಿದೆ. ಟೂರ್, ರ‍್ಯಾಲಿ, ಅರ್ಬನ್ & ರೈನ್ ಎಂಬ 4 ರೈಡಿಂಗ್ ಮೋಡ್‌ಗಳನ್ನು ಹೊಂದಿದೆ. ಇದರ ಸೀಟ್ ಎತ್ತರವು 835 ಎಂಎಂ ಇದೆ.
ನೀವು ಬಜೆಟ್ ಬೆಲೆಯಲ್ಲಿ ಅಡ್ವೆಂಚರ್ ಮೋಟಾರ್‌ಸೈಕಲ್ ಹುಡುಕುತ್ತಿದ್ದರೆ, ಈ 'ಟಿವಿಎಸ್ ಅಪಾಚೆ ಆರ್‌ಟಿಎಕ್ಸ್' ಬೆಸ್ಟ್ ಆಯ್ಕೆಯಾಗಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಹೊಸ ಅಪಾಚೆ ಆರ್‌ಟಿಎಕ್ಸ್ ಮೋಟಾರ್‌ಸೈಕಲ್‌ಗೆ ಕೆಟಿಎಂ 250 ಅಡ್ವೆಂಚರ್, ಯೆಜ್ಡಿ ಅಡ್ವೆಂಚರ್ ಹಾಗೂ ಸುಜುಕಿ ವಿ - ಸ್ಟ್ರೋಮ್ ಎಸ್‌ಎಕ್ಸ್ ಬೈಕ್‌ಗಳು ಪ್ರಬಲವಾದ ಪ್ರತಿಸ್ಪರ್ಧಿಗಳಾಗಿವೆ. ಈ ಬೈಕ್ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ.


Click it and Unblock the Notifications








