VinFast: ಮೊದಲ ಡೀಲರ್‌ಶಿಪ್ ಸಿದ್ಧ.. ಶೀಘ್ರ ಆಕರ್ಷಕ ಕಾರುಗಳು ಬಿಡುಗಡೆ, 7.50 ಲಕ್ಷ ಆರಂಭಿಕ ಬೆಲೆ?
ವಿಯೆಟ್ನಾಂನ ವಿನ್‌ಫಾಸ್ಟ್ (VinFast) ಪ್ರಮುಖ ವಾಹನ ತಯಾರಕ ಕಂಪನಿಯಾಗಿದೆ. ಅಂತರರಾಷ್ಟ್ರೀಯವಾಗಿ ಹತ್ತಾರು ದ್ವಿಚಕ್ರ ವಾಹನ ಮತ್ತು ಕಾರುಗಳನ್ನು ಮಾರಾಟ ಮಾಡುತ್ತಿದೆ. ಈ ಕಂಪನಿಯು ದೇಶೀಯ ಮಾರುಕಟ್ಟೆಯನ್ನು ಪ್ರವೇಶಿಸಲು ಕೂಡ ಸಿದ್ಧವಾಗಿದೆ. ಕಳೆದ ಜನವರಿಯಲ್ಲಿ ಮುಕ್ತಾಯಗೊಂಡ ಭಾರತ್ ಮೊಬಿಲಿಟಿ ಎಕ್ಸ್‌ಪೋದಲ್ಲಿ ಹೊಚ್ಚ ಹೊಸ ಎಲೆಕ್ಟ್ರಿಕ್ ಕಾರುಗಳು ಹಾಗೂ ಸ್ಕೂಟರ್‌ಗಳನ್ನು ಪ್ರದರ್ಶಿಸಿತ್ತು. ತಮಿಳುನಾಡಿನ ತೂತುಕುಡಿಯಲ್ಲಿ ಬೃಹತ್ ತಯಾರಿಕಾ ಘಟಕ ತೆರೆಯುತ್ತಿದ್ದು, ಕೆಲವೇ ದಿನಗಳಲ್ಲಿ ಉತ್ಪಾದನೆಯನ್ನು ಶುರು ಮಾಡಲಿದೆ. ಅತಿ ಶೀಘ್ರದಲ್ಲೇ ಮೊದಲ ಕಾರನ್ನು ಬಿಡುಗಡೆಗೊಳಿಸುವ ಹಾದಿಯಲ್ಲಿದೆ.
ಸದ್ಯ ದೇಶಾದ್ಯಂತ 'ವಿನ್‌ಫಾಸ್ಟ್' ಕಂಪನಿಯು ಡೀಲರ್‌ಶಿಪ್‌ಗಳನ್ನು ಆರಂಭಿಸುವ ಕೆಲಸದಲ್ಲಿ ನಿರತವಾಗಿದೆ. ಮೊದಲ ಡೀಲರ್‌ಶಿಪ್ ಬಹುತೇಕ ಸಿದ್ಧಗೊಂಡಿದೆ. ಅದಕ್ಕೆ ಸಂಬಂಧಿಸಿದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲೂ ಕಾಣಿಸಿಕೊಂಡಿವೆ. ಈ ಫೋಟೋಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ನೂತನ ಡೀಲರ್‌ಶಿಪ್ ಕೇರಳದ ಎರ್ನಾಕುಲಂ ಜಿಲ್ಲೆಯ ಕಲಮಸ್ಸೇರಿಯಲ್ಲಿದೆ ಎಂಬುದು ಗೊತ್ತಾಗುತ್ತದೆ.

ವಿನ್‌ಫಾಸ್ಟ್ ವಿಎಫ್6 ಇವಿ (VinFast VF6 EV) ಮೊದಲ ಕಾರಾಗಿ ಬಿಡುಗಡೆಯಾಗಲಿದೆ:
ಇದೊಂದು ಕಾಂಪ್ಯಾಕ್ಟ್ ಎಲೆಕ್ಟ್ರಿಕ್ ಎಸ್‌ಯುವಿಯಾಗಿದೆ. ದೀಪಾವಳಿ ಹಬ್ಬದ ವೇಳೆಗೆ ಮಾರಾಟಕ್ಕೆ ಬರುವ ನಿರೀಕ್ಷೆಯಿದೆ. ಈಗಾಗಲೇ ಮುಂಬೈ ರಸ್ತೆಯಲ್ಲಿ ಪರೀಕ್ಷಾರ್ಥ ನಡೆಸುವಾಗಲೂ ಕಂಡುಬಂದಿದೆ. ಈ ಕಾರನ್ನು ಜಾಗತಿಕವಾಗಿಯೂ ಮಾರಾಟಗೊಳಿಸಲಾಗುತ್ತಿದೆ. ಜೊತೆಗೆ ರೂ.18 ಲಕ್ಷ ಬೆಲೆಯನ್ನು (ಎಕ್ಸ್-ಶೋರೂಂ) ಒಳಗೊಂಡಿರಬಹುದು ಎಂದು ಅಂದಾಜಿಸಲಾಗಿದೆ.
ಈ ಎಲೆಕ್ಟ್ರಿಕ್ ಕಾರು 59.6 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಸಾಮರ್ಥ್ಯವಿರುವ ಬ್ಯಾಟರಿ ಪ್ಯಾಕ್‌ನ್ನು ಪಡೆದುಕೊಂಡಿರಲಿದ್ದು, ಭರ್ತಿ ಚಾರ್ಜ್‌ನಲ್ಲಿ 379 ರಿಂದ 410 ಕಿಲೋಮೀಟರ್ ರೇಂಜ್ (ಮೈಲೇಜ್) ನೀಡುತ್ತದೆ. ಇದರಲ್ಲಿ 5 ಆಸನಗಳಿದ್ದು, ಪ್ರಯಾಣಿಕರು ಸುಲಭವಾಗಿ ಓಡಾಟ ನಡೆಸಬಹುದು. ಇಕೋ ಹಾಗೂ ಪ್ಲಸ್ ಎಂಬ ರೂಪಾಂತರಗಳೊಂದಿಗೂ (ವೇರಿಯೆಂಟ್) ಸಿಗುತ್ತದೆ.

ನೂತನ ಎಸ್‌ಯುವಿಯು ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ (12.9-ಇಂಚು), ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, ಹೆಡ್-ಅಪ್ ಡಿಸ್‌ಪ್ಲೇ ಮತ್ತು ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. ಸುರಕ್ಷತೆಯ ದೃಷ್ಟಿಯಿಂದ 6 ಏರ್‌ಬ್ಯಾಗ್‌ಗಳು, ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ಮತ್ತು 360 ಡಿಗ್ರಿ ಕ್ಯಾಮೆರಾವನ್ನು ಪಡೆದಿದೆ.
ವಿನ್‌ಫಾಸ್ಟ್ ವಿಎಫ್7 ಇವಿ (VinFast VF7 EV) ಸಹ ಮಾರಾಟಕ್ಕೆ ಬರಲಿದೆ:
ಈ ಎಲೆಕ್ಟ್ರಿಕ್ ಎಸ್‌ಯುವಿಯು ವರ್ಷಾಂತ್ಯದೊಳಗೆ ಮಾರಾಟಕ್ಕೆ ಬರುವ ನಿರೀಕ್ಷೆಯಿದೆ. ಇದು ದುಬಾರಿ ಬೆಲೆಯನ್ನು ಹೊಂದಿರಲಿದ್ದು, ರೂ 50 ಲಕ್ಷ ಬೆಲೆಯನ್ನು (ಎಕ್ಸ್-ಶೋರೂಂ) ಒಳಗೊಂಡಿರಬಹುದು ಎಂದು ಹೇಳಲಾಗಿದೆ. ಪ್ರಸ್ತುತ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿದ್ದು, 75.3 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್‌ನ್ನು ಪಡೆದಿದ್ದು, ಸಂಪೂರ್ಣ ಚಾರ್ಜ್‌ನಲ್ಲಿ 431 ರಿಂದ 450 ಕಿಲೋಮೀಟರ್ ಓಡುತ್ತದೆ.

ಅತಿ ಕಡಿಮೆ ಬೆಲೆಯ ವಿನ್‌ಫಾಸ್ಟ್ ವಿಎಫ್3 ಇವಿ (VinFast VF3 EV) ಪರಿಚಯಿಸಲು ಮಹೂರ್ತ ನಿಗದಿ:
ಇದು ಪುಟ್ಟ ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್ ಆಗಿದ್ದು, 2026ರ ಫೆಬ್ರವರಿಯಲ್ಲಿ ಬಿಡುಗಡೆಯಾಗುವ ಎಲ್ಲ ಸಾಧ್ಯತೆಗಳಿವೆ. ಈ ಕಾರು 7.50 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದುಕೊಂಡಿರಲಿದೆ ಎನ್ನಲಾಗಿದೆ. ಇಂಡೋನೇಷ್ಯಾ ಸೇರಿದಂತೆ ಹಲವು ದೇಶಗಳಲ್ಲಿ ಗ್ರಾಹಕರ ಖರೀದಿಗೆ ಲಭ್ಯವಿದ್ದು, 18.64 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್‌ನ್ನು ಪಡೆದಿದೆ. ಪೂರ್ತಿ ಚಾರ್ಜ್‌ನಲ್ಲಿ 215 ಕಿಲೋಮೀಟರ್ ದೂರವನ್ನು ಕ್ರಮಿಸುತ್ತದೆ.
ಎಲೆಕ್ಟ್ರಿಕ್ ಸ್ಕೂಟರ್‌ಗಳು ಸಹ ಬಿಡುಗಡೆಯಾಗಲಿವೆ:
ವಿನ್‌ಫಾಸ್ಟ್ ಕಂಪನಿಯು ವಿವಿಧ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಮಾರಾಟಕ್ಕೆ ತರಲಿದೆ. ಇವುಗಳನ್ನು ಭಾರತ್ ಮೊಬಿಲಿಟಿ ಎಕ್ಸ್‌ಪೋದಲ್ಲಿ ಪ್ರದರ್ಶಿಸಲಾಗಿತ್ತು. ಬಹುತೇಕ ಮಾಡೆಲ್‌ಗಳು ರೆಟ್ರೋ ಶೈಲಿಯ ವಿನ್ಯಾಸ ಹೊಂದಿವೆ. ಅತಿ ಶೀಘ್ರದಲ್ಲೇ ಇವೊ ಎಸ್, ಥಿಯೋನ್ ಎಸ್, ಕ್ಲಾರಾ ಎಸ್, ಫೆಲಿಜ್ ಎಸ್, ವೆಂಟೊ ಎಸ್ ಹಾಗೂ ಡ್ರಗ್ನ್‌ಫ್ಲೈ ಹೆಸರಿನ ಸ್ಕೂಟರ್‌ಗಳು ಬಿಡುಗಡೆಯಾಗುವ ನೀರಿಕ್ಷೆಯಿದೆ.


Click it and Unblock the Notifications