ಕಣ್ಣು ಕುಕ್ಕುವ ಫೀಚರ್ಸ್.. ಶೀಘ್ರ ಹೊಸ ಕಂಪನಿ ವಿನ್‌ಫಾಸ್ಟ್‌ನ 1st ಎಲೆಕ್ಟ್ರಿಕ್ ಕಾರು ಬಿಡುಗಡೆ, ಬೆಲೆ ಅಗ್ಗವೇ?
ವಿಯೆಟ್ನಾಂ ಮೂಲದ ವಿನ್‌ಫಾಸ್ಟ್ (VinFast) ಜನಪ್ರಿಯ ವಾಹನ ತಯಾರಕ ಕಂಪನಿಯಾಗಿ ಹೊರಹೊಮ್ಮಿದೆ. ದೇಶೀಯ ಮಾರುಕಟ್ಟೆಯನ್ನು ಪ್ರವೇಶಿಸಲು ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಅದರ ಭಾಗವಾಗಿ, ವಿಎಫ್6 ಹಾಗೂ ವಿಎಫ್7 ಹೆಸರಿನ ಎಲೆಕ್ಟ್ರಿಕ್ ಎಸ್‌ಯುವಿಗಳನ್ನು ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳ ಶಾಪಿಂಗ್ ಮಾಲ್‌ಗಳಲ್ಲಿ ಕೂಡ ಪ್ರದರ್ಶನ ಮಾಡಿದೆ. ಎಲ್ಲವು ಅಂದುಕೊಂಡಂತೆ ನಡೆದರೆ, ಇದೇ ಸೆಪ್ಟೆಂಬರ್‌ನಲ್ಲಿ ವಿನ್‌ಫಾಸ್ಟ್‌ನ ಮೊದಲ ಕಾರಾಗಿ ವಿಎಫ್6 (VF6) ಬಿಡುಗಡೆಯಾಗಲಿದೆ. ಬನ್ನಿ, ಈ ಕಾರಿನ ನಿರೀಕ್ಷಿತ ಬೆಲೆ ಎಷ್ಟು.. ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಪೂರ್ಣವಾಗಿ ವಿವರಗಳನ್ನು ತಿಳಿಯೋಣ.
ಬೆಲೆ (Price):
ನೂತನ ವಿನ್‌ಫಾಸ್ಟ್ ವಿಎಫ್6 (VinFast VF6) ಎಲೆಕ್ಟ್ರಿಕ್ ಎಸ್‌ಯುವಿ, ಕೈಗೆಟುಕುವ ಬೆಲೆಯಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಇದು ರೂಪಾಂತರಗಳನ್ನು (ವೇರಿಯೆಂಟ್) ಅವಲಂಭಿಸಿ, ರೂ.18 ಲಕ್ಷದಿಂದ ರೂ.24 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಒಳಗೊಂಡಿರಬಹುದು ಎಂದು ಅಂದಾಜಿಸಲಾಗಿದೆ. ಈ ಕಾರಿಗೆ ಹ್ಯುಂಡೈ ಕ್ರೆಟಾ ಎಲೆಕ್ಟ್ರಿಕ್ ಹಾಗೂ ಟಾಟಾ ಹ್ಯಾರಿಯರ್ ಇವಿಗಳು ಪ್ರಬಲವಾದ ಪ್ರತಿಸ್ಪರ್ಧಿಯಾಗಲಿವೆ.

ವಿನ್ಯಾಸ (Design):
ಸದ್ಯ ಈ ಕಾರನ್ನು ಜಾಗತಿಕ ಮಾರುಕಟ್ಟೆಯಲ್ಲಿ ಮಾರಾಟಗೊಳಿಸಲಾಗುತ್ತಿದ್ದು, ಹೆಚ್ಚು ಅತ್ಯಾಧುನಿಕವಾದ ವಿನ್ಯಾಸವನ್ನು ಹೊಂದಿದೆ. ಇದು ನೋಡುಗರ ಕಣ್ಣು ಕುಕ್ಕುವಂತಿದೆ. 'ವಿ' ಆಕಾರಕ್ಕೆ ಹೋಲಿಕೆಯಾಗಬಲ್ಲ ಸಿಗ್ನೇಚರ್ ಎಲ್ಇಡಿ ಹೆಡ್‌ಲೈಟ್‌ಗಳು, ಫುಲ್ - ವಿಡ್ತ್ ಡಿಆರ್‌ಎಲ್‌ಗಳು ಹಾಗೂ 19-ಇಂಚಿರುವ ಅಲಾಯ್ ವೀಲ್‌ಗಳನ್ನು ಪಡೆದಿದೆ.
ಕಾರ್ಯಕ್ಷಮತೆ (Performance):
ಹೊಚ್ಚ ಹೊಸ ವಿನ್‌ಫಾಸ್ಟ್ ವಿಎಫ್6 ಎಲೆಕ್ಟ್ರಿಕ್ ಎಸ್‌ಯುವಿ, ಹೆಚ್ಚು ಶಕ್ತಿಯುತವಾದ ಪವರ್‌ಟ್ರೇನ್ ಆಯ್ಕೆಯನ್ನು ಹೊಂದಿದೆ. 59.6 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ನ್ನು ಒಳಗೊಂಡಿದೆ. ಭರ್ತಿ ಚಾರ್ಜ್‌ನಲ್ಲಿ 379 ರಿಂದ 410 ಕಿ.ಮೀ ವರೆಗೆ ರೇಂಜ್ (ಮೈಲೇಜ್) ಕೊಡುತ್ತದೆ. ಭಾರತದಲ್ಲೂ ಇದೇ ಪವರ್‌ಟ್ರೇನ್‌ನೊಂದಿಗೆ ಮಾರಾಟಕ್ಕೆ ಬರುವ ಎಲ್ಲ ಸಾಧ್ಯತೆಗಳಿವೆ.

ಆಸನ ಆಯ್ಕೆ (Seating Capacity):
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಇದೇ ಕಾರು, 5 ಆಸನಗಳನ್ನು ಹೊಂದಿದೆ. ಪ್ರಯಾಣಿಕರು ಆರಾಮದಾಯಕವಾಗಿ ಕುಳಿತುಕೊಂಡು ಸಂಚರಿಸಬಹುದು. ವಾರಾಂತ್ಯ ಹಾಗೂ ರಜಾದಿನಗಳಲ್ಲಿ ಪ್ರವಾಸಕ್ಕೆ ಹೋಗುವ ಸಂದರ್ಭದಲ್ಲಿ ಹೆಚ್ಚಿನ ಲಗೇಜ್ ಸಾಗಿಸಲು 423 ಲೀಟರ್ ಸಾಮರ್ಥ್ಯದ ಬೂಟ್ ಸ್ಪೇಸ್‌ನ್ನು ಪಡೆದಿದೆ. ಜೊತೆಗೆ 4,238 ಎಂಎಂ ಉದ್ದ, 1,820 ಎಂಎಂ ಅಗಲ ಮತ್ತು 1,594 ಎಂಎಂ ಎತ್ತರವು ಇದೆ. 2,730 ಎಂಎಂ ಉದ್ದದ ವೀಲ್‌ಬೇಸ್‌ನ್ನು ಒಳಗೊಂಡಿದೆ.
ವೈಶಿಷ್ಟ್ಯಗಳು (Features):
ವಿವಿಧ ದೇಶಗಳಲ್ಲಿ ಸಿಗುವ ಈ ವಿಎಫ್6 ಕಾರು ಹಲವು ಅತ್ಯಾಕರ್ಷಕ ವೈಶಿಷ್ಟ್ಯಗಳನ್ನು ಹೊಂದಿದೆ. ವಿಶೇಷವಾಗಿ 12.9-ಇಂಚಿರುವ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಹೆಡ್ ಅಪ್ ಡಿಸ್‌ಪ್ಲೇ, ರೇರ್ ಎಸಿ ವೆಂಟ್‌ಗಳು ಮತ್ತು ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳನ್ನು ಒಳಗೊಂಡಿದೆ. ದೇಶೀಯವಾಗಿ ಬಿಡುಗಡೆಯಾಗುವ ಕಾರು ಸಹ ಇದೇ ರೀತಿಯ ವೈಶಿಷ್ಟ್ಯಗಳನ್ನು ಒಳಗೊಂಡಿರಲಿದೆ ಎನ್ನಲಾಗಿದೆ.

ಸುರಕ್ಷತಾ ವೈಶಿಷ್ಟ್ಯಗಳು (Safety Features):
ನೂತನ ವಿನ್‌ಫಾಸ್ಟ್ ವಿಎಫ್6 ಎಲೆಕ್ಟ್ರಿಕ್ ಎಸ್‌ಯುವಿ ಪ್ರಯಾಣಿರಿಗೆ ಗರಿಷ್ಠ ರಕ್ಷಣೆ ಒದಗಿಸುತ್ತದೆ. ಸುರಕ್ಷತೆಗಾಗಿ 6-ಏರ್‌ಬ್ಯಾಗ್‌ಗಳು, ಲೆವೆಲ್-2 ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್), ರೇರ್ ಪಾರ್ಕಿಂಗ್ ಅಸಿಸ್ಟ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಲೈನ್ ಕೀಪಿಂಗ್ ಅಸಿಸ್ಟ್ ಮತ್ತು 360-ಡಿಗ್ರಿ ಕ್ಯಾಮೆರಾವನ್ನು ಹೊಂದಿದೆ. ಭಾರತದಲ್ಲಿ ಮಾರಾಟಕ್ಕೆ ಬರುವ ಕಾರಿನಲ್ಲೂ ಇಂತಹದ್ದೇ ರಕ್ಷಣಾತ್ಮಕ ವೈಶಿಷ್ಟ್ಯಗಳಿರಲಿವೆ ಎಂದು ಹೇಳಲಾಗಿದೆ.
ಇನ್ನು, ನೂತನ ವಿನ್‌ಫಾಸ್ಟ್ ವಿಎಫ್6 ಕಾರಿನ ಬರುವಿಕೆಗೆ ಗ್ರಾಹಕರು ಕೂಡ ತುದಿಗಾಲಿನಲ್ಲಿ ನಿಂತುಕೊಂಡು ಕಾಯುತ್ತಿದ್ದಾರೆ. ಇದು ಬಹಳಷ್ಟು ಅತ್ಯಾಧುನಿಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಪಡೆದುಕೊಂಡು ಬಿಡುಗಡೆಯಾಗಬಹುದು ಎನ್ನಲಾಗಿದೆ. ಈ ಎಲೆಕ್ಟ್ರಿಕ್ ಎಸ್‌ಯುವಿ ಮಾರಾಟಕ್ಕೆ ಬಂದ ಮೇಲೆ ದೇಶೀಯ ಗ್ರಾಹಕರಿಂದ ಯಾವ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.


Click it and Unblock the Notifications








