Budget 2026: ಹೊಚ್ಚ ಹೊಸ ಇವಿ ಖರೀದಿದಾರರಿಗೆ ಸಿಹಿಯೋ.? ಕಹಿಯೋ.?
ಇಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, 2026 - 2027ನೇ ಸಾಲಿನ ಬಜೆಟ್‌ನ್ನು ಯಶಸ್ವಿಯಾಗಿ ಮಂಡಿಸಿದ್ದಾರೆ. ವಿಶೇಷವಾಗಿ ಕೇಂದ್ರ ಸರ್ಕಾರವು ಆರ್ಥಿಕತೆಯ ಬೆನ್ನೆಲುಬಾಗಿ ಹೊರಹೊಮ್ಮುತ್ತಿರುವ ಎಲೆಕ್ಟ್ರಿಕ್ ವಾಹನೋದ್ಯಮದಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ಸಜ್ಜಾಗಿದೆ. ಈ ಬಜೆಟ್‌ನಲ್ಲಿ ಪರಿಸರ ಸ್ನೇಹಿ ಸಾರಿಗೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಎಲೆಕ್ಟ್ರಿಕ್ ವಾಹನಗಳು ಸಾಮಾನ್ಯ ಜನರಿಗೂ ಕೈಗೆಟಕುವ ದರದಲ್ಲಿ ಲಭ್ಯವಾಗುವಂತೆ ಮಾಡುವ ಹಲವು ಕ್ರಮಗಳನ್ನು ಕೈಗೊಂಡಿದೆ.
ಈ ಬಾರಿಯ ಕೇಂದ್ರ ಬಜೆಟ್ ಎಲೆಕ್ಟ್ರಿಕ್ ವಾಹನಗಳ ತಯಾರಿಕಾ ವೆಚ್ಚವನ್ನು ಕಡಿಮೆ ಮಾಡಲು ಪೂರಕವಾಗಿದೆ. ಆದರೆ ಗ್ರಾಹಕರಿಗೆ ತಕ್ಷಣವೇ ಯಾವುದೇ ಬೆಲೆ ಇಳಿಕೆಯ ಪ್ರಯೋಜನಗಳು ದೊರೆಯುವುದಿಲ್ಲ. ಹೀಗಾಗಿ, ಹೊಚ್ಚ ಹೊಸ ಎಲೆಕ್ಟ್ರಿಕ್ ವಾಹನಗಳ ಎಕ್ಸ್-ಶೋರೂಂ ದರಗಳು ಯಥಾಸ್ಥಿತಿಯಲ್ಲಿ ಮುಂದುವರಿಯಲಿದೆ.

ಸೆಮಿಕಂಡಕ್ಟರ್ ವಲಯಕ್ಕೆ ರೂ.40,000 ಕೋಟಿ:
ಪ್ರತಿಯೊಂದು ವಾಹನಗಳ ತಯಾರಿಕೆಗೆ 'ಸೆಮಿಕಂಡಕ್ಟರ್'ಗಳು ತುಂಬಾ ಅತ್ಯಗತ್ಯವಾಗಿವೆ. ಸಾಮಾನ್ಯ ಭಾಷೆಯಲ್ಲಿ ಹೇಳಬೇಕಾದರೆ, ಚಕ್ರಗಳ ಮೇಲೆ ಕಂಪ್ಯೂಟರ್‌ನಂತೆ ಕಾರ್ಯನಿರ್ವಹಿಸುತ್ತದೆ. ಒಂದು ಸ್ಟ್ಯಾಂಡರ್ಡ್ ಎಲೆಕ್ಟ್ರಿಕ್ ಕಾರಿನ ತಯಾರಿಕೆಗೆ 1,400 ರಿಂದ 3,000 ಸೆಮಿಕಂಡಕ್ಟರ್ ಚಿಪ್‌ಗಳು ಬೇಕಾಗುತ್ತವೆ. ಇವು ಬ್ಯಾಟರಿ ಪ್ಯಾಕ್ ಹಾಗೂ ಇತರೆ ಪರಿಕರಗಳ ಕಾರ್ಯನಿರ್ವಹಣೆಯನ್ನು ಸುಗಮಗೊಳಿಸುತ್ತವೆ.
ಕಳೆದ ಕೆಲವು ವರ್ಷಗಳಿಂದ ವಿಶ್ವದ್ಯಾಂತ ಕಾರುಗಳಿಂದ ಹಿಡಿದು ಸ್ಮಾರ್ಟ್‌ಫೋನ್‌ಗಳವರೆಗೆ ಸೆಮಿಕಂಡಕ್ಟರ್ ಚಿಪ್‌ಗಳ ಕೊರತೆಯಿದೆ. ಭಾರತದಲ್ಲೂ ಈ ಸಮಸ್ಯೆಯಿದೆ. ಬುಕ್ಕಿಂಗ್ ಮಾಡಿದ ಹೊಸ ಎಲೆಕ್ಟ್ರಿಕ್ ಕಾರನ್ನು ವಿತರಣೆ ಪಡೆಯಲು ತಿಂಗಳುಗಟ್ಟಲೆ ಕಾಯುವ ಪರಿಸ್ಥಿತಿಯಿದೆ. ಜೊತೆಗೆ ಸೆಮಿಕಂಡಕ್ಟರ್ ಚಿಪ್‌ಗಳಿಗಾಗಿ ಜಪಾನ್, ತೈವಾನ್ ಮತ್ತು ಚೀನಾ ದೇಶಗಳನ್ನು ಅವಲಂಭಿಸಬೇಕಾಗಿದೆ.
ಸದ್ಯ, ನಿರ್ಮಲಾ ಸೀತಾರಾಮನ್ ಅವರು ಬಜೆಟ್‌ನಲ್ಲಿ ಸೆಮಿಕಂಡಕ್ಟರ್ ವಲಯಕ್ಕೆ ಭರ್ಜರಿ ಕೊಡುಗೆ ಘೋಷಿಸಿದ್ದಾರೆ. 'ಸೆಮಿಕಂಡಕ್ಟರ್ ಮಿಷನ್ 2.0'ಗೆ ಚಾಲನೆ ನೀಡಲಾಗಿದೆ. ಈ ವಲಯಕ್ಕೆ ರೂ.40,000 ಕೋಟಿ ಅನುದಾನವನ್ನು ಮೀಸಲಿಡಲಾಗಿದ್ದು, ಎಲೆಕ್ಟ್ರಾನಿಕ್ಸ್ ಉತ್ಪಾದನಾ ಕ್ಷೇತ್ರದಲ್ಲಿ ದೊಡ್ಡ ಮಟ್ಟದ ಬದಲಾವಣೆಗಳನ್ನು ನಿರೀಕ್ಷಿಸಲಾಗಿದೆ. ಜೊತೆಗೆ ಖನಿಜಗಳು ಸಮೃದ್ಧವಾಗಿರುವ ಒರಿಸ್ಸಾ, ಕೇರಳ ಹಾಗೂ ಆಂಧ್ರಪ್ರದೇಶದಲ್ಲಿ 'ರೇರ್ ಅರ್ಥ್ ಕಾರಿಡಾರ್' ಅಭಿವೃದ್ಧಿಪಡಿಸುವುದಾಗಿ ಬಜೆಟ್ ಭಾಷಣದಲ್ಲಿ ತಿಳಿಸಲಾಗಿದೆ.
ಬ್ಯಾಟರಿಯಲ್ಲಿ ಉಪಯೋಗಿಸುವ ಕಚ್ಚಾ ವಸ್ತುಗಳ ಮೇಲೆಯೂ ಸುಂಕ ವಿನಾಯಿತಿ:
ಕೇಂದ್ರ ಸರ್ಕಾರವು ಶೂನ್ಯ ಹೊರಸುವಿಕೆಯ ವಾಹನಗಳ ಬಳಕೆಯನ್ನು ಉತ್ತೇಜಿಸಲು ಟೊಂಕ ಕಟ್ಟಿ ನಿಂತಿದೆ. ಬ್ಯಾಟರಿಗಳಲ್ಲಿನ ಲಿಥಿಯಂ-ಐಯಾನ್ ಸೆಲ್‌ಗಳನ್ನು ತಯಾರಿಸಲು ಉಪಯೋಗಿಸುವ ಕಚ್ಚಾ ವಸ್ತುಗಳ ಮೇಲೆ ಕಸ್ಟಮ್ಸ್ ಸುಂಕ ವಿನಾಯಿತಿ ಮುಂದುವರಿಸುವುದಾಗಿ ಹಣಕಾಸು ಸಚಿವರು ತಿಳಿಸಿದ್ದಾರೆ.
ಪಿಎಂ ಇ-ಡ್ರೈವ್ (PM E-DRIVE) ಯೋಜನೆಗೆ ಅನುದಾನ:
ಇಂದಿನ ಬಜೆಟ್‌ನಲ್ಲಿ ಪಿಎಂ ಇ-ಡ್ರೈವ್ (ಎಲೆಕ್ಟ್ರಿಕ್ ಡ್ರೈವ್ ರೆವಲ್ಯೂಷನ್ ಇನ್ ಇನ್ನೋವೇಟಿವ್ ವೆಹಿಕಲ್ ಎನ್‌ಹ್ಯಾನ್ಸ್‌ಮೆಂಟ್) ಯೋಜನೆಗಾಗಿ ರೂ.1,500 ಕೋಟಿ ಅನುದಾನವನ್ನು ಮೀಸಲಿಡಲಾಗಿದೆ ಎಂದು ಘೋಷಣೆ ಮಾಡಲಾಗಿದೆ. ಈ ಮೂಲಕ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸಲಾಗುತ್ತದೆ. ಜೊತೆಗೆ ಚಾರ್ಜಿಂಗ್ ಮೂಲಸೌಕರ್ಯಗಳನ್ನು ಬಲಪಡಿಸಲಾಗುತ್ತದೆ.


Click it and Unblock the Notifications








