ಭಾರತದಲ್ಲಿ ಕೊರಿಯಾ ಬ್ರ್ಯಾಂಡ್ ಜೋರು: ಅಗ್ಗದ EV ಬಿಡುಗಡೆಗೆ ಸರ್ವಸಿದ್ಧ: ಬೆಲೆಯೆಷ್ಟು?
ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ನಿಧಾನವಾಗಿ ಬೇಡಿಕೆ ಹೆಚ್ಚಾಗುತ್ತಿದೆ, ಖರೀದಿದಾರರ ಸಂಖ್ಯೆ ದಾಖಲೆ ಮಟ್ಟದಲ್ಲಿ ಬೆಳಯುತ್ತಿದೆ. ಇದನ್ನರಿತಿರುವ ಟೊಯೋಟಾ ಹಾಗೂ ಮಾರುತಿ ಬ್ರ್ಯಾಂಡ್‌ಗಳು ಕೂಡ ತಮ್ಮ ಮೊದಲ ಎಲೆಕ್ಟ್ರಿಕ್ ಕಾರುಗಳನ್ನು ಇತ್ತೀಚೆಗಷ್ಟೆ ಮಾರುಕಟ್ಟೆಯಲ್ಲಿ ಪರಿಚಯಿಸಿವೆ. ಈಗ ಕಿಯಾ ಕೂಡ ಮತ್ತೊಂದು ಕೈಗೆಟುಕುವ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆ ಮಾಡಲು ಸಜ್ಜಾಗುತ್ತಿದೆ. ಈಗಾಗಲೇ ಕಿಯಾ ಕಂಪನಿಯು EV6, ಕಾರೆನ್ಸ್ ಕ್ಲಾವಿಸ್ ಇವಿ ಹಾಗೂ ಕಿಯಾ ಇವಿ9 ಎಂಬ ಮೂರು ಎಲೆಕ್ಟ್ರಿಕ್ ಕಾರುಗಳನ್ನು ಹೊಂದಿದೆಯಾದರೂ, ಮಧ್ಯಮ ವರ್ದವರಿಗಾಗಿ ಕಮ್ಮಿ ಬೆಲೆಯ ಯಾವುದೇ ಎಲೆಕ್ಟ್ರಿಕ್ ಕಾರನ್ನು ನೀಡುತ್ತಿಲ್ಲ.
ಹಾಗಾಗಿ ಈಗ ಕಿಯಾ ತನ್ನ ಕೈಗೆಟುಕುವ ಎಲೆಕ್ಟ್ರಿಕ್ ಕಾರನ್ನು ಪರಿಚಯಿಸಲು ಸಿದ್ಧವಾಗುತ್ತಿದೆ. ಮುಂಬರುವ ಕಿಯಾ ಎಲೆಕ್ಟ್ರಿಕ್ ಕಾರನ್ನು ಭಾರತದಲ್ಲಿ ಪರೀಕ್ಷೆಗೆ ಒಳಪಡಿಸಲಾಗಿದ್ದು, ರಸ್ತೆಯಲ್ಲಿ ಟೆಸ್ಟಿಂಗ್ ಮಾಡುವಾಗ ಕಾಣಿಸಿಕೊಂಡಿದೆ. ಈ ಎಲೆಕ್ಟ್ರಿಕ್ ಎಸ್‌ಯುವಿ ಬಗ್ಗೆ ಹೊಸ ವಿವರಗಳು ಈಗ ಬಹಿರಂಗವಾಗಿವೆ. ಪರೀಕ್ಷಿಸಲಾಗುತ್ತಿದ್ದ ಕಾರನ್ನು ಸಂಪೂರ್ಣ ಮರೆಮಾಚಲಾಗಿತ್ತು, ಆದರೆ ನಮಗೆ ಗೋಚರಿಸಿರುವ ಕೆಲವು ವಿನ್ಯಾಸ ಸೂಚನೆಗಳು ಇದು 'ಸೈರೋಸ್ ಸಬ್‌ಕಾಂಪ್ಯಾಕ್ಟ್ ಎಸ್‌ಯುವಿ'ಯ ಎಲೆಕ್ಟ್ರಿಕ್ ಆವೃತ್ತಿ ಎಂಬುದನ್ನು ಸ್ಪಷ್ಟಪಡಿಸಿದೆ.

ಹೊಸ ಕಿಯಾ ಸೈರೋಸ್ ಎಲೆಕ್ಟ್ರಿಕ್ ಆವೃತ್ತಿಯು ಮಾರಾಟಕ್ಕೆ ಬಂದ ನಂತರ, ಟಾಟಾ ನೆಕ್ಸಾನ್ ಇವಿ, ಎಂಜಿ ವಿಂಡ್ಸರ್ ಇವಿ ಮತ್ತು ಮಹೀಂದ್ರಾ ಎಕ್ಸ್‌ಯುವಿ 3XO ಇವಿ ನಂತಹ ಪ್ರತಿಸ್ಪರ್ಧಿಗಳ ವಿರುದ್ಧ ಸ್ಪರ್ಧಿಸುತ್ತದೆ. ಈ ವರ್ಷದ ಕೊನೆಯಲ್ಲಿ ಭಾರತದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಇದರ ಬೆಲೆ ರೂ. 15 ರಿಂದ 20 ಲಕ್ಷ (ಎಕ್ಸ್ - ಶೋರೂಂ) ನಡುವೆ ಇರುತ್ತದೆ ಎಂದು ನಿರೀಕ್ಷಿಸಲಾಗಿದೆ.
ಕಿಯಾ ಸೈರೋಸ್ ಇವಿ ವಿಶೇಷತೆಗಳು
ಫೀಚರ್ಸ್ ವಿಷಯಕ್ಕೆ ಬಂದರೆ ಡ್ಯುಯಲ್ 12.3-ಇಂಚಿನ ಸ್ಕ್ರೀನ್‌ಗಳು, ಪನೋರಮಿಕ್ ಸನ್‌ರೂಫ್, ವೆಂಟಿಲೇಟೆಡ್ ಸೀಟ್‌ಗಳು ಮತ್ತು ವೈರ್‌ಲೆಸ್ ಚಾರ್ಜಿಂಗ್ ಒಳಗೊಂಡಿರಬಹುದು. ವಿ 2 ಎಲ್ ಮತ್ತು ವಿ 2 ವಿ ಸಾಮರ್ಥ್ಯಗಳಂತಹ ಇವಿ-ನಿರ್ದಿಷ್ಟ ಸೇರ್ಪಡೆಗಳನ್ನು ಸಹ ನೀಡಬಹುದು ಎನ್ನಲಾಗಿದೆ. ಉಳಿದಂತೆ ಹೊಸ ಕಿಯಾ ಸೈರೋಸ್ ಇವಿ ಇಂಟೀರಿಯರ್, ಬಹುತೇಕ ತನ್ನ ಇಂಧನ ಚಾಲಿತ ಆವೃತ್ತಿಯ ವಿನ್ಯಾಸವನ್ನು ಹೋಲುವ ಸಾಧ್ಯತೆಯಿದೆ.

ಪರೀಕ್ಷೆ ವೇಳೆ ಕಾಣಿಸಿಕೊಂಡಾಗ ಈ ಕಾರಿನ ಹೊರ ಭಾಗದ ಡಿಸೈನ್ ಸಂಪೂರ್ಣ ಇಂಧನ ಚಾಲಿತ ಸೈರೋಸ್ ಕಾರಿನಂತೆ ಅದೇ ಬಾಕ್ಸಿ ಲುಕ್ ಇತ್ತು. ಆದರೆ ಮುಂಭಾಗದ ಎಡ ಭಾಗದಲ್ಲಿ ಚಾರ್ಜಿಂಗ್ ಪ್ಲೆಗ್ ನೀಡಲಾಗಿದೆ. ಅಲಾಯ್ ವೀಲ್‌ಗಳು ಅದೇ 17-ಇಂಚಿನದ್ದಾಗಿವೆ. ಹಿಂಭಾಗದ ಬಂಪರ್ ಸ್ವಲ್ಪ ನವೀಕೃತವಾಗಿದೆ, ಪರಿಷ್ಕೃತ ರೂಫ್ ರೈಲ್‌ಗಳು ಸಹ ಗೋಚರಿಸಿವೆ.
ವರದಿಯ ಪ್ರಕಾರ ಹೊಸ ಸೈರಸ್, ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾರಾಟವಾಗುವ ಹುಂಡೈ ಇನ್‌ಸ್ಟರ್ EV ಯೊಂದಿಗೆ ತನ್ನ ಪ್ಲಾಟ್‌ಫಾರ್ಮ್ ಹಂಚಿಕೊಳ್ಳಲಿದೆ ಎಂದು ಹೇಳಲಾಗುತ್ತಿದೆ. ಇದನ್ನು K1 ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಿಸಲಾಗುವುದು ಹಾಗೂ ಫ್ರಂಟ್-ವೀಲ್-ಡ್ರೈವ್ (FWD) ಸಂರಚನೆಯಲ್ಲಿ ನೀಡಲಾಗುವುದು. ಅಧಿಕೃತ ಪವರ್‌ಟ್ರೇನ್ ವಿವರಗಳನ್ನು ಇನ್ನೂ ದೃಢೀಕರಿಸಲಾಗಿಲ್ಲ.
ಆದರೆ ಅಂತರಾಷ್ಟ್ರೀಯ ಮಾಡಲ್ ಇನ್‌ಸ್ಟರ್ ಎಲೆಕ್ಟ್ರಿಕ್ ಕಾರು 42kWh ಮತ್ತು 49kWh ಎಂಬ ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳೊಂದಿಗೆ ಮಾರಾಟವಾಗುತ್ತದೆ. ಈ ಕಾರನ್ನು ಒಮ್ಮೆ ಸಂಪೂರ್ಣವಾಗಿ ಚಾರ್ಜ್ ಮಾಡಿದರೆ 369 ಕಿ.ಮೀ ವರೆಗೆ ರೇಂಜ್ ನೀಡುತ್ತದೆ. ಇದೇ ಆಯ್ಕೆಗಳು ಮುಂಬರಲಿರುವ ಕಿಯಾ ಸೈರಸ್‌ನಲ್ಲಿಯೂ ನೀಡುವ ಸಾಧ್ಯತೆ ಇದೆ.
ಇನ್ನು ಕಿಯಾ ಸೈರೋಸ್ ಇವಿ ಕಾರಿನಲ್ಲಿ LED ಹೆಡ್‌ಲೈಟ್‌ಗಳು L-ಆಕಾರದ DRLಗಳು, LED ಟೈಲ್-ಲೈಟ್‌ಗಳು, ADAS ರಾಡಾರ್ ಸೆನ್ಸಾರ್ ಮತ್ತು 360-ಡಿಗ್ರಿ ಕ್ಯಾಮೆರಾ ಸೆಟಪ್‌ನಂತಹ ಪ್ರಮುಖವಾದವು ತನ್ನ ಇಂಧನ ಚಾಲಿತ ಆವೃತ್ತಿಯಂತೆಯೇ ಇರಲಿವೆ. ಉಳಿದಂತೆ ಇದು ಎಲೆಕ್ಟ್ರಿಕ್ ಕಾರು ಎಂಬುದನ್ನು ತಿಳಿಸಲು, ಕಿಯಾ ಸ್ವಲ್ಪ ವಿಭಿನ್ನವಾದ ಕಾಸ್ಮೆಟಿಕ್ ಬದಲಾವಣೆಗಳು ಹಾಗೂ ಆಕರ್ಷಕ ಹೊಸ ಮುಂಭಾಗದ ಬಂಪರ್ ಪರಿಚಯಿಸಬಹುದು.


Click it and Unblock the Notifications








