Maruti: ಮಾರುತಿಯ ಮೊದಲ ಎಲೆಕ್ಡ್ರಿಕ್ ಕಾರಿನ ಬೆಲೆ ಮಾಹಿತಿ ಸೋರಿಕೆ: ಸಾಮಾನ್ಯರಿಗೆ ಸಿಗಲ್ಲ ಬಿಡಿ!
ಭಾರತದಲ್ಲಿ ಬಹುತೇಕ ಎಲ್ಲಾ ಬ್ರಾಂಡ್‌ಗಳು ಈಗಾಗಲೇ ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆ ಮಾಡಿವೆ. ಆದರೆ ಇಂಧನ ಚಾಲಿತ ಕಾರುಗಳ ಮಾರಾಟದಲ್ಲಿ ಭಾರತದಲ್ಲಿ ನಂ.1 ಸ್ಥಾನದಲ್ಲಿರುವ ಮಾರುತಿ ಸುಜುಕಿ (Maruti Suzuki), ತನ್ನ ಮೊದಲ ಎಲೆಕ್ಟ್ರಿಕ್ ಕಾರನ್ನು ಅನಾವರಣಗೊಳಿಸಿದೆಯಾದರೂ ಇನ್ನು ಬಿಡುಗಡೆ ಮಾಡಿಲ್ಲ. ಮಾರುತಿಯ ಮೊದಲ ಎಲೆಕ್ಟ್ರಿಕ್ ಕಾರಿನ ಹೆಸರು ಇ-ವಿಟಾರಾ (e-Vitara) ಎಂದು ನಾಮಕರಣ ಮಾಡಲಾಗಿದೆ. ಕಾರಿನ ಬಗ್ಗೆ ಸಂಪೂರ್ಣ ವಿವರಗಳನ್ನು ಕಂಪನಿ ಈಗಾಗಲೇ ಬಹಿರಂಗಪಡಿಸಿದೆ, ವಿದೇಶಗಳಿಗೂ ರಫ್ತು ಮಾಡುತ್ತಿದೆ. ಆದರೆ ಭಾರತದಲ್ಲಿ ಇನ್ನೂ ಮಾರಟಕ್ಕೆ ತಂದಿಲ್ಲ, ಇದೀಗ ಬೆಲೆ ಮಾಹಿತಿ ಸೋರಿಕೆಯಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ.
ಡಿಸೆಂಬರ್ 02, 2025 ರಂದು ಮಾರುತಿ ಎಲೆಕ್ಟ್ರಿಕ್ ಕಾರು ಮೊದಲ ಬಾರಿಗೆ ಬಹಿರಂಗಗೊಂಡಾಗಿನಿಂದ ಅಧಿಕೃತ ಬೆಲೆಗಳ ಬಗ್ಗೆ ಹೆಚ್ಚಿನ ನಿರೀಕ್ಷೆಗಳಿವೆ. ಇದು ಮಾರುಕಟ್ಟೆಯಲ್ಲಿನ ಇತರ ಎಲೆಕ್ಟ್ರಿಕ್ ಕಾರುಗಳಿಗಿಂತ ಕಮ್ಮಿ ಬೆಲೆಯಲ್ಲಿ ಸಿಗಲಿದೆ ಎಂಬೆಲ್ಲ ನಿರೀಕ್ಷಿಗಳಲ್ಲಿ ಸಾಮಾನ್ಯ ಜನರಿದ್ದಾರೆ. ಆದರೆ ಇದೀಗ ಬೆಲೆ ಮಾಹಿತಿ ಸೋರಿಕೆಯಾಗಿದ್ದು, ಎಲ್ಲರ ನಿರೀಕ್ಷೆಗಳು ಹುಸಿಯಾಗಿವೆ.

ಮಾರುತಿ ಸುಜುಕಿ ಇ-ವಿಟಾರಾದ ಅಧಿಕೃತ ಬೆಲೆ ಬಹಿರಂಗಪಡಿಸುವ ಮೊದಲೇ ಸೋರಿಕೆಯಾಗಿದ್ದು, ಬ್ರ್ಯಾಂಡ್‌ನ ನೆಕ್ಸಾ ವೆಬ್‌ಸೈಟ್, ಕೆಲವು ಅಧಿಕೃತ ಡೀಲರ್‌ಶಿಪ್‌ಗಳೊಂದಿಗೆ ಇ-ವಿಟಾರಾದ ಆಲ್ಫಾ ವೇರಿಯೆಂಟ್ ಬೆಲೆ ರೂ. 24.79 ಲಕ್ಷ (ಎಕ್ಸ್-ಶೋರೂಂ) ಎಂದು ಪಟ್ಟಿ ಮಾಡಲಾಗಿದೆ. ಅಂದಹಾಗೆ ಆಲ್ಫಾ ವೇರಿಯೆಂಟ್ ಎಂಬುದು ಕಾರಿನ ಟಾಪ್ ವೇರಿಯೆಂಟ್ ಆಗಿರಬಹುದು. ಹಾಗಾಗಿ ಬೇಸ್ ವೇರಿಯೆಂಟ್ ಬೆಲೆಗಳಿಗಾಗಿ ಇನ್ನು ಕಾಯಬೇಕಿದೆ.
ಹಲವಾರು ಮಾಧ್ಯಮ ವರದಿಗಳ ಪ್ರಕಾರ, ಕೆಲವು ಡೀಲರ್‌ಶಿಪ್‌ಗಳು ಉಲ್ಲೇಖಿಸಲಾದ ಬೆಲೆಯಲ್ಲಿ ಮಾರುತಿ ಸುಜುಕಿ ಇ-ವಿಟಾರಾಕ್ಕಾಗಿ ಬುಕಿಂಗ್‌ಗಳನ್ನು ಸಹ ಸ್ವೀಕರಿಸುತ್ತಿವೆ. ಬೆಲೆಗಳನ್ನು ಸದ್ದಿಲ್ಲದೆ ಬಹಿರಂಗಪಡಿಸಲಾಗಿದೆಯೇ ಅಥವಾ ಇದು ತಾಂತ್ರಿಕ ದೋಷವೇ ಎಂಬುದು ತಿಳಿದುಬಂದಿಲ್ಲ. ಈ ಸಮಸ್ಯೆಯ ಕುರಿತು ಬ್ರ್ಯಾಂಡ್ ಇನ್ನೂ ಯಾವುದೇ ಸ್ಪಷ್ಟೀಕರಣವನ್ನು ನೀಡಿಲ್ಲ. ಇ-ವಿಟಾರಾದ ಟಾಪ್-ಸ್ಪೆಕ್ ಆಲ್ಫಾ ಟ್ರಿಮ್‌ನ ಬೆಲೆ ರೂ. 24.79 ಲಕ್ಷ (ಎಕ್ಸ್-ಶೋರೂಂ) ಎಂದು ಸೈಟ್‌ನಲ್ಲಿ ತೋರುತ್ತಿದೆ.

ಮೊದಲೇ ಹೇಳಿದಂತೆ ಸಣ್ಣ ಬ್ಯಾಟರಿ ಪ್ಯಾಕ್ ಹೊಂದಿರುವ ವೇರಿಯೆಂಟ್‌ಗಳ ಬೆಲೆಗಳನ್ನು ಇನ್ನೂ ಪಟ್ಟಿ ಮಾಡಬೇಕಾಗಿದೆ. ಒಂದು ವೇಳೆ ಬೇಸ್ ವೇರಿಯೆಂಟ್‌ಗಳ ಬೆಲೆಗಳು ಜನರ ನಿರೀಕ್ಷೆಗಿಂತ ಹೆಚ್ಚಿದ್ದರೆ ಮಾರುಕಟ್ಟೆಯಲ್ಲಿ ಈ ಮಾಡಲ್ ಯಶಸ್ಸು ಕಾಣುವುದು ಕಷ್ಟ ಎಂದು ಆಟೋ ತಜ್ಞನರು ಅಭಿಪ್ರಾಯಪಟ್ಟಿದ್ದಾರೆ. ಮುಂಬರಲಿರುವ ಮಾರುತಿ ಇ-ವಿಟಾರಾ ವಿಶೇಷತೆಗಳನ್ನು ಕೆಳಗೆ ನೋಡೋಣ.
ಮಾರುತಿ ಸುಜುಕಿ ಇ-ವಿಟಾರಾ ಫೀಚರ್ಸ್
ಮಾರುತಿ ಸುಜುಕಿ ಇ-ವಿಟಾರಾ ಮುಂದಿನ ಸಾಲಿನ ವೆಂಟಿಲೇಟೆಡ್ ಸೀಟ್‌ಗಳು ಮತ್ತು 10 - ವೇ ಪವರ್ ಅಡ್ಜಸ್ಟಬಲ್ ಟ್ರೈವರ್ ಸೀಟ್, ಹಿಂಭಾಗದ ಸೀಟ್‌ಗಳಲ್ಲಿ ಪ್ರಯಾಣಿಕರಿಗೆ ಸ್ಲೈಡಿಂಗ್ ಮತ್ತು ಒರಗಿಕೊಳ್ಳುವ ಸೌಕರ್ಯವನ್ನು ನೀಡಲಾಗಿದೆ. ಸಂಪೂರ್ಣ ಆಟೋಮ್ಯಟಿಕ್ ಕ್ಲೈಮೆಟ್ ಕಂಟ್ರೋಲ್, ಪನೋರಮಿಕ್ ಸನ್‌ರೂಫ್, ಆಂಬಿಯೆಂಟ್ ಲೈಟಿಂಗ್, ವೈರ್‌ಲೆಸ್ ಚಾರ್ಜರ್ ಮತ್ತು ಇನ್ನೂ ಹಲವು ಸುಧಾರಿತ ಫೀಚರ್ಸ್ ಹೊಂದಿದೆ.

ಸುರಕ್ಷತೆಯ ವಿಷಯದಲ್ಲಿ, ಮೊಟ್ಟಮೊದಲ ಎಲೆಕ್ಟ್ರಿಕ್ ಮಾರುತಿ ಕಾರು 7-ಏರ್‌ಬ್ಯಾಗ್‌ಗಳು, EBD ಜೊತೆಗೆ ABS, ಆಟೋ ಹೋಲ್ಡ್ ಕಾರ್ಯದೊಂದಿಗೆ ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್, ಹಿಲ್ ಹೋಲ್ಡ್ ಅಸಿಸ್ಟ್ ಮತ್ತು ಲೆವೆಲ್ 2 ADAS ಸೂಟ್‌ನಂತಹ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಜೊತೆಗೆ ತನ್ನ ಗಟ್ಟಿಮುಟ್ಟಾದ ನಿರ್ಮಾಣಕ್ಕೆ 5 - ಸ್ಟಾರ್ ಸುರಕ್ಷತಾ ರೇಟಿಂಗ್ ಸಹ ಪಡೆದುಕೊಂಡಿದೆ.
ರೇಂಜ್ & ಬ್ಯಾಟರಿ
ಮಾರುತಿ ಸುಜುಕಿ ಇ-ವಿಟಾರಾ ಸಣ್ಣ 49 kWh ಬ್ಯಾಟರಿ ಹಾಗೂ 61 kWh ಬ್ಯಾಟರಿ ಪ್ಯಾಕ್ ಆಯ್ಕೆಗಳೊಂದಿಗೆ ಬರುತ್ತದೆ. ಸಂಪೂರ್ಣವಾಗಿ ಚಾರ್ಜ್ ಮಾಡಿದರೆ 543 ಕಿಲೋಮೀಟರ್‌ಗಳವರೆಗೆ ರೇಂಜ್ ನೀಡುತ್ತದೆ. ಜೊತೆಗೆ ಇದು ಫ್ರಂಟ್-ವೀಲ್ ಡ್ರೈವ್ ಮತ್ತು ಆಲ್ ವೀಲ್ ಡ್ರೈವ್ ಕಾನ್ಫಿಗರೇಶನ್‌ಗಳನ್ನು ಸಹ ಪಡೆಯುತ್ತದೆ (ಮಾರುತಿ ಸುಜುಕಿಯ ಆಲ್ ಗ್ರಿಪ್). ಆದಾಗ್ಯೂ, ಆಲ್ ಗ್ರಿಪ್ ಅನ್ನು 61 kWh ಬ್ಯಾಟರಿ ಪ್ಯಾಕ್‌ನೊಂದಿಗೆ ಮಾತ್ರ ನೀಡಲಾಗುತ್ತದೆ.


Click it and Unblock the Notifications








