Maruti: ಬರೀ 6 ಲಕ್ಷಕ್ಕೆ ಹೊಸ 7-ಸೀಟರ್: ಫುಲ್ ಡಿಮ್ಯಾಂಡ್... ದಿನಕ್ಕೆ 415 ಕಾರುಗಳ ಮಾರಾಟ!
ಮಾರುತಿ ಸುಜುಕಿ ಪ್ರಸ್ತುತ ಭಾರತದಲ್ಲಿ ಬಹುತೇಕರ ಕಾರು ಖರೀದಿಸುವ ಕನಸನ್ನು ನನಸು ಮಾಡುತ್ತಿದೆ. ಕಡಿಮೆ ಬೆಲೆಗೆ ಪುಟ್ಟ ಕಾರುಗಳನ್ನು ನೀಡುತ್ತಾ ಬಡವರು, ಮಧ್ಯಮ ವರ್ಗದವರಿಗೆ ಫೇವರೆಟ್ ಬ್ರ್ಯಾಂಡ್ ಆಗಿ ಮುಂದುವರಿಯುತ್ತಿದೆ. ಕೇವಲ ಪುಟ್ಟ ಕಾರುಗಳನ್ನು ಮಾತ್ರವಲ್ಲದೆ, ದೊಡ್ಡ 7-ಸೀಟರ್ ಕಾರನ್ನು ಕೂಡ ಕಮ್ಮಿ ಬೆಲೆಯಲ್ಲಿ ಮಾರಾಟ ಮಾಡುತ್ತಿದೆ. ಈ ಮೂಲಕ ಅಗ್ಗವಾಗಿ ದೊಡ್ಡ ಫ್ಯಾಮಿಲಿಗಳು ಕೂಡ 7-ಸೀಟರ್ ಕಾರುಗಳಲ್ಲಿ ಓಡಾಡಲು ಅನುವು ಮಾಡಿಕೊಡುತ್ತಿದೆ. ಕೇವಲ ರೂ. 5.20 ಲಕ್ಷ ಆರಂಭಿಕ ಬೆಲೆಯಲ್ಲಿ ದೊಡ್ಡ 7-ಸೀಟರ್ ಕಾರು ನೀಡುತ್ತಿದ್ದು, ಜನ ಈ ಕಾರನ್ನು ಇಷ್ಟಪಟ್ಟು ಖರೀದಿಸುತ್ತಿದ್ದಾರೆ.
ಮಾರುತಿ ಸುಜುಕಿ ಇಕೊ (Maruti Suzuki Eeco) ಕಾರು, ಬ್ರ್ಯಾಂಡ್‌ನ ಅಗ್ಗದ ಬೆಲೆಯ ಅತ್ಯಂತ ಜನಪ್ರಿಯ 7-ಸೀಟರ್ ಕಾರಾಗಿದೆ. ತೀರಾ ಕಮ್ಮಿ ಬೆಲೆಯಿರುವುದರಿಂದ ಜನ ತಮ್ಮ ಅವಸರಗಳಿಗೆ ಅನುಗುಣವಾಗಿ ಬಳಸಿಕೊಳ್ಳಲು ಹೆಚ್ಚಾಗಿ ಖರೀದಿಸುತ್ತಿದ್ದಾರೆ. ಇದರ ಗಾತ್ರ ಕೂಡ ಹೆಚ್ಚಾಗಿರುವುದರಿಂದ ಆಂಬುಲನ್ಸ್ ಹಾಗೂ ಇತರ ವಾಣಿಜ್ಯ ಕೆಲಸಗಳಿಗೆ ಹೆಚ್ಚಾಗಿ ಬಳಸಿಕೊಳ್ಳಲಾಗುತ್ತಿದೆ. ಹೆಚ್ಚು ಬೇಡಿಕೆಯಿರುವ ಈ ಕಾರನ್ನು 2026 ಫೆಬ್ರವರಿ ತಿಂಗಳಲ್ಲಿ 11,620 ಮಂದಿ ಖರೀದಿಸಿದ್ದಾರೆ.

ಅಂದರೆ ಅಂದಾಜು ದೇಶಾದ್ಯಂತ ಪ್ರತಿ ದಿನ 415 ಕಾರುಗಳು ಮಾರಾಟವಾಗಿವೆ, ಈ ಕಾರಿಗೆ ಗ್ರಾಮೀಣ ಭಾಗಗಳಲ್ಲಿ ಹೆಚ್ಚಿನ ಬೇಡಿಕೆ ಇದೆ ಎಂದು ತಿಳಿದುಬಂದಿದೆ. ಇದು ಬಡ ಹಾಗೂ ಮಧ್ಯಮ ವರ್ಗದ ಬೆಸ್ಟ್ 7-ಸೀಟರ್ ಎಂದು ಖ್ಯಾತಿ ಗಳಿಸಿದೆ. ಅಂದಹಾಗೆ ಕಳೆದ ವರ್ಷ ಫೆಬ್ರವರಿಯಲ್ಲಿ 11,493 ಕಾರುಗಳು ಮಾರಾಟವಾಗಿದ್ದವು, ವರ್ಷದಿಂದ ವರ್ಷಕ್ಕೆ ಈ ಕಾರಿನ ಮಾರಾಟದಲ್ಲಿ ಹೆಚ್ಚಳವಾಗುತ್ತಿದೆ.
ಮಾರುತಿ ಸುಜುಕಿ ಇಕೊ ವಿಶೇಷತೆಗಳು
2010 ರಲ್ಲಿ ಬಿಡುಗಡೆಯಾದ ಮಾರುತಿ ಸುಜುಕಿ ಇಕೊ ಸದ್ಯ ಬಡವರ ಕಾರಾಗಿ ಗುರ್ತಿಸಿಕೊಂಡಿದೆ. ಬಜೆಟ್ ಸ್ನೇಹಿ 5/7 ಸೀಟರ್ ಆಯ್ಕೆಯಲ್ಲಿ ದೊರೆಯುವ ಈ ಕಾರನ್ನು ಇಂಧನ ದಕ್ಷತೆ ಮತ್ತು ಬಹುಮುಖತೆಯನ್ನು ಬಯಸುವವರಿಗೆ ಸೂಕ್ತವಾಗಿದೆ. ಇದರ ಸಾಮರ್ಥ್ಯಗಳು, ಸ್ಥಳಾವಕಾಶ, ಕೈಗೆಟುಕುವಿಕೆ, ವಿಶ್ವಾಸಾರ್ಹತೆ, ಪ್ರಯಾಣಿಕ ಮತ್ತು ಸರಕು ಸಾಗಾಣಿಕೆಯಲ್ಲಿ ಬೆಸ್ಟ್ ಎನ್ನಿಸಿಕೊಂಡಿದೆ.

ಇದರ ಎಕ್ಸ್ ಶೋರೂಂ ಬೆಲೆಯು ರೂ.5.20 ಲಕ್ಷದಿಂದ ಆರಂಭವಾಗುತ್ತದೆ. ಇತ್ತೀಚೆಗೆ ಕಾರಿನ ಸುರಕ್ಷತೆ ಹೆಚ್ಚಿಸಿ ಸ್ಟ್ಯಾಂಡರ್ಡ್ ಆಗಿ 6 ಏರ್ ಬ್ಯಾಗ್‌ಗಳನ್ನು ನೀಡಲಾಗುತ್ತಿದೆ. ಜೊತೆಗೆ EBD (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ವಿತರಣೆ) ನೊಂದಿಗೆ ABS (ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್), ಸ್ಲೈಡಿಂಗ್ ಬಾಗಿಲುಗಳು ಮತ್ತು ಕಿಟಕಿಗಳಿಗಾಗಿ ಚೈಲ್ಡ್ ಲಾಕ್ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸರ್‌ಗಳೊಂದಿಗೆ ಪ್ರಮಾಣಿತವಾಗಿ ಬರುತ್ತದೆ.
ಸುಲಭವಾಗಿ ಹತ್ತಲು ಡಿಸೈನ್ ಮಾಡಲಾದ ಸ್ಲೈಡಿಂಗ್ ಸೈಡ್ ಬಾಗಿಲುಗಳು ಪ್ರಯಾಣಿಕರಿಗೆ ಆರಾಮವೆನಿಸುತ್ತವೆ. ಮ್ಯಾನುವಲ್ ಎಸಿ, ಹೀಟರ್, ಹೊಂದಾಣಿಕೆ ಮಾಡಬಹುದಾದ ಆಸನಗಳು, ಟ್ರಿಪ್ ಮೀಟರ್ ಮತ್ತು ಇಂಧನ ಗೇಜ್‌ನೊಂದಿಗೆ ಸೆಮಿ-ಡಿಜಿಟಲ್ ಕ್ಲಸ್ಟರ್ ಹೊಂದಿದೆ. ಪ್ರಯಾಣದಲ್ಲಿರುವಾಗ ಮೊಬೈಲ್‌ಗಳನ್ನು ಚಾರ್ಜ್ ಮಾಡಲು 12V ಚಾರ್ಜಿಂಗ್ ಸಾಕೆಟ್ ನೀಡಲಾಗಿದೆ.

ಮಾರುತಿ ಸುಜುಕಿ ಇಕೊ 1.2L ಸುಧಾರಿತ ಪೆಟ್ರೋಲ್ ಮತ್ತು CNG ಎಂಜಿನ್ ಆಯ್ಕೆಗಳಲ್ಲಿ (1197cc) ಖರೀದಿಗೆ ಸಿಗುತ್ತದೆ. ಪ್ರತಿ ಲೀಟರ್‌ಗೆ 19.71 ಕಿ.ಮೀ (ಪೆಟ್ರೋಲ್) ಮೈಲೇಜ್ ಹಾಗೂ 26.78 (CNG) ಕಿ.ಮೀ ಮೈಲೇಜ್ ನೀಡುತ್ತದೆ. 5 - ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್, ರಿಯರ್ - ವೀಲ್ ಡ್ರೈವ್‌ನೊಂದಿಗೆ ಬರುತ್ತದೆ.
ಮಾರುತಿ ಸುಜುಕಿ ಇಕೊ ವಿಶಾಲವಾದ ಕ್ಯಾಬಿನ್ ಮತ್ತು ಬೂಟ್ ಸ್ಥಳ (540L ವರೆಗೆ), ಒಳಗಿನ ಜಾಗವನ್ನು ಗರಿಷ್ಠಗೊಳಿಸುವ ಬಾಕ್ಸಿ ವಿನ್ಯಾಸದೊಂದಿಗೆ ಬರುತ್ತದೆ. ಇದು ದೊಡ್ಡ ಕುಟುಂಬದೊಂದಿಗೆ ಸಾಮಾನು ಅಥವಾ ಸರಕುಗಳನ್ನು ಸಾಗಿಸಲು ಸೂಕ್ತವಾಗಿರುತ್ತದೆ. ಹೈಟೆಕ್ ತಂತ್ರಜ್ಞಾನ ವೈಶಿಷ್ಟ್ಯಗಳಿಗಿಂತ ಉಪಯುಕ್ತತೆಗೆ ಆದ್ಯತೆ ನೀಡುವ ಬಳಕೆದಾರರಿಗೆ ಇದು ಸೂಕ್ತ ಆಯ್ಕೆಯಾಗಿದೆ ಎಂದು ಹೇಳಬಹುದು.


Click it and Unblock the Notifications








