Maruti: ಮಾರುತಿಯ ಹೈಬ್ರಿಡ್ ಕಾರಿದು.. 10.76 ಲಕ್ಷ, ಬೈಕ್‌ನಂತೆ 27 Km ಮೈಲೇಜ್.. ಆದ್ರೂ ಗ್ರಾಹಕರು ಕೊಳ್ಳುತ್ತಿಲ್ಲ, ಯಾಕೆ?
ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ (Maruti Suzuki Grand Vitara) ಜನಮೆಚ್ಚಿದ ಎಸ್‌ಯುವಿಯಾಗಿ ಹೊರಹೊಮ್ಮಿದೆ. ಗ್ರಾಹಕರು ಕೂಡ ಇಷ್ಟಪಟ್ಟು ಕೊಂಡುಕೊಳ್ಳುತ್ತಿದ್ದಾರೆ. ಆದರೂ ಈ ಕಾರಿನ ಮಾರಾಟ ಸಂಖ್ಯೆ ಮಾತ್ರ ಇಳಿಮುಖವಾಗುತ್ತಿದೆ. ಕಳೆದ ತಿಂಗಳು (ಜನವರಿ-2026) ಅದು ಮುಂದುವರಿದಿದೆ. ಒಟ್ಟು 7,030 ಯುನಿಟ್‌ಗಳನ್ನು ಖರೀದಿದಾರರಿಗೆ ವಿತರಿಸಲಾಗಿದೆ. 2025ರ ಜನವರಿಯಲ್ಲಿ 15,784 ಯುನಿಟ್‌ಗಳನ್ನು ಮಾರಲಾಗಿತ್ತು. ಈ ಅಂಕಿಅಂಶವನ್ನು ಲೆಕ್ಕ ಹಾಕಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ 55.46% ಕುಸಿತವಾಗಿದೆ.
2026ರ ಜನವರಿಯಲ್ಲಿ 'ಗ್ರ್ಯಾಂಡ್ ವಿಟಾರಾ' ಮಾರಾಟವು ಕಡಿಮೆಯಾಗಲು ಹಲವು ಕಾರಣಗಳಿವೆ. ಬಹುಮುಖ್ಯವಾಗಿ, ಸ್ವತಃ ಮಾರುತಿ ಸುಜುಕಿ 'ವಿಕ್ಟೋರಿಸ್' ಕಾರನ್ನು ಮಾರಾಟಕ್ಕೆ ತಂದಿದೆ. ಅದಕ್ಕೆ ಗ್ರಾಹಕರು ಮನಸೊತ್ತಿದ್ದಾರೆ. ಜೊತೆಗೆ ಟಾಟಾ ಸಿಯೆರಾ ಹಾಗೂ ಹೊಸ ತಲೆಮಾರಿನ ಕಿಯಾ ಸೆಲ್ಟೋಸ್ ಎಸ್‌ಯುವಿಗಳು ಬಿಡುಗಡೆಗೊಂಡಿವೆ. ಹೀಗಾಗಿ, ಈ ಕಾರಿನ ಮಾರಾಟ ಸಂಖ್ಯೆ ಇಳಿಕೆಯಾಗುತ್ತಿದೆ ಎಂದು ವಿಶ್ಲೇಷಿಸಲಾಗಿದೆ.

'ಮಾರುತಿ ಗ್ರ್ಯಾಂಡ್ ವಿಟಾರಾ' ವಿಶೇಷತೆಗಳೇನು:
ಇದು ಸ್ಪರ್ಧಾತ್ಮಕ ಬೆಲೆಯಲ್ಲಿ ಲಭ್ಯವಿದೆ. ಕನಿಷ್ಠ ರೂ.10.76 ಲಕ್ಷ ಹಾಗೂ ಗರಿಷ್ಠ ರೂ.19.72 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದ್ದು, ಎಲ್ಲ ವರ್ಗದ ಜನರು ಸುಲಭವಾಗಿ ಮನೆಗೆ ತರಲು ಸಾಧ್ಯವಾಗಲಿದೆ. ಸಿಗ್ಮಾ, ಡೆಲ್ಟಾ, ಡೆಲ್ಟಾ ಪ್ಲಸ್, ಜಿಟಾ, ಆಲ್ಫಾ ಮತ್ತು ಆಲ್ಫಾ ಪ್ಲಸ್ ಎಂಬ ರೂಪಾಂತರಗಳ (ವೇರಿಯೆಂಟ್) ಆಯ್ಕೆಯಲ್ಲಿಯೂ ಸಿಗುತ್ತದೆ.
ಈ ಕಾರು ಹೆಚ್ಚು ಅತ್ಯಾಧುನಿಕವಾದ ವಿನ್ಯಾಸವನ್ನು ಒಳಗೊಂಡಿದೆ. ಉತ್ತಮವಾದ ಎಲ್ಇಡಿ ಹೆಡ್‌ಲ್ಯಾಂಪ್‌ಗಳು, ಎಲ್ಇಡಿ ಡಿಆರ್‌ಎಲ್‌ಗಳು, ಎಲ್ಇಡಿ ಟೈಲ್ ಲ್ಯಾಂಪ್‌ಗಳು ಮತ್ತು 17-ಇಂಚಿನ ಅಲಾಯ್ ವೀಲ್‌ಗಳನ್ನು ಪಡೆದಿದೆ. ನೆಕ್ಸಾ ಬ್ಲೂ, ಆರ್ಕ್ಟಿಕ್ ವೈಟ್, ಸ್ಪ್ಲೆಂಡಿಡ್ ಸಿಲ್ವರ್, ಗ್ರ್ಯಾಂಡಿಯರ್ ಗ್ರೇ, ಆಪುಲೆಂಟ್ ರೆಡ್ ಹಾಗೂ ಮಿಡ್‌ನೈಟ್ ಬ್ಲ್ಯಾಕ್ ಎಂಬ ಬಣ್ಣಗಳೊಂದಿಗೂ ಲಭ್ಯವಿದೆ.

ಹೊಸ 'ಗ್ರ್ಯಾಂಡ್ ವಿಟಾರಾ' ಹೆಚ್ಚು ವಿಶಾಲ ಗಾತ್ರದಲ್ಲಿದೆ. 4,345 ಎಂಎಂ ಉದ್ದ, 1,795 ಎಂಎಂ ಅಗಲ ಮತ್ತು 1,645 ಎಂಎಂ ಎತ್ತರವಿದೆ. 210 ಎಂಎಂ ಗ್ರೌಂಡ್ ಕ್ಲಿಯರೆನ್ ಹಾಗೂ 2,600 ಎಂಎಂ ವೀಲ್‌ಬೇಸ್‌ನ್ನು ಒಳಗೊಂಡಿದೆ. ಸರಿ ಸುಮಾರು 1,295 ಕೆಜಿ ತೂಕವಿದೆ.
ಇದು ಬೆಲೆಗೆ ತಕ್ಕಂತೆ ಶಕ್ತಿಯುತವಾದ ಮೂರು ಪವರ್‌ಟ್ರೇನ್‌ನ್ನು ಪಡೆದಿದೆ. ಈ ಕಾರಿನ 1.5-ಲೀ. ಪೆಟ್ರೋಲ್ ಎಂಜಿನ್, 103 ಪಿಎಸ್ ಅಶ್ವ ಶಕ್ತಿ ಹಾಗೂ 139 ಎನ್ಎಂ ಪೀಕ್ ಟಾರ್ಕ್ ಹೊರಹಾಕುತ್ತದೆ. ಮತ್ತೊಂದು 1.5-ಲೀ. ಸ್ಟ್ರಾಂಗ್ ಹೈಬ್ರಿಡ್ (ಪೆಟ್ರೋಲ್+ಎಲೆಕ್ಟ್ರಿಕ್) ಎಂಜಿನ್, 115 ಪಿಎಸ್ ಅಶ್ವ ಶಕ್ತಿ ಮತ್ತು 141 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಒಳಗೊಂಡಿದೆ.

ಇನ್ನೊಂದು 1.5-ಲೀ. ಸಿಎನ್‌ಜಿ ಎಂಜಿನ್, 88 ಪಿಎಸ್ ಅಶ್ವ ಶಕ್ತಿ ಹಾಗೂ 121 ಎನ್ಎಂ ಪೀಕ್ ಟಾರ್ಕ್ ಹೊರಹಾಕುತ್ತದೆ. ರೂಪಾಂತರಗಳಿಗೆ ಅನುಗುಣವಾಗಿ 5-ಸ್ಪೀಡ್ ಮ್ಯಾನುವಲ್, 6-ಸ್ಪೀಡ್ ಆಟೋಮೆಟಿಕ್ ಮತ್ತು ಇ-ಸಿವಿಟಿ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ. 19.38 ರಿಂದ 27.97 ಕಿಲೋಮೀಟರ್‌ವರೆಗೂ ಮೈಲೇಜ್‌ನ್ನು ಕೊಡುತ್ತದೆ. 135 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಪಡೆದಿದೆ. ಕೇವಲ 11.55 ಸೆಕೆಂಡುಗಳಲ್ಲಿ 0 ರಿಂದ 100 ಕೆಎಂಪಿಹೆಚ್ ವೇಗವನ್ನು ಹೊಂದಲಿದೆ.
ಈ ಕಾರು 5 ಆಸನಗಳನ್ನು ಪಡೆದಿದ್ದು, ಪ್ರಯಾಣಿಕರು ಆರಾಮದಾಯಕವಾಗಿ ಕುಳಿತುಕೊಂಡು ಸಂಚಾರ ಮಾಡಬಹುದು. ಹೆಚ್ಚಿನ ಲಗೇಜ್ ಸಾಗಿಸಲು ಸಾಧ್ಯವಾಗುವಂತೆ 373 ಲೀಟರ್‌ನಷ್ಟು ಬೂಟ್ ಸ್ಪೇಸ್‌ನ್ನು ಒಳಗೊಂಡಿದೆ. 9-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಸನ್‌ರೂಫ್, ವೈರ್‌ಲೆಸ್ ಚಾರ್ಜಿಂಗ್ ಹಾಗೂ ವೆಂಟಿಲೇಟೆಡ್ ಫ್ರಂಟ್ ಸೀಟ್‌ನಂತಹ ಹಲವು ವೈಶಿಷ್ಟ್ಯಗಳನ್ನು ಪಡೆದಿದೆ.
ನೂತನ 'ಗ್ರ್ಯಾಂಡ್ ವಿಟಾರಾ' ಸುರಕ್ಷತೆಗೂ ಹೆಸರುವಾಸಿಯಾಗಿದೆ. ಪ್ರಯಾಣಿಕರ ರಕ್ಷಣೆಗಾಗಿ 6 ಏರ್‌ಬ್ಯಾಗ್, ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ಇಎಸ್‌ಪಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ), ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), ರಿವರ್ಸ್ ಪಾರ್ಕಿಂಗ್ ಸೆನ್ಸರ್‌ಗಳು ಮತ್ತು 360 ಡಿಗ್ರಿ ಕ್ಯಾಮೆರಾವನ್ನು ಒಳಗೊಂಡಿದೆ.


Click it and Unblock the Notifications








