ಭಾರತದಲ್ಲಿ ಮರ್ಸಿಡಿಸ್-ಮೇಬ್ಯಾಕ್ S 580e ಲಾಂಚ್: ₹3.35 ಕೋಟಿ ಬೆಲೆಯ ಈ ಐಷಾರಾಮಿ ಕಾರಿನ ವಿಶೇಷತೆಗಳೇನು?
ಮರ್ಸಿಡಿಸ್-ಬೆಂಜ್ ಭಾರತದಲ್ಲಿ ತನ್ನ ಚೊಚ್ಚಲ ಎಲೆಕ್ಟ್ರಿಫೈಡ್ ಮೇಬ್ಯಾಕ್ 'S 580e' ಕಾರನ್ನು ಬಿಡುಗಡೆ ಮಾಡಿದೆ. ಇದರ ಎಕ್ಸ್-ಷೋರೂಮ್ ಬೆಲೆ ₹3.35 ಕೋಟಿ. ಭಾರತೀಯ ಮಾರುಕಟ್ಟೆಗೆ ಸದ್ಯ ಕೇವಲ 30 ಕಾರುಗಳನ್ನು ಮಾತ್ರ ಮೀಸಲಿಡಲಾಗಿದ್ದು, ಕಾರಿನ ಎಕ್ಸ್‌ಕ್ಲೂಸಿವ್ ಲುಕ್ ಹೆಚ್ಚಿಸಿದೆ. ಇದರಲ್ಲಿರುವ 22 kWh ಬ್ಯಾಟರಿ ಬರೋಬ್ಬರಿ 98 ಕಿಮೀ ಎಲೆಕ್ಟ್ರಿಕ್ ರೇಂಜ್ ನೀಡಲಿದ್ದು, ಅತ್ಯಂತ ಸೈಲೆಂಟ್ ಮತ್ತು ಐಷಾರಾಮಿ ಪ್ರಯಾಣದ ಅನುಭವ ನೀಡುತ್ತದೆ. ಮೈಬ್ಯಾಕ್ ಎಸ್-ಕ್ಲಾಸ್ ಸರಣಿಯಲ್ಲಿ ಇದೇ ಮೊದಲ ಬಾರಿಗೆ ಪ್ಲಗ್-ಇನ್ ಹೈಬ್ರಿಡ್ ಪವರ್‌ಟ್ರೇನ್ ಪರಿಚಯಿಸಲಾಗಿದ್ದು, 4MATIC ಮತ್ತು ಅಲ್ಟ್ರಾ-ಲಕ್ಸುರಿ ವೈಶಿಷ್ಟ್ಯಗಳನ್ನು ಯಥಾವತ್ತಾಗಿ ಉಳಿಸಿಕೊಳ್ಳಲಾಗಿದೆ.
ಮರ್ಸಿಡಿಸ್-ಬೆಂಜ್ ಶೋರೂಂಗಳಲ್ಲಿ ಈಗಾಗಲೇ ಬುಕಿಂಗ್ ಆರಂಭವಾಗಿದ್ದು, 2026ರ ನವೆಂಬರ್‌ನಿಂದ ಗ್ರಾಹಕರಿಗೆ ಕಾರು ಡೆಲಿವರಿ ಸಿಗಲಿದೆ. ಸೀಮಿತ ಸಂಖ್ಯೆಯಲ್ಲಿ ಕಾರುಗಳು ಲಭ್ಯವಿರುವುದರಿಂದ ಆಸಕ್ತರು ಬೇಗನೆ ಬುಕ್ ಮಾಡಬೇಕಿದೆ. ಈ ಕುರಿತು ಮಾತನಾಡಿದ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಹಾಗೂ ಸಿಇಒ ಸಂತೋಷ್ ಅಯ್ಯರ್, "ನಮ್ಮ ಪೋರ್ಟ್‌ಫೋಲಿಯೋದಲ್ಲಿ ICE, BEV ಮತ್ತು PHEV ಮಾದರಿಗಳು ಇರುವುದರಿಂದ, ವೈವಿಧ್ಯಮಯ ಐಷಾರಾಮಿ ವಾಹನಗಳನ್ನು ಒದಗಿಸಲು ಮರ್ಸಿಡಿಸ್-ಬೆಂಜ್ ಸೂಕ್ತ ಸ್ಥಾನದಲ್ಲಿದೆ" ಎಂದು ಪ್ಲಗ್-ಇನ್ ಹೈಬ್ರಿಡ್ ಮಾದರಿಗಳ ಮೇಲಿನ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ.

ಮರ್ಸಿಡಿಸ್-ಮೇಬ್ಯಾಕ್ S 580e ಪವರ್‌ಟ್ರೇನ್ ಮತ್ತು ಚಾರ್ಜಿಂಗ್ ವಿವರ
S 580e ಕಾರಿನಲ್ಲಿ 3.0-ಲೀಟರ್ ಇನ್‌ಲೈನ್-ಸಿಕ್ಸ್ ಇಂಜಿನ್ ಜೊತೆಗೆ ಎಲೆಕ್ಟ್ರಿಕ್ ಮೋಟಾರ್ ಜೋಡಿಸಲಾಗಿದ್ದು, ಇದು 585 hp ಪವರ್ ಮತ್ತು 750 Nm ಟಾರ್ಕ್ ಉತ್ಪಾದಿಸುತ್ತದೆ. WLTP ಪ್ರಮಾಣೀಕರಿಸಿದಂತೆ ಇದು 98 ಕಿಮೀ ಎಲೆಕ್ಟ್ರಿಕ್ ರೇಂಜ್ ನೀಡುತ್ತದೆ. ಚಾರ್ಜಿಂಗ್ ವಿಷಯಕ್ಕೆ ಬಂದರೆ, 11 kW AC ಚಾರ್ಜಿಂಗ್ ಮತ್ತು 60 kW DC ಚಾರ್ಜಿಂಗ್ ಬೆಂಬಲವಿದೆ. ಹೋಮ್ ವಾಲ್‌ಬಾಕ್ಸ್ ಚಾರ್ಜರ್ ಮೂಲಕ ಸುಮಾರು ಎರಡು ಗಂಟೆಗಳಲ್ಲಿ 22 kWh ಬ್ಯಾಟರಿಯನ್ನು ಸಂಪೂರ್ಣವಾಗಿ ಚಾರ್ಜ್ ಮಾಡಬಹುದು. ಅಂದರೆ ಯೂನಿಟ್‌ಗೆ ₹9 ರಂತೆ ಲೆಕ್ಕ ಹಾಕಿದರೆ, ಪೂರ್ತಿ ಚಾರ್ಜ್‌ಗೆ ತಗುಲುವ ವೆಚ್ಚ ಸುಮಾರು ₹200 ಮಾತ್ರ. ಅಂದರೆ ಎಲೆಕ್ಟ್ರಿಕ್ ಮೋಡ್‌ನಲ್ಲಿ ಪ್ರತಿ ಕಿಲೋಮೀಟರ್‌ಗೆ ವೆಚ್ಚ ಕೇವಲ ₹2 ಆಗಲಿದೆ.
ಮರ್ಸಿಡಿಸ್-ಮೇಬ್ಯಾಕ್ S 580e ಐಷಾರಾಮಿ ಫೀಚರ್ಸ್ ಮತ್ತು ಟೆಕ್ನಾಲಜಿ
ಈ ಕಾರಿನಲ್ಲಿ ಹಿಂಭಾಗದ ಸೀಟಿನ ಆರಾಮದಾಯಕ ಅನುಭವವೇ ಪ್ರಮುಖ ಹೈಲೈಟ್. ಭಾರತದ ಆವೃತ್ತಿಯು ಎಕ್ಸಿಕ್ಯೂಟಿವ್ ರಿಕ್ಲೈನರ್‌ಗಳು, ಪೂರ್ಣ ಪ್ರಮಾಣದ ಬಿಸಿನೆಸ್ ಕನ್ಸೋಲ್, ಟ್ರೇ ಟೇಬಲ್‌ಗಳು ಮತ್ತು ತಾಪಮಾನ ನಿಯಂತ್ರಿಸಬಹುದಾದ ಕಪ್ ಹೋಲ್ಡರ್‌ಗಳನ್ನು ಒಳಗೊಂಡಿರುವ ಫೋರ್-ಸೀಟರ್ ‘ಫಸ್ಟ್-ಕ್ಲಾಸ್’ ಲೇಔಟ್‌ನೊಂದಿಗೆ ಬಂದಿದೆ. ಕ್ಯಾಬಿನ್‌ನಲ್ಲಿ ಬೃಹತ್ MBUX ಸೂಪರ್‌ಸ್ಕ್ರೀನ್, ಡಿಜಿಟಲ್ ಲೈಟ್ ಹೆಡ್‌ಲ್ಯಾಂಪ್‌ಗಳು ಮತ್ತು ಮೇಬ್ಯಾಕ್ ಮಾದರಿಯ ರೋಸ್-ಗೋಲ್ಡ್ ಫಿನಿಶಿಂಗ್‌ಗಳಿವೆ. ಇದರೊಂದಿಗೆ ಮ್ಯಾನುಫ್ಯಾಕ್ಚರ್ (MANUFAKTUR) ಟೂ-ಟೋನ್ ಪೇಂಟ್ ಹಾಗೂ ಇಲ್ಯುಮಿನೇಟೆಡ್ ಬ್ಯಾಡ್ಜ್‌ಗಳು ಕಾರಿನ ಖದರ್ ಅನ್ನು ಮತ್ತಷ್ಟು ಹೆಚ್ಚಿಸಿವೆ.
ಮರ್ಸಿಡಿಸ್-ಮೇಬ್ಯಾಕ್ S 580e ಪೈಪೋಟಿ ಮತ್ತು CAFE-III ನಿಯಮ
ಎಸ್-ಕ್ಲಾಸ್‌ಗಿಂತಲೂ ಮೇಲಿನ ಶ್ರೇಣಿಯಲ್ಲಿರುವ S 580e ಕಾರು ಬಿಎಂಡಬ್ಲ್ಯು 7 ಸರಣಿ ಹಾಗೂ ಸಂಪೂರ್ಣ ಎಲೆಕ್ಟ್ರಿಕ್ i7 ಕಾರುಗಳಿಗೆ ಪೈಪೋಟಿ ನೀಡಲಿದೆ. ಇನ್ನು ಬೆಲೆ ವಿಚಾರದಲ್ಲಿ ರೋಲ್ಸ್-ರಾಯ್ಸ್ ಘೋಸ್ಟ್ ಕಾರಿಗಿಂತ ಇದು ಸಾಕಷ್ಟು ಕಡಿಮೆಯಿದೆ. ಪ್ರಮುಖವಾಗಿ, 2027ರ ಏಪ್ರಿಲ್ 1 ರಿಂದ ಜಾರಿಗೆ ಬರಲಿರುವ CAFE-III ನಿಯಮಗಳು ಪ್ಲಗ್-ಇನ್ ಹೈಬ್ರಿಡ್‌ಗಳಿಗೆ 'ಸೂಪರ್-ಕ್ರೆಡಿಟ್'ಗಳನ್ನು ನೀಡುತ್ತವೆ. ಇದು ಮರ್ಸಿಡಿಸ್ ಸಂಸ್ಥೆಗೆ ತನ್ನ ಇಂಧನ ದಕ್ಷತೆಯ ಗುರಿಗಳನ್ನು ತಲುಪಲು ನೆರವಾಗಲಿದೆ. ಜೊತೆಗೆ ಗ್ರಾಹಕರಿಗೆ ನಗರದಲ್ಲಿ ಸಂಪೂರ್ಣ ಇವಿ ಮೋಡ್ ಮತ್ತು ಸುದೀರ್ಘ ಪ್ರಯಾಣಕ್ಕಾಗಿ ಹೈಬ್ರಿಡ್ ಫ್ಲೆಕ್ಸಿಬಿಲಿಟಿ ಎರಡೂ ಸಿಗಲಿದೆ.
| ಮಾಡೆಲ್ | ಎಕ್ಸ್-ಷೋರೂಮ್ ಬೆಲೆ | ಪವರ್‌ಟ್ರೇನ್ |
|---|---|---|
| BMW i7 | ₹1.95–2.65 ಕೋಟಿ | ಬ್ಯಾಟರಿ ಎಲೆಕ್ಟ್ರಿಕ್ |
| BMW 7 ಸರಣಿ | ₹1.95 ಕೋಟಿ | ಪೆಟ್ರೋಲ್ |
| Rolls‑Royce Ghost | ₹8.95 ಕೋಟಿ | ಪೆಟ್ರೋಲ್ V12 |


Click it and Unblock the Notifications
