MG: ಟೊಯೊಟಾ ಫಾರ್ಚುನರ್ ಕಥೆ ಮುಗಿತಾ? ಗಜ ಗಾತ್ರದ ಹೊಸ ಎಂಜಿ ಎಸ್‌ಯುವಿ ಪರಿಚಯ.. 7-ಸೀಟರ್, ವಿಶೇಷತೆಗಳೇನು?
ಜೆಎಸ್‌ಡಬ್ಲ್ಯೂ ಎಂಜಿ ಮೋಟಾರ್ ಇಂಡಿಯಾ (JSW MG Motor India), ದೇಶೀಯ ಮಾರುಕಟ್ಟೆಗೆ ಹೊಚ್ಚ ಹೊಸ ಕಾರೊಂದನ್ನು ಪರಿಚಯಿಸಿದೆ. ಇಂದು ಗುರುಗ್ರಾಮದಲ್ಲಿ ಜರುಗಿದ ಅದ್ದೂರಿ ಸಮಾರಂಭದಲ್ಲಿ ನೂತನ 'ಮೆಜೆಸ್ಟರ್' ಫುಲ್-ಸೈಜ್ ಎಸ್‌ಯುವಿಯನ್ನು ಅನಾವರಣಗೊಳಿಸಿದೆ. ಇದು ನೋಡಲು ತುಂಬಾ ಚೆನ್ನಾಗಿದ್ದು, ಹಲವು ಹೊಸತನಗಳಿಗೂ ಸಾಕ್ಷಿಯಾಗಿದೆ. ಬನ್ನಿ.. ಈ ಕಾರಿನ ನಿರೀಕ್ಷಿತ ಬೆಲೆ ಎಷ್ಟು, ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ.
ಹೊಸ ಎಂಜಿ ಮೆಜೆಸ್ಟರ್ (MG Majestor) ಎಸ್‌ಯುವಿಯು ತುಸು ದುಬಾರಿ ದರದಲ್ಲಿ ಮಾರಾಟಕ್ಕೆ ಬರಲಿದೆ. ರೂ.40 ಲಕ್ಷದಿಂದ ರೂ.45 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿರಬಹುದು ಎಂದು ಅಂದಾಜಿಸಲಾಗಿದೆ. ಸದ್ಯ, ಪ್ರಿ-ಬುಕ್ಕಿಂಗ್ ಶುರುವಾಗಿದೆ. ಆಸಕ್ತ ಗ್ರಾಹಕರು, ಕಂಪನಿಯ ಅಧಿಕೃತ ವೆಬ್‌ಸೈಟ್ ಅಥವಾ ಸಮೀಪದ ಶೋರೂಂಗೆ ಭೇಟಿ ನೀಡಿ, ರೂ.41,000 ಮುಂಗಡ ಮೊತ್ತವನ್ನು ಪಾವತಿಸುವುದರೊಂದಿಗೆ ಆರ್ಡರ್ ಮಾಡಬಹುದು.

ಇದೇ ಏಪ್ರಿಲ್‌ನಲ್ಲಿ ನೂತನ 'ಮೆಜೆಸ್ಟರ್' ಕಾರಿನ ಬೆಲೆಯನ್ನು ಘೋಷಣೆ ಮಾಡಲಾಗುತ್ತದೆ. ಮೇ ತಿಂಗಳಲ್ಲಿ ವಿತರಣೆಗಳು ಪ್ರಾರಂಭವಾಗಲಿವೆ. ಈ ಎಸ್‌ಯುವಿಯು ಶಾರ್ಪ್ 4x2 (Sharp 4x2), ಶಾರ್ಪ್ 4x4 (Sharp 4x4) ಮತ್ತು ಸ್ಯಾವಿ 4x4 (Savvy 4x4) ಎಂಬ ಮೂರು ರೂಪಾಂತರಗಳ (ವೇರಿಯೆಂಟ್) ಆಯ್ಕೆಯಲ್ಲಿಯೂ ಸಿಗುತ್ತದೆ.
ಹೊಸ 'ಎಂಜಿ ಮೆಜೆಸ್ಟರ್' ಕಾರು ಹೆಚ್ಚು ಅತ್ಯಾಧುನಿಕವಾದ ವಿನ್ಯಾಸವನ್ನು ಒಳಗೊಂಡಿದೆ. ಉತ್ತಮವಾದ ಗ್ರಿಲ್ & ಬಂಪರ್‌ನ್ನು ಹೊಂದಿದೆ. ನೋಡುಗರ ಕಣ್ಮನ ಸೆಳೆಯುವಂತಹ ಎಲ್ಇಡಿ ಹೆಡ್‌ಲೈಟ್‌ಗಳು, ಇಂಟಿಗ್ರೇಟೆಡ್ ಎಲ್ಇಡಿ ಡಿಆರ್‌ಎಲ್‌ಗಳು ಹಾಗೂ ಎಲ್ಇಡಿ ಟೈಲ್ ಲೈಟ್‌ಗಳನ್ನು ಪಡೆದಿದೆ. ಡುಯಲ್ ಎಕ್ಸಾಸ್ಟ್ ಟಿಪ್‌ಗಳು, ಬ್ಲ್ಯಾಕ್-ಔಟ್, ವಿಂಡೋ ಲೈನ್‌ಗಳು, ನವೀನವಾಗಿರುವ 19-ಇಂಚಿನ ಅಲಾಯ್ ವೀಲ್‌ಗಳು ಮತ್ತು ದೊಡ್ಡದಾದ ಸ್ಕಿಡ್ ಪ್ಲೇಟ್‌ಗಳನ್ನು ಹೊಂದಿದೆ.

ಈ ಎಸ್‌ಯುವಿಯು ಹೆಚ್ಚು ವಿಶಾಲವಾಗಿದೆ. ಮೆಟಲ್ ಬ್ಲಾಕ್, ಪರ್ಲ್ ವೈಟ್, ಮೆಟಲ್ ಆಶ್ ಹಾಗೂ ಕಾಂಕ್ರೀಟ್ ಗ್ರೇ ಎಂಬ ಬಣ್ಣಗಳೊಂದಿಗೂ ದೊರೆಯುತ್ತದೆ. 6/ 7 ಆಸನಗಳನ್ನು ಪಡೆದಿದ್ದು, ಪ್ರಯಾಣಿಕರು ಆರಾಮದಾಯಕವಾಗಿ ಕುಳಿತುಕೊಂಡು ದೂರದ ಊರುಗಳಿಗೆ ಸಂಚಾರ ಮಾಡಬಹುದು.
ಇದು ಶಕ್ತಿಶಾಲಿಯಾದ ಪವರ್‌ಟ್ರೇನ್‌ನ್ನು ಒಳಗೊಂಡಿದೆ. 2.0-ಲೀಟರ್ ಟ್ವಿನ್-ಟರ್ಬೊ ಡೀಸೆಲ್ ಎಂಜಿನ್‌ನ್ನು ಪಡೆದಿದೆ. 213 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 478 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. 8-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ತನ್ನದಾಗಿಸಿಕೊಂಡಿದೆ.

ನೂತನ 'ಎಂಜಿ ಮೆಜೆಸ್ಟರ್' ಕಾರಿನ ಕ್ಯಾಬಿನ್ ವಿನ್ಯಾಸವು ಉತ್ತಮವಾಗಿದೆ. ಅದಕ್ಕೆ ತಕ್ಕಂತೆ 12.3-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ವೈರ್‌ಲೆಸ್ ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, ಪನೋರಮಿಕ್ ಸನ್‌ರೂಫ್, ತ್ರಿ-ಜೋನ್ ಕ್ಲೇಮೇಟ್ ಕಂಟ್ರೋಲ್, ಡುಯಲ್ ವೈರ್‌ಲೆಸ್ ಚಾರ್ಜರ್‌ಗಳು, 64-ಕಲರ್ ಆಂಬಿಯೆಂಟ್ ಲೈಟಿಂಗ್, 12-ಸ್ಪೀಕರ್ ಜೆಬಿಎಲ್ ಸೌಂಡ್ ಸಿಸ್ಟಮ್, ಹೀಟೆಡ್ & ಮಸಾಜ್ ಫಂಕ್ಷನ್ ಫ್ರಂಟ್ ಸೀಟ್‌ಗಳು ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ.
ಈ ಕಾರು ಸುರಕ್ಷತೆಗೂ ಹೆಸರುವಾಸಿಯಾಗಿದೆ. ಪ್ರಯಾಣಿಕರ ರಕ್ಷಣೆಗಾಗಿ 6-ಏರ್‌ಬ್ಯಾಗ್, ಇಎಸ್‌ಪಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ), ಲೆವೆಲ್-2 ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್), ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), ಹಿಲ್ ಹೋಲ್ಡ್ ಅಸಿಸ್ಟ್, 360-ಡಿಗ್ರಿ ಕ್ಯಾಮೆರಾ, ಟ್ರಾಕ್ಷನ್ ಕಂಟ್ರೋಲ್, ಮುಂಭಾಗ (ಫ್ರಂಟ್) ಮತ್ತು ಹಿಂಭಾಗ (ರೇರ್) ಪಾರ್ಕಿಂಗ್ ಸೆನ್ಸರ್‌ಗಳನ್ನು ಹೊಂದಿದೆ.
ಹೊಸ ಎಂಜಿ ಮೆಜೆಸ್ಟರ್ ಎಸ್‌ಯುವಿಗೆ ಟೊಯೊಟಾ ಫಾರ್ಚುನರ್ (Toyota Fortuner) ನೇರವಾದ ಎದುರಾಳಿಯಾಗಿದೆ. ಇದರೊಂದಿಗೆ ಸ್ಕೋಡಾ ಕೊಡಿಯಾಕ್ (Skoda Kodiaq) ಹಾಗೂ ಜೀಪ್ ಮೆರಿಡಿಯನ್ (Jeep Meridian) ಕಾರುಗಳು ಸಹ ಪ್ರಬಲವಾದ ಪ್ರತಿಸ್ಪರ್ಧಿಯಾಗಲಿವೆ.


Click it and Unblock the Notifications








