MG Motor: ಆಂಬ್ಯುಲೆನ್ಸ್ ಸೇವೆಗಾಗಿ ದುಬಾರಿ ಕಾರನ್ನು ದೇಣಿಗೆ ನೀಡಿದ ಎಂಜಿ ಮೋಟಾರ್
ಜನಪ್ರಿಯ ವಾಹನ ತಯಾರಕ ಕಂಪನಿಯಾಗಿರುವ ಎಂಜಿ ಮೋಟಾರ್ ಇಂಡಿಯಾ (MG Motor India), ದೊಡ್ಡ ಸಾರ್ವಜನಿಕ ಸಭೆಗಳು ನಡೆಯುವ ಸಮಯದಲ್ಲಿ ವೈದ್ಯಕೀಯ ಸಿದ್ಧತೆಯನ್ನು ಬಲಪಡಿಸಲು ಚಿನ್ಮಯ ಮಿಷನ್ ದೆಹಲಿಗೆ ವಿಶೇಷವಾಗಿ ನವೀಕರಿಸಿದ ತನ್ನ ಪ್ರಮುಖ ಮಾಡಲ್ ಅನ್ನು ಆಂಬ್ಯುಲೆನ್ಸ್ ಆಗಿ ಪರಿವರ್ತಿಸಿ ದೇಣಿಗೆಯಾಗಿ ಕೊಟ್ಟಿದೆ. ಸುರಕ್ಷತೆ, ಪ್ರವೇಶಸಾಧ್ಯತೆ ಮತ್ತು ಸಕಾಲಿಕ ವೈದ್ಯಕೀಯ ಪ್ರತಿಕ್ರಿಯೆ ಮೂಲಕ ಎಂಜಿ ಆಂಬ್ಯುಲೆನ್ಸ್ ಸದಾ ಸೇವೆ ಒದಗಿಸಲಿದೆ. ಅಷ್ಟಕ್ಕೂ ಈ ಆಂಬುಲನ್ಸ್ ಆಗಿ ಬದಲಾಗಿರುವ ಕಾರು ಯಾವುದು, ಅದರ ವಿಶೇಷತೆಗಳೇನು ಎಂದಬುನ್ನು ಇಲ್ಲಿ ನೋಡೋಣ.
ಎಂಜಿ ಮೋಟಾರ್‌ನ ಜನಪ್ರಿಯ ಎಸ್‌ಯುವಿ 'ಹೆಕ್ಟಾರ್' ಅನ್ನು ಆಂಬುಲನ್ಸ್ ಆಗಿ ಪರಿವರ್ತಿಸಲಾಗಿದೆ. ಹೆಕ್ಟರ್ ನ ದೃಢವಾದ ನಿರ್ಮಾಣ, ಸುಧಾರಿತ ತಂತ್ರಜ್ಞಾನ ಮತ್ತು ವಿಶಾಲವಾದ ವಿನ್ಯಾಸವು ತುರ್ತು ವೈದ್ಯಕೀಯ ಬೆಂಬಲಕ್ಕಾಗಿ ಇದನ್ನು ಸೂಕ್ತ ಕಾರನ್ನಾಗಿ ಮಾಡುತ್ತದೆ. ಎಂಜಿ ಹೆಕ್ಟರ್ ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಿಸಲಾದ ಆಂಬ್ಯುಲೆನ್ಸ್ ಅನ್ನು ಸಂಪೂರ್ಣವಾಗಿ ಸುಸಜ್ಜಿತ ತುರ್ತು ವೈದ್ಯಕೀಯ ಪ್ರತಿಕ್ರಿಯೆ ವಾಹನವಾಗಿ ಮರುಹೊಂದಿಸಲಾಗಿದೆ.

ಎಂಜಿ ಹೆಕ್ಟಾರ್ ಆಂಬ್ಯುಲೆನ್ಸ್‌ನಲ್ಲಿ ಆಮ್ಲಜನಕ ವಿತರಣಾ ವ್ಯವಸ್ಥೆಗಳು, ವೆಂಟಿಲೇಟರ್ ಬೆಂಬಲ, ಪ್ಯಾರಾ ಮಾನಿಟರಿಂಗ್ ಉಪಕರಣಗಳು, ಆಟೋ ಲೋಡರ್ ಸ್ಟ್ರೆಚರ್ ಮತ್ತು ಕಸ್ಟಮೈಸ್ ಮಾಡಿದ ವೈದ್ಯಕೀಯ ಸಂಗ್ರಹಣೆಯನ್ನು ಒಳಗೊಂಡಿದೆ. ಇದು ಸುರಕ್ಷಿತ ಮತ್ತು ಸ್ಥಿರವಾದ ರೋಗಿಗಳ ಸಾಗಣೆಯ ಜೊತೆಗೆ ತಕ್ಷಣದ ವೈದ್ಯಕೀಯ ಆರೈಕೆಯನ್ನು ಸಕ್ರಿಯಗೊಳಿಸುತ್ತದೆ ಎಂದು ಎಂಜಿ ಮೋಟಾರ್ ತಿಳಿಸಿದೆ.
ಚಿನ್ಮಯ ಮಿಷನ್ ದೆಹಲಿಯಿಂದ ಆಯೋಜಿಸಲಾದ ವಸತಿ ಶಿಬಿರಗಳು, ಶೈಕ್ಷಣಿಕ ಕಾರ್ಯಕ್ರಮಗಳು, ಆಧ್ಯಾತ್ಮಿಕ ಪ್ರವಚನಗಳು ಮತ್ತು ದೊಡ್ಡ ಸಾರ್ವಜನಿಕ ಕಾರ್ಯಕ್ರಮಗಳ ಸಮಯದಲ್ಲಿ ಆಂಬ್ಯುಲೆನ್ಸ್ ಸ್ಥಳದಲ್ಲೇ ವೈದ್ಯಕೀಯ ಸಿದ್ಧತೆಯೊಂದಿಗೆ ಸೇವೆಗೆ ಸಜ್ಜುಗೊಂಡಿರುತ್ತದೆ. ಅನಿರೀಕ್ಷಿತ ಅವಘಡಗಳು ಸಂಭವಿಸಿದಲ್ಲಿ ಕೂಡಲೇ ಆಗಮಿಸಿ ತಕ್ಷಣದ ಕರ್ತವ್ಯಕ್ಕೆ ತಯಾರಾಗಿರುತ್ತದೆ.

ವಾಹನದಲ್ಲಿ ತಕ್ಷಣಕ್ಕೆ ಬೇಕಾದ ಚಿಕಿತ್ಸಾ ಪರಿಕರಗಳು ಇರುವ ಕಾರಣ ತುರ್ತು ಚಿಕಿತ್ಸೆ ಕೂಡ ನೀಡಬಹುದು. ಹಾಗೆಯೇ ವಾಹನದಲ್ಲಿ ವಿಶಾಲವಾದ ಕ್ಯಾಬಿನ್ ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಕರವರೆಗೆ ಎಲ್ಲಾ ವಯಸ್ಸಿನವರಿಗೂ ಹೊಂದಿಕೊಳ್ಳುವಷ್ಟು ಜಾಗವನ್ನು ನೀಡಲಾಗಿದೆ. ತುರ್ತು ಚಿಕಿತ್ಸೆ ಮೀರಿ ಆಸ್ಪತ್ರೆಗೆ ಕೊಂಡೊಯ್ಯುವ ಪರಿಸ್ಥಿತಿ ಎದುರಾದಲ್ಲಿ ಈ ಆಂಬುಲನ್ಸ್ ಸೌಕರ್ಯಯುತವಾಗಿ, ವೇಗವಾಗಿ ಹಾಗೂ ಸಮಯಕ್ಕೆ ಸರಿಯಾಗಿ ಆಸ್ಪತ್ರೆ ತಲುಪಿಸಬಲ್ಲದು.
ಎಂಜಿ ಹೆಕ್ಟರ್ ವಿಶೇಷತೆಗಳು
ಹೊಸ ಎಂಜಿ ಹೆಕ್ಟರ್ ಪ್ಯಾಸಿಂಜರ್ ಎಸ್‌ಯುವಿ ಮಾರುಕಟ್ಟೆಯಲ್ಲಿ ಆರಂಭಿಕ ಬೆಲೆ ರೂ. 11.99 ಲಕ್ಷ ಇದ್ದರೆ, ಟಾಪ್ ವೇರಿಯೆಂಟ್ ಬೆಲೆ ರೂ. 18,99 (ಎಕ್ಸ್-ಶೋರೂಂ ಬೆಲೆಗಳು) ಲಕ್ಷವಿದೆ. 5, 6 ಮತ್ತು 7-ಸೀಟರ್ ಟ್ರಿಮ್‌ಗಳ ಆಯ್ಕೆಯಲ್ಲಿ ಸಿಗುತ್ತದೆ. ದೊಡ್ಡ 14-ಇಂಚಿನ HD ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡ್ಯುಯಲ್-ಪೇನ್ ಪನೋರಮಿಕ್ ಸನ್‌ರೂಫ್, 17.78 ಸೆಂ.ಮೀ ಪೂರ್ಣ ಡಿಜಿಟಲ್ ಕ್ಲಸ್ಟರ್, ಮಲ್ಟಿ-ಟಚ್ ಕಾರ್ಯಾಚರಣೆ ಮತ್ತು 8-ಬಣ್ಣದ ಆಂಬಿಯೆಂಟ್ ಮೂಡ್ ಲೈಟಿಂಗ್ ನೀಡಲಾಗಿದೆ.

ಹೊಸ ಹೆಕ್ಟರ್ ತನ್ನ ಬಳಕೆದಾರರಿಗೆ ವೀಲ್ ವ್ಯೂ ನೀಡುವ 360° HD ಕ್ಯಾಮೆರಾದೊಂದಿಗೆ ಸುರಕ್ಷತೆ ಮತ್ತು ಅನುಕೂಲತೆಯನ್ನು ಹೆಚ್ಚಿಸುತ್ತದೆ. ABS, EBD, ESP, TCS, ಹಿಲ್ ಹೋಲ್ಡ್ ಕಂಟ್ರೋಲ್ ಮತ್ತು ಬ್ರೇಕ್ ಅಸಿಸ್ಟ್‌ನಂತಹ ಪ್ರಮಾಣಿತ ಸುರಕ್ಷತಾ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಜೊತೆಗೆ ಸುಧಾರಿತ ADAS ಸೂಟ್‌ನಂತಹ ಅತ್ಯುತ್ತಮ ಸೇಫ್ಟಿ ಫೀಚರ್‌ಗಳನ್ನು ಹೊಂದಿದೆ.
ಇಂತಹ ಪ್ರೀಮಿಯಂ ಕಾರನ್ನು ಎಂಜಿ ಮೋಟಾರ್, ಅರ್ಥಪೂರ್ಣ ಸಾಮಾಜಿಕ ಕಾರ್ಯಕ್ರಮಗಳಿಗೆ ಬಳಸಿಕೊಂಡಿರುವುದು ಶ್ಲಾಘನೀಯ. ಚಿನ್ಮಯ ಮಿಷನ್ ದೆಹಲಿಗೆ ನವೀಕರಿಸಿದ ಎಂಜಿ ಹೆಕ್ಟರ್ ಆಂಬ್ಯುಲೆನ್ಸ್‌ನ ದೇಣಿಗೆಯು, ಕಾರ್ಪೊರೇಟ್ ಸಾಮರ್ಥ್ಯ ಮತ್ತು ವಿಶ್ವಾಸಾರ್ಹ ಸಮುದಾಯ ಸಂಸ್ಥೆಗಳ ಸನ್ನದ್ಧತೆ, ಸುರಕ್ಷತೆ ಮತ್ತು ಸೇವೆಯನ್ನು ಬೆಂಬಲಿಸಲು ಹೇಗೆ ಒಟ್ಟಾಗಿ ಕೆಲಸ ಮಾಡಬಹುದು ಎಂಬುದನ್ನು ತೋರಿಸಿಕೊಟ್ಟಿದೆ.


Click it and Unblock the Notifications








