ದೇಶವೇ ಕಾಯುತ್ತಿದೆ.. ಅತಿ ಶೀಘ್ರದಲ್ಲೇ 3 ಹೊಸ ಎಸ್‌ಯುವಿಗಳು ಬಿಡುಗಡೆ, ಬೆಲೆ ಎಷ್ಟು.. ವಿಶೇಷತೆಗಳೇನು?
ಭಾರತವು ವಿಶ್ವದಲ್ಲೇ ಅತಿದೊಡ್ಡ ಕಾರು ಮಾರುಕಟ್ಟೆಯನ್ನು ಹೊಂದಿದೆ. ಈ '2026' ವಾಹನ ತಯಾರಕ ಕಂಪನಿಗಳಿಗೆ ಮಹತ್ವದ ವರ್ಷವಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಅತಿ ಶೀಘ್ರದಲ್ಲೇ 3 ಹೊಚ್ಚ ಹೊಸ ಮಿಡ್-ಸೈಜ್ ಎಸ್‌ಯುವಿಗಳು ಬಿಡುಗಡೆಗೊಳ್ಳಲಿವೆ. ನೂತನ ಟೊಯೊಟಾ ಅರ್ಬನ್ ಕ್ರೂಸರ್ ಎಬೆಲ್ಲಾ, ರೆನಾಲ್ಟ್ ಡಸ್ಟರ್ ಹಾಗೂ ಟಾಟಾ ಸಿಯೆರಾ ಇವಿಗಳ ಬರುವಿಕೆಗಾಗಿ ಗ್ರಾಹಕರು ಕೂಡ ತುದಿಗಾಲಿನಲ್ಲಿ ನಿಂತುಕೊಂಡು ಕಾಯುತ್ತಿದ್ದಾರೆ. ಬನ್ನಿ, ಇವುಗಳ ಬೆಲೆ ಎಷ್ಟು.. ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಕ್ಷಿಪ್ತವಾದ ವಿವರಗಳನ್ನು ತಿಳಿಯೋಣ.
ಟೊಯೊಟಾ ಅರ್ಬನ್ ಕ್ರೂಸರ್ ಎಬೆಲ್ಲಾ (Toyota Urban Cruiser Ebella):
ಎಲ್ಲವು ಅಂದುಕೊಂಡಂತೆ ನಡೆದರೆ, ಹೊಸ 'ಅರ್ಬನ್ ಕ್ರೂಸರ್ ಎಬೆಲ್ಲಾ' ಇದೇ ಮಾರ್ಚ್‌ನಲ್ಲಿ ಅದ್ದೂರಿಯಾಗಿ ಮಾರಾಟಕ್ಕೆ ಬರುವ ನಿರೀಕ್ಷೆಯಿದೆ. ರೂ.15.99 ಲಕ್ಷದಿಂದ ರೂ.20 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿರಬಹುದು ಎಂದು ಹೇಳಲಾಗಿದೆ. ಈಗಾಗಲೇ, ಈ ಕಾರು ಅನಾವರಣಗೊಂಡಿದೆ. ತುಂಬಾ ಚೆನ್ನಾಗಿರುವ ವಿನ್ಯಾಸವನ್ನು ಹೊಂದಿದೆ. ಕೆಫೆ ವೈಟ್, ಬ್ಲ್ಯೂಯಿಶ್ ಬ್ಲ್ಯಾಕ್, ಗೇಮಿಂಗ್ ಗ್ರೇ, ಸ್ಪೋರ್ಟಿನ್ ರೆಡ್, ಎಂಟೈಸಿಂಗ್ ಸಿಲ್ವರ್ ಮತ್ತು ಲ್ಯಾಂಡ್ ಬ್ರೀಜ್ ಗ್ರೀನ್ ಎಂಬ ಬಣ್ಣಗಳೊಂದಿಗೂ ದೊರೆಯುತ್ತದೆ.

ಈ ಕಾರು ಶಕ್ತಿಯುತವಾದ ಪವರ್‌ಟ್ರೇನ್‌ನ್ನು ಹೊಂದಿದೆ. 49 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಹಾಗೂ 61 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್‌ನ್ನು ಒಳಗೊಂಡಿದೆ. ಪೂರ್ತಿ ಚಾರ್ಜ್‌ನಲ್ಲಿ 543 ಕಿ.ಮೀ ವರೆಗೆ ರೇಂಜ್ (ಮೈಲೇಜ್) ನೀಡುತ್ತದೆ. 5 ಆಸನಗಳನ್ನು ಹೊಂದಿದ್ದು, ಪ್ರಯಾಣಿಕರು ಆರಾಮದಾಯಕವಾಗಿ ಕುಳಿತುಕೊಂಡು ಸಂಚಾರ ಮಾಡಬಹುದು.
ನೂತನ 'ಟೊಯೊಟಾ ಅರ್ಬನ್ ಕ್ರೂಸರ್ ಎಬೆಲ್ಲಾ'ದ ಕ್ಯಾಬಿನ್ ವಿನ್ಯಾಸವು ಚೆನ್ನಾಗಿದೆ. 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 10.1-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಪನೋರಮಿಕ್ ಸನ್‌ರೂಫ್, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು ಹಾಗೂ ಮಲ್ಟಿ ಯುಎಸ್‌ಬಿ ಪೋರ್ಟ್‌ಗಳು ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆದಿದೆ. ಸುರಕ್ಷತೆಯ ದೃಷ್ಟಿಯಿಂದ 7-ಏರ್‌ಬ್ಯಾಗ್, ಲೆವೆಲ್-2 ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್), ಇಎಸ್‌ಸಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟೋಲ್) ಮತ್ತು ಆಲ್-ವೀಲ್ ಬ್ರೇಕ್‌ಗಳನ್ನು ಹೊಂದಿದೆ.

ರೆನಾಲ್ಟ್ ಡಸ್ಟರ್ (Renault Duster):
ಇದು ಮಾರ್ಚ್ ತಿಂಗಳಲ್ಲಿಯೇ ಬಿಡುಗಡೆಯಾಗಲಿದೆ. ರೂ.9.50 ಲಕ್ಷದಿಂದ ರೂ.19 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿರಬಹುದು ಎಂದು ಅಂದಾಜಿಸಲಾಗಿದೆ. ಈ ಜನವರಿಯಲ್ಲಿ ಅನಾವರಣಗೊಳಿಸಲಾಗಿತ್ತು. ನೋಡುಗರ ಕಣ್ಣು ಕುಕ್ಕುವಂತಹ ವಿನ್ಯಾಸವನ್ನು ಒಳಗೊಂಡಿದೆ. ಜೇಡ್ ಮೌಂಟೇನ್ ಗ್ರೀನ್, ಪರ್ಲ್ ವೈಟ್, ಮೂನ್‌ಲೈಟ್ ಸಿಲ್ವರ್, ಸ್ಟೆಲ್ತ್ ಬ್ಲ್ಯಾಕ್ ಮತ್ತು ಸನ್‌ಸೆಟ್ ರೆಡ್ ಎಂಬ ಬಣ್ಣಗಳೊಂದಿಗೂ ಸಿಗುತ್ತದೆ.
ಹೊಸ 'ಡಸ್ಟರ್' ಬಲಿಷ್ಠವಾದ ಪವರ್‌ಟ್ರೇನ್‌ನ್ನು ಒಳಗೊಂಡಿದೆ. 1.8-ಲೀಟರ್ ಸ್ಟ್ರಾಂಗ್ ಹೈಬ್ರಿಡ್, 1.3-ಲೀಟರ್ ಟರ್ಬೊ ಪೆಟ್ರೋಲ್ & 1.0-ಲೀಟರ್ ಪೆಟ್ರೋಲ್ ಎಂಜಿನ್‌ನ್ನು ಪಡೆದಿದೆ. 5 ಆಸನ ಆಯ್ಕೆ ವ್ಯವಸ್ಥೆಯನ್ನು ಹೊಂದಿದೆ. 10-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಪನೋರಮಿಕ್ ಸನ್‌ರೂಫ್, ಡುಯಲ್ ಜೋನ್ ಕ್ಲೇಮೇಟ್ ಕಂಟ್ರೋಲ್ ಹಾಗೂ ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು ಒಡಗೊಂಡಂತೆ ವೈಶಿಷ್ಟ್ಯಗಳನ್ನು ಹೊಂದಿದೆ. ಪ್ರಯಾಣಿಕರ ರಕ್ಷಣೆಗಾಗಿ 6-ಏರ್‌ಬ್ಯಾಗ್, ಲೆವೆಲ್-2 ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ಹಾಗೂ 360-ಡಿಗ್ರಿ ಕ್ಯಾಮೆರಾವನ್ನು ಪಡೆದಿದೆ.

ಟಾಟಾ ಸಿಯೆರಾ ಇವಿ (Tata Sierra EV):
ನೂತನ 'ಸಿಯೆರಾ ಇವಿ'ಯು ಈ ಮಾರ್ಚ್‌ನಲ್ಲಿಯೇ ಮಾರಾಟಕ್ಕೆ ಬರಬಹುದು ಎಂದು ಅಂದಾಜಿಸಲಾಗಿದೆ. ರೂ.20 ಲಕ್ಷದಿಂದ ರೂ.25 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿರಬಹುದು ಎಂದು ಹೇಳಲಾಗಿದೆ. ಇದು ಸ್ಟ್ಯಾಂಡರ್ಡ್ 'ಸಿಯೆರಾ'ದಂತೆಯೇ ವಿನ್ಯಾಸವನ್ನು ಹೊಂದಿರಲಿದೆ. ಯೆಲ್ಲೋ, ರೆಡ್, ಸಿಲ್ವರ್, ಗ್ರೀನ್, ಮಿಂಟಲ್ ಗ್ರೇ ಹಾಗೂ ಪ್ರಿಸ್ಟೀನ್ ವೈಟ್ ಎಂಬ ಬಣ್ಣಗಳೊಂದಿಗೂ ಲಭ್ಯವಾಗಲಿದೆ.
ಈ ಎಲೆಕ್ಟ್ರಿಕ್ ಎಸ್‌ಯುವಿಯು ಶಕ್ತಿಶಾಲಿಯಾದ ಪವರ್‌ಟ್ರೇನ್‌ನ್ನು ಪಡೆದಿರಲಿದೆ. 65 ಹಾಗೂ 75 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್‌ನ್ನು ಒಳಗೊಂಡಿರಲಿದೆ. ಸಂಪೂರ್ಣ ಚಾರ್ಜ್‌ನಲ್ಲಿ 538 ರಿಂದ 627 ಕಿ.ಮೀ ವರೆಗೆ ರೇಂಜ್ ಕೊಡಬಹುದು ಎನ್ನಲಾಗಿದೆ. 5 ಆಸನಗಳನ್ನು ಒಳಗೊಂಡಿರಲಿದೆ. ಟ್ರಿಪಲ್ ಸ್ಕ್ರೀನ್ ಸೆಟಪ್ ಮತ್ತು 12-ಸ್ಪೀಕರ್ ಬಿಜಿಎಲ್ ಸೌಂಡ್ ಸಿಸ್ಟಮ್‌ನಂತಹ ವೈಶಿಷ್ಟ್ಯಗಳನ್ನು ಪಡೆದಿರಲಿದೆ. ಸುರಕ್ಷತೆಗಾಗಿ 6-ಏರ್‌ಬ್ಯಾಗ್, ಲೆವೆಲ್-2 ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ಹಾಗೂ 360-ಡಿಗ್ರಿ ಕ್ಯಾಮೆರಾವನ್ನು ತನ್ನದಾಗಿಸಿಕೊಂಡಿರಲಿದೆ.


Click it and Unblock the Notifications








